ಶನಿವಾರ, ಸೆಪ್ಟೆಂಬರ್ 19, 2020
22 °C

ರಸರಾಗ ಚಕ್ರವರ್ತಿಗೆ ಸಾಮಗ ಪ್ರಶಸ್ತಿಯ ಗೌರವ

ಪ್ರಕಾಶ ಸುವರ್ಣ ಕಟಪಾಡಿ Updated:

ಅಕ್ಷರ ಗಾತ್ರ : | |

Prajavani

ಕರಾವಳಿಯ ಯಕ್ಷರಂಗ ಕ್ಷೇತ್ರದಲ್ಲಿ ತಮ್ಮ ಸುಮಧುರ ಗಾಯನದಿಂದ ‘ರಸರಾಗ ಚಕ್ರವರ್ತಿ’ ಎಂದೇ ಪ್ರಸಿದ್ಧಿ ಪಡೆದಿರುವ ಹಿರಿಯ ಯಕ್ಷಗಾನ ಭಾಗವತ ದಿನೇಶ್ ಅಮ್ಮಣ್ಣಾಯ ಅವರು ಉಡುಪಿ ತುಳುಕೂಟವು ಮಲ್ಪೆ ರಾಮದಾಸ ಸಾಮಗ ಸ್ಮರಣಾರ್ಥ ಕೊಡಮಾಡುವ ಪ್ರತಿಷ್ಠಿತ ಸಾಮಗ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ. ಇದೇ 15ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.

ಯಕ್ಷಗಾನ ರಂಗದಲ್ಲಿ ತಮ್ಮ ಅಮೋಘ ಭಾಗವತಿಕೆಯ ಮೂಲಕ ಸಂಚಲನ ಮೂಡಿಸಿರುವ ದಿನೇಶ್ ಅಮ್ಮಣ್ಣಾಯ ಅವರಿಗೆ ಈ ಪ್ರಶಸ್ತಿ ಲಭಿಸುತ್ತಿರುವುದು ಬಹುತೇಕ ಯಕ್ಷಗಾನ ಪ್ರಿಯರ ಮನಸ್ಸಿಗೆ ಮುದನೀಡಿದೆ.

ಯಕ್ಷಗಾನರಂಗದಲ್ಲಿ ಖ್ಯಾತಿವೆತ್ತ ಭಾಗವತರ ಪೈಕಿ ತನ್ನದೇ ಆದ ಭಾಗವತಿಕೆ ಶೈಲಿಯಿಂದ ಮನೆಮಾತಾಗಿರುವ ದಿನೇಶ್ ಅಮ್ಮಣ್ಣಾಯರು ನಾಲ್ಕು ದಶಕಗಳ ಕಲಾಸೇವೆ ಮಾಡಿ ಕಲಾಭಿಮಾನಿಗಳನ್ನು ರಂಜಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಅಮ್ಮಣ್ಣಾಯ ಅವರು ತೆಂಕುತಿಟ್ಟಿನ ತುಳು ಯಕ್ಷಗಾನ ಪರಂಪರೆಯನ್ನು ಬೆಳೆಸಿದ ದಾಮೋದರ ಮಂಡೇಚ್ಚರ ಅವರ ಶಿಷ್ಯರು.

ಪುತ್ತೂರು ಮೇಳದಲ್ಲಿ ಚೆಂಡೆ ಮದ್ದಲೆ ವಾದಕರಾಗಿ ಸೇರಿದ ಅಮ್ಮಣ್ಣಾಯರು ಕೆಲಕಾಲ ಅಲ್ಲಿಯೇ ಭಾಗವತರಾಗಿಯೂ ಮಿಂಚಿದರು. ಆ ಬಳಿಕ ಕರಾವಳಿಯ ಟೆಂಟ್ ಯಕ್ಷಗಾನ ಮೇಳಗಳಲ್ಲಿ ಹೆಸರು ಮಾಡಿರುವ ಕರ್ನಾಟಕ ಯಕ್ಷಗಾನ ಮೇಳವನ್ನು ಸೇರಿ ದಾಮೋದರ ಮಂಡೇಚ್ಚ ಅವರ ನಿಧನಾ ನಂತರ ತುಳು ಯಕ್ಷಗಾನ ಪ್ರಸಂಗಗಳನ್ನು ಮೆರೆಸಿದರು. ಯಕ್ಷಗಾನ ಪ್ರಿಯರ ಅಚ್ಚುಮೆಚ್ಚಿನ ಭಾಗವತರೆನಿಸಿರುವ ಅಮ್ಮಣ್ಣಾಯರ ಮಧುರ ಸ್ವರದ ಗಾಯನದಿಂದಾಗಿ ‘ಕಾಡಮಲ್ಲಿಗೆ’, ‘ಕಚ್ಚೂರ ಮಾಲ್ದಿ’, ‘ಪಟ್ಟದ ಪದ್ಮಲೆ’ಯಂತಹ ತುಳು ಯಕ್ಷಗಾನ ಪ್ರಸಂಗಗಳು ಆ ಕಾಲದಲ್ಲಿ ಕರಾವಳಿಯಾದ್ಯಂತ ಪ್ರದರ್ಶನಗೊಂಡು, ಜಯಭೇರಿ ಬಾರಿಸಿರುವುದು ಇಂದಿಗೆ ಇತಿಹಾಸ.

ಸಾಮಾಜಿಕ ಯಕ್ಷಗಾನ ಪ್ರಸಂಗಗಳಲ್ಲಿ ಮಾತ್ರವಲ್ಲದೆ ಪೌರಾಣಿಕ ಪ್ರಸಂಗಗಳ ಭಾಗವತಿಕೆಯಲ್ಲಿಯೂ ಅಮ್ಮಣ್ಣಾಯರಿಗೆ ದೊಡ್ಡ ಹೆಸರಿದೆ. ಪೌರಾಣಿಕ ‘ಮಾನಿಷಾದ’ ಯಕ್ಷಗಾನ ಪ್ರಸಂಗವನ್ನು ಮನೆಮಾತಾಗಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ‘ಅಕ್ಷಯಾಂಬರ’ ಯಕ್ಷಗಾನ ಪ್ರಸಂಗದ ಭಾಗವತಿಕೆ ಮಾತ್ರ ಅಮ್ಮಣ್ಣಾಯರ ಕಂಠಕ್ಕೇ ಮೀಸಲಾಗಿದೆ ಎಂಬುದು ಅನೇಕ ಯಕ್ಷಗಾನ ಪ್ರಿಯರ ಅಂಬೋಣವಾಗಿದೆ. ‘ನಳ ದಮಯಂತಿ’, ‘ಸತ್ಯ ಹರಿಶ್ಚಂದ್ರ’ ಪ್ರಸಂಗಗಳಲ್ಲಿ ಅಮ್ಮಣ್ಣಾಯರ ಭಾಗವತಿಕೆಗೆ ತಲೆದೂಗದವರೇ ಇಲ್ಲ ಎನ್ನಬಹುದು.

ದಿನೇಶ್ ಅಮ್ಮಣ್ಣಾಯ ಅವರು ಯಕ್ಷಗಾನ ರಂಗದ ಮೇರು ಕಲಾವಿದರೆನಿಸಿರುವ ಮಲ್ಪೆ ರಾಮದಾಸ ಸಾಮಗ, ಅಳಿಕೆ ರಾಮಯ್ಯ ರೈ, ಮಿಜಾರು ಅಣ್ಣಪ್ಪ, ಕೋಳ್ಯೂರು ರಾಮಚಂದ್ರ ರಾವ್, ಗುಂಪೆ ರಾಮಯ್ಯ ರೈ, ಅರುವ ಕೊರಗಪ್ಪ ಶೆಟ್ಟಿ ಮುಂತಾದ ಕಲಾವಿದರ ಒಡನಾಟದಿಂದ ತಮ್ಮ ಕಲಾಬದುಕಿನ ಅನುಭವವನ್ನು ವಿಸ್ತರಿಸಿಕೊಂಡು ಬೆಳೆದವರು. ಪ್ರಸ್ತುತ ಎಡನೀರು ಮೇಳದಲ್ಲಿ ತಿರುಗಾಟ ನಡೆಸಿ, ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ. ಆದರೂ ಯಕ್ಷಗಾನವನ್ನು ತನ್ನ ಜೀವನದ ಉಸಿರಾಗಿಸಿಕೊಂಡು ಕರಾವಳಿಯ ಗಂಡುಕಲೆಯನ್ನು ಬೆಳೆಸುತ್ತಾ ಸುದೀರ್ಘ ಕಲಾ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು