ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive I ಹೊಳೆನರಸೀಪುರದಲ್ಲಿ ‘ಗೌಡ್ರ ಗದ್ಲ’

ಹೇಳ್‌ ಗುರು
Last Updated 14 ಸೆಪ್ಟೆಂಬರ್ 2020, 5:53 IST
ಅಕ್ಷರ ಗಾತ್ರ

ಹೊಳೆನರಸೀಪುರದಲ್ಲಿ 'ಗೌಡ್ರ ಗದ್ಲ' ನಾಟಕ ನಡೆಯುತ್ತಿತ್ತು.‌ ಚಿತ್ರನಟ ಸುಧೀರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರು ಗೌಡರ ನಡುವಿನ ಘರ್ಷಣೆಯ ಕಥೆ ಹೊಂದಿದ್ದ ಈ‌ ನಾಟಕದ ಕೆಲವು ಸನ್ನಿವೇಶಗಳು ದೇವೇಗೌಡರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದವು. ಹೊಳೆನರಸೀಪುರದ 'ವಾಸ್ತು'ವಿನ ಅರಿವಿಲ್ಲದಕಂಪನಿ ಮಾಲೀಕರು ಪೇಚಿಗೆ ಸಿಲುಕಿದ್ದರು. ಮುಂದೇನಾಯ್ತು... ?

---

ಅದು 1991–92ರ ಸಮಯ.ಹಾಸನ ಜಿಲ್ಲೆಯ ಹೊಳೆನರಸೀಪುರ ಕ್ಯಾಂಪ್. ಆ ಊರಲ್ಲಿ ಅದಾಗಲೇ ಕೆಲವು ಚಿತ್ರಮಂದಿರಗಳಿದ್ದರೂ ನಾಟಕ ನೋಡಲು ಬರುವ ಪ್ರೇಕ್ಷಕರ ಸಂಖ್ಯೆಗೇನೂ ಕೊರತೆ ಇರಲಿಲ್ಲ.

ತಮ್ಮ ಫೇಮಸ್ ನಾಟಕಗಳನ್ನು ಮೊದಲು ಪ್ರದರ್ಶಿಸಿ ಪ್ರೇಕ್ಷಕ ವರ್ಗವನ್ನು ಸೆಳೆದುಕೊಳ್ಳುವುದು ಎಲ್ಲ ಕಂಪನಿಗಳ ಟ್ರಿಕ್. ಈ ಅಸ್ತ್ರಗಳ ಪ್ರಯೋಗದ ನಂತರವೂ ಪ್ರೇಕ್ಷಕರ ಕೊರತೆ ಎದುರಾಯಿತೆಂದರೆ ಕಂಪನಿಗಳು ಮೊರೆ ಹೋಗುತ್ತಿದ್ದುದು ಸಿನಿಮಾ ನಟ-ನಟಿಯರಿಗೆ. ‘ರಂಗಭೂಮಿ ಶಾರದೆಯ’ ಸೇವೆ ಮಾಡಿ ನಂತರ ಚಿತ್ರರಂಗದಲ್ಲಿ ಹೆಸರು ಮಾಡಿದ ಕಲಾವಿದರು 'ಸೆಲೆಬ್ರಿಟಿ'ಗಳಾಗಿ ಮತ್ತೆ ರಂಗಭೂಮಿಗೆ ಬಂದು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.

‘ಎಸ್‌ಪಿ ಸಾಂಗ್ಲಿಯಾನ ಭಾಗ–2’ ಮತ್ತು ‘ಹೊಸಜೀವನ’ದಂತಹ ಹಿಟ್‌ ಸಿನಿಮಾಗಳು ತೆರೆ ಕಂಡಂತಹ ಸಂದರ್ಭವದು. ಖಳನಟ ಸುಧೀರ್‌ ಈ ಎರಡೂ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಂಪನಿಯ ಮಾಲೀಕರು ಅವರನ್ನೇ ಕರೆಸಿದರು. ನಾಟಕದ ಹೆಸರು ‘ಗೌಡ್ರ ಗದ್ಲ’. ಖ್ಯಾತ ಚಿತ್ರನಟ ಮತ್ತು ಜನ ಮೆಚ್ಚುವಂತಹ ಕಥೆ–ಸಂಭಾಷಣೆಯ ನಾಟಕ ಅದಾಗಿದ್ದರಿಂದ ಮೊದಲೆರಡು ಗೇಟ್‌ಗಳ ಚೇರ್‌ಗಳು ಭರ್ತಿಯಾಗಿ, ಹಿಂದಿನ ‘ನೆಲದ’ ಸೀಟುಗಳೂ ತುಂಬುವ ಕನಸಿನಲ್ಲಿದ್ದರು ನಮ್ಮ ಮಾಲೀಕರು.

ಹೀರೋಗಿಂತಲೂ ಒಂದು ಕೈ ಮೇಲೆಯೇ ಎನ್ನುವಂತಹ ‘ಮಾಲಿಗೌಡ’ನ ಪಾತ್ರದಲ್ಲಿ ಸುಧೀರ್‌ ಕಾಣಿಸಿಕೊಂಡಿದ್ದರು. ನಾಯಕನ ಪಾತ್ರದ ಹೆಸರು ಬಸಲಿಂಗಪ್ಪ ಗೌಡ. ಈ ಇಬ್ಬರ ನಡುವಿನ ಗದ್ದಲದ ಕಥೆಯೇ 'ಗೌಡ್ರ ಗದ್ಲ'. ನಾಟಕದ ಹಲವು ಸನ್ನಿವೇಶಗಳಲ್ಲಿ 'ಲೇ ಗೌಡ ನೀನು ಅಂಥವನು, ನೀನು ಇಂಥವನು' ಎಂದು ನಿಂದಿಸುವ, ಕೂಗಾಡುವಂತಹ ಸಂಭಾಷಣೆಗಳೇ ತುಂಬಿ‌ಕೊಂಡಿದ್ದವು. 'ಆ ಬಸಲಿಂಗಪ್ಪಗೌಡನನ್ನು ಮಟ್ಟ ಹಾಕಲೇಬೇಕು, ಮಣ್ಣು‌ ಮುಕ್ಕಿಸಲೇಬೇಕು' ಎಂಬರ್ಥದ ಮಾತುಗಳಿಗಂತೂ ನಾಟಕದಲ್ಲಿ ಬರವೇ ಇರಲಿಲ್ಲ.

ನಮ್ಮ (ಕಂಪನಿಯ) ದುರದೃಷ್ಟಕ್ಕೆ ಹಿಂದಿನ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರು ಪರಾಭವ ಹೊಂದಿ, ಜಿ. ಪುಟ್ಟಸ್ವಾಮಿಗೌಡರು ಹೊಳೆನರಸೀಪುರದ ಶಾಸಕರಾಗಿದ್ದರು. ಸತತ ಆರು ಬಾರಿ ಗೆದ್ದಿದ್ದ ದೇವೇಗೌಡರು ಆ ಸಲವೇ ಪರಾಭವಗೊಂಡಿದ್ದಕ್ಕೋ, ನಾಯಕ-ಖಳನಾಯಕರ ಹೆಸರುಗಳಲ್ಲಿಯೂ ‘ಗೌಡ’ ಎಂಬ ಪದನಾಮ ಇದ್ದುದಕ್ಕೋ ಏನೋ ನಮ್ಮ ಮಾಲೀಕರಿಗೆ ‘ಗ್ರಹಚಾರ’ ಒಕ್ಕರಿಸಿತು.

ನಾಟಕದಲ್ಲಿನ ಈ ಇಬ್ಬರು ‘ಗೌಡರ’ ನಡುವಿನ ‌ಸಂಭಾಷಣೆಯನ್ನು ಕೆಲವರು ದೇವೇಗೌಡರಿಗೂ, ಪುಟ್ಟಸ್ವಾಮಿಗೌಡರಿಗೂ ಹೋಲಿಸಿ ‌ನೋಡಲು ಪ್ರಾರಂಭಿಸಿದರು‌. ಆದರೆ,ಹಿಂದಿನ ಕ್ಯಾಂಪ್‌ಗಳಲ್ಲಿ ‘ಗೌಡ್ರ ಗದ್ಲ’ವನ್ನು ಯಾವ ರೀತಿಯಲ್ಲಿ ಪ್ರದರ್ಶಿಸಲಾಗಿತ್ತೋ ಹೊಳೆನರಸೀಪುರದಲ್ಲಿಯೂ ಅದೇ ಸಂಭಾಷಣೆ, ಕಥೆಯೊಂದಿಗೇ ಪ್ರದರ್ಶಿಸಲಾಗುತ್ತಿತ್ತು. ಏಕೈಕ ಬದಲಾವಣೆ ಮತ್ತು ಆಕರ್ಷಣೆ ಎಂದರೆ ಸುಧೀರ್ ಮಾತ್ರ. ಆದರೆ, ‘ಹೊಳೆನರಸೀಪುರದಲ್ಲಿ’ ಈ ‘ಗೌಡ್ರ ಗದ್ಲ’ ನಾಟಕ ಆಡುವಾಗ ಅಲ್ಲಿನ ‘ವಾಸ್ತು’ಗಮನಿಸುವಲ್ಲಿ ನಮ್ಮ ಮಾಲೀಕರು ವಿಫಲರಾಗಿದ್ದರು ಎನಿಸುತ್ತದೆ !

'ನೀವು ದೇವೇಗೌಡರನ್ನ ಅವಮಾನಿಸಬೇಕೆಂದೇ ಈ ನಾಟಕ ಆಡಿಸ್ತಿದ್ದೀರಿ... ನಾಟಕ ಚೇಂಜ್ ಮಾಡಬೇಕು, ಇಲ್ಲ ಡೈಲಾಗ್‌ಗಳನ್ನಾದರೂ ಬದಲಿಸಬೇಕು’ ಎಂದು ಕೆಲವು ಅಭಿಮಾನಿಗಳು ಗಲಾಟೆ ಶುರು ಮಾಡಿದರು. ಭರ್ಜರಿ ಕಲೆಕ್ಷನ್‌ ನಿರೀಕ್ಷೆಯಲ್ಲಿದ್ದ ಮಾಲೀಕರು ಗಲಾಟೆ ಕಂಡು ಬೆವರತೊಡಗಿದರು.

ವೃತ್ತಿ ರಂಗಭೂಮಿ ನಾಟಕಗಳಲ್ಲಿ ಜನರಿಗೆ ಮನರಂಜನೆ ನೀಡುವುದೇ ಪ್ರಧಾನ ಉದ್ದೇಶವಾಗಿರುತ್ತದೆಯೇ ವಿನಾ ಯಾವುದೇ ರಾಜಕೀಯ ನಿಲುವು ಅಥವಾ ಸೈದ್ಧಾಂತಿಕ ಪ್ರತಿಪಾದನೆಯ ಪ್ರಯೋಗಗಳು ಕಡಿಮೆಯೇ. ಆದರೆ, ಇದನ್ನು ಜನರಿಗೆ ಮನದಟ್ಟು ಮಾಡಿಸುವುದು ಮಾಲೀಕರಿಗೆ, ಮ್ಯಾನೇಜರ್‌ಗಳಿಗೆ ಕಷ್ಟವಾಯಿತು.

ಮರುದಿನ ದೇವೇಗೌಡರೇ ನಾಟಕ ನೋಡಲು ಬಂದರು. ಮುಂದಿನ ಸಾಲಿನಲ್ಲೇ ಕೂತರು. ಸುಧೀರ್‌ ಅವರ ಕಂಚಿನ ಕಂಠಕ್ಕೆ ಮನಸೋತರು. ಎಲ್ಲ ಕಲಾವಿದರ ಅಭಿನಯವನ್ನೂ‌ ಮೆಚ್ಚಿಕೊಂಡರು. ಕೊನೆಗೆ ಸುಧೀರ್ ಅವರನ್ನು ಸನ್ಮಾನಿಸಿ, ಕಂಪನಿ ಮಾಲೀಕರಿಗೂ ಸ್ವಲ್ಪ ಆರ್ಥಿಕ ನೆರವು ನೀಡಿದರು.

'ಕಥೆಗೆ ತಕ್ಕಂತೆ ಸಂಭಾಷಣೆ ಇರುತ್ತದೆ. ಅದರಂತೆ ಕಲಾವಿದರು ಅಭಿನಯಿಸುತ್ತಾರೆ. ಕಂಪನಿಯವರಿಗೆ ಯಾರೂ ತೊಂದರೆ ಕೊಡಬೇಡಿ, ನಾಟಕ ಪ್ರದರ್ಶನಕ್ಕೆ ಅಡ್ಡಿ ಮಾಡಬೇಡಿ' ಎಂದು ದೇವೇಗೌಡರು ಅವರ ಅಭಿಮಾನಿಗಳಿಗೆ ಕಿವಿಮಾತು ಹೇಳಿದರು. ಈ ಪ್ರಸಂಗ ಪತ್ರಿಕೆಗಳಲ್ಲಿಯೂ ವರದಿಯಾಯಿತು ಅನಿಸುತ್ತೆ.

ನಂತರ ನಾಟಕದ ಕಲೆಕ್ಷನ್ ‌‘ಸುಂಯ್’ ಎಂದು ಮೇಲೇರಿತು.‌ ಅಕ್ಕ–ಪಕ್ಕದ ಹಳ್ಳಿಗಳಿಂದ ನಾಟಕ ನೋಡಲು ಎತ್ತಿನಗಾಡಿ, ಟ್ರ್ಯಾಕ್ಟರ್, ಲಾರಿಗಳಲ್ಲಿ ಜನ ಬರತೊಡಗಿದರು. ಮೊದಲಿದ್ದ ಚೇರುಗಳೆಲ್ಲ ಭರ್ತಿಯಾಗಿ, ‘ಎಕ್ಸ್‌ಟ್ರಾ’ ಕುರ್ಚಿಗಳನ್ನು ಹಾಕಲಾಯಿತು. ನಾಟಕದ ಥಿಯೇಟರಿನ ಮುಂದೆ ಚಹಾದಂಗಡಿಗಳ ಸಂಖ್ಯೆಯೂ ಹೆಚ್ಚಾಯಿತು. ಸೈಕಲ್‌ ಸ್ಟ್ಯಾಂಡ್‌ ಕಾಯುತ್ತಿದ್ದ ಅಣ್ಣನಿಗೂ ಕೆಲಸ ಜಾಸ್ತಿ ಆಯಿತು. ನೂರಾರು ಸೈಕಲ್‌ಗಳು, ಬೈಕ್‌ಗಳು ಒಮ್ಮೆಗೆ ಬರತೊಡಗಿದ್ದರಿಂದ ನಾನೂ ಅವನ ಸಹಾಯಕ್ಕೆ ನಿಲ್ಲುತ್ತಿದ್ದೆ. ಆ ಮೂಲಕ ಆಗಲೇ ದಿನಕ್ಕೆ ನಾಲ್ಕೈದು ರೂಪಾಯಿ ಸಂಪಾದಿಸುತ್ತಿದ್ದೆ !

ನನಗಾಗ ಹತ್ತು–ಹನ್ನೊಂದು ವರ್ಷ. ‘ಏನ್ಲೇ ಗುರ‍್ಯಾ, ಇನ್ನೂ ನಿದ್ದಿ ಬಂದಿಲ್ಲೇನು’ ಎಂದು ಸುಧೀರ್‌ ಕೇಳಿದರೆ, ಆಜಾನುಬಾಹುವಾಗಿದ್ದ ಅವರನ್ನು ಕಂಡು ಹೆದರಿ ಅಮ್ಮನ ಸೆರಗಿನ ಹಿಂದೆ ಓಡಿ ಹೋಗಿ ನಿಲ್ಲುತ್ತಿದ್ದೆ. ಅದೇ ರೀತಿ,ಹೇಮಾವತಿ ನದಿಯಲ್ಲಿ ಈಜಲು ಹೋಗುತ್ತಿದ್ದಾಗಲೆಲ್ಲ, ನದಿಯ ಬದಿಯ ರಸ್ತೆಯಲ್ಲಿದ್ದ ಮನೆಯ ಮುಂದೆ, ಅದೇ ವೈಟ್ ಆ್ಯಂಡ್ ವೈಟ್ ಪಂಚೆ- ಶರ್ಟ್ ಹಾಕ್ಕೊಂಡು ನಿಂತಿರುತ್ತಿದ್ದ ದೇವೇಗೌಡರನ್ನು ನೋಡಿದಾಗಲೂ, ಭಯದಿಂದ ತಲೆ ತಗ್ಗಿಸಿಕೊಂಡು ಓಡಿ ಹೋಗುತ್ತಿದ್ದುದು ನೆನಪಿಗೆ ಬರುತ್ತದೆ.

ಮುಂದೆ ದೇವೇಗೌಡರು ಮುಖ್ಯಮಂತ್ರಿಯಾದರು, ಪ್ರಧಾನಿ ಹುದ್ದೆಯನ್ನೂ ಅಲಂಕರಿಸಿದರು. ಅವರಫೋಟೊಗಳನ್ನು ಪತ್ರಿಕೆಗಳಲ್ಲಿ ನೋಡಿದಾಗಲೆಲ್ಲ ಈ 'ಗೌಡ್ರ ಗದ್ಲ' ಕಥೆಯನ್ನು ಅಪ್ಪ-ಅಮ್ಮ ರಸವತ್ತಾಗಿ ಹೇಳುತ್ತಿದ್ದುದರಿಂದ ಆ ಘಟನೆ ಈಗಲೂ ನನಗೆ ಕಣ್ಣಿಗೆ ಕಟ್ಟಿದಂತಿದೆ.

ಮುಂದಿನ ವಾರ:ಸುಧೀರ್ ಎಳೆನೀರು, ಪ್ರಣಯರಾಜ ಶ್ರೀನಾಥರ ಪ್ಯಾಂಟು !

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT