ಶುಕ್ರವಾರ, ಅಕ್ಟೋಬರ್ 23, 2020
21 °C

ಸೋನಿಲಿವ್‌ನಲ್ಲಿ ಹರ್ಷದ್ ಮೆಹ್ತಾ ಕಥೆ

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

1992ರ ಏಪ್ರಿಲ್‌ನಲ್ಲಿ ನಡೆದ ಷೇರು ಮಾರುಕಟ್ಟೆ ಹಗರಣದಿಂದ ಇಡೀ ಭಾರತ ದೇಶವೇ ತಲ್ಲಣಗೊಂಡಿತ್ತು. ಇದು ಭಾರತದ ಆರ್ಥಿಕ ವಲಯಕ್ಕೆ ಅಪಾಯವನ್ನು ತಂದೊಡ್ಡಿತ್ತು. ಆ ಹಗರಣವು ಷೇರು ವಹಿವಾಟಿನಲ್ಲಿ ಹೊಸ ಸುಧಾರಣೆಗಳಿಗೆ ಹಾಗೂ ಭಾರತದ ಹಣಕಾಸು ಭದ್ರತಾ ವ್ಯವಸ್ಥೆಯಲ್ಲಿ ರಚನಾತ್ಮಕ ಬದಲಾವಣೆಗಳಿಗೆ ಕಾರಣವಾಗಿತ್ತು. ಈ ಎಲ್ಲ ಘಟನೆಗಳ ಹಿಂದೆ ಇದ್ದಿದ್ದು ವಂಚಕ ಹರ್ಷದ್ ಮೆಹ್ತಾ.

ಈ ವ್ಯಕ್ತಿಯ ಕಥೆ ಆಧಾರಿತ ‘ಸ್ಕ್ಯಾಮ್‌ 1992– ದಿ ಹರ್ಷದ್‌ ಮೆಹ್ತಾ ಸ್ಟೋರಿ’ ವೆಬ್‌ಸರಣಿಯು ಇದೇ ಅಕ್ಟೋಬರ್‌ 9 ರಂದು ಸೋನಿಲಿವ್‌ನಲ್ಲಿ ಪ್ರಸಾರವಾಗಲಿದೆ. ಈ ಸರಣಿಯು ಒಟ್ಟು 10 ಎಪಿಸೋಡ್‌ಗಳನ್ನು ಒಳಗೊಂಡಿದೆ.

ಅಪ್ಲೂಸ್‌ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ಸ್ಟುಡಿಯೊ ನೆಕ್ಸ್ಟ್ ಸಹಯೋಗದೊಂದಿಗೆ ಈ ಸರಣಿಗೆ ಹಣ ಹೂಡಿಕೆ ಮಾಡಿದೆ. ಇದು ಖ್ಯಾತ ಪತ್ರಕರ್ತರಾದ ದೇಬಶಿಸ್‌ ಬಸು ಹಾಗೂ ಸುಚೇತಾ ದಲಾಲ್‌ ಅವರು ಬರೆದ ‘ದಿ ಸ್ಕ್ಯಾಮ್‌: ಫ್ರಮ್‌ ಹರ್ಷದ್‌ ಮೆಹ್ತಾ ಟು ಕೇತನ್‌ ಪಾರೇಖ್‌’ ಪುಸ್ತಕ ಆಧಾರಿತ ಸರಣಿಯಾಗಿದೆ. ಈ ಪುಸ್ತಕವು ಆರ್ಥಿಕ ಅಪರಾಧಗಳ ಕುರಿತು ವಿವರಗಳನ್ನು ಹೊಂದಿದ್ದು ಅತೀ ಹೆಚ್ಚು ಮಾರಾಟವಾದ ಪುಸ್ತಕ ಎಂಬ ಖ್ಯಾತಿಯನ್ನೂ ಪಡೆದಿದೆ.

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಹನ್ಸಲ್ ಮೆಹ್ತಾ ಈ ಸರಣಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪ್ರತೀಕ್‌ ಗಾಂಧಿ ಹಾಗೂ ಶ್ರೇಯಾ ಧನ್ವಂತರಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸತೀಶ್ ಕೌಶಿಕ್‌, ಶರೀಬ್‌ ಹಶ್ಮಿ, ಅನಂತ್ ಮಹದೇವನ್‌, ನಿಖಿಲ್ ದ್ವಿವೇದಿ, ಕೆಕೆ ರೈನಾ, ಲಲಿತ್‌ ಪಾರಿಮೋ ಮೊದಲಾದವರು ಈ ವೆಬ್‌ಸರಣಿಗೆ ಬಣ್ಣ ಹಚ್ಚಿದ್ದಾರೆ.

ಈ ಸರಣಿಯ ಬಗ್ಗೆ ಮಾತನಾಡಿದ ಹನ್ಸಲ್ ಮೆಹ್ತಾ ‘ಸ್ಕ್ಯಾಮ್‌ 1992– ದಿ ಹರ್ಷದ್ ಮೆಹ್ತಾ ಸ್ಟೋರಿ ಸೋನಿಲಿವ್‌ನಲ್ಲಿ ಬಿಡುಗಡೆಯಾಗುತ್ತಿರುವುದು ಖುಷಿಯ ವಿಚಾರ. ಈ ಸರಣಿಯು ನೈಜ ಘಟನೆಯನ್ನು ಆಧರಿಸಿದೆ. ಆ ಸ್ಕ್ಯಾಮ್‌ನಲ್ಲಿ ಭಾಗಿಯಾದ ವ್ಯಕ್ತಿಯ ಸಂಪೂರ್ಣ ಚಿತ್ರಣವನ್ನು ವೆಬ್‌ಸರಣಿ ಕಟ್ಟಿಕೊಡಲಿದೆ. ಇದರಲ್ಲಿ ಬ್ಯಾಂಕ್‌ ಸ್ಕ್ಯಾಮ್‌ ಕಥೆಯಲ್ಲದೇ ಒಬ್ಬ ಮಧ್ಯಮ ವರ್ಗದ ವ್ಯಕ್ತಿಯ ಆಸೆ, ಕನಸುಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವೂ ಇದೆ. ಅಪ್ಲೂಸ್‌ ಎಂಟರ್‌ಟೈನ್‌ಮೆಂಟ್ ಹಾಗೂ ಸ್ಟುಡಿಯೊ ನೆಕ್ಸ್ಟ್ ನಿರ್ಮಾಣದ ಈ ಸರಣಿ ಪ್ರೇಕ್ಷಕರಿಗೆ ಇಷ್ಟವಾಗುವುದರಲ್ಲಿ ಅನುಮಾನವಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು