ಶುಕ್ರವಾರ, ಸೆಪ್ಟೆಂಬರ್ 17, 2021
23 °C

PV Web Exclusive: ವೃತ್ತಿರಂಗಭೂಮಿಯ ‘ಧ್ರುವತಾರೆ’ ಬಿ. ಓಬಳೇಶ್

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

Prajavani

ದನಕಾಯುವ ಆ ಹುಡುಗ ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕು ಬಿದರಕೆರೆ ಗ್ರಾಮದ ಚಿನ್ನಪ್ಪ–ತಿಪ್ಪಮ್ಮ ದಂಪತಿಗಳ ಏಕೈಕ ಮಗ. ಅಂತಹ ದನಗಾಹಿ ಹುಡುಗ ಕನ್ನಡ ರಂಗಭೂಮಿಯ ವರನಟ ಡಾ.ರಾಜ್‌ಕುಮಾರ್ ಸಮಸಮಕ್ಕೆ ಬೆಳೆಯುತ್ತಾನೆಂದು ಯಾವ ಜ್ಯೋತಿಷಿಯೂ ಕಾರಣಿಕ ಹೇಳಿರಲಿಲ್ಲ. ಹಾಗೇ ಹೇಳಲು ಹುಡುಗನಲ್ಲಾಗಲೀ, ಹೆತ್ತ ಅಪ್ಪ-ಅಮ್ಮನಲ್ಲಾಗಲಿ ಉಲ್ಲೇಖಿಸಬಹುದಾದ ರಂಗಸಿರಿತನದ ಸಣ್ಣ ಸುಳಿವೂ ಇರಲಿಲ್ಲ. ಆ ಹುಡುಗನ ಹೆಸರು ಬಿ. ಓಬಳೇಶ್ವರ (ಅವರು ಓಬಳೇಶ್ ಎಂದೇ ಜನಪ್ರಿಯ).

ತಾವು ದಡ್ಡರು. ಮಗನಾದರೂ ಓದಿ ಜಾಣನಾಗಲೆಂದು ಹೆತ್ತವರು ಅವನನ್ನು ಶಾಲೆಗೆ ಹಾಕುತ್ತಾರೆ. ಹಾಗೂಹೀಗೂ ಹುಡುಗ ಮೂರನೇ ಈಯತ್ತೆ ಮುಗಿಸಿ, ಮುಂದಕ್ಕೆ ಹೆಜ್ಜೆ ಇಡಲಿಲ್ಲ. ಇದ್ದೊಬ್ಬ ಮಗ ಹಾಳಾಗದೇ ಹೇಗಾದರೂ ಬದುಕಿಕೊಂಡಿರಲೆಂದು ಹೆತ್ತವರೂ ಸುಮ್ಮನಾಗುತ್ತಾರೆ.

ಹುಡುಗನಲ್ಲಿಯ ಕಲಾಕಾಂಕ್ಷೆ ಕುಡಿಯೊಡೆದು ಊರಲ್ಲಿಯ ಬಯಲಾಟ, ದೊಡ್ಡಾಟಗಳಲ್ಲಿ ಕುಣಿದಾಡುತ್ತದೆ. ಹಾಗೆ ಕುಣಿಯುತ್ತಾ ಕುಣಿಯುತ್ತಾ ‘ಸುಭದ್ರಾ ಕಲ್ಯಾಣ’ದಲ್ಲಿ ಅರುಂಧತಿ ಪಾತ್ರದ ಮೂಲಕ ಎಲ್ಲರ ಮನ ಗೆಲ್ಲುವಂತಾಗುತ್ತದೆ. ನಂತರ ಆತನ ಮನಸ್ಸು ರಂಗಭೂಮಿಯೆಡೆಗೆ ಹೊರಳುತ್ತದೆ. 1947ರ ಸುಮಾರಿಗೆ ಸಂತೇಬೆನ್ನೂರಿನಲ್ಲಿ ‘ಶ್ರೀಜಯಲಕ್ಷ್ಮೀ ನಾಟಕ ಸಂಘ’ ಮೊಕ್ಕಾಂ ಮಾಡಿತ್ತು. ಪಾತ್ರ ಮಾಡಬೇಕೆಂದು ಕಂಪೆನಿಗೆ ಹುಡುಗ ಓಡೋಡಿ ಬಂದ. ಅಲ್ಲಿ ಸಿಕ್ಕಿದ್ದು ನಟನಟಿಯರು ಧರಿಸಿದ ಉಡುಗೆ, ಬಣ್ಣದ ಬಟ್ಟೆಗಳ ಕೊಳೆ ತೊಳೆಯುವ ಕೆಲಸ. ಆದರೂ ಹುಡುಗ ಹೇಸಲಿಲ್ಲ.

ಅವನಲ್ಲಿ ಅಭಿನಯದ ಹುಚ್ಚು, ರಂಗಭೂಮಿಯ ಕಿಚ್ಚು–ಕೆಚ್ಚು ಕುಣಿದಾಡುತ್ತಿದ್ದವು. ಅದು ಎಲ್ಲವನ್ನೂ ಮರೆಸುತ್ತದೆ. ಅಂತಹ ಹುಚ್ಚಿನಿಂದಲೇ ಆತ ಕನ್ನಡ ರಂಗಭೂಮಿಯೇ ಉಲ್ಲೇಖಿಸಬೇಕಾದಂತಹ ಕಲಾವಿದನನ್ನಾಗಿ ರೂಪಿಸುತ್ತದೆ. ಶ್ರದ್ಧೆಯಿಂದಲೇ ನಾಟಕ ಕಂಪೆನಿಯಲ್ಲಿ ಸಿಕ್ಕ ಕೆಲಸ ಮಾಡಿದ ಓಬಳೇಶ್, ಬಣ್ಣದ ಬಟ್ಟೆ ತೊಳೆಯುವ ರಂಗ ಕಾಯಕದಿಂದ ಮುಖಕ್ಕೆ ಬಣ್ಣ ಬಳಿದುಕೊಂಡು ಪ್ರೇಕ್ಷಕರು ಶಿಳ್ಳೆ ಹೊಡೆಯುವಂತಹ ಅಭಿನಯ ಚತುರನಾದ ಕತೆಯೇನೂ ಸಣ್ಣದಲ್ಲ. ಬಿದರಕೆರೆಗೆ ಮರಳಿ ‘ಮಂಜುನಾಥ ನಾಟ್ಯ ಸಂಘ’ (1950) ಕಂಪೆನಿ ಕಟ್ಟಿ ಕೈಸುಟ್ಟುಕೊಳ್ಳುತ್ತಾರೆ.

ಆರಂಭದ ದಿನಗಳಲ್ಲಿ ಓಬಳೇಶ್ ಮಾಡುತ್ತಿದ್ದುದು ಸ್ತ್ರೀ ಪಾತ್ರಗಳನ್ನೇ. ನಂತರ ಹಾಸ್ಯ, ಹೀರೋ, ವಿಲನ್ ಹೀಗೆ ಸಮಗ್ರ ರಂಗಭೂಮಿಯಲ್ಲಿ ಬರಬಹುದಾದ ಎಲ್ಲ ಬಗೆಯ ಪಾತ್ರಗಳನ್ನು ಅಭಿನಯಿಸುವ ಮೂಲಕ ವೃತ್ತಿರಂಗಭೂಮಿಯ ‘ಧ್ರುವತಾರೆ’ ಎನಿಸಿಕೊಂಡು ‘ಹಾಸ್ಯ ಚಕ್ರವರ್ತಿ’ ಎಂಬ ಬಿರುದಿಗೆ ಭಾಜನರಾದರು. ಜಯಲಕ್ಷ್ಮಿ ನಾಟಕ ಸಂಘದಲ್ಲಿ ಮಾಡುತ್ತಿದ್ದ ಸ್ತ್ರೀ ಪಾತ್ರ ಕಂಡ ಆ ಕಾಲದ ಪ್ರಸಿದ್ಧ ಶ್ರೀ ಹಾಲಸಿದ್ದೇಶ್ವರ ನಾಟಕ ಕಂಪೆನಿ ಮಾಲೀಕರಾದ ಕುಡುಗೋಲು ಜೆಟ್ಟೆಪ್ಪನವರು ಈ ಅಭಿನೇತ್ರಿಯನ್ನು ಹೇಗಾದರೂ ಮಾಡಿ ತಮ್ಮ ಕಂಪೆನಿಗೆ ಕರೆದೊಯ್ಯಬೇಕೆಂದು ಮನಸು ಮಾಡಿ ಕಲಾವಿದೆಯನ್ನು ಭೇಟಿ ಮಾಡಿದಾಗ ‘ಅವಳು ಓಬಳೇಶ್‌’ ಎಂಬುದು ತಿಳಿಯುತ್ತದೆ. ಕಡೆಗೂ ತಮ್ಮ ಕಂಪೆನಿಗೆ ಕರೆದೊಯ್ಯುತ್ತಾರೆ.

ರಾಜ್ ಮೆಚ್ಚಿದ ಓಬಳೇಶ್

ಡಾ.ರಾಜ್‌ಕುಮಾರ್ ಇದ್ದ ನಾಟಕ ಕಂಪನಿ ದಾವಣಗೆರೆಯಲ್ಲಿ ಕ್ಯಾಂಪು ಮಾಡಿದಾಗ ‘ಎಚ್ಚಮನಾಯಕ’ ನಾಟಕದಲ್ಲಿ ಎಚ್ಚಮನಾಯಕನಾಗಿ ರಾಜ್ ಅಭಿನಯಿಸುತ್ತಿದ್ದರೆ ಜಿ.ವಿ. ಅಯ್ಯರ್‌ಗೆ ಚಾಂದ್‌ಖಾನ್ ಪಾತ್ರ. ತುರ್ತು ಕೆಲಸದ ನಿಮಿತ್ತ ಅಯ್ಯರ್ ಊರಿಗೆ ಹೋಗಿ ಬಿಡುತ್ತಾರೆ. ಅವರು ಮಾಡುತ್ತಿದ್ದ ಚಾಂದ್‌ ಖಾನ್ ಪಾತ್ರವನ್ನು ಕೆಲವೇ ತಾಸುಗಳಲ್ಲಿ ಸಿದ್ಧ ಮಾಡಿಕೊಂಡು ಓಬಳೇಶ್  ಪಾತ್ರ ಪೋಷಣೆ, ಅಮೋಘ ಅಭಿನಯ ನೀಡುವುದನ್ನು ಕಣ್ಣಾರೆ ಕಂಡ ವರನಟ ರಾಜ್‌ಕುಮಾರ್ ಓಬಳೇಶ್ ಅವರನ್ನು ನಾಟಕದಲ್ಲೇ ಅಪ್ಪಿ, ತಮ್ಮ ಸಂತಸ ಹಂಚಿಕೊಳ್ಳುತ್ತಾರೆ. ಪ್ರೇಕ್ಷಕರಿಗೆ ಅದು ನಾಟಕದ ಸನ್ನಿವೇಶದಂತೆ ಭಾಸವಾಗುತ್ತದೆ.

ಇಂತಹ ಅಭಿಜಾತ–ಕಲಾವಿದ ಕರ್ನಾಟಕದ ಹೆಸರಾಂತ ಕಂಪೆನಿಗಳಾದ ಗೋಕಾಕ್ ಬಸವಣ್ಣೆಪ್ಪ ಕಂಪೆನಿ, ಹುಲಿಮನಿ ಸೀತಾರಾಮ ಶಾಸ್ತ್ರಿಗಳ ಕಂಪೆನಿ, ಎಂ.ಸಿ. ಮಹಾದೇವ ಸ್ವಾಮಿಗಳ ಕಂಪೆನಿ, ಕೆ. ಹಿರಣ್ಣಯ್ಯ ಮಿತ್ರ ಮಂಡಳಿ, ಬಳ್ಳಾರಿ ಲಲಿತಮ್ಮನವರ ನಾಟಕ ಕಂಪೆನಿಗಳಲ್ಲಿ ಹಾಗೂ ತಮ್ಮ ಸ್ವಂತ ಕಂಪೆನಿಯಲ್ಲಿ ಅರ್ಧ ಶತಮಾನ ಕಾಲ ರಂಗಸೇವೆ ಮಾಡುತ್ತಾರೆ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕಗಳಲ್ಲಿ ಕ್ಲಿಷ್ಟಕರವಾದ ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸಿ ಸಹಕಲಾವಿದರ, ನಾಟಕಕಾರರ, ಮಾಲೀಕರ, ಪ್ರೇಕ್ಷಕ ಪ್ರಭುಗಳ ಮನಸು ಗೆಲ್ಲುತ್ತಾರೆ.

ಬಾಲ್ಯದಲ್ಲೇ ಬಯಲಾಟದ ಗರಡಿಯಲ್ಲಿ ಪಳಗಿದ ಓಬಳೇಶ್, ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿ ಅವರಲ್ಲಿ ಭರತನಾಟ್ಯ ಕಲಿಯುತ್ತಾರೆ. ರಂಗಭೂಮಿಗೆ ಅದನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಓಬಳೇಶ್ ಉತ್ತಮ ಕುಸ್ತಿಪಟು ಕೂಡಾ ಆಗಿದ್ದರು. ರಂಗಭೂಮಿಯ ಅಖಾಡದಲ್ಲಿ ಇವರನ್ನು ಸೋಲಿಸಿದವರೇ ಇಲ್ಲ ಎನ್ನುವಂತೆ ಅಭಿನಯ, ನಾಟಕ ರಚನೆ, ರಾಜಕೀಯ ವಿಡಂಬನೆ, ಮೊನಚು ಮಾತುಗಳ ಮೂಲಕ ಪ್ರೇಕ್ಷಕ ಪ್ರಭುಗಳನ್ನು ಹಿಡಿದಿಡುವ ಚುಂಬಕ ಶಕ್ತಿ ಅವರಿಗಿತ್ತು. ಈ ಎಲ್ಲ ಹಿನ್ನೆಲೆಯುಳ್ಳ ಅವರು 1959ರಲ್ಲಿ ’ವಿಜಯ ಕಲಾ ನಾಟಕ ಸಂಘ’ ಸ್ಥಾಪಿಸಿ ಎರಡು ವರ್ಷ ಕಾಲ ನಡೆಸುತ್ತಾರೆ.

‌1964ರಲ್ಲಿ ಶ್ರೀ ಓಂಕಾರೇಶ್ವರ ನಾಟ್ಯ ಸಂಘವನ್ನು ಕಟ್ಟುತ್ತಾರೆ. ದಶಕಕ್ಕೂ ಮಿಕ್ಕಿ ಹೆಚ್ಚುಕಾಲ ಕಂಪೆನಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತದೆ.  ಓಬಳೇಶ್ ಅವರ ಪತ್ನಿ ಯಶೋಧರಮ್ಮನವರ ಪಾತ್ರ ನೋಡಲು ಜನ ಮುಗಿಬೀಳುತ್ತಿದ್ದರಂತೆ. ಮೃಡದೇವ ಗವಾಯಿ, ಅಪ್ಪುರಾಜ ಮುಧೋಳ, ಎಲಿವಾಳ ಸಿದ್ದಯ್ಯ, ಜುಬೇದಾಬಾಯಿ ಸವಣೂರು, ದೊಡವಾಡ ಸಿದ್ದಯ್ಯ, ಹೀಗೆ ಸ್ಟಾರ್‌ಪಟ್ಟ ಕಟ್ಟಿಕೊಂಡ ಕಲಾವಿದರ ದಂಡು ಓಬಳೇಶ್‌ ಅವರ ಕಂಪೆನಿಯಲ್ಲಿತ್ತು. ಈ ಮೂಲಕ ಕಂಪೆನಿ ಉತ್ತರ ಕರ್ನಾಟಕದಲ್ಲಿ ಮನೆ ಮಾತಾಯಿತು. ಗುಲ್ಬರ್ಗದಲ್ಲಿ ಮೂರು ವರ್ಷ ಕಾಲ ನಿರಂತರವಾಗಿ ಅವರ ಕಂಪೆನಿ ಕ್ಯಾಂಪ್‌ ಮಾಡಿ ಪ್ರದರ್ಶನ ನೀಡಿದೆ. ಆಗ ಪುಟ್ಟಪರ್ತಿ ಸಾಯಿಬಾಬಾ, ಪೂಜ್ಯ ದೊಡ್ಡಪ್ಪ ಅಪ್ಪ ಅವರು ಇವರ ನಾಟಕಗಳನ್ನು ನೋಡಿ ಸಂತಸ  ಹಂಚಿಕೊಂಡಿದ್ದಾರೆ. ಗುಲ್ಬರ್ಗದ ಶರಣ ಬಸವೇಶ್ವರ ದಾಸೋಹಕ್ಕೆಂದು ಆ ಕಾಲದಲ್ಲಿ ಈ ಕಂಪೆನಿ ಆಗಿನ ಕಾಲದಲ್ಲೇ ಆರೂವರೆ ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿ ದೇವಾಲಯಕ್ಕೆ ಅರ್ಪಿಸುತ್ತದೆ.

ಅಂದಿನ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ, ಕೇಂದ್ರ ಮಂತ್ರಿ ಕೆಂಗಲ್‌ ಹನುಮಂತಯ್ಯ, ರಾಜಕೀಯ ಧುರೀಣರಾದ ವೀರೇಂದ್ರ ಪಾಟೀಲ್‌, ಮಹಮ್ಮದ್ ಅಲಿ ಅವರು ವಿಶೇಷ ಕಾರ್ಯಕ್ರಮ ಏರ್ಪಡಿಸಿ ಮೂರು ತೊಲದ ಚಿನ್ನದ ಪದಕ ನೀಡಿ ಓಬಳೇಶ್ ಅವರನ್ನು ಗೌರವಿಸುತ್ತಾರೆ. ಕೇವಲ ₹ 24 ಸಾವಿರ ಬಂಡವಾಳದೊಂದಿಗೆ ಆರಂಭಗೊಂಡ ಅವರ ಕಂಪೆನಿ ಯಾರೂ ಊಹಿಸದಷ್ಟು ಎತ್ತರಕ್ಕೇರುತ್ತದೆ. ‘ದೈವ ಸಂಕಲ್ಪ’, ‘ಸಂಗೊಳ್ಳಿ ರಾಯಣ್ಣ’ ಚಲನಚಿತ್ರಗಳಲ್ಲೂ ಓಬಳೇಶ್‌ಗೆ ಅವಕಾಶ ಸಿಗುತ್ತದೆ.

ನಾಟಕಕಾರನಾಗಿ ಯಶಸ್ಸು

ಓಬಳೇಶ್ ಶ್ರೇಷ್ಠ ನಾಟಕಕಾರರಾಗಿದ್ದರು. ಅವರು ‘ಖಾದಿಸೀರೆ’, ‘ಮುಂಡೇ ಮಗ’, ‘ಮನಸೇ ಮಾಂಗಲ್ಯ’, ‘ಹೋಳಿ ಹುಣ್ಣಿಮೆ’, ‘ಬೆಳ್ಳಿ ಬಂಗಾರ’, ‘ತಳವಾರನ ತಕರಾರು’ ನಾಟಕಗಳನ್ನು ಪ್ರಕಟಿಸಿದ್ದಾರೆ. ಅವರ ಅಪ್ರಕಟಿತ ನಾಟಕಗಳೇ ಹೆಚ್ಚಿವೆ. ‘ಖಾದಿಸೀರೆ’ ಮತ್ತು ‘ಮುಂಡೇಮಗ’ ನಾಟಕ ರಚನೆಗೆ ಮುನ್ನವೇ ಗುಲ್ಬರ್ಗ ಕ್ಯಾಂಪಿನಲ್ಲಿ ಮುಂದಿನ ಬದಲಾವಣೆ ‘ಮುಂಡೇಮಗ’ ಎಂದು ನಿತ್ಯವೂ ಅನೌನ್ಸ್‌ ಮಾಡುತ್ತಿದ್ದರೆ ಸಹ ಕಲಾವಿದರಿಗೆ ಗಾಬರಿ ಹುಟ್ಟುತ್ತಿತ್ತು. ಒಂದೇ ದಿನದಲ್ಲಿ ನಾಟಕ ಬರೆದು ಮುಗಿಸಿ ಎರಡೇ ದಿವಸಗಳಲ್ಲ ನಾಟಕ ಕೂಡಿಸಿ ಕಲಾವಿದರಿಗೇ ಅಚ್ಚರಿ ಹುಟ್ಟಿಸಿದ್ದರು. ನಾಟಕ ಭರ್ಜರಿಯಾಗಿ 200 ಪ್ರಯೋಗಗಳನ್ನು ಮೀರಿ ಮುನ್ನಡೆಯಿತು.

ಗುಲ್ಬರ್ಗಾ ಕ್ಯಾಂಪಿನಲ್ಲಿ ‘ಖಾದಿಸೀರೆ’ 300 ಪ್ರಯೋಗ ಕಂಡಿತು. ಇವರ ಕಂಪೆನಿಗಳಿಗಾಗಿಯೇ ಶ್ರೀ ಶರಣ ಬಸವೇಶ್ವರ ನಾಟಕ ಮಹಾತ್ಮ್ಯೆ ನಾಟಕವನ್ನು ಮಾಂಡ್ರೆ ಕವಿಗಳು ಬರೆದು, ಯಶಸ್ವಿಯಾಗಿ ಪ್ರಯೋಗಕ್ಕೆ ಅನುವು ಮಾಡಿಕೊಡುತ್ತಾರೆ. ಓಬಳೇಶ್ ಸಾಂಸ್ಕೃತಿಕ ಸ್ನೇಹದ ಕಕ್ಷೆ ಬಲು ದೊಡ್ಡದು. ಶರಣ ಬಸವೇಶ್ವರ ನಾಟಕಕ್ಕೆ ನವೀನ ಸೀನರಿಗಳನ್ನು ರಚಿಸಲು ಶಿಲ್ಪಾಚಾರ್ ಪೇಂಟರ್ ಬಂದಿದ್ದರು. ಆಗಿನ ಕಾಲದಲ್ಲೇ ಓಬಳೇಶ್ ಅವರು ಸೀನರಿಗಾಗಿ ₹ 40 ಸಾವಿರ ಖರ್ಚು ಮಾಡಿದ್ದರಂತೆ.

ಶರಣ ಬಸವೇಶ್ವರರ ಪಾತ್ರ ಮಾಡಲು ಪಂಚಾಕ್ಷರ ಗವಾಯಿಗಳ ಪಟ್ಟದ ಶಿಷ್ಯ ಸಿದ್ದರಾಜ ಉಜ್ಜಯಿನಿ ಮಠ ಬರುತ್ತಾರೆ. ರಂಗ ಗೀತೆಗಳಿಗೆ ರಾಗಸಂಯೋಜನೆ ಮಾಡಲು ಮಲ್ಲಿಕಾರ್ಜುನ ಮನ್ಸೂರ ಶಿಷ್ಯ ಪಂಡಿತ ಸಿದ್ದರಾಮ ಜಂಬಲದಿನ್ನಿ. ನಾಟಕ 251 ಪ್ರಯೋಗಗಳನ್ನು ದಾಖಲಿಸುತ್ತದೆ. 101ನೇ ಪ್ರದರ್ಶನಕ್ಕೆ ಆಲ್‌ ಇಂಡಿಯಾ ಕಾಂಗ್ರೆಸ್ ಅಧ್ಯಕ್ಷ (1968) ಎಸ್‌. ನಿಜಲಿಂಗಪ್ಪ ಆಗಮಿಸಿದಾಗ ಅದ್ದೂರಿ ಕಾರ್ಯಕ್ರಮ ಜರುಗುತ್ತದೆ. ಸಹಸ್ರಾರು ಪ್ರೇಕ್ಷಕರಿಗೆ ಹೋಳಿಗೆ ಊಟ ಹಾಕಿಸುತ್ತಾರೆ.

ಅವರ ಕಂಪೆನಿಗೆ ಗುಬ್ಬಿ ಕಂಪೆನಿಯ ಬಿ.ಪಿ. ಸಣ್ಣಪ್ಪನವರ ಮ್ಯಾನೇಜ್‌ಮೆಂಟ್‌, ಓಬಳೇಶ್ ಅವರಿಗೆ ವ್ಯವಹಾರ ಗೊತ್ತಿರಲಿಲ್ಲ. ಸಣ್ಣಪ್ಪನವರಿಗೆ ಪಾತ್ರ ಮಾಡಲು ಬರುತ್ತಿರಲಿಲ್ಲ. ಕಂಪೆನಿಯೊಂದಕ್ಕೆ ಉತ್ತಮ ಮ್ಯಾನೇಜರ್‌ ಇಲ್ಲದಿದ್ದಲ್ಲಿ ಕಂಪೆನಿ ದಿವಾಳಿಯಾಗುವುದು ಸಹಜ. ಈ ನಿಟ್ಟಿನಲ್ಲಿ ಸಣ್ಣಪ್ಪನವರಿಗೆ ಕಂಪೆನಿಯ ಯಶಸ್ಸಿನ ಶ್ರೇಯಸ್ಸು ಸಲ್ಲಬೇಕು. ‘ಗೌಡ್ರಗದ್ಲ’ ನಾಟಕ ಕರ್ನಾಟಕದಲ್ಲಿ ಮನೆಮಾತಾದದ್ದು ಇತಿಹಾಸ. ಅದಕ್ಕೆ ಮೊದಲೇ ಓಬಳೇಶ್‌ ಬರೆದ ‘ಗೌಡ್ರ ಗುದ್ದಾಟ’ ನಾಟಕ ಅಷ್ಟೇ ಪ್ರಮಾಣದಲ್ಲಿ ಮನೆಮಾತಾಗಿತ್ತು. ಓಬಳೇಶ್‌ ಸ್ನೇಹಜೀವಿ. ನೂರು ಮಂದಿ ಕಲಾವಿದರ–ನೇಪಥ್ಯ ಕಲಾವಿದರು ಇವರ ಪ್ರೀತಿ ಆದರಗಳ ನೆರಳಲ್ಲಿ ಓಡಾಡಿದವರು. ಅನೇಕ ಸಾಹಿತಿಗಳ ಒಡನಾಟ ಓಬಳೇಶ್‌ ಅವರಿಗಿತ್ತು. ಓಬಳೇಶ್‌ಗೆ ರಾಜಕೀಯ ಪ್ರಜ್ಞೆ ಸೊಗಸಾಗಿತ್ತು.

ಸಾಹಿತಿಗಳ ಒಡನಾಟ

ಅನಕೃ, ತರಾಸು, ನಾಡಿಗೇರ ಕೃಷ್ಣರಾಯ, ಬೀಚಿ, ಶ್ರೀರಂಗರು ಇವರಿಗೆ ಅತ್ಯಂತ ಆಪ್ತರಾಗಿದ್ದರು. ಓಬಳೇಶ್‌ ಅವರನಾಟಕಗಳನ್ನು ನೋಡಿ, ಅವರ ನವಿರು ಹಾಸ್ಯದ ಚುರುಕು ಸಂಭಾಷಣೆಗಳನ್ನು ಕೇಳಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಕೃಷ್ಣರಾಯರ ‘ಫುಡಾರಿ ಪೂರ್ಣಯ್ಯ’ ಎಂಬ ನಾಟಕವನ್ನು ಓಬಳೇಶ್‌ ಪರಿಣಾಮಕಾರಿಯಾಗಿ ಸ್ಟೇಜ್ ಮಾಡಿಸುತ್ತಾರೆ. ಅರ್ಧ ಶತಮಾನಗಳ ಕಾಲ ಕನ್ನಡ ವೃತ್ತಿರಂಗಭೂಮಿಯ ಆಗಸದಲ್ಲಿ ‘ಧ್ರುವತಾರೆ’ಯಂತೆ ಮಿನುಗಿದ ಓಬಳೇಶ್ ಅವರದ್ದು, ನಟ, ನಾಟಕಕಾರ, ಕಂಪೆನಿ ಮಾಲೀಕನಾಗಿ ಹೀಗೆ ರಂಗಭೂಮಿಯ ಎಲ್ಲಾ ಪ್ರಾಕಾರಗಳಲ್ಲೂ ಐತಿಹಾಸಿಕ ದಾಖಲೆ ಮಾಡುತ್ತಾರೆ. ಆದರೆ, ದುರಂತ ಅಂತ್ಯದ ನಾಟಕವೆಂಬಂತೆ  1985ರಲ್ಲಿ ಅವರು ದಾವಣಗೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೂ ಹಣವಿಲ್ಲದೇ ಅಸುನೀಗುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು