ಮಂಗಳವಾರ, ಮೇ 17, 2022
29 °C

PV Web Exclusive: ಪ್ರತಿರೋಧಿಸಬೇಕಾಗಿರುವುದೇನು?

ರಶ್ಮಿ ಎಸ್ Updated:

ಅಕ್ಷರ ಗಾತ್ರ : | |

Prajavani

ತಾಂಡವ್‌ ಅಮೆಜಾನ್ ಪ್ರೈಮ್‌ನ ಒಂದು ವೆಬ್‌ ಸಿರೀಸ್‌. ದೇವರನ್ನು ಅವಹೇಳನ ಮಾಡಲಾಗಿದೆಯೆಂದು ಉತ್ತರ ಭಾರತದಲ್ಲಿ ಈ ಸರಣಿಯ ವಿರುದ್ಧ ಪ್ರತಿಭಟನೆಗಳು ಆರಂಭವಾದವು. ಹಿಂದೂ ದೇವರನ್ನು ಹೀಗಳೆಯಲಾಗಿದೆ. ನಮ್ಮ ಸಂಸ್ಕೃತಿಯನ್ನು ತಿರುಚಲಾಗಿದೆ ಎಂಬ ದೂರು ಅವರದ್ದು. ದೇವರನ್ನು ಹೀಗಳೆದಿದ್ದು ಇವರನ್ನು ಕೆರಳುವಂತೆ ಮಾಡಿತು. ಅದಕ್ಕಾಗಿ ಸೈಫ್‌ ಅಲಿ ಖಾನ್‌ ಫೋಟೊ ಸುಟ್ಟರು. ತಂಡ ಕ್ಷಮೆ ಯಾಚಿಸಿತು.

ಅದೇ ವೆಬ್‌ ಸಿರೀಸಿನಲ್ಲಿ ಡೀನೊ ಮೊರಿಯಾ ಪಾತ್ರ ಒಂದು ಮಾತು ಹೇಳುತ್ತದೆ. ‘ಒಬ್ಬ ಪರಿಶಿಷ್ಟ ಜಾತಿಯ ಪುರುಷ, ಮೇಲ್ಜಾತಿಯ ಹೆಣ್ಣುಮಗಳನ್ನು ಸಂಭೋಗಿಸಿದರೆ ಅದು ಶತಮಾನಗಳಿಂದ ತಾನು ಅನುಭವಿಸಿದ ಅವಮಾನಗಳ ಪ್ರತೀಕಾರವಾಗಿರುತ್ತದೆ ಅಷ್ಟೆ! ಪ್ರೀತಿ ಅಲ್ಲ’

ಈ ಮಾತು ಮೂರು ಸಲ ಇಡೀ ಸರಣಿಯಲ್ಲಿ ಕೇಳಿಬರುತ್ತದೆ. ವಿರೋಧ ವ್ಯಕ್ತ ಆಗಬೇಕಾಗಿದ್ದಿದ್ದು ಈ ಸಂಭಾಷಣೆಗೆ. ಒಂದು ಸಮುದಾಯವನ್ನು ಹೀಗೆ ಖುಲ್ಲಂಖುಲ್ಲಾ ಹೀಗಳೆಯುವುದು ಎಷ್ಟು ಸರಿ? ಹಂಗಂದ್ರೆ ನೇರವಾಗಿ ಅಲ್ಲ, ಸೂಚ್ಯವಾಗಿ ಹೀಗಳೆಯಬಹುದೆ? ಎಂಬ ಪ್ರಶ್ನೆಯೂ ಎದುರಾಗುತ್ತದೆ.

ಯಾವುದೇ ಸಮುದಾಯ, ಸಮಾಜವನ್ನು ಹೀಗಳೆಯುವುದು ನಮ್ಮ ಸಂಸ್ಕೃತಿಯೇ? ಎರಡು ಜೀವಗಳು, ಪರಸ್ಪರ ಇಷ್ಟಪಟ್ಟು ದೈಹಿಕವಾಗಿ ಒಂದಾದರೆ ಅಲ್ಲಿ ಜಾತಿಯ ಗೋಡೆ ಅಡ್ಡತರುವ ಅಗತ್ಯವೇನಿದೆ? ಸರಿ, ಅದು ವೈವಾಹಿಕ ಚೌಕಟ್ಟಿನಿಂದಾಚೆ ಇರುವ ಬಾಂಧವ್ಯ. ಆದರೆ ಜೆಎನ್‌ಯು ಹೋಲುವ ವಿಎನ್‌ಯು ವಿಶ್ವವಿದ್ಯಾಲಯದಲ್ಲಿ ಡೀನ್‌ ಆಗಿ ಪ್ರಮೋಷನ್‌ ಪಡೆಯಲಿರುವ ಹೆಣ್ಣುಮಗಳೊಬ್ಬಳು, ಇಂಥ ಬಾಂಧವ್ಯದಲ್ಲಿದ್ದರೆ ಆ ಬಗ್ಗೆ ಅವಳಿಗೆ ಸ್ಪಷ್ಟ ಕಲ್ಪನೆ ಇರುವುದಿಲ್ಲವೇ? ಅದೇ ವಿಭಾಗದಲ್ಲಿ ಪ್ರೊಫೆಸರ್‌ ಆಗಿರುವ ವ್ಯಕ್ತಿ, ತನ್ನ ವಿದ್ಯಾರ್ಥಿನಿಯೊಂದಿಗೆ ಚಕ್ಕಂದವಾಡಿದರೆ ಅದು ಅವನನ್ನು ಭಗ್ನಪ್ರೇಮಿ ಎಂಬಂತೆ ಚಿತ್ರೀಕರಿಸಲಾಗುತ್ತದೆ. ಅವನ ಹೆಂಡತಿಯ ಬಾಹ್ಯ ಸಂಬಂಧವೊಂದು ಇಲ್ಲಿ ಅವಕಾಶವಾದಿಯೆಂಬಂತೆ ತೋರಿಸಲಾಗುತ್ತದೆ.

ಈ ಆಯ್ಕೆ ಮತ್ತು ಅನಿವಾರ್ಯಗಳ ನಡುವಿನ ಗೆರೆಯನ್ನು ಅಳಕಿಸಿ, ಗಂಡಸಿಗೆ ಅನುಕಂಪದ ದೃಷ್ಟಿಯಿಂದಲೂ ಹೆಣ್ಣುಮಗಳಿಗೆ ಅವಕಾಶವಾದಿಯ ಪಟ್ಟವನ್ನೂ ನೀಡುವುದು ಯಾವ ಸಂಸ್ಕೃತಿ? ಮತ್ತದೇ ಪಾಳೇಗಾರಿಕೆಯ ಸಂಸ್ಕೃತಿಯನ್ನೇ ಬಿಂಬಿಸುತ್ತದೆ. ಇಡೀ ವೆಬ್‌ ಸರಣಿಯಲ್ಲಿ ಮಹಿಳೆಯನ್ನು ಭೋಗದ ಸರಕಾಗಿ ತೋರಿಸುವುದು ಈ ನಡುವೆ ಸಾಮಾನ್ಯವಾಗಿದೆ. ಇದರ ವಿರುದ್ಧ ಯಾರೂ ಧ್ವನಿಯೆತ್ತುವುದಿಲ್ಲ ಯಾಕೆ?

ತಾಂಡವ್‌ನಲ್ಲಿ ಡೀನೊ ಮೊರಿಯಾ ಪಾತ್ರ ಬರೋಬ್ಬರಿ ಭಾರತೀಯ ಗಂಡನ ಪಾತ್ರವನ್ನೇ ಸಂಕೇತಿಸುತ್ತದೆ. ತಾನು ಬೇಕಾದರೆ ತನ್ನ ಶಿಷ್ಯಳೊಂದಿಗೆ ಚಕ್ಕಂದವಾಡಬಹುದು. ಹೆಂಡ್ತಿ ಇದರಿಂದ ಬೇಜಾರಾಗಿ, ಅವನ ವರ್ತುಲದಿಂದಾಚೆ ಉಳಿದು, ಇನ್ನೊಂದು ಬಾಂಧವ್ಯದಲ್ಲಿ ಸಿಲುಕಿದರೆ ಸಹಿಸಲಾಗದು. ತಾನೊಬ್ಬ ಭಗ್ನಪ್ರೇಮಿಯಂತೆ ಹಳಹಳಿಸುವುದು. ಹೆಂಡತಿಯನ್ನು ಒಂದು ಸುದೀರ್ಘ ಮೌನದಲ್ಲಿ ಬೇಯುವಂತೆ ಮಾಡುವುದು.

ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಗಿರುವ ಪಾತ್ರವೊಂದು, ಬೇಡದ ಬಾಂಧವ್ಯದಿಂದಾಚೆ, ಇನ್ನೊಂದು ಸಂಬಂಧದಲ್ಲಿರುವಾಗ, ಅವಳ ಗಂಡ, ಅವಳನ್ನು ಹೀಗಳೆಯಲು, ಅವಮಾನಿಸಲು ಈ ಕಟುನುಡಿಗಳನ್ನು ಹೇಳ್ತಾನೆ. ಇಲ್ಲಿ ಅವಳ ಆಯ್ಕೆಯನ್ನು ಅಲ್ಲಗಳೆಯುವುದಷ್ಟೇ ಅಲ್ಲ, ಅವಳನ್ನು ತೀರ ಒಂದು ಭೋಗದ ಮತ್ತು ಪ್ರತೀಕಾರದ ಸಾಧನವೆಂಬಂತೆ ಬಿಂಬಿಸುತ್ತಾನೆ.

ಇಂಥ ಈ ಧೋರಣೆಯನ್ನು ವಿರೋಧಿಸಬೇಕಾಗಿರುವುದು ಇಂದಿನ ತುರ್ತು. ಕೀಳು ಜಾತಿಯವನೊಬ್ಬ ಚೌಕಟ್ಟಿನಾಚೆ ಪ್ರೀತಿಸಲಾರನೆ? ಪ್ರೀತಿಸಿದರೆ, ಪ್ರೀತಿಸುವ ಮುನ್ನ ಜಾತಿ ಯಾವುದು ಎಂಬುದು ಅರಿಯಲೇಬೇಕಿದೆಯೇ? ಪ್ರೀತಿಸಿದ್ದು ಮೇಲ್ಜಾತಿಯ ಹೆಣ್ಣುಮಗಳಾದರೆ, ಅಲ್ಲಿ, ಅನುರಾಗ ಮತ್ತು ಆರಾಧನೆಯ ಹೊರತು ಪಡಿಸಿಯೂ ಬೇರೆಯ ಉದ್ದೇಶಗಳಿರುತ್ತವೆಯೇ?

ಹೆಣ್ಣುಮಕ್ಕಳನ್ನು ತಮ್ಮ ಸ್ವಾಮ್ಯಕ್ಕೆ ಒಳಪಡಲಿ ಎಂಬ ಪಾಳೇಗಾರಿಕೆಯ ಮನೋಭಾವ ಇರುವವರೆಗೂ ಪರಸ್ಪರ ಆಯ್ಕೆಗಳನ್ನು ಗೌರವನಿಸುವ ಮನಃಸ್ಥಿತಿ ಬರುವುದೇ ಇಲ್ಲ. ಕಾಮ ಯಾವತ್ತಿಗೂ ಗಂಡು ಜೀವಕ್ಕೆ ಪಡೆಯುವ ಮತ್ತು ಅಧಿಕಾರ ಸ್ಥಾಪಿಸುವ ಕ್ರಿಯೆಯಾಗಿಯೇ ಉಳಿಯುತ್ತದೆ. ಹೆಣ್ಣುಮಕ್ಕಳಿಗೆ ನೀಡುವ, ಸಮರ್ಪಿಸುವ ಭಾವಗಳನ್ನೇ ಹೇರುವ ಈ ಮನೋಭೂಮಿಕೆಯಲ್ಲಿ ಎಂದಿಗೂ, ಒಂದು ಆಯ್ಕೆ, ಅನುರಕ್ತಿಗಳು ನೇಪಥ್ಯೆಕ್ಕೆ ಸರಿಯುತ್ತಲೇ ಹೋಗುತ್ತವೆ.

ಸ್ವತಂತ್ರವಾಗಿರುವ ಮಹಿಳೆಯೊಬ್ಬಳು ತನ್ನ ಆಯ್ಕೆಗಳನ್ನು ಮಾಡಿಕೊಳ್ಳಲಾರಳೆ? ಇಷ್ಟಕ್ಕೂ ಅಂತಃಕರುಣೆ ಇಲ್ಲದ ಆಕರ್ಷಣೆಯಲ್ಲಿ ಯಾವ ಹೆಣ್ಣುಮಗಳೂ ಉಳಿಯುವುದಿಲ್ಲ. ಇಲ್ಲಿಯೂ.. ಅದು ಹಂಗೆ ಆಗುತ್ತದೆ. ಆದರೆ.. ತೀರ ಒಬ್ಬ ಮಹಿಳೆಯನ್ನು ಅವಕಾಶವಾದಿಯೆಂಬಂತೆ ಬಿಂಬಿಸುವುದು ಎಷ್ಟು ಸರಿ?

ಹೆಂಡ್ತಿ ತನಗೆ ಸೇರಿದವಳು. ತನ್ನನ್ನು ಹೊರತು ಪಡಿಸಿ, ಇನ್ನೊಬ್ಬರನ್ನು ಒಪ್ಪಿಕೊಳ್ಳಲು ಕಾರಣ ಪರಸ್ಪರ ಆಕರ್ಷಣೆ ಮಾತ್ರ ಆಗಿರಲಿಕ್ಕಿಲ್ಲ ಎಂಬ ಸತ್ಯವನ್ನು ಅವನು ಅರಿಯುವುದೇ ಇಲ್ಲ. ಇಂಥ ಸೂಕ್ಷ್ಮಗಳೆಲ್ಲ ಎಲ್ಲಿ ಮಾಯವಾಗ್ತವೆ? ಮಸಾಲೆ ಇರಲಿ ಎಂಬ ಸೂತ್ರದಲ್ಲಿ, ದವಸಗಳನ್ನೇ ಮರೆತರೆ ಏನನ್ನೂ ಆಸ್ವಾದಿಸಲಾಗದು. 

ಒಬ್ಬ ವ್ಯಕ್ತಿಯನ್ನು ಸ್ವೀಕರಿಸಲು, ದೈಹಿಕವಾಗಿ ಒಗ್ಗೂಡಲು, ಪ್ರೀತಿಯೆಂಬ ಭಾವವೊಂದು ಅಂತರ್ಗಾಮಿನಿಯಾಗಿ ಪ್ರವಹಿಸುತ್ತಲೇ ಇರುತ್ತದೆ. ಆದರೆ ಅದು ತೀರ ಒಂದು ಕ್ರಿಯೆ ಎಂಬಂತೆ ಉದ್ಧರಿಸುವ, ಮಾತನಾಡುವ, ಹಾಗೆ ತೋರುವ ದೃಶ್ಯ ಮತ್ತು ಸಂಭಾಷಣೆಗಳಿಗೆ ವಿರೋಧ ವ್ಯಕ್ತಪಡಿಸಬೇಕಿತ್ತು.

ತಾಂಡವ್‌ ಸರಣಿ ನೋಡುವಾಗ ಯಾರೆಲ್ಲ ನೆನಪಾಗ್ತಾರೆ.. ಕನ್ಹಯ್ಯಾನ ಆಜಾದಿ, ವಿಎನ್‌ಯು ಹೆಸರಿನಲ್ಲಿ ಜೆಎನ್‌ಯು ದೇಶದ ಸ್ಥಿತಿಯನ್ನು ಹೀಗೆ ಮಾಧ್ಯಮ ಎತ್ತಿ ತೋರದಿದ್ದರೆ ಇನ್ನಾರು ತೋರಿಯಾರು? ಇವುಗಳನ್ನೆಲ್ಲ ಮುನ್ನೆಲೆಗೆ ತರಬೇಕಾದರೆ, ಒಂದು ಸಮುದಾಯವನ್ನು ದೂಷಿಸಲೇಬೇಕೆ? ಪರಿಶಿಷ್ಟ ಜಾತಿ ಅಥವಾ ಪಂಗಡದವರು ಮಹತ್ವಾಕಾಂಕ್ಷಿಗಳಾಗ ಕೂಡದೆ? ಹಾಗೊಂದು ಪಕ್ಷ ಅವರೂ ಉಳಿದವರಂತೆ ಅನುಕೂಲಸಿಂಧು ನಿರ್ಧಾರಗಳನ್ನು ಕೈಗೊಂಡರೆ ಅದು ಜಾತಿಯ ತಪ್ಪೇ?

ಬೇಸರವೆನಿಸುವುದು, ದೇವರ ಹೀಗಳೆದರು ಎಂದು ಅವಡುಗಚ್ಚುತ್ತಾರೆ. ನಾವು ನಮ್ಮೊಂದಿಗಿರುವ ಮಾನವರನ್ನು ಹೀಗಳೆದರೂ, ಪಾಪ್‌ಕಾರ್ನ್‌ ಸವಿಯುತ್ತ ಸರಣಿಯನ್ನು ನೋಡ್ತೀವಿ. ತೀರ ಖಾಸಗಿಯಾಗಿರುವ ಹಾಸಿಗೆಯ ವಿಷಯವನ್ನೂ ಪಾಪ್‌ಕಾರ್ನ್‌ ಜೊತೆ ಚಪ್ಪರಸ್ತೀವಿ. ಈ ಚಪ್ಪರಿಕೆಯ ಭರದಲ್ಲಿ ದವಡೆಯೊಳಗೆ ಪರಸ್ಪರ ಗೌರವ ಅನ್ನುವ ಅಂಶವೊಂದನ್ನು ಅಗಿದು, ಜಗಿದು, ನುಂಗುವುದು ಗೊತ್ತಾಗುವುದೇ ಇಲ್ಲ.

ಸೂಕ್ಷ್ಮ ಆಗಬೇಕಿರುವುದು ದೇವಪರನಾಗುವುದಕ್ಕಿಂತಲೂ ಜೀವಪರ ವಿಷಯಗಳಲ್ಲಿ.

ವಿರೋಧಿಸಿದವರ ವಾದ

ಪ್ರತಿಕೊಲೆಯಾದ ನಂತರ ಹಂತಕ ನೋಡುವ ಟೀವಿ ಕಾರ್ಯಕ್ರಮದಲ್ಲಿ ಉಪದೇಶ ನೀಡುತ್ತಿರುತ್ತಾನೆ. ಆ ದೃಶ್ಯಗಳು ಧಾರ್ಮಿಕ ಮನೋಭಾವಕ್ಕೆ ಧಕ್ಕೆ ತರುತ್ತವೆ. ಅವನ್ನು ತೆಗೆಯಬೇಕು ಎಂಬುದು ಪ್ರತಿಭಟನಾಕಾರರ ವಾದವಾಗಿದೆ. 

ಸೆನ್ಸಾರ್‌ ಇಲ್ಲದ ಮೇಲೆ...

ವೆಬ್‌ ಸರಣಿಗಳಲ್ಲಿ ಹಿಂಸೆ, ಲೈಂಗಿಕತೆ, ಕಟುವಾದ ಭಾಷೆ ಇವಿಷ್ಟೂ ಲಂಗುಲಗಾಮಿಲ್ಲದೆ ಬಳಕೆಯಾಗುತ್ತಿವೆ. ಒಂದು ಸಿದ್ಧಸೂತ್ರದಂತೆ ಒಂದೆರಡು ಕೊಲೆಗಳು, ಒಂದೆರಡು ಹಾಸಿಗೆಯ ದೃಶ್ಯಗಳು, ಮತ್ತು F... ಪದ, ಮಾ, ಬೆಹನ್‌ಗಳನ್ನು ದೂಷಿಸುವ ಪದಗಳನ್ನು ಧಾರಾಳವಾಗಿ ಬಳಸಲಾಗುತ್ತಿದೆ. ಬಿಡುಗಡೆಯಾದ ನಂತರ ಇಂಥ ಪ್ರತಿಭಟನೆಗಳು, ಹೋರಾಟಗಳು, ಕ್ಷಮೆಯಾಚನೆಯ ನಾಟಕಗಳು ನಡೆಯುತ್ತಲೇ ಇರುತ್ತವೆ. ಆದರೆ ಸರಣಿಗಳು ಹೀಗೆಯೇ ಪ್ರಸಾರವಾಗುತ್ತಲೇ ಇರುತ್ತವೆ.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು