ಬುಧವಾರ, ಫೆಬ್ರವರಿ 1, 2023
27 °C

ರಂಗಭೂಮಿ | ಶಾಂತಕವಿಯ ಕನ್ನಡದ ಕಣ್ಣು

ಎಚ್.ಆರ್.ಅಮರನಾಥ Updated:

ಅಕ್ಷರ ಗಾತ್ರ : | |

Prajavani

‘ಬೇರೆ ಭಾಷೆಗಳ ಪ್ರಭಾವದಿಂದ ಕನ್ನಡದಲ್ಲಿ ಯೋಚಿಸುವುದನ್ನು, ಭಾವಿಸುವುದನ್ನು, ಅನುಭವಿಸುವುದನ್ನು ಮರೆತುಬಿಟ್ಟರೆ ಆಗ ಕನ್ನಡತ್ವಕ್ಕೆ ತೊಂದರೆಗಳು ಎದುರಾಗುತ್ತವೆ’, ‘ಕವಿಯ ಪ್ರಜ್ಞೆಗೂ ಭಾಷೆಗೂ ಇರುವ ಸಂಬಂಧವನ್ನು ಅದರ ತೀವ್ರಸ್ವರೂಪದಲ್ಲಿ ಶಾಂತಕವಿಗಳು ಕಂಡುಕೊಂಡಿದ್ದರು’

- ಹೀಗೆ ಭಾಷಾ ಅಸ್ಮಿತೆ ಕುರಿತ ಹಲವಾರು ಮಾರ್ಮಿಕ ಮಾತುಗಳುಳ್ಳ ‘ಶಾಂತಕವಿಗಳ ವಿಶ್ರಾಂತಿ’ ಎಂಬುದು ಕನ್ನಡ ರಂಗಭೂಮಿ ಪಿತಾಮಹ ಎಂದು ಹೆಸರಾದ ಸಕ್ಕರಿ ಬಾಳಾಚಾರ್ಯ ‘ಶಾಂತಕವಿ’ಗಳ (1856- 1921) ಜೀವನ-ಸಾಧನೆಗಳ ಕುರಿತಾದ ನಾಟಕ. ಶಾಂತಕವಿಗಳ ಕನ್ನಡತ್ವದ ಶೋಧನೆಯನ್ನು ಅವರ ಜೀವನದಲ್ಲಿ ನಡೆದ ಕೆಲವು ನೈಜ ಘಟನೆಗಳ ಹಿನ್ನೆಲೆಯಲ್ಲಿ ಕಟ್ಟಿಕೊಡಲು ಈ ನಾಟಕವನ್ನು ರಚಿಸಿ ನಿರ್ದೇಶಿಸಿದ ಪ್ರಕಾಶ ಗರುಡ ಪ್ರಯತ್ನಿಸಿದ್ದಾರೆ.

ಸುಮಾರು ಎರಡು ತಾಸುಗಳಷ್ಟು ಸುದೀರ್ಘವಾದ ಈ ನಾಟಕವು ಬ್ರಿಟಿಷ್ ವಸಾಹತು ಕಾಲಘಟ್ಟದಲ್ಲಿ ಮರಾಠಿ ಭಾಷೆಯ ಪ್ರಭಾವದಿಂದಾಗಿ ಉತ್ತರ ಕರ್ನಾಟಕದಲ್ಲಿ ಕನ್ನಡತ್ವವು ಎದುರಿಸಿದ ಬಿಕ್ಕಟ್ಟನ್ನು ಶಾಂತಕವಿಗಳು ರಂಗಕರ್ಮಿಯಾಗಿ, ಕೀರ್ತನಕಾರರಾಗಿ ಏಕಾಂಗಿಯಾಗಿ ಎದುರಿಸಿದ ರೀತಿಯನ್ನು ನಮ್ಮೆದುರಿಗೆ ಬಿಚ್ಚಿಕೊಡುತ್ತದೆ. ಈ ಆದ್ಯ ನಾಟಕಕಾರ ಕನ್ನಡಕ್ಕಾಗಿ ಹೋರಾಡಿದ ರೋಚಕ ಕಥನವು ಏಕೆ ಇಷ್ಟು ಅಲ್ಪಾವಧಿಯಲ್ಲಿ ವಿಸ್ಮೃತಿಗೆ ಒಳಗಾಯಿತು ಎಂಬ ವಿಷಾದ ಭಾವವನ್ನು ನಾಟಕ ಪ್ರೇಕ್ಷಕನ ಮನದಲ್ಲಿ ಮೂಡಿಸುತ್ತದೆ.

ಕೀರ್ತನೆ, ದುಂದುಮೆ, ನಾಟಕ ಮುಂತಾಗಿ 70ಕ್ಕೂ ಹೆಚ್ಚು ಕೃತಿಗಳನ್ನು ಶಾಂತಕವಿಗಳು ಬರೆದಿದ್ದರೂ ನಮಗೆ ಈಗ ದೊರಕುವುದು ಬೆರಳೆಣಿಕೆಯಷ್ಟು ಕೃತಿಗಳು ಮಾತ್ರ. ‘ಅವರ ಕೃತಿಗಳನ್ನಂತೂ ನಾವು ಉಳಿಸಿಕೊಂಡಿಲ್ಲ, ಅವರು ರಚಿಸಿದ ಕೃತಿಗಳ ಪಟ್ಟಿಯನ್ನಾದರೂ ನಮ್ಮ ಜನ ನೆನಪಿನಲ್ಲಿಟ್ಟುಕೊಂಡರೆ ಸಾಕು’ ಎಂಬ ಮೊನಚು ಮಾತು ಕಣ್ಮರೆಯಾಗುತ್ತಿರುವ ಕನ್ನಡ ಕೃತಿಗಳನ್ನು ಈಗಲಾದರೂ ಎಚ್ಚರ ವಹಿಸಿ ಉಳಿಸಿಕೊಳ್ಳಬೇಕಾದ ತುರ್ತನ್ನು ಒತ್ತಿ ಹೇಳುತ್ತದೆ.

ದ.ರಾ.ಬೇಂದ್ರೆಯವರು ಬರೆದ ‘ಶಾಂತಕವಿಗಳ ವಿಶ್ರಾಂತಿ’ ಎಂಬ ಹಾಡಿನ ಜೊತೆಗೆ ಶಾಂತಕವಿಗಳೇ ಬರೆದ ಸುಮಾರು 20 ಹಾಡು, ಕಂದ, ವೃತ್ತ ಪದ್ಯಗಳನ್ನು ಸಂದರ್ಭಕ್ಕನುಗುಣವಾಗಿ ನಾಟಕದುದ್ದಕ್ಕೂ ಬಳಸಿಕೊಳ್ಳಲಾಗಿದೆ. ಶಾಂತಕವಿಗಳೇ ಸೃಷ್ಟಿಸಿದ ಅಂತಃಶೀಲ ಮತ್ತು ಬಹಿಃಶೀಲ ಹಾಗೂ ಹೇಳಪ್ಪ ಮತ್ತು ಕೇಳಪ್ಪ ಎಂಬ ಪಾತ್ರಗಳನ್ನು ವೃತ್ತಿ ರಂಗಭೂಮಿಯ ನಾಟಕದ ಸಂಯೋಜನೆಯಾದ ಒಳದೃಶ್ಯ (ಡೀಪ್‌ಸೀನ್) ಮತ್ತು ಹೊರದೃಶ್ಯ (ಫ್ರಂಟ್ ಸೀನ್) ಪರಿಕಲ್ಪನೆಯಲ್ಲಿ ಬಳಸಿಕೊಳ್ಳಲಾಗಿದೆ. ಶಾಂತಕವಿಗಳೇ ಬರೆದ ಹಾಗೂ ಸದ್ಯ ದೊರೆತಿರುವ ‘ಉಷಾಹರಣ’, ‘ವತ್ಸಲಾಹರಣ’ ಮತ್ತು ‘ಸೀತಾರಣ್ಯ ಪ್ರವೇಶ’ ನಾಟಕಗಳ ದೃಶ್ಯಗಳನ್ನು ನಾಟಕದೊಳಗಿನ ನಾಟಕ (ಗರ್ಭಾಂಕ) ತಂತ್ರವಾಗಿ ಬಳಸಿಕೊಳ್ಳಲಾಗಿದೆ.

ಈ ನಾಟಕದ ಕೊನೆಯಲ್ಲಿ ಬರುವ ಯುವಕವಿ ಬೇಂದ್ರೆಯವರ ಮಾತುಗಳು ಇಡೀ ನಾಟಕಕ್ಕೆ ಮತ್ತು ಕನ್ನಡತ್ತ್ವದ ಕುರಿತು ಶಾಂತಕವಿಗಳ ಚಿಂತನೆಗೆ ಭಾಷ್ಯ ಬರೆದಂತಿದೆ. ಅವರು ಹೇಳುತ್ತಾರೆ: ‘ಸಕ್ಕರಿ ಬಾಳಾಚಾರ್ಯರಿಗೆ ತಮ್ಮ ಮಾಧ್ವಮತದ ಬಗ್ಗೆ ದುರಭಿಮಾನ ಇರಲಿಲ್ಲ ಮತ್ತು ಇತಿಹಾಸದ ತತ್ವಜ್ಞಾನದ ಅರಿವಿನ ವಿಶಾಲ ಹೃದಯವಂತಿಕೆ ಇತ್ತು ಎಂಬುದಕ್ಕೆ ವಿದ್ಯಾರಣ್ಯ ವಿಜಯ ಕೃತಿಯೇ ಸಾಕ್ಷಿಯಾಗಿದೆ’.

ಶಾಂತಕವಿಗಳು ತಮ್ಮ ವ್ಯಕ್ತಿತ್ವ ಮತ್ತು ಕೃತಿ ರಚನಾ ನೆಲೆಯಲ್ಲಿ ಆಗಿನ ಸಾಂಪ್ರದಾಯಿಕ ಬರಹಗಾರರಿಗಿಂತ ತೀರಾ ಭಿನ್ನರಾಗಿದ್ದರು ಮತ್ತು ಆಧುನಿಕರಾಗಿದ್ದರು. ‘ಅವರು ಹೊತ್ತಿಸಿದ ಕನ್ನಡತ್ತ್ವದ ದೀವಟಿಗೆಯ ಶಾಖವನ್ನು ನೀಲಾಂಜನದ ಬೆಳಕಾಗಿ ಮಾಡಿಕೊಂಡವರು ವರಕವಿ ಬೇಂದ್ರೆಯವರು’ ಎಂದು ನಾಟಕದಲ್ಲಿ ಬರುವ ಮಾತು ಶಾಂತಕವಿಗಳ ಭಾಷೆಯ ಅಸ್ಮಿತೆಯ ಶೋಧದ ಮಹತ್ತ್ವವವನ್ನು ತೋರಿಸುತ್ತದೆ.

ಈ ನಾಟಕವನ್ನು ರಂಗಕ್ಕೆ ತಂದ ಧಾರವಾಡದ ಗೊಂಬೆಮನೆ ತಂಡ ಮತ್ತು ಆಯೋಜಿಸಿದ ಶಾಂತಕವಿ ಟ್ರಸ್ಟ್‌ ಈ ಎರಡೂ ಸಂಸ್ಥೆಗಳು ಅಭಿನಂದನಾರ್ಹವಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು