‘ದೃಢ ಇಚ್ಛೆಯಿದ್ದರೆ ಯಶಸ್ಸು ಸಾಧ್ಯ’

7

‘ದೃಢ ಇಚ್ಛೆಯಿದ್ದರೆ ಯಶಸ್ಸು ಸಾಧ್ಯ’

Published:
Updated:
Deccan Herald

ಇತ್ತೀಚೆಗೆ ‘ಬಾಡಿ ಶೇಮಿಂಗ್‌’ ಹೆಚ್ಚು ಸುದ್ದಿಯಲ್ಲಿದೆ. ಅಂದ, ಗಾತ್ರ, ಬಣ್ಣದ ಮೂಲಕ ಗುರುತಿಸಿ, ಅವಮಾನಿಸಿ, ಆಕೆಯ ಆತ್ಮವಿಶ್ವಾಸವನ್ನು ಕುಗ್ಗಿಸಲಾಗುತ್ತದೆ. ಆದರೆ ಈ ಅವಮಾನಗಳನ್ನೆಲ್ಲಾ ಮೆಟ್ಟಿನಿಂತು, ಫ್ಯಾಷನ್‌ ಲೋಕದಲ್ಲಿ ತಮ್ಮ ಗುರುತು ಮೂಡಿಸುತ್ತಿದ್ದಾರೆ ಬೆಂಗಳೂರಿನ ವೈಷ್ಣವಿ ಪ್ರದೀಪ್‌ರಾಜ್‌. 

ಜುಲೈ ತಿಂಗಳಲ್ಲಿ ಚೆನ್ನೈನಲ್ಲಿ ನಡೆದ ‘ಮಿಸೆಸ್‌ ಇಂಡಿಯಾ’ ಸೌಂದರ್ಯ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ, ‘ಮಿಸೆಸ್‌ ಇಂಡಿಯಾ ಕರ್ನಾಟಕ ಇನ್‌ಸ್ಪಿರೇಶನ್‌’ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆಸಕ್ತಿಯ ವಿಷಯವೆಂದರೆ ಎರಡು ವರ್ಷದ ಮೊದಲು ಇವರ ದೇಹತೂಕ 113 ಕೆ.ಜಿ ಯಷ್ಟಿತ್ತು. ಹೆಚ್ಚು ಕಡಿಮೆ 58 ಕೆ.ಜಿಯಷ್ಟು ತೂಕ ಕಳೆದುಕೊಂಡು, ಫ್ಯಾಷನ್‌ ಲೋಕದಲ್ಲಿ ಮಿಂಚುತ್ತಿದ್ದಾರೆ. 

ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ‘ಮಿಸೆಸ್‌ ಇಂಡಿಯಾ ಕರ್ನಾಟಕ ಸೌಂದರ್ಯ ಸ್ಪರ್ಧೆ’ಯಲ್ಲಿ ಭಾಗವಹಿಸಿದ ಅವರು ಥರ್ಡ್‌ ರನ್ನರ್ ಅಪ್‌ ಆಗಿ ಆಯ್ಕೆಯಾಗಿದ್ದಾರೆ. ಈ ಸ್ಪರ್ಧೆಗೆ ದೇಶದಾದ್ಯಂತ 72 ಮಹಿಳೆಯರು ಭಾಗವಹಿಸಿದ್ದರು. ಇಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಪ್ರಬಲ ಪೈಪೋಟಿಯಿದ್ದರೂ ವೈಷ್ಣವಿ ಮೂರನೇ ಸ್ಥಾನ ಪಡೆದು, ಅಕ್ಟೋಬರ್‌ ತಿಂಗಳಲ್ಲಿ ಚೀನಾದಲ್ಲಿ ನಡೆಯುವ ‘ಮಿಸೆಸ್‌ ಏಷ್ಯಾ ಇಂಟರ್‌ನ್ಯಾಷನಲ್‌’ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. 

ಸಣ್ಣ ವಯಸ್ಸಿನಿಂದಲೂ ವೈಷ್ಣವಿಗೆ ಫ್ಯಾಷನ್‌ ಲೋಕದ ಕಡೆಗೆ ತುಡಿತವಿತ್ತು. ಆದರೆ ಅವಕಾಶಗಳು ಸಿಕ್ಕಿರಲಿಲ್ಲ. ಬಾಲನಟಿಯಾಗಿ ಕಿರುತೆರೆ ಹಾಗೂ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಮದುವೆ, ಮಗುವಾದ ಬಳಿಕ ಇವರು ದಪ್ಪಗಾಗುತ್ತಾ ಹೋದರಂತೆ. ಅದರಿಂದ ಹೋದಲ್ಲೆಲ್ಲಾ ಬಾಡಿ ಶೇಮಿಂಗ್‌ ಗುರಿಯಾಗಬೇಕಾಯಿತು. ಎಲ್ಲಾ ಅವಮಾನಗಳನ್ನು ಮೆಟ್ಟಿ, ಸಣ್ಣಗಾಗಿ ಫ್ಯಾಷನ್‌ ಲೋಕದಲ್ಲಿ ಸಕ್ರಿಯರಾಗಲು ಸ್ಪೂರ್ತಿಯಾಗಿದ್ದು ಇವರ ಮಗಳ ಶಾಲೆಯಲ್ಲಿ ನಡೆದ ಘಟನೆ. 

‘ದೃಢ ನಿರ್ಧಾರ ತೆಗೆದುಕೊಂಡಾಗ ಸಕಾರಾತ್ಮಕ ಮನಸ್ಥಿತಿ ಇರಬೇಕು. ಆಗ ನಾವು ಕೈಹಿಡಿದ ಕೆಲಸ ಕೈಗೂಡುತ್ತದೆ ಎಂಬುದಕ್ಕೆ ನಾನೇ ಉದಾಹರಣೆ.  ನಾನು ಮಗಳ ಶಾಲೆಯಲ್ಲಿ ಪೋಷಕರ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಆದರೆ ದಪ್ಪಗಿದ್ದುದರಿಂದ ಓಡಲಾಗಲಿಲ್ಲ. ಆಗ ಎಲ್ಲರೂ ನಕ್ಕರು. ಮಗಳ ಮುಖವೂ ಚಿಕ್ಕದಾಯಿತು. ನನ್ನ ಮಗಳ ಎದುರಲ್ಲಿ ಅವಮಾನವಾದಾಗ, ಸಣ್ಣಗಾಗಲೇ ಬೇಕು ಎಂದು ದೃಢನಿರ್ಧಾರ ಮಾಡಿದೆ’ ಎಂದು ಬಾಡಿಶೇಮಿಂಗ್‌ಗೆ ಗುರಿಯಾಗಿದ್ದನ್ನು ವೈಷ್ಣವಿ ನೆನಪಿಸಿಕೊಳ್ಳುತ್ತಾರೆ. 

‘ಅದೇ ಮೊದಲಲ್ಲ. ಅದಕ್ಕಿಂತ ಹಿಂದೆಯೂ ತುಂಬಾ ಸಲ ದೇಹತೂಕದಿಂದ ಅವಮಾನ ಅನುಭವಿಸಿದ್ದೇನೆ. ನಾನು ನನ್ನ ಸ್ನೇಹಿತರ ಪ್ರಾಜೆಕ್ಟ್‌ಗೆ ಸಹಾಯ ಮಾಡುವ ಉದ್ದೇಶದಿಂದ ಮೂರು ವರ್ಷದ ಹಿಂದೆ ಥಾಯ್ಲೆಂಡ್‌ಗೆ ಹೋಗಿದ್ದೆ. ನನ್ನ ಹೊಟ್ಟೆ ದಪ್ಪಗಿದ್ದುದರಿಂದ, ನಾನು ಗರ್ಭಿಣಿ ಎಂದು ಭಾವಿಸಿ, ಹತ್ತಕ್ಕೂ ಹೆಚ್ಚು ಬಾರಿ ತಪಾಸಣೆ ಮಾಡಿದರು. ನಾನು ದಪ್ಪಗಿರುವುದರಿಂದ ಹೊಟ್ಟೆಯೂ ದಪ್ಪ ಇದೆ ಎಂದು ಅವರಿಗೆ ಅರ್ಥಮಾಡಿಸುವಷ್ಟರಲ್ಲಿ ಸಾಕುಸಾಕಾಯಿತು.  ಅಲ್ಲಿ ದಪ್ಪಗಿರುವವರಿಗೆ ಬೆಲೆಯಿಲ್ಲ. ದಪ್ಪಗಿರುವವರಿಗೆ ವ್ಯಕ್ತಿತ್ವವೇ ಇಲ್ಲ ಎಂಬಂತೆ ಅಲ್ಲಿನವರ ವರ್ತನೆ ಇತ್ತು. ಕೊನೆಗೆ ವಿಮಾನ ಹತ್ತಿಸಿದರು. ನನ್ನ ಸುತ್ತಮುತ್ತಲ ಜನರೇ ‘ಅಯ್ಯೋ ಎಷ್ಟು ದಪ್ಪಗಿದ್ದೀರಾ?. ನಿಮ್ಮ ಕೈಯಲ್ಲಿ ಇನ್ನು ಏನು ಮಾಡೋಕೆ ಆಗುತ್ತೆ? ಜೀವನವೇ ಮುಗಿಯಿತು ಎಂಬಂತೆ ಕನಿಕರ ತೋರಿಸುತ್ತಿದ್ದರು. ಇದೆಲ್ಲಾ ನಾನು ತೂಕ ಕಡಿಮೆ ಮಾಡಿಕೊಳ್ಳಲು ಪ್ರೇರಣೆಯಾಯಿತು’ ಎನ್ನುತ್ತಾರೆ ವೈಷ್ಣವಿ. 

ಸಣ್ಣಗಾಗಲು ವೈಷ್ಣವಿ ಎರಡು ವರ್ಷ ಕಷ್ಟಪಟ್ಟಿದ್ದಾರೆ. ಈ ಮೊದಲು ಆಹಾರಪ್ರಿಯೆಯಾಗಿದ್ದ ಇವರು, ವೈದ್ಯರು, ಫಿಟ್‌ನೆಸ್‌ ತಜ್ಞರ ಸಲಹೆಯಂತೆ ಆರಂಭದ ಮೂರು–ನಾಲ್ಕು ತಿಂಗಳು ಬರೀ ದ್ರವಾಹಾರವನ್ನಷ್ಟೇ ಸೇವಿಸಿದ್ದರು. ‘ಆಗ ಪ್ರೊಟೀನ್‌ ಶೇಕ್, ಹಣ್ಣುಗಳ ಜ್ಯೂಸ್‌ ಇವಿಷ್ಟೇ ನನ್ನ ಆಹಾರ. ಪ್ರತಿ ಎರಡು ಗಂಟೆಗೊಮ್ಮೆ ಸೇವಿಸುತ್ತಿದ್ದೆ. ಇದು ತೂಕ ಇಳಿಸಿಕೊಳ್ಳಲು ನೆರವಾಯಿತು. ಇದಲ್ಲದೆ ಪ್ರತಿದಿನ ಎರಡು– ಮೂರು ತಾಸು  ಈಜು, ಝುಂಬಾ ನೃತ್ಯ, ಯೋಗ ಮಾಡುತ್ತಿದ್ದೆ’ ಎಂದು ತಾವು ತೂಕ ಕಳೆದುಕೊಳ್ಳಲು ಮಾಡಿದ ಯತ್ನಗಳನ್ನು ವಿವರಿಸುತ್ತಾರೆ. 

‘ಇಂತಹ ಸಂದರ್ಭಗಳಲ್ಲಿ ಆಹಾರ ಪಥ್ಯ, ಯೋಗದ ಜತೆಗೆ ಸಕಾರಾತ್ಮಕ ಆಲೋಚನೆ, ಮನಸ್ಥಿತಿಯೂ ಮುಖ್ಯವಾಗುತ್ತದೆ. ನಾನು ಮಗಳಿಗಾಗಿ ಸಣ್ಣಗಾದೆ. ಆದರೆ ನಾನು ಸಣ್ಣಗಾಗಿದ್ದನ್ನು ನೋಡಿ ನನ್ನ ಸ್ನೇಹಿತೆಯೊಬ್ಬರು ಮಿಸೆಸ್‌ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಸಲಹೆ ನೀಡಿದರು. ಮದುವೆಯಾಗಿ ಮಗುವಿರುವಾಗ ಇದೆಲ್ಲಾ ಯಾಕೆ ಎಂದು ಸುಮ್ಮನಾಗಿದ್ದೆ. ಆದರೆ ನನ್ನ ಪತಿ ಹಾಗೂ ಮನೆಯವರು ನನಗೆ ಪ್ರೋತ್ಸಾಹ ನೀಡಿದರು. ಚೀನಾದಲ್ಲಿ ನಡೆಯುವ ‘ಮಿಸೆಸ್‌ ಏಷ್ಯಾ ಇಂಟರ್‌ನ್ಯಾಷನಲ್‌’ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ’ ಎಂದು ವೈಷ್ನವಿ ನಗುತ್ತಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !