ಶನಿವಾರ, ಜೂನ್ 19, 2021
28 °C
ಕನ್ನಡ ಕಾವ್ಯ ಪ್ರಿಯರು–ಸಂಗೀತ ಅಭಿಮಾನಿಗಳನ್ನು ರಂಜಿಸುತ್ತಿದೆ ಹೊಸ ಪ್ರಯತ್ನ

ಯೂಟ್ಯೂಬ್‌ನಲ್ಲಿ ಮಿಂಚುತ್ತಿದೆ ಕನ್ನಡ ಕಾವ್ಯ ಕಾಮನಬಿಲ್ಲು

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡದ ಕಾವ್ಯ ಪ್ರಿಯರು ಹಾಗೂ ಸಂಗೀತ ಅಭಿಮಾನಿಗಳನ್ನು ಏಕಕಾಲಕ್ಕೆ ರಂಜಿಸುವ ಹೊಸ ಪ್ರಯತ್ನ ಕನ್ನಡ ಕಾವ್ಯ ಕಾಮನಬಿಲ್ಲು. ಹಿರಿಯ ಲೇಖಕ, ವಿಮರ್ಶಕ ಡಾ. ಸಿ.ಎನ್. ರಾಮಚಂದ್ರನ್‌ ಪರಿಕಲ್ಪನೆಯಡಿ ರೂಪುಗೊಂಡಿರುವ ಈ ಯೋಜನೆಯ ವಿಡಿಯೊಗಳು ಈಗ ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿವೆ. 

ಕಾವ್ಯ ಹಾಗೂ ಸಂಗೀತ ಎರಡೂ ಹದವಾಗಿ ಮಿಳಿತವಾಗಿರುವ ಈ ವಿಡಿಯೊಗಳು, ಕನ್ನಡದ ಶ್ರೀಮಂತ ಕಾವ್ಯ ಪರಂಪರೆಯನ್ನು ಈಗಿನ ಕಾಲಕ್ಕೆ ತಕ್ಕಂತೆ ಪ್ರಸ್ತುತ ಪಡಿಸುತ್ತಿವೆ. 

ಕನ್ನಡ ಪದ್ಯಗಳ ಸಾಲುಗಳು ಹಾಗೂ ಸಾಲುಗಳ ನಡುವಿನ ವಿಶಿಷ್ಟ, ಮಧುರ ಜೋಡಣೆಯ ಛಂದೋರೂಪಗಳನ್ನು ಅಥವಾ ಅಕ್ಷರಗಳನ್ನು ಗಣ ಎನ್ನುತ್ತಾರೆ. ಇಂತಹ ವರ್ಣ, ಮಾತ್ರಾ ಹಾಗೂ ಅಕ್ಷರ ಗಣಗಳಲ್ಲಿ ರಚನೆಯಾದ ಕಾವ್ಯಗಳಿಗೆ  ಸಂಗೀತ ಸ್ಪರ್ಶ ನೀಡಲಾಗಿದೆ.

ಪಂಪನ ಎರಡು ಪ್ರಸಿದ್ಧ ಪದ್ಯಗಳು, 12ನೇ ಶತಮಾನದಲ್ಲಿ ರಚನೆಯಾದ ಕೆಲವು ವಚನಗಳು, ಹರಿಹರನ ಪುಷ್ಪರಗಳೆಯ ಒಂದು ಭಾಗ, ಭಾಮಿನಿ ಮತ್ತು ವಾರ್ಧಕ ಷಟ್ಪದಿಯಲ್ಲಿ ರಚನೆಯಾದ ಕುಮಾರವ್ಯಾಸ, ಲಕ್ಷ್ಮೀಶನ ಪದ್ಯಗಳು, ಜನ್ನನ ಯಶೋದರ ಚರಿತೆಯ ಮೂರು ಕಂದ ಪದ್ಯಗಳು ಸೇರಿದಂತೆ ಎಲ್ಲ ಕಾವ್ಯಗಳಿಗೆ ವಿದುಷಿ ಕೃತ್ತಿಕಾ ಶ್ರೀನಿವಾಸನ್‌ ಧ್ವನಿಯಾಗಿದ್ದಾರೆ. ವಿದುಷಿ ದೀಪಿಕಾ ಶ್ರೀನಿವಾಸನ್‌ ಮೃದಂಗದ ಸಾಥ್‌ ನೀಡಿದ್ದರೆ, ವಿದ್ವಾನ್‌ ದೀಪಕ್‌ ಹೆಬ್ಬಾರ್ ಕೊಳಲು ನುಡಿಸಿದ್ದಾರೆ. 

ಐದರಿಂದ ಏಳು ತಾಳಗಳಲ್ಲಿ ಭಿನ್ನ ರಾಗದಲ್ಲಿ ಹಾಡುವ ಸುಳಾದಿ ಪ್ರಕಾರ ಪರಿಚಯಿಸಲು ಪುರಂದರ ದಾಸರ ರಚನೆಗಳನ್ನು ಆಯ್ಕೆ ಮಾಡಿಕೊಂಡಿದ್ದರೆ, ಆಧ್ಯಾತ್ಮಿಕ ತತ್ವಗಳನ್ನು ಒಗಟಿನ ಮೂಲಕ ಹೇಳುವಂತಹ ಕನಕದಾಸರ ಮುಂಡಿಗೆಗಳನ್ನು ತೆಗೆದುಕೊಳ್ಳಲಾಗಿದೆ.

‘ಸಾಂಗತ್ಯ ಪ್ರಕಾರದಲ್ಲಿ ಸಂಚಿ ಹೊನ್ನಮ್ಮನ ಹದಿಬದೆಯ ಧರ್ಮದಿಂದ ಎರಡು ಪದ್ಯಗಳು, ಸರ್ವಜ್ಞನ ತ್ರಿಪದಿಗಳು ಹಾಗೂ ವೈಚಾರಿಕವಾಗಿಯೂ, ಹಾಡುವ ರೀತಿಯಿಂದಲೂ ಭಿನ್ನವಾದ ತತ್ವಪದಗಳನ್ನು ಪರಿಚಯಿಸಲು ಶಿವಯೋಗಿಗಳ ತತ್ವಪದಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ಡಾ. ಸಿ.ಎನ್. ರಾಮಚಂದ್ರನ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಆಧುನಿಕ ಕಾಲದ ಪ್ರಾರಂಭಿಕ ಘಟ್ಟದಲ್ಲಿ ಕಂಪನಿ ನಾಟಕಗಳಲ್ಲಿ ಹಾಡುವ ಹಾಡುಗಳು, ಭಾವಗೀತೆಗಳು ಹಾಗೂ ಮಂಕುತಿಮ್ಮನ ಕಗ್ಗದ ಪದ್ಯಗಳಿಗೂ ಸಂಗೀತ ಸಂಯೋಜಿಸಿ ವಿಡಿಯೊಗಳನ್ನು ಮಾಡಲಾಗಿದೆ. 

‘ಭಿನ್ನ ಕಾಲಘಟ್ಟದಲ್ಲಿನ ಕನ್ನಡ ಕವಿಗಳು ಉಪಯೋಗಿಸಿರುವ ಭಿನ್ನ ಛಂದೋರೂಪಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವುದು, ಆಯಾ ರೂಪಗಳ ಪ್ರಾತಿನಿಧಿಗಳ ಪದ್ಯಗಳನ್ನು ಗಾಯನದ ಮೂಲಕ ಪ್ರಸ್ತುತ ಪಡಿಸುವುದು ಈ ಯೋಜನೆಯ ಉದ್ದೇಶ. ಆ ಮೂಲಕ ಕನ್ನಡ ಕಾವ್ಯದ ನಕ್ಷೆ ರೂಪಿಸುವ ನಮ್ಮ ಹಂಬಲದ ಸಾಕಾರ ರೂಪ ಈ ವಿಡಿಯೊಗಳು’ ಎಂದು ಅವರು ಹೇಳಿದರು. 

‘ಪ್ರತಿ ವಾರ ಒಂದೊಂದು ಎಪಿಸೋಡ್‌ ಮಾಡುತ್ತಿದ್ದೇವೆ. ಒಂದೊಂದು ಎಪಿಸೋಡ್‌ನಲ್ಲಿ ಆಯಾ ಪ್ರಕಾರದ ಪರಿಚಯ ಮತ್ತು ಒಂದು ಹಾಡು ಇರುತ್ತದೆ. ಮಾ.7ರಿಂದ ಪ್ರತಿ ಗುರುವಾರ ವಿಡಿಯೊಗಳನ್ನು ಕನ್ನಡ ಕಾವ್ಯ ಕಾಮನಬಿಲ್ಲು ಹೆಸರಿನಲ್ಲಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದೇವೆ. ಪ್ರಾಚೀನ ಕಾವ್ಯಗಳಿಗೆ ಈ ರೀತಿ ಸಂಗೀತ ಸ್ಪರ್ಶ ನೀಡಿ ಪ್ರಸ್ತುತಪಡಿಸುತ್ತಿರುವುದು ತುಂಬಾ ಜನಕ್ಕೆ ಇಷ್ಟವಾಗುತ್ತಿದೆ’ ಎಂದು ವಿದುಷಿ ಕೃತ್ತಿಕಾ ಶ್ರೀನಿವಾಸನ್ ಹೇಳಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು