ಕಲಾಕ್ಷೇತ್ರದ ‘ಧ್ವನಿ’ ಈ ಕೃಷ್ಣಯ್ಯ

7
krishna sound aritst

ಕಲಾಕ್ಷೇತ್ರದ ‘ಧ್ವನಿ’ ಈ ಕೃಷ್ಣಯ್ಯ

Published:
Updated:
Deccan Herald

ಆ ಹುಡುಗ ಎಸ್ಎಸ್‌ಎಲ್‌ಸಿಯಲ್ಲಿ ಸತತವಾಗಿ ಮೂರು ಸಲ ನಪಾಸಾದ. ಇನ್ನು ವಿದ್ಯೆ ತನ್ನ ತಲೆಗೆ ಹತ್ತುವುದಿಲ್ಲ ಎಂದರಿತ ಆ ಹುಡುಗ ಸೀದಾ ಹೆಜ್ಜೆ ಹಾಕಿದ್ದು ‘ಪ್ರಭಾತ್ ಕಲಾವಿದರು’ ತಂಡದತ್ತ. ಅಲ್ಲಿ ಆರೇಳು ವರ್ಷ ನೇಪಥ್ಯದ ಎಲ್ಲಾ ವಿಭಾಗಗಳಲ್ಲಿ ಕೆಲಸ ಕಲಿತ ಆ ಹುಡುಗ ಮುಂದೆ ರವೀಂದ್ರ ಕಲಾಕ್ಷೇತ್ರದ ಕಾಯಂ ಧ್ವನಿ ವಿನ್ಯಾಸಕಾರನಾಗಿದ್ದೇ ಒಂದು ನಾಟಕದ ಕಥೆಯಂತಿದೆ.

ಅಂದಿನ ಆ ಹುಡುಗ ಬೇರಾರು ಇಲ್ಲ ರವೀಂದ್ರ ಕಲಾಕ್ಷೇತ್ರದ ಹಿರಿಯ ಧ್ವನಿ ವಿನ್ಯಾಸಕಾರ ಎ. ಕೃಷ್ಣಯ್ಯ ಅರ್ಥಾತ್ ಟ್ಯೂಬ್ ಕೃಷ್ಣ. 1985ರಲ್ಲಿ ಕಲಾಕ್ಷೇತ್ರಕ್ಕೆ ಕಾಲಿಟ್ಟ ಕೃಷ್ಣಯ್ಯ 20 ವರ್ಷಗಳ ಕಾಲ ದಿನಗೂಲಿ ನೌಕರನಾಗಿಯೇ ಕೆಲಸ ಮಾಡಿದರು. ತಿಂಗಳಿಗೆ ₹ 270 ಸಂಬಳ!. ಉದ್ಯೋಗ ಕಾಯಂ ಆಗಿದ್ದು 2004ರಲ್ಲಿ. ಅದೂ ರಾತ್ರಿ ಕಾವಲುಗಾರನೆಂಬ ಹುದ್ದೆಗೆ! ಆದರೆ, ಕೃಷ್ಣಯ್ಯ ಅವರು ಕಲಾಕ್ಷೇತ್ರ ಕಾವಲುಗಾರನಾಗಷ್ಟೇ ಅಲ್ಲ ಧ್ವನಿ–ಬೆಳಕು ವಿನ್ಯಾಸಕಾರನಾಗಿ ರಂಗಪ್ರಿಯರ ಮನಗೆದ್ದರು.

ಧ್ವನಿ ವಿನ್ಯಾಸದಲ್ಲಿ ಪಳಗಿದ್ದ ಅವರಿಗೆ ಅಂದಿಗೂ–ಇಂದಿಗೂ ಬೇಡಿಕೆ. ಹಾಗಾಗಿಯೇ ನಿವೃತ್ತಿಯಾದ ನಂತರವೂ ಅವರೀಗ ಧ್ವನಿ–ಬೆಳಕು ವಿನ್ಯಾಸಕಾರನಾಗಿ ಕಲಾಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ‘ಪ್ರಭಾತ್’ ತಂಡದಲ್ಲಿದ್ದಾಗ ಕಲಿತ ಕೆಲಸ ಕೈ ಹಿಡಿಯಿತು ಎನ್ನುವುದನ್ನು ವಿನ್ರಮವಾಗಿ ನೆನಪಿಸಿಕೊಳ್ಳುವ ಅವರು ಹಿರಿಯ–ಕಿರಿಯರೊಂದಿಗೆ ಬೆರೆತು ಕೆಲಸ ಮಾಡುವ ಅಪರೂಪದ ರಂಗಕರ್ಮಿ.

ನಾಟಕದ ಪರದೆ ಕಟ್ಟುವುದರಿಂದ ಹಿಡಿದು, ಧ್ವನಿ, ಬೆಳಕು, ಸ್ಟೇಜ್ ಹಾಕುವುದು ಹೀಗೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿರುವ ಕೃಷ್ಣಯ್ಯ ರಂಗಭೂಮಿಯ ಆ ದಿನಗಳನ್ನು ಸುವರ್ಣ ದಿನಗಳು ಎಂದು ಮೆಲುಕು ಹಾಕುತ್ತಾರೆ. ‘ಪ್ರಭಾತ್ ಕಲಾವಿದರು’ ತಂಡದ ಮಾಲೀಕ ಟಿ.ವಿ. ದ್ವಾರಕನಾಥ್ (ನೃತ್ಯ ಕಲಾವಿದ ರಾಜೇಂದ್ರ ನಿರುಪಮಾ ಅವರ ತಂದೆ) ಅವರಿಂದ ಕಲಿತದ್ದು ಅಪಾರ. ಆಗ ರಾಜೇಂದ್ರ ಇನ್ನೂ ಎಂಟನೇ ತರಗತಿ ಓದುತ್ತಿದ್ದ ಹುಡುಗ. ಆಗ ನಟಿ ಹೇಮಾ ಮತ್ತು ಪ್ರೇಮಾ, ಹರೀಶ್  ಇವರೆಲ್ಲಾ ಪುಟ್ಟ ಮಕ್ಕಳು.  ಕಲಾಕ್ಷೇತ್ರಕ್ಕೆ ಕೆಲಸಕ್ಕೆ ಸೇರಿದ ಮೇಲೂ ‘ಪ್ರಭಾತ್‌’ನಿಂದ ಬುಲಾವ್ ಬಂದಿತ್ತು. ಆದರೆ, ಕಲಾಕ್ಷೇತ್ರ ನಂಟು ಅಷ್ಟು ಸುಲಭವಾಗಿ ಬಿಡದ ಕಾರಣ ಇಲ್ಲೇ ಮುಂದುವರಿದೆ’ ಎಂದು ನೆನಪಿಸಿಕೊಳ್ಳುತ್ತಾರೆ ಕೃಷ್ಣಯ್ಯ.

‘ಆಗ ಕಲಾಕ್ಷೇತ್ರ ಇಷ್ಟೊಂದು ಆಧುನಿಕವಾಗಿರಲಿಲ್ಲ. ಆದರೆ, ಧ್ವನಿ–ಬೆಳಕು ವ್ಯವಸ್ಥೆ ಚೆನ್ನಾಗಿತ್ತು. ಇರುವ ತಂತ್ರಜ್ಞಾನದಲ್ಲೇ ಎಲ್ಲವೂ ಅಚ್ಚುಕಟ್ಟಾಗಿತ್ತು. ಆಗೆಲ್ಲಾ ಮೈಕ್ ಇಲ್ಲದೇ ನಾಟಕ ಆಡಿಸುತ್ತಿದ್ದರು. ಈಗ ಎಸಿ ಮಾಡಿದ ಮೇಲೆ ಮೈಕ್ ಇಲ್ಲದೇ ನಾಟಕ ಆಡಿಸಲಾಗದು. ರೋನಾಲ್ಡ್ಸ್‌ ಕಂಪನಿಯವರು ಬಂದರೂ ಧ್ವನಿ ವ್ಯವಸ್ಥೆ ಅಷ್ಟಾಗಿ ಚೆನ್ನಾಗಿ ಆಗಿರಲಿಲ್ಲ. ಆಗ ನನ್ನ ಅನುಭವದ ಆಧಾರದ ಮೇಲೆ ಧ್ವನಿ ವಿನ್ಯಾಸ ಮಾಡಿದು. ಅದು ಯಶಸ್ವಿಯಾಯಿತು. ಆಗಿನ ಕಾಲದಲ್ಲಿ ಈಗಿನಂತೆ ರೆಕಾರ್ಡಿಂಗ್ ಇರುತ್ತಿರಲಿಲ್ಲ. ಲೈವ್ ಮ್ಯೂಸಿಕ್ ಇರುತ್ತಿತ್ತು. ಈಗ ಕಂಪ್ಯೂಟರ್, ಪೆನ್ ಡ್ರೈವ್, ಮೊಬೈಲ್ ಹೀಗೆ ಧ್ವನಿ ತಂತ್ರಜ್ಞಾನ ಆಧುನಿಕವಾಗಿದೆ. ಕೆಲ ಕಲಾವಿದರು ಲ್ಯಾಪೆಲ್ ಮೈಕ್ ಬಳಸುತ್ತಾರೆ. ಆದರೆ, ಹಳೆಯ ಕಾಲವೇ ಚೆನ್ನಾಗಿತ್ತು’ಎಂದು ಬದಲಾದ ಧ್ವನಿ ವಿನ್ಯಾಸ ತಂತ್ರಜ್ಞಾನ ಬಗ್ಗೆ ವಿಶ್ಲೇಷಿಸುತ್ತಾರೆ ಅವರು.

‘ಈಗಿನವರಂತೆ ನಾನು ಸೌಂಡ್ ಎಂಜಿನಿಯರಿಂಗ್ ಕೋರ್ಸ್ ಮಾಡಲಿಲ್ಲ. ಎಲ್ಲವನ್ನೂ ಅನುಭವದ ಆಧಾರದಲ್ಲೇ ಕಲಿತೆ. ಅದನ್ನೇ ಇಲ್ಲೂ ಪ್ರಯೋಗಿಸಿದೆ. ಬಿ.ವಿ.ಕಾರಂತ, ಸಿಜಿಕೆ, ಕಪ್ಪಣ್ಣ ಹೀಗೆ ಅನೇಕರ ಜತೆ ಕೆಲಸ ಮಾಡಿದೆ. ವರ್ಷಕ್ಕೆ 500 ನಾಟಕಗಳಿಗೆ ಕೆಲಸ ಮಾಡಿದೆ. ನನಗೀಗ 61 ವರ್ಷ. ಜೀವನದ ಬಹುಭಾಗ ಇಲ್ಲಿಯೇ ಕಳೆದಿದ್ದೇನೆ. ವೈಯಕ್ತಿಕ ಜೀವನ, ಸಂಬಳದ ಬಗ್ಗೆ ಯೋಚನೆ ಮಾಡಲೇ ಇಲ್ಲ. ಅಂದಿನ ದಿನದ್ದು ಅಂದಿನ ದಿನಕ್ಕೆ ಎನ್ನುವ ಭಾವದಲ್ಲೇ ಬದುಕಿದೆ. ನಿವೃತ್ತಿಯಾದ ಮೇಲೂ ನನ್ನ ಸೇವೆ ಬೇಕು ಎಂದು ಏಜೆನ್ಸಿ ಮೂಲಕ ನೇಮಿಸಿಕೊಂಡಿದ್ದಾರೆ. ಉಳಿದ ಜೀವನವನ್ನು ಕಲಾಕ್ಷೇತ್ರದಲ್ಲೇ ಕಳೆಯಬೇಕೆಂಬ ಆಸೆ ನನ್ನದು’ ಎನ್ನುತ್ತಾರೆ ಕೃಷ್ಣಯ್ಯ.

‘ಟ್ಯೂಬ್’ ಕೃಷ್ಣನಾದ ಕಥೆ

‘ಪ್ರಭಾತ್ ಕಲಾವಿದರು’ ತಂಡದಲ್ಲಿ ಕೃಷ್ಣ ಹೆಸರಿನ ಅನೇಕ ಮಂದಿ ಇದ್ದರು. ನನಗೆ ಕೆಲ ವಿಷಯ ನಿಧಾನವಾಗಿ ಅರ್ಥವಾಗುತ್ತಿತ್ತು. ಹಾಗಾಗಿ, ನನಗೆ ‘ಟ್ಯೂಬ್ ಕೃಷ್ಣ’ಅನ್ನುವ ಹೆಸರು ಬಂತು ಎಂದು ಮೆಲುಕು ಹಾಕುತ್ತಾರೆ ಕೃಷ್ಣಯ್ಯ.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !