ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಾಪುರ ವೆಂಕಟರಾಮಯ್ಯ ವೆಂಕಟಸುಬ್ಬಯ್ಯ ಸ್ಮರಣೆ | ರಂಗದಿಗ್ಗಜನ ಮಹಾಪ್ರಸ್ಥಾನ

Last Updated 17 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

86 ವರ್ಷಗಳ ತುಂಬು ಜೀವನ ನಡೆಸಿ ಅದರಲ್ಲಿ ಎಪ್ಪತ್ತು ವರ್ಷಗಳನ್ನು ರಂಗ ಕಾಯಕದಲ್ಲೇ ತೇಯ್ದು, ರಂಗಭೂಮಿಯ ಸರಿಸುಮಾರು ಎಲ್ಲ ವಿಭಾಗಳಲ್ಲೂ ತೊಡಗಿಕೊಂಡು ಕೊಡುಗೆ ನೀಡಿ, ಇತ್ತೀಚೆಗೆ (ಸೆಪ್ಟೆಂಬರ್ 12) ನಮ್ಮನ್ನಗಲಿದ, ಹಂಪಾಪುರ ವೆಂಕಟರಾಮಯ್ಯ ವೆಂಕಟಸುಬ್ಬಯ್ಯ ಅವರದು ಅಪರಿಮಿತ ಸಾಧನೆಯ ಅಪರೂಪದ ವ್ಯಕ್ತಿತ್ವ.

***

‘ಶ್ರೀರಂಗ-ಸಂಪದ’ ಆರುನೂರು ಪುಟಗಳ ಸತ್ವ-ಸಮೃದ್ಧ, ಸಂಗ್ರಹಯೋಗ್ಯ ಬೃಹದ್- ಗ್ರಂಥ. ವಿಶ್ವವಿದ್ಯಾಲಯಗಳೋ, ಅಕಾಡೆಮಿಗಳೋ ವರ್ಷಾನುಗಟ್ಟಲೆ ತಿಣುಕಾಡಿ ಪ್ರಕಟಿಸಬಲ್ಲ ಗ್ರಂಥ! ರಂಗಭೂಮಿಯನ್ನು ‘ಹವ್ಯಾಸ’ವಾಗಿ ಸ್ವೀಕರಿಸಿದ ವ್ಯಕ್ತಿಯೊಬ್ಬ ಇಂತಹ ಸಾಹಸಕ್ಕೆ ಕೈಹಾಕುವುದು ಹುಚ್ಚು ಸಾಹಸವೇ ಸರಿ. ತಾರುಣ್ಯದಿಂದಲೇ ನಾಟಕದ ಹುಚ್ಚಿದ್ದ ಎಚ್.ವಿ. ವೆಂಕಟಸುಬ್ಬಯ್ಯನವರಿಗೆ ಇಂತಹ ಸಾಹಸ, ಸವಾಲುಗಳೇ ಅಚ್ಚುಮೆಚ್ಚು! ಅಂತೆಯೇ ತಮ್ಮ ಪರಮಗುರು ಶ್ರೀರಂಗರಿಗೆ ಅರ್ಪಿಸಿದ ಅನುಪಮ ಗುರುಕಾಣಿಕೆ ಕೃತಿಯೇ ‘ಶ್ರೀರಂಗ-ಸಂಪದ’.

ನನ್ನ-ಅವರ ಒಡನಾಟ ನಾಲ್ಕು ದಶಕದ್ದು. ‘ಗುಲಾಮನ ಸ್ವತಂತ್ರ ಯಾತ್ರೆ’ ನಾಟಕವನ್ನು ಅವರು ರಂಗಸಂಪದಕ್ಕಾಗಿ ನಿರ್ದೇಶಿಸುತ್ತಿದ್ದ ದಿನಗಳವು. ನಾನು ಅವರಿಗೆ ಪ್ರಾಂಪ್ಟ್-ಅಸಿಸ್ಟೆಂಟ್; ಕಲಿಯಲು ಸಾಕಷ್ಟು ಅವಕಾಶವಿರುವ ಕೆಲಸವದು. ಸುಬ್ಬಣ್ಣನವರ ನಿರ್ದೇಶನದ ವೈಖರಿ, ಶಿಸ್ತು, ಪರಿಕಲ್ಪನೆ ಹಾಗೂ ಒಟ್ಟು ಪ್ರಯೋಗದ ಪರಿಣಾಮದ ಹಿಂದಿನ ಅವರ ಶ್ರಮ- ಕೌಶಲ್ಯದ ಪರಿಚಯವಾದದ್ದು ಅಲ್ಲಿಯೇ. ಮುಂದೆ ಮಹಾ ಬೆರಗಿನ ‘ಡಾ.ಫಾಸ್ಟೆಸ್‌’ ನಾಟಕಕ್ಕೆ ಅವರು ಮಾಡಿದ್ದ ಅದ್ಭುತ ರಂಗವಿನ್ಯಾಸ, ಕಲಾಕ್ಷೇತ್ರದ ಗೋಡೆ-ಚಾವಣಿಗಳನ್ನೆಲ್ಲ ಆವರಿಸಿ ಎಲ್ಲರನ್ನೂ ದಂಗುಗೊಳಿಸಿದ್ದು ಐತಿಹಾಸಿಕ ದಾಖಲೆ.

ಆಧುನಿಕ ನಾಟಕಗಳ ಆದ್ಯ ಪ್ರವರ್ತಕರಲ್ಲೊಬ್ಬರಾದ ಶ್ರೀರಂಗರು ಬಲು ಕಟ್ಟುನಿಟ್ಟಿನ ನಾಟಕಕಾರ. ಅವರ ಸ್ಕ್ರಿಪ್ಟ್ ಹಾಗೂ ಅವರೇ ನೀಡಿರುತ್ತಿದ್ದ ನಿರ್ದೇಶನಗಳನ್ನು ಚಾಚೂ ತಪ್ಪಿಸುವಂತಿರಲಿಲ್ಲ. ಅಂತೆಯೇ ಅವರು ವಿಶ್ವಾಸದಿಂದ ರಂಗ ಪ್ರಯೋಗದನುಮತಿ ನೀಡುತ್ತಿದ್ದುದು ಕೆಲವರಿಗೆ ಮಾತ್ರ. ಇನ್ನು ಆಪ್ತವಲಯದ ಪ್ರವೇಶವಂತೂ ದುರ್ಲಭವೇ. ಸುಬ್ಬಣ್ಣ ಸೌಭಾಗ್ಯವಂತರು. ಶ್ರೀರಂಗರ ಪರಮಾಪ್ತರಾಗಿ, ಸಮಗ್ರ ಮಂಥನ, ಅಗ್ನಿಸಾಕ್ಷಿ, ಉತ್ತಮ ಪ್ರಭುತ್ವ, ಶೋಕಚಕ್ರದಂತಹ ಅನೇಕ ನಾಟಕಗಳನ್ನು ರಂಗ ಸಾಕ್ಷಾತ್ಕಾರಗೊಳಿಸಿ ಹೆಸರಾದವರು.

ತುರ್ತು ಪರಿಸ್ಥಿತಿಯ ನಂತರ ಚಿಕ್ಕಮಗಳೂರು ಲೋಕಸಭಾ ಚುನಾವಣಾ ಸಂದರ್ಭದಲ್ಲಿ (ಇಂದಿರಾ ಗಾಂಧಿ ಸ್ಪರ್ಧಿಸಿದ್ದರು) ಜನಜಾಗೃತಿಗಾಗಿ ರಂಗ ಸಂಪದ ತಂಡಕ್ಕಾಗಿ ವೆಂಕಟಸುಬ್ಬಯ್ಯ ಶ್ರೀರಂಗರ ‘ಸಮಗ್ರ ಮಂಥನ’ ನಾಟಕವನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿ ಪ್ರಯೋಗಿಸಿದ್ದರು. ಪೊಲೀಸರ ಕೆಂಗಣ್ಣಿಗೆ ಗುರಿಯಾಗುವ ಭೀತಿಯಿದ್ದರೂ ಉಪಾಯದಿಂದ ಕಣ್ತಪ್ಪಿಸಿ ರಂಗ ಸಂಚಾರ ಮಾಡಿಕೊಂಡು ಬಂದು, ನಾಟಕದ ಸಂದೇಶವನ್ನು ತಲುಪಿಸಿ ಗೆದ್ದರು.

ನ.ಕಸ್ತೂರಿ, ಕೈಲಾಸಂ, ಲಂಕೇಶ, ನ.ರತ್ನ ಹೀಗೆ ವಿಭಿನ್ನ ಬಗೆಯ ನಾಟಕಕಾರರ ನಾಟಕಗಳನ್ನು ಸುಬ್ಬಣ್ಣ ಪ್ರಯೋಗಿಸಿ ಪಕ್ವಗೊಂಡರು. ಬೆಳಕು ಮತ್ತು ವಸ್ತ್ರವಿನ್ಯಾಸದ ಹೊಣೆಹೊತ್ತು ಸುಬ್ಬಣ್ಣ ನಿರ್ದೇಶಿಸಿದ, ಎಂ.ಎಸ್.ಕೆ. ಪ್ರಭು ಅವರ ‘ಮಹಾ ಪ್ರಸ್ಥಾನ’ ನಾಟಕ ಸ್ಮರಣಾರ್ಹ ರಂಗ ಪ್ರಯೋಗಳಲ್ಲೊಂದಾಗಿ ರಂಗಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಆರ್.ನಾಗೇಶ್, ಜೆ.ಲೋಕೇಶ್, ಸಿ.ಜಿ.ಕೆ. ಮೊದಲಾದ ತಮ್ಮ ಸಮಕಾಲೀನರ ಜೊತೆ ಯಯಾತಿ, ರಂಗ ಭಾರತ, ತಾಯಿ, ಸೂರ್ಯ ಶಿಕಾರಿ ನಾಟಕಗಳಲ್ಲಿ ಹಿನ್ನೆಲೆಯ ವಿಭಾಗಗಳನ್ನು ಯಶಸ್ವಿಯಾಗಿ ನಿಭಾಯಿಸಿದವರು. ‘ಕರ್ನಾಟಕ ವೈಜಯಂತ’ ಮತ್ತು ‘ಚಂದ್ರಗುಪ್ತ’ ನಾಟಕಗಳನ್ನೂ ಸಮರ್ಥವಾಗಿ ಪ್ರದರ್ಶನಕ್ಕೆ ತಂದ ಸುಬ್ಬಣ್ಣ ಅನೇಕ ಬಾನುಲಿ ನಾಟಕಗಳನ್ನೂ ಸಿದ್ಧಗೊಳಿಸಿ, ಸೈ ಎನಿಸಿಕೊಂಡವರು. ದಶಕದ ಹಿಂದೆ ಸುಬ್ಬಣ್ಣ ಅಮೆರಿಕ ಪ್ರವಾಸ ಕೈಗೊಂಡಾಗ ಕ್ಯಾಲಿಫೋರ್ನಿಯಾದ ಕನ್ನಡ ಕೂಟ ಆಯೋಜಿಸಿದ ಶ್ರೀರಂಗರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಕೂಟದ ಕಲಾವಿದರಿಂದಲೇ ಶ್ರೀರಂಗರ ‘ಉತ್ತಮ ಪ್ರಭುತ್ವ ಲೊಳಲೊಟ್ಟೆ’ ನಾಟಕವನ್ನು ಯಶಸ್ವಿಯಾಗಿ ಪ್ರಯೋಗಿಸಿದ್ದುಂಟು.

ಚಿತ್ರಕಲೆ, ಸಂಗೀತ, ಫೋಟೊಗ್ರಫಿ, ರಂಗ ಮಾಹಿತಿ ಸಂಗ್ರಹಣೆ... ಹೀಗೆ ಅವರ ಹವ್ಯಾಸಗಳು ಒಂದೇ-ಎರಡೇ! ಸಾಹಿತ್ಯ ಕೃಷಿಯಲ್ಲೂ ತೊಡಗಿಸಿಕೊಂಡಿದ್ದ ಅವರು ಚುಟುಕುಗಳನ್ನು ಬರೆಯುತ್ತಿದ್ದರು. ಇಂತಹ ಸುಬ್ಬಣ್ಣ ಬಣ್ಣ ಕಳಚಿ ‘ಮಹಾ-ಪ್ರಸ್ಥಾನ’ಗೈದಿದ್ದಾರೆ. ದಾಖಲೆಯ ಸಂಗ್ರಹವನ್ನೇ ಕೊಟ್ಟು ಹೋಗಿದ್ದಾರೆ. ಕಾಪಿಟ್ಟು, ಮುನ್ನಡೆಸುವ ಕೆಲಸವನ್ನು ರಂಗಕರ್ಮಿಗಳಿಗೆ ಬಿಟ್ಟು ಹೋಗಿದ್ದಾರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT