ಶುಕ್ರವಾರ, ಮೇ 29, 2020
27 °C

ವಾಸ್ತವಕ್ಕೆ ಕನ್ನಡಿ ‘ಕೊಡೋದಿಲ್ಲ ಬಿಡೋದಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಮಾಜದಲ್ಲಿರುವ ಬಡತನ, ಹಸಿವು, ನಿರುದ್ಯೋಗ ಹಾಗೂ ಅದು ಸಮಾಜದ ಸ್ವಾಸ್ಥ್ಯದ ಮೇಲೆ ಉಂಟು ಮಾಡುವ ಪರಿಣಾಮಗಳನ್ನು ಸಮರ್ಥವಾಗಿ  ಕಟ್ಟಿಕೊಡುವ ನಾಟಕ ‘ಕೊಡೋದಿಲ್ಲ ಬಿಡೋದಿಲ್ಲ’ ಬುಧವಾರ (ಜೂನ್ 5) ಪ್ರದರ್ಶನವಾಗುತ್ತಿದೆ. 

ಇಟಲಿಯ ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ದಾರಿಯೊ ಫೋ ಅವರು ಜಾಗತಿಕವಾಗಿ ಖ್ಯಾತಿ ಗಳಿಸಿರುವ ನಾಟಕಕಾರರು. ಅವರ ‘ಕಾಂಟ್ ಪೇ ವೋಂಟ್ ಪೇ’ ನಾಕಟವನ್ನು ರಂಗ ನಿರ್ದೇಶಕ ಕೃಷ್ಣ ಹೆಬ್ಬಾಲೆ ಅವರು ಕನ್ನಡದಲ್ಲಿ ರಂಗರೂಪಕ್ಕೆ ತಂದಿದ್ದಾರೆ. 

ಸಾಮಾನ್ಯ ಜನರೇ ಡಾರಿಯೊ ಫೋ ಅವರ ಸಾಹಿತ್ಯದ ದೊಡ್ಡ ಆಸ್ತಿ. ಅವರ ಕಷ್ಟಗಳು, ಹಸಿವು, ಬಡತನ ಹಾಗೂ ನಿರುದ್ಯೋಗಗಳನ್ನು ನವಿರಾದ ಹಾಸ್ಯದ ಮೂಲಕ ಕಟ್ಟಿಕೊಡುವುದು ಅವರ ವೈಶಿಷ್ಟ್ಯ. 1974ರಲ್ಲಿ ರಚಿಸಿದ್ದ ನಾಟಕವು ಈಗಲೂ ಪ್ರಸ್ತುವಾಗಿದೆ. ನಾಟಕದ ಧ್ವನಿ ಎಲ್ಲ ಕಾಲಗಳಿಗೂ ಅನ್ವಯವಾಗುವಂತಿದೆ. ಅದು ಸಾಮಾನ್ಯ ಜನರಿಗೂ ತಲುಪುವ ಶಕ್ತಿ ಹೊಂದಿರುವಿದರಿಂದ ಎಲ್ಲ ದೇಶಗಳನ್ನೂ ಬೆಸೆಯುತ್ತಿದೆ. ಕಷ್ಟಗಳನ್ನು ವಿಡಂಬನೆ ಹಾಗೂ ಹಾಸ್ಯದ ಮೂಲಕ ತೆರೆದಿಡುವುದು ಡಾರಿಫೊ ಅವರ ಶಕ್ತಿ.

ಹಸಿವಿನ ಕಾರಣದಿಂದ ಕಳ್ಳತನ ಮಾಡುವ ಅನಿವಾರ್ಯತೆ ಸೃಷ್ಟಿಯಾಗುವ ಮೂಲಕ ಈ ನಾಟಕ ತೆರೆದುಕೊಳ್ಳುತ್ತದೆ. ಕಷ್ಟ ನೋಡಿ ಅಳಬೇಕೋ ಅಥವಾ ವಿಡಂಬನೆ ನೋಡಿ ನಗಬೇಕೋ ಎಂಬ ಸಂದಿಗ್ಧತೆಯಲ್ಲಿ ಪ್ರೇಕ್ಷಕರನ್ನು ನಾಟಕ ಕಟ್ಟಿಹಾಕುತ್ತದೆ. ಈ ವಿಡಂಬನಾತ್ಮಕ ನಗೆ ನಾಟಕ, ಮಧ್ಯಮ ವರ್ಗದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಅಸಡ್ಡೆ ತೋರುವ ವ್ಯವಸ್ಥೆಯ ಕುರುಡುಗಣ್ಣನ್ನು ಅನಾವರಣಗೊಳಿಸುತ್ತದೆ. 

ಸಂಚಯ ರಂಗತಂಡವು ರಂಗಶಂಕರದಲ್ಲಿ ಸಂಜೆ 7.30ಕ್ಕೆ ನಾಟಕ ಪ್ರದರ್ಶಿಸಲಿದೆ. ರಂಗತಂಡವು 30 ವರ್ಷಗಳಿಂದ ಸತತವಾಗಿ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಕಳೆದ ವಾರ್ಷಿಕೋತ್ಸವದ ಅಂಗವಾಗಿ ಪ್ರದರ್ಶಿಸಿದ್ದ ನಾಟಕವೂ ಈವರೆಗೆ 8 ಬಾರಿ ಯಶಸ್ವಿ ಪ್ರದರ್ಶನ ಕಂಡಿದೆ. 

ಶಿಕ್ಷಕರಾಗಿದ್ದ ಜಿ.ಎಸ್. ರಾಮರಾವ್ ಅವರು ತಮ್ಮ ವಿದ್ಯಾರ್ಥಿಗಳ ನಾಟಕ ಅಭ್ಯಾಸಕ್ಕೆಂದು ಹುಟ್ಟುಹಾಕಿದ್ದ ‘ಸಂಚಯ’ ತಂಡ ಇಂದು ರಂಗಭೂಮಿ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದಿದೆ. 30 ವರ್ಷಗಳ ಅವಧಿಯಲ್ಲಿ 45ಕ್ಕೂ ಹೆಚ್ಚು ನಾಟಕಗಳನ್ನು ಪ್ರದರ್ಶಿಸಿದೆ. ಪ್ರತಿ ವರ್ಷವೂ ಹೊಸ ನಾಟಕಗಳನ್ನು ಪರಿಚಯಿಸುವುದು ತಂಡದ ಹೆಗ್ಗಳಿಕೆ. 

ನಿರ್ದೇಶನ ಮತ್ತು ಕನ್ನಡ ರೂಪಾಂತರ: ಕೃಷ್ಣ ಹೆಬ್ಬಾಲೆ
ಸಂಗೀತ: ಉತ್ಥಾನ ಬಾರಿಘಾಟ್ ಮತ್ತು ನಾರಾಯಣ ರಾಯಚೂರು
ಬೆಳಕು: ಪೃಥ್ವಿ ವೇಣುಗೋಪಾಲ್
ಟಿಕೆಟ್: ₹150, (ರಂಗಶಂಕರ ಮತ್ತು ಬುಕ್‌ ಮೈ ಶೋನಲ್ಲಿ ಲಭ್ಯ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.