‘ತಾಂಡವ್’ ವೆಬ್ ಸರಣಿ ವಿರುದ್ಧ ಎಫ್ಐಆರ್ ದಾಖಲು

ಲಖನೌ: 2021ರ ಬಹುನಿರೀಕ್ಷಿತ ವೆಬ್ಸರಣಿ ‘ತಾಂಡವ್’ ವಿವಾದಕ್ಕೆ ಸಂಬಂಧಿಸಿದಂತೆ ಅಮೆಜಾನ್ ಪ್ರೈಂನ ಭಾರತ ಮೂಲದ ಮುಖ್ಯಸ್ಥೆ ಅಪರ್ಣ ಪುರೋಹಿತ್ ವಿರುದ್ಧ ಇಲ್ಲಿನ ಹಜರತ್ಗಂಜ್ ಕೊತ್ವಾಲಿಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.
ಜನರ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ ಆರೋಪದ ಮೇಲೆ ವೆಬ್ಸರಣಿಯ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್, ನಿರ್ಮಾಪಕ ಹಿಮಾಂಶು ಕೃಷ್ಣ ಮೆಹ್ರಾ, ಬರಹಗಾರ ಗೌರವ್ ಸೋಲಂಕಿ ಮತ್ತು ಇತರ ಕೆಲವರ ಹೆಸರುಗಳನ್ನೂ ಎಫ್ಐಆರ್ನಲ್ಲಿ ದಾಖಲಿಸಲಾಗಿದೆ.
ವಿವಾದಕ್ಕೆ ಸಂಬಂದಿಸಿದಂತೆ ವಿವರ ಸಲ್ಲಿಸುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅಮೆಜಾನ್ ಪ್ರೈಂ ಗೆ ಸೂಚಿಸಿದೆ. ‘ಸಚಿವಾಲಯವು ಅಮೆಜಾನ್ ಪ್ರೈಂನ ಅಧಿಕಾರಿಗಳನ್ನು ಕರೆದಿದ್ದು, ವಿಚಾರಕ್ಕೆ ಸಂಬಂಧಿಸಿದಂತೆ ವಿವರಣೆ ಪಡೆಯಲು ನಿರ್ಧರಿಸಿದೆ’ ಎಂದು ಎನ್ನಲಾಗಿದೆ.
ರಾಜಕೀಯ ಕಥಾಹಿನ್ನೆಲೆ ಇರುವ ಈ ಸರಣಿಯಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದಿರುವ ಬಿಜೆಪಿ ಸಂಸದ ಮನೋಜ್ ಕೊಟಕ್, 'ತಾಂಡವ್ ವೆಬ್ ಸರಣಿಯ ನಿರ್ಮಾಪಕರು ಹಿಂದೂ ದೇವರುಗಳನ್ನು ಉದ್ದೇಶಪೂರ್ವಕವಾಗಿ ಗೇಲಿ ಮಾಡಿದ್ದಾರೆ ಮತ್ತು ಹಿಂದೂ ಧಾರ್ಮಿಕ ಭಾವನೆಗಳಿಗೆ ಅಗೌರವ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ತಾಂಡವ್ ಸರಣಿಯನ್ನು ನಿಷೇಧಿಸಬೇಕೆಂದು' ಒತ್ತಾಯಿಸಿದ್ದಾರೆ.
ಬಿಜೆಪಿಯ ಮತ್ತೊಬ್ಬ ನಾಯಕ ರಾಮ್ ಕದಂ ಅವರು ಮುಂಬೈನ ಘಟ್ಕೋಪರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜೊತೆಗೆ ಒಟಿಟಿ ಪ್ಲಾಟ್ಫಾರ್ಮ್ ಅನ್ನು ಸೆನ್ಸಾರ್ಶಿಪ್ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
ಏತನ್ಮಧ್ಯೆ, ಅಮೆಜಾನ್ ಪ್ರೈಂನ ಅಧಿಕಾರಿಗಳು, ‘ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವುದಿಲ್ಲ' ಎಂದಿದ್ದಾರೆ. ಸೈಫ್ ಅಲಿ ಖಾನ್, ಡಿಂಪಲ್ ಕಪಾಡಿಯಾ, ಸುನೀಲ್ ಗ್ರೋವರ್, ತಿಗ್ಮಾಂಶು ಧುಲಿಯಾ, ದಿನೊ ಮೋರಿಯಾ, ಕುಮುದ್ ಮಿಶ್ರಾ, ಮೋಹ್ದ್ ಜೀಶನ್ ಅಯ್ಯುಬ್, ಗೌಹಾರ್ ಖಾನ್ ಮತ್ತು ಕೃತಿಕಾ ಕರ್ಮಾ ನಟಿಸಿರುವ ‘ತಾಂಡವ್’ ಜ.15ರಂದು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.