ಶನಿವಾರ, ಸೆಪ್ಟೆಂಬರ್ 26, 2020
27 °C

ಅಲ್ಕಾಜಿ: ಗುರುವೆಂಬ ಮಹಾಬೆಳಗು

ಬಿ.ಜಯಶ್ರೀ Updated:

ಅಕ್ಷರ ಗಾತ್ರ : | |

Prajavani

ಇಬ್ರಾಹಿಂ ಅಲ್ಕಾಜಿ ಅವರ ಬದುಕಿನ ಪುಟಗಳನ್ನು ಓದುವುದೆಂದರೆ ಅದು ಭಾರತೀಯ ರಂಗಚರಿತ್ರೆಯ ಅಧ್ಯಯನವೂ ಹೌದು. ಸಾಲು, ಸಾಲು ಮಹಾನ್‌ ಕಲಾವಿದರನ್ನು ರೂಪಿಸಿದ ಈ ಮಹಾಗುರು ಇತ್ತೀಚೆಗಷ್ಟೇ ಬದುಕಿಗೆ ವಿದಾಯ ಹೇಳಿದರು. ಈ ಮಹಾಗುರುವಿನ ವ್ಯಕ್ತಿತ್ವದ ಕುರಿತು ಅವರ ಶಿಷ್ಯೆ ಕೆದಕಿದ ಕೆಲವು ನೆನಪುಗಳು ಇಲ್ಲಿವೆ...

ನನ್ನ ಗುರು ಇಬ್ರಾಹಿಂ ಅಲ್ಕಾಜಿ ಇತ್ತೀಚೆಗೆ ತಮ್ಮ 94ನೇ ವಯಸ್ಸಿನಲ್ಲಿ ಭೂಮಿಯ ಮೇಲಿನ ರಂಗದ ಪಾತ್ರ ಕಳಚಿ ಆಕಾಶಕಾಯದ ಪಾತ್ರ ಧರಿಸಿದರು. ಅವರೊಂದಿಗೆ ಆಧುನಿಕ ರಂಗಭೂಮಿಯ ಮಹಾ ಅಧ್ಯಾಯವೊಂದು ಮುಗಿಯಿತು ಎಂದರೆ ಅದು ಉತ್ಪ್ರೇಕ್ಷೆಯಲ್ಲ. ಅಲ್ಕಾಜಿ ನನ್ನ ಅಚ್ಚುಮೆಚ್ಚಿನ ಸಂಸ್ಥೆಯಾದ ರಾಷ್ಟ್ರೀಯ ನಾಟಕ ಶಾಲೆಯ (ಎನ್ಎಸ್‌ಡಿ) ನಿರ್ದೇಶಕರಾಗಿದ್ದವರು. ಗುರುಗಳೆಂದರೆ ಹೇಗಿರಬೇಕು ಎನ್ನುವ ಕಲ್ಪನೆಯ ಪ್ರತಿಯೊಂದು ಕಣವೂ ಅವರಲ್ಲಿ ಉತ್ತರವಾಗಿ ಮೇಳೈಸಿತ್ತು.

ನಾನು ಎನ್ಎಸ್‌ಡಿಯಲ್ಲಿ ಓದಿದ್ದು 1970ರಿಂದ 73ರವರೆಗೆ. ಶ್ರೀರಂಗರು ಮತ್ತು ಬಿ.ವಿ.ಕಾರಂತರ ಒತ್ತಾಸೆಯಿಂದ ಎನ್ಎಸ್‌ಡಿ ಸೇರುವ ಒಳ್ಳೆಯ ಅವಕಾಶ ನನಗೆ ದಕ್ಕಿತು. ಅಲ್ಲಿಂದ ಮುಂದೆ ಆ ಇಡೀ ಹಿಂದಿಮಯ ವಾತಾವರಣದಲ್ಲಿ ಕನ್ನಡ ಮಾತಾಡುವವಳು ನಾನು ಒಬ್ಬಳೇ. ನನಗೆ ಇಂಗ್ಲಿಷ್‌, ಹಿಂದಿ ಎರಡೂ ನಾಸ್ತಿ. ಅಷ್ಟು ಹೊತ್ತಿಗಾಗಲೇ ಅಲ್ಕಾಜಿ ಒಂದು ದಂತಕತೆಯಂತೆ ಕಂಗೊಳಿಸುತ್ತಿದ್ದರು.

ಅಲ್ಲಿಗೆ ಹೋಗುವ ಹೊತ್ತಿಗಾಗಲೇ ನಾನು ತಾತ ಗುಬ್ಬಿ ವೀರಣ್ಣನವರ ಕಂಪನಿಯಲ್ಲಿ ಸಾಕಷ್ಟು ವರ್ಷ ನಟಿಯಾಗಿ ಕಳೆದಿದ್ದೆ. ಆಧುನಿಕ ರಂಗಭೂಮಿ ಎನ್ನುವ ಕನಸು ನನ್ನನ್ನು ಸೆಳೆಯುವಂತೆ ಮಾಡಿದ್ದು ನನ್ನ ಗುರು ಅಲ್ಕಾಜಿ. ಅವರು ರಂಗಭೂಮಿಯನ್ನಷ್ಟೇ ಅಲ್ಲ ಬದುಕನ್ನೂ ಕಲಿಸಿಕೊಟ್ಟವರು. ನನಗೆ ರಂಗಭೂಮಿಯ ಪಾಠ ತಾತನಿಂದ ಒಂದು ಬಗೆಯಲ್ಲಿ ದೊರೆತರೆ, ಅಷ್ಟೇ ಗಾಢವಾದ ಪಾಠ ಇನ್ನೊಂದು ಬಗೆಯಲ್ಲಿ ಅಲ್ಕಾಜಿಯವರಿಂದ ದೊರೆಯಿತು. ಆ ಮಟ್ಟಿಗೆ ಇಬ್ಬರೂ ಭೂಮಿತೂಕದ ಮನುಷ್ಯರು!

ರಂಗಭೂಮಿಯ ಪಾಠಗಳನ್ನು ಅಲ್ಕಾಜಿ ಎಷ್ಟು ಧ್ಯೇಯ, ನಿಷ್ಠೆಯಿಂದ ನಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದರು ಅಂದರೆ, ನಮ್ಮ ಮುಂದಿರುವ ಅಭಿನಯ, ನಿರ್ದೇಶನ, ಸೀನಿಕ್ ಡಿಸೈನ್ ಯಾವುದನ್ನೂ ನಾವು ಅಲಕ್ಷ್ಯ ಮಾಡಲು ಸಾಧ್ಯವೇ ಇರಲಿಲ್ಲ. ನಮ್ಮಿಂದ ಕಲೆಗೆ ಸಂಪೂರ್ಣ ನಿಷ್ಠೆಯನ್ನು ಅತ್ಯಂತ ನಿರ್ದಯವಾಗಿ, ನಿರ್ಭಾವುಕವಾಗಿ ಬೇಡುತ್ತಿದ್ದರು. ಸ್ವತಃ ತಾವೇ ಶಿಸ್ತುಬದ್ಧರು. ಅಷ್ಟೇ ಮಟ್ಟದ ತೊಡಗಿಸಿಕೊಳ್ಳುವಿಕೆಯನ್ನು ನಮ್ಮಿಂದಲೂ ನಿರೀಕ್ಷೆ ಮಾಡುತ್ತಿದ್ದರು.

ರಾಷ್ಟ್ರೀಯ ನಾಟಕ ಶಾಲೆಯಿಂದ ಹೊರಬಂದ ವಿದ್ಯಾರ್ಥಿಗಳು ಇಂದು ಉತ್ತಮ ನಟರು ಎನ್ನಿಸಿಕೊಂಡರೆ ಅದಕ್ಕೆ ಅಲ್ಕಾಜಿಯವರು ಹಾಕಿಕೊಟ್ಟ ಭದ್ರ ಬುನಾದಿಯೇ ಮೂಲ. ಎಪ್ಪತ್ತರ ದಶಕದಲ್ಲಿ ಅವರಲ್ಲಿ ವಿದ್ಯಾರ್ಥಿವೃತ್ತಿ ಮಾಡಿದ ಎಷ್ಟೋ ನಟರು, ನಿರ್ದೇಶಕರು ಇಂದಿಗೂ ತಮ್ಮ ಕಲೆಯನ್ನು ಮುಕ್ಕಾಗಿಸಿಕೊಳ್ಳದೆ ಜನಪ್ರಿಯರಾಗಿಯೇ ಉಳಿದಿದ್ದರೆ ಅದಕ್ಕೆ ಅಲ್ಕಾಜಿ ಎಂಬ ಪ್ರಖರ ದೀಪವೇ ಕಾರಣ.

ರಾಷ್ಟ್ರೀಯ ನಾಟಕ ಶಾಲೆಯ ಲೈಬ್ರರಿ ಒಂದು ಮಾಯಾಲೋಕ. ನನ್ನ ವಿದ್ಯಾರ್ಥಿದಿಸೆಯಲ್ಲಿ ಆಗಾಗ ಅಲ್ಲಿಗೆ ಹೋಗಿ ಏನಾದರೂ ಓದಲು ಪ್ರಯತ್ನ ಮಾಡುತ್ತಿದ್ದಾಗ, ಅಲ್ಲಿದ್ದ ಯಾರೋ ಎಲ್ಲಾ ಪುಸ್ತಕಗಳಲ್ಲಿಯೂ ಏನೇನೋ ಅಂಡರ್‌ಲೈನ್‌ ಮಾಡಿ ಅದರ ಪಕ್ಕ ಸಣ್ಣದಾಗಿ ಪೆನ್ಸಿಲ್ಲಿನಲ್ಲಿ ನೋಟ್ಸ್ ಮಾಡಿರುತ್ತಿದ್ದುದು ನನ್ನ ಗಮನಕ್ಕೆ ಬರುತ್ತಿತ್ತು. ಇದು ಒಂದೆರಡು ಪುಸ್ತಕಗಳಲ್ಲಿ ಮಾತ್ರ ಇರಬಹುದು ಅಂದುಕೊಂಡಿದ್ದೆ. ಆದರೆ ಎಷ್ಟೆಷ್ಟು ಪುಸ್ತಕಗಳನ್ನು ನೋಡಿದರೂ ಅದೆಲ್ಲದರಲ್ಲೂ ಹೀಗೇ ಇತ್ತು. ಯಾರಿದು, ಎಲ್ಲರಿಗೂ ಸೇರಿದ ಪುಸ್ತಕಗಳಲ್ಲಿ ಬರೆದು ಹಾಕುವವರು ಅಂತ ಕುತೂಹಲ ಆಯಿತು. ಕಾಲಾಂತರದಲ್ಲಿ ಗೊತ್ತಾದ ಸತ್ಯ ಅಂದರೆ, ಹೀಗೆ ಮಾಡುತ್ತಿದ್ದುದು ಮತ್ಯಾರೂ ಅಲ್ಲ ಸ್ವತಃ ಅಲ್ಕಾಜಿಯವರೇ!

ಅವರು ತುಂಬಾ ಓದುತ್ತಾರೆ, ಲೈಬ್ರರಿಗೆ ತರಿಸುವ ಎಲ್ಲಾ ಪುಸ್ತಕಗಳನ್ನೂ ಕೂಲಂಕಷವಾಗಿ ಪರಿಶೀಲನೆ ಮಾಡಿ, ಇದು ವಿದ್ಯಾರ್ಥಿಗಳಿಗೆ ಉಪಯೋಗ ಆಗುತ್ತದೆ ಅನ್ನುವುದಾದರೆ ಮಾತ್ರ ತರಿಸುತ್ತಾರೆ ಎನ್ನುವುದು ಆಮೇಲೆ ಗೊತ್ತಾಯಿತು. ಇದು ಅವರಿಗಿದ್ದ ಕಾಳಜಿ ಮತ್ತು ನೈಜ ಕಳಕಳಿ.


ಗಿರೀಶ ಕಾರ್ನಾಡರ ‘ತುಘಲಕ್‌’ ನಾಟಕವನ್ನು ಅಲ್ಕಾಜಿ ನಿರ್ದೇಶಿಸಿದ್ದರು. ನಾಟಕದ ಐತಿಹಾಸಿಕ ಘಟನೆಗಳ ದೃಶ್ಯಗಳಿಗೆ ನೈಜ ರಂಗಸಜ್ಜಿಕೆ ಬೇಕೆಂದು ದೆಹಲಿಯ ಪುರಾತನ ಕೋಟೆ ಪ್ರದೇಶದಲ್ಲಿ ಈ ನಾಟಕ ಆಡಿಸಿದ್ದರು ಚಿತ್ರಕೃಪೆ: ಅಲ್ಕಾಜಿ ಫೋಟೊ ಆರ್ಕೈವ್‌ 

ನಾನು ಎನ್ಎಸ್‌ಡಿಯ ಕೊನೆಯ ವರ್ಷದಲ್ಲಿ ಇದ್ದಾಗ ನಮಗೆ ಹಾಸ್ಟೆಲ್ ರೂಮುಗಳನ್ನ ಕಟ್ಟಿಸಲಾಯಿತು. ರೂಮುಗಳು ಅಲಾಟ್ ಆಗುತ್ತವೆ ಅಂತ ಹೇಳಿದ್ದರು. ಒಮ್ಮೆ ಬೆಳಿಗ್ಗೆ ತಿಂಡಿಗೆ ಅಂತ ಹೋದಾಗ ಗುಜುಗುಜು ಶುರುವಾಗಿತ್ತು. ಅಲ್ಲಿಂದ ನಗು ಅಲೆಅಲೆಯಾಗಿ ಕೇಳಿಸುತ್ತಿತ್ತು. ಏನೋ ಪ್ರಾತ್ಯಕ್ಷಿಕೆ ನಡೆಯುತ್ತಿತ್ತು. ಬಗ್ಗಿ ನೋಡಿದೆ. ಯಾವುದರದ್ದು? ರಂಗಭೂಮಿಗೆ ಸಂಬಂಧಿಸಿದ್ದು ಅಲ್ಲವೇ ಅಲ್ಲ. ಸ್ವತಃ ಅಲ್ಕಾಜಿ ಕುರ್ಚಿಯ ಮೇಲೆ ನಾನಾ ಭಂಗಿಯಲ್ಲಿ ಕೂತು ತಪ್ಪು, ಸರಿಗಳನ್ನು ಹೇಳುತ್ತಿದ್ದರು! ಪ್ರಾತ್ಯಕ್ಷಿಕೆಯಾದರೂ ಯಾವುದರದ್ದು? ಕಮೋಡ್ ಮೇಲೆ ಹೇಗೆ ಕುಳಿತು ಕೆಲಸ ಪೂರೈಸಬೇಕು ಎನ್ನುವ ಬಗ್ಗೆ! ಅಲ್ಲಿಯತನಕ ನಮಗೆ ಭಾರತೀಯ ಮಾದರಿಯ ಟಾಯ್ಲೆಟ್ಟುಗಳನ್ನು ಬಳಸಿಯೇ ರೂಢಿ ಇದ್ದದ್ದು. ಹೊಸ ಹಾಸ್ಟೆಲ್‌ನಲ್ಲಿ ಪಾಶ್ಚಿಮಾತ್ಯ ಮಾದರಿಯ ಕಮೋಡ್ ಹಾಕಿಸಿದ್ದರು.

ಭಾರತೀಯ ರಂಗಭೂಮಿಗೇ ಹೊಸ ಆಯಾಮ ಕೊಟ್ಟವರಿಗೆ, ಒಂದು ಸಂಸ್ಥೆಯ ನಿರ್ದೇಶಕರಾದವರಿಗೆ, ತನ್ನ ವಿದ್ಯಾರ್ಥಿಗಳಿಗೆ ಹೊಸ ಮಾದರಿಯ ಟಾಯ್ಲೆಟ್ಟಿನ ಬಳಕೆ ಗೊತ್ತಿಲ್ಲದೇ ಇರಬಹುದು ಎನ್ನುವ ಅತಿಸೂಕ್ಷ್ಮ ವಿಷಯ ಕೂಡ ಹೊಳೆದು, ಅದನ್ನು ತಕ್ಷಣವೇ ಬಗೆಹರಿಸಲು ಬಂದಿದ್ದರು. ಇದು ಅವರಿಗಿದ್ದ ಸೂಕ್ಷ್ಮವಾದ ಕಾಳಜಿಗೆ ಒಂದು ನಿದರ್ಶನ ಮಾತ್ರ.

ನಾಟಕದ ವಿಷಯಕ್ಕೆ, ಶಿಸ್ತಿನ ವಿಷಯಕ್ಕೆ ಅವರದ್ದು ಖಡಕ್ ಮಾತು. ಯಾವಾಗ ನೋಡಿದರೂ ಕ್ಯಾಂಪಸ್ಸಿನಲ್ಲಿ ಅವರ ಗಾಡಿ ನಿಂತಿರುತ್ತಿತ್ತು. ನಾನು ಮತ್ತು ನನ್ನ ಸಹಪಾಠಿಗಳಾದ ಜ್ಯೋತಿ ದೇಶಪಾಂಡೆ, ನಸೀರ್ (ನಟ ನಸೀರುದ್ದಿನ್ ಶಾ) ಮತ್ತು ಮೇರು ನಟ ಓಂಪುರಿ, ಭಾರತದ ಪ್ರಖ್ಯಾತ ಆರ್ಟ್ ಡೈರೆಕ್ಟರ್ ಬನ್ಸಿ ಕೌಲ್ ಅವರೊಂದಿಗೆ ಬೆಳಿಗ್ಗೆ ಐದು ಗಂಟೆಗೆ ಯೋಗ ಮತ್ತು ಧ್ವನಿ ತರಬೇತಿಗೆ ಅಂತ ಶಾಲೆಗೆ ಬರುತ್ತಿದ್ದೆವು. ಎಷ್ಟೋ ದಿನ ಅಲ್ಕಾಜಿಯವರ ಕಾರು ಅಲ್ಲೇ ಇರುತ್ತಿತ್ತು. ಸಂಜೆ ಅಥವಾ ತಡರಾತ್ರಿ ರಿಹರ್ಸಲ್ ಮುಗಿಸಿಕೊಂಡು ಹೊರಟರೆ ಆಗಲೂ ಅಲ್ಲೇ ಇರುತ್ತಿತ್ತು. ಆಫೀಸಿನ ದೀಪ ಉರಿಯುತ್ತಾ ಇರುತ್ತಿತ್ತು. ಹೀಗೆ ಅಲ್ಕಾಜಿಯವರ ಇರುವಿಕೆಯನ್ನು ವಿವಿಧ ಸಂಕೇತಗಳ ಮೂಲಕ ಗ್ರಹಿಸುತ್ತಿರುವಾಗ ನಮಗೆ ಅನ್ನಿಸುತ್ತಿದ್ದುದು- ಇವರಿಗೆ ಸಾಮಾನ್ಯರಿಗೆ ಆಗುವ ಹಾಗೆ ಊಟ, ನಿದ್ದೆ, ಹಸಿವೆ, ವಿಶ್ರಾಂತಿ, ಕುಟುಂಬ ಜೀವನ ಬೇಕು ಅನ್ನಿಸೋದೆ ಇಲ್ಲವೇ?

ನನ್ನ ತಾತ ತೀರಿಕೊಂಡಾಗ ಅಲ್ಕಾಜಿ ನನಗೆ ವಿಷಯ ತಿಳಿಸಿದ ಬಗೆ, ಅತ್ಯಂತ ಸೂಕ್ಷ್ಮವಾಗಿ ಸಾಂತ್ವನ ಹೇಳಿದ ಬಗೆಯನ್ನು ಆತ್ಮಕತೆ ‘ಕಣ್ಣಾಮುಚ್ಚೇ ಕಾಡೇ ಗೂಡೇ’ಯಲ್ಲಿ ದಾಖಲು ಮಾಡಿದ್ದೇನೆ. ಅವರ ಮಾರ್ಗದರ್ಶನ ನನ್ನನ್ನು ಈಗಲೂ ರಂಗಭೂಮಿಯೆಡೆ ನನ್ನ ನಿಷ್ಠೆ ಮುಕ್ಕಾಗದಂತೆ ಕಾಯುತ್ತಿದೆ. ತಾತ ಹೇಳುತ್ತಿದ್ದ ಹಾಗೆ ‘ಗುರಿ ಮುಂದೆ, ಗುರು ಹಿಂದೆ’. ಇಂಥಾ ಗುರು ನನಗೆ ಮತ್ತು ನನ್ನಂತಹ ಹಲವರಿಗೆ ಸಿಕ್ಕಿದ್ದು ನಮ್ಮ ಸುಕೃತ. ಅವರ ರಂಗಭೂಮಿ ಶ್ರೀಮಂತವಾದದ್ದು. ಅವರ ಕಲ್ಪನಾಲೋಕ ಮಹತ್ತರವಾದದ್ದು. ಭಾರತೀಯ ರಂಗಭೂಮಿಯಲ್ಲಿ ಅವರ ಹೆಸರು ಅಜರಾಮರ.

ಪುಣೆಯಿಂದ ಲಂಡನ್‌ವರೆಗೆ‌
1925ರಲ್ಲಿ ಪುಣೆಯಲ್ಲಿ ಜನಿಸಿದ ಅಲ್ಕಾಜಿಯವರು ರಂಗ ತರಬೇತಿ ಪಡೆಯಲು 1947ರಲ್ಲಿ ಇಂಗ್ಲೆಂಡ್‌ಗೆ ತೆರಳಿದ್ದರು. ಲಂಡನ್ನಿನ ರಾಯಲ್‌ ಅಕಾಡೆಮಿ ಆಫ್‌ ಡ್ರಾಮಾಟಿಕ್‌ ಆರ್ಟ್ಸ್‌ನಲ್ಲಿ (ರಾಡಾ) ತರಬೇತಿ ಪಡೆದು, ಭಾರತಕ್ಕೆ ವಾಪಸ್‌ ಆದ ಅವರು, ತಮ್ಮದೇ ಒಂದು ತಂಡವನ್ನು ಕಟ್ಟಿಕೊಂಡು ಇಂಗ್ಲಿಷ್‌ ನಾಟಕಗಳನ್ನು ಆಡಿಸಿದರು. ರಂಗಮಂಚದ ಮೇಲಿನ ಅವರ ತಾಂತ್ರಿಕ ನೈಪುಣ್ಯ ಜಗತ್ತಿನ ಹಲವು ರಂಗತಜ್ಞರ ಗಮನವನ್ನು ಸೆಳೆದಿತ್ತು. ಹದಿನೈದು ವರ್ಷಗಳವರೆಗೆ ಎನ್‌ಎಸ್‌ಡಿ ನಿರ್ದೇಶಕರಾಗಿದ್ದ ಅವರು, ಹಲವು ರಂಗದಿಗ್ಗಜರ ಬೆಳವಣಿಗೆಗೆ ಕಾರಣರಾದರು.

ರಾಡಾ ಮಾದರಿಯಲ್ಲಿ ಎನ್‌ಎಸ್‌ಡಿ ತರಬೇತಿ ಕಾರ್ಯಕ್ರಮವನ್ನು ಮರು ರೂಪಿಸಿದ ಅವರು, ಮೂರು ವರ್ಷಗಳ (ನಟನೆ ಮತ್ತು ವಿನ್ಯಾಸದ ಆಯ್ಕೆಯುಳ್ಳ) ಕೋರ್ಸ್‌ಗಳನ್ನು ಪರಿಚಯಿಸಿದರು. ದೇಶದ ರಂಗಭೂಮಿಯಲ್ಲಿ ನಡೆದ ಹಲವು ಕ್ರಾಂತಿಕಾರಿ ಬದಲಾವಣೆಗಳಿಗೆ ಅವರು ಕಾರಣರಾದರು. ಗಿರೀಶ ಕಾರ್ನಾಡ ಅವರ ತುಘಲಕ್‌ ನಾಟಕವನ್ನೂ ಅವರು ನಿರ್ದೇಶಿಸಿದ್ದರು. ರಂಗಸಜ್ಜಿಕೆಗಾಗಿ ಅವರು ದೆಹಲಿಯ ಪುರಾತನ ಕೋಟೆ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದರು.

ನಿರೂಪಣೆ: ಪ್ರೀತಿ ನಾಗರಾಜ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು