ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಸಂಗೀತಾ ಭಟ್‌ ಫಿಟ್ನೆಸ್‌–ಸೌಂದರ್ಯದ ಗುಟ್ಟು

Last Updated 10 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

‘ದೈಹಿಕ ದೃಢತೆಗೆ ಜಿಮ್ ಅಥವಾ ವ್ಯಾಯಾಮಕ್ಕಿಂತ ಯೋಗ ಮತ್ತು ಪ್ರಾಣಾಯಾಮ ಉತ್ತಮ ಮಾರ್ಗ. ಪೌಷ್ಟಿಕ ಆಹಾರ ಸೇವನೆ ಜತೆಗೆ ನಿರಂತರವಾಗಿ ಯೋಗ ಮಾಡಿದರೆ ದೇಹ ಮನಸ್ಸು ಎರಡೂ ಆರೋಗ್ಯವಾಗಿರುತ್ತದೆ...’

ನಟಿ ಸಂಗೀತಾ ಭಟ್‌, ದೇಹ ಮತ್ತು ಮನಸ್ಸನ್ನು ‘ಫಿಟ್‌’ ಆಗಿ ಇಟ್ಟುಕೊಳ್ಳಲು ತಾವು ಅನುಸರಿಸುವ ವಿಧಾನವನ್ನು ವಿವರಿಸುವ ಪರಿ ಇದು.

ಸಾಮಾನ್ಯವಾಗಿ ದೇಹ ದಂಡಿಸಲು ನಟ–ನಟಿಯರು ಜಿಮ್‌ ಆಶ್ರಯಿಸುತ್ತಾರೆ. ಆದರೆ, ಸಂಗೀತಾ ಅವರು ನಿತ್ಯ ಯೋಗ ಮಾಡಿ ದೇಹ ದಂಡಿಸುತ್ತಾರೆ. ಪ್ರಾಣಾಯಾಮ ಮಾಡುತ್ತಾ ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳುತ್ತಾರೆ. ಇದೇ ಇವರಿಗೆ ನಿತ್ಯದ ವರ್ಕೌಟ್. ಯೋಗದಲ್ಲಿ ಉಸಿರಾಟ ನಿಯಂತ್ರಿಸುವ ‘ಕಪಾಲಬಾತಿ‘ ಆಸನವನ್ನು ಹೆಚ್ಚಾಗಿ ಮಾಡುತ್ತಾರೆ. ‘ಈ ಯೋಗಾಸನ ಹೊಟ್ಟೆ ಭಾಗ ತೆಳುವಾಗಿಸುವ ಜತೆಗೆ ಜೀರ್ಣಕ್ರಿಯೆಗೂ ಒಳ್ಳೆಯದು’ ಎನ್ನುತ್ತಾರೆ ಅವರು.

‘ಎಲ್ಲಾ ಕೆಲಸಕ್ಕೂ ಮನೋಸಂಕಲ್ಪವಿರಬೇಕು. ಮನಸ್ಸು ಪ್ರಶಾಂತವಾಗಿದ್ದರೆ ದೇಹಾರೋಗ್ಯವು ಚೆನ್ನಾಗಿರುತ್ತದೆ. ನಿತ್ಯ ಹತ್ತು ನಿಮಿಷ ಪ್ರಾಣಾಯಾಮ ಮಾಡಿದರೂ ಸಾಕು ಮನೋಬಲ ಹೆಚ್ಚುತ್ತದೆ. ನಕಾರಾತ್ಮಕ ಆಲೋಚನೆ ನಮ್ಮೊಳಗೆ ಸುಳಿಯುವುದಿಲ್ಲ’ ಎನ್ನುವುದು ಅವರ ಅಭಿಪ್ರಾಯ.

ಕಾಂತಿಯುಕ್ತ ತ್ವಚೆಗೆ..

‘ನಮ್ಮ ದೇಹದ ತ್ವಚೆ ಆರೋಗ್ಯವಾಗಿರಬೇಕಾದರೆ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು’ ಎನ್ನುವ ಸಂಗೀತಾ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಚಮಚೆಯಷ್ಟು ಆ್ಯಪಲ್ ಸೈಡರ್ ವೆನಿಗರ್ ಅನ್ನು ನೀರಿನಲ್ಲಿ ಬೆರಸಿ ಕುಡಿಯುತ್ತಾರೆ. ಇದು ಚರ್ಮಕ್ಕೆ ಕಾಂತಿ ನೀಡುತ್ತದೆಯಂತೆ. ಇದರ ಜತೆಗೆ ಬೆಳಿಗ್ಗೆ ಓಟ್ಸ್ ಹಾಗೂ ಡ್ರೈಫ್ರೂಟ್ಸ್ ಸೇವಿಸುತ್ತಾರೆ. ಮಧ್ಯಾಹ್ನ ಅನ್ನ ಸಾರು ಪಲ್ಯ ತಿನ್ನುತ್ತಾರಂತೆ.ಮಧ್ಯಾಹ್ನ ಯಾವುದೇ ಡಯಟ್ ಇಲ್ಲ. ಮೊಸರನ್ನ ಇವರಿಗೆ ಅಚ್ಚುಮೆಚ್ಚು. ರಾತ್ರಿ ಅನ್ನ ಕಡಿಮೆ ಮಾಡುತ್ತಾರಂತೆ.ಸಾಧ್ಯವಾದಷ್ಟು ಮನೆಯಲ್ಲಿ ಮಾಡಿದ ಆಹಾರವನ್ನೇ ಸೇವಿಸಿ ಎಂಬುದು ಅವರ ಕಿವಿಮಾತು.

‘ನಾನೇ ಐಬ್ರೂ ಮಾಡ್ಕೊತ್ತೀನಿ’

ಸಂಗೀತಾ, ಬ್ಯೂಟಿಪಾರ್ಲರ್ ಅವಲಂಬಿತ ನಟಿಯಲ್ಲ. ‘ಲಾಕ್‍ಡೌನ್‍ನಿಂದ ಬ್ಯೂಟಿಪಾರ್ಲರ್‌ಗೆ ಹೋಗಲಾಗುತ್ತಿಲ್ಲವಲ್ಲ. ಏನು ಮಾಡುತ್ತಿದ್ದೀರಿ’ ಎಂದರೆ ‘ನಾನೇ ಥ್ರೆಡಿಂಗ್ ಮಾಡಿಕೊಳ್ಳುತ್ತೀನಿ’ ಎಂದು ನಗುತ್ತಾರೆ. ಐಬ್ರೊ, ಅಪ್ಪರ್ ಲಿಪ್ ಥ್ರೆಡಿಂಗ್ ಮಾಡುವುದನ್ನೂ ಕಲಿತಿದ್ದಾರೆ.

ಶುಚಿತ್ವವೇ ಸೌಂದರ್ಯ ಎನ್ನುವುದು ಇವರ ಮಂತ್ರ. ಕೆಮಿಕಲ್‍ಯುಕ್ತ ಪ್ರಸಾಧನಗಳ ಬಳಕೆಯಿಂದ ಇವರು ಬಹುದೂರ. ಹಾಲುಗೆನ್ನೆಯ ಹೊಳಪಿಗೆ ರಾತ್ರಿ ಹೊತ್ತು ನೀಮ್ ಫೇಸ್‍ಪ್ಯಾಕ್ ಕಾರಣವಂತೆ. ಎರಡು ದಿನಕ್ಕೊಮ್ಮೆ ನೈಸರ್ಗಿಕ ಉತ್ಪನ್ನ ಬಳಸಿ ತ್ವಚೆಯನ್ನು ಸ್ವಚ್ಛಗೊಳಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ದೇಹದಲ್ಲಿರುವ ಕಲ್ಮಶಗಳು (ಟಾಕ್ಸಿಕ್‌) ಹೊರ ಹೋಗುತ್ತದೆ. ‘ಹೆಚ್ಚು ನೀರು, ಮಜ್ಜಿಗೆ, ನಿಂಬೆಹಣ್ಣಿನ ಪಾನಕ ಕುಡಿಯುವುದೇ, ನನ್ನ ಸೌಂದರ್ಯದ ಗುಟ್ಟು’ ಎನ್ನುತ್ತಾರೆ. ತಿಂಗಳಲ್ಲಿ ಎರಡು ದಿನ ತ್ವಚೆಯ ಆರೋಗ್ಯಕ್ಕಾಗಿ ಉಪವಾಸ ಮಾಡುತ್ತಾರೆ. ಈ ಸಮಯದಲ್ಲಿ ಸ್ವಲ್ಪ ಹಣ್ಣು ಹಾಗೂ ನೀರನ್ನಷ್ಟೇ ಸೇವಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT