ಗುರುವಾರ , ಆಗಸ್ಟ್ 18, 2022
24 °C

ಮಾಸೂರ... ರಂಗಲೋಕದ ಬಹದ್ದೂರ!

ವಿಜಯವಾಮನ Updated:

ಅಕ್ಷರ ಗಾತ್ರ : | |

ಎಪ್ಪತ್ತು- ಎಂಬತ್ತರ ದಶಕಗಳಲ್ಲಿ ಮಾಸೂರ ಅನೇಕ ಯುವಕರನ್ನು ಕಲೆಹಾಕಿ ಅದ್ಭುತವಾದ ನಾಟಕಗಳನ್ನು ನಿರ್ದೇಶಿಸಿದರು. ಬಯಲುಸೀಮೆಯ ಲಕ್ಷ್ಮೇಶ್ವರದಿಂದ ಬಂದ ಈ ಹಿರಿಯ ಕಲಾವಿದ, ಸಾಗರದ ಒಂದು ಪೆಟ್ರೋಲ್ ಬಂಕಿನಲ್ಲಿ ಗುಮಾಸ್ತರಾಗಿ ಬದುಕು ಸಾಗಿಸುತ್ತಿದ್ದ ಸರಳ ಸಾಮಾನ್ಯ ವ್ಯಕ್ತಿ. ಕನ್ನಡಕ್ಕೆ ರಂಗ ದೀಕ್ಷೆ ನೀಡಿದವರಲ್ಲಿ ಪ್ರಮುಖರಾದ ಮಾಸೂರರ ಜನ್ಮ ಶತಾಬ್ಧಿ ಮೊನ್ನೆಯಷ್ಟೇ ಸದ್ದಿಲ್ಲದೆ ಸರಿದುಹೋಯಿತು...

ಕನ್ನಡ ರಂಗಭೂಮಿಯು ಆಗಿನ್ನೂ ಕೈಲಾಸಂ, ಪರ್ವತವಾಣಿ ಮುಂತಾದವರಿಗಷ್ಟೇ ಸೀಮಿತವಾಗಿತ್ತು. ಬೆಂಗಳೂರು ನಗರದಲ್ಲಿ ಮಾತ್ರ ಹವ್ಯಾಸಿ ರಂಗಚಟುವಟಿಕೆಗಳು ನಡೆಯುತ್ತಿದ್ದವು. ರಂಗಶಾಲೆಗಳಾಗಲಿ, ರಂಗಾಯಣಗಳಾಗಲಿ, ತಿರುಗಾಟಗಳಾಗಲಿ ಯಾವುದೂ ಇರಲಿಲ್ಲ. ದೂರದ ಬಂಗಾಳ, ದಿಲ್ಲಿ, ಮುಂಬೈ, ಚೆನ್ನೈ ಮಹಾನಗರಗಳಲ್ಲಿ ಅಲ್ಲೊಬ್ಬರು ಅಲ್ಕಾಜಿ, ಇಲ್ಲೊಬ್ಬರು ಶಂಭುಮಿತ್ರ ಅವರಂಥವರು ಮಾತ್ರ ಇದ್ದರು. ಗಿರೀಶ ಕಾರ್ನಾಡ, ಅಮೋಲ್‌ ಪಾಲೇಕರ್ ಆಗಲಿ, ನಾಸಿರುದ್ದೀನ್‌ ಷಾ, ಓಂ ಪ್ರಕಾಶ್‌ ಪುರಿಯಾಗಲಿ ಇನ್ನೂ ಎಳವೆಯಲ್ಲಿದ್ದರು. ಕನ್ನಡದ ರಂಗ ಪರಂಪರೆಗೆ ಬಿ.ವಿ.ಕಾರಂತರ ಆಗಮನವಾಗಿರಲಿಲ್ಲ. ಕೆ.ವಿ.ಸುಬ್ಬಣ್ಣ ಅವರ ‘ನೀನಾಸಂ’ ಇನ್ನೂ ತೆರೆದಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಾಟಕಕಾರ ಶ್ರೀರಂಗರು ಕೂಡ ಕನ್ನಡ ರಂಗಭೂಮಿಗೆ ಪದಾರ್ಪಣೆ ಮಾಡಿರಲಿಲ್ಲ!

ಕನ್ನಡನಾಡಿನ, ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಹೃದಯ, ಸಾಗರದಲ್ಲಿ ರಂಗಚಟುವಟಿಕೆ ನಿಧಾನವಾಗಿ ಆರಂಭವಾಗಿತ್ತು. ಆದರೆ ಅವರು ಇನ್ನೂ ಗಂಭೀರ ನಾಟಕಗಳಿಗೆ ಕೈಹಚ್ಚಿರಲಿಲ್ಲ. ಎಲ್ಲಾ ಕಡೆ ಕಂಪನಿ ನಾಟಕಗಳೇ ರಾಜ್ಯಭಾರ ಮಾಡುತ್ತಿದ್ದ ಕಾಲವದು.

ಸಾಗರದ ಎನ್.ಆರ್.ಮಾಸೂರ ಎಂಬ ನಾಟಕದ ಗೀಳಿನ ಮನುಷ್ಯ ‘ಕಿರಿಯರ ತಂಡ’ ಎಂಬ ಗುಂಪು ಕಟ್ಟಿಕೊಂಡು, ಮೆಲ್ಲನೆ ರಂಗಭೂಮಿಯ ಚಟುವಟಿಕೆ ಪ್ರಾರಂಭಿಸಿದರು. ಅದು 1938ರಲ್ಲಿ! ಮಾಸೂರ ಅವರ ಜೊತೆಗೆ ಬಣ್ಣ ಹಚ್ಚಿಕೊಂಡವರು ಹಾವನೂರು ಶ್ರೀಪತಿ, ಗೋಪಾಲಕೃಷ್ಣರಾಯ, ಕೋಳಿವಾಡ ಕೃಷ್ಣಮೂರ್ತಿ ಮುಂತಾದವರು.

1948ರಲ್ಲಿ ಇದೇ ‘ಕಿರಿಯರ ತಂಡ’ವು ‘ಉದಯ ಕಲಾವಿದರು’ ಎಂಬ ಸಂಸ್ಥೆಯಾಗಿ ಬದಲಾಯಿತು. ಇದು ನಾಡಿನ ಹೆಸರಾಂತ ಸಂಸ್ಥೆ. ಏಕೆಂದರೆ, ಖ್ಯಾತ ನಾಟಕಕಾರ ಶ್ರೀರಂಗರ ನಾಟಕಗಳನ್ನೇ ಒಂದರ ಹಿಂದೆ ಒಂದರಂತೆ ಆಡುತ್ತ ಬಂದ ತಂಡ ಇದೊಂದೆ! ಶ್ರೀರಂಗ ಹಾಗೂ ಮಾಸೂರ ಜೋಡಿಯದು ಕನ್ನಡ ರಂಗಭೂಮಿಯ ಅಪರೂಪದ ನೆಂಟಸ್ತಿಕೆ! ಶ್ರೀರಂಗರು ತಮ್ಮ ನಾಟಕಗಳ ಹಸ್ತಪ್ರತಿಗಳನ್ನು ಮೊದಲು ಕಳಿಸಿಕೊಡುತ್ತಿದ್ದದ್ದು ಸಂಸ್ಥೆಯ ರೂವಾರಿ ಮಾಸೂರ ಅವರಿಗೇ.

ಕೇವಲ ವಿದೇಶಗಳಲ್ಲಿ ಕಾಣಲಾಗುತ್ತಿದ್ದ ಶೇಕ್ಸ್‌ಪಿಯರ್ ಥಿಯೇಟರ್, ಇಬ್ಸನ್ ಥಿಯೇಟರ್, ಬ್ರೆಕ್ಟ್ ಥಿಯೇಟರ್ ರೀತಿ ಒಬ್ಬ ನಾಟಕಕಾರನಿಗೇ ಮೀಸಲಾದ ರಂಗ ತಂಡಗಳಂತೆ ‘ಉದಯ ಕಲಾವಿದರು’ ಶ್ರೀರಂಗರ ನಾಟಕಗಳಿಗೇ ಮೀಸಲಾಗಿತ್ತು.

ಹರಿಜನ್ವಾರ, ಹುಟ್ಟಿದ್ದು ಹೊಲೆಯೂರು, ಸ್ವರ್ಗಕ್ಕೆ ಮೂರೇ ಬಾಗಿಲು, ಸಿರಿ ಪುರಂದರ, ರಂಗ ಭಾರತ, ಕತ್ತಲೆ-ಬೆಳಕು, ಶೋಕ ಚಕ್ರ, ಸೌಭಾಗ್ಯವತಿ ಭವ, ನೀ ಕೊಡೆ ನಾ ಬಿಡೆ, ಈಸ ಬೇಕು ಇದ್ದು ಜೈಸ ಬೇಕು, ಉತ್ತಮ ಪ್ರಭುತ್ವ ಲೊಳಲೊಟ್ಟೆ ಮುಂತಾದ ಶ್ರೀರಂಗರ ಕೃತಿಗಳನ್ನು ರಂಗಭೂಮಿಗೆ ತಂದು, ಸಾಗರದ ಉದಯ ಕಲಾವಿದರು ಮಾಸದ ಹೆಸರಾಗಿ ಹೋದರು. ಜೊತೆಗೆ ಶ್ರೀರಂಗರ ನಾಟಕಗಳಲ್ಲದೆ ಮಾಸೂರ ಅವರು ನಿರ್ದೇಶಿಸಿದ ‘ಹಯವದನ’ ಕೂಡಾ ಹೆಸರು ಗಳಿಸಿತು. ಇದೇ ಕಾಲಘಟ್ಟದಲ್ಲಿ ಶ್ರೀರಂಗರು ಹಾಗೂ ಬಿ.ವಿ.ಕಾರಂತರು ಬೆಂಗಳೂರಿಗೆ ಆಗಮಿಸಿದರು. ಕನ್ನಡ ನಾಟಕದ ಭವ್ಯ ಪರಂಪರೆಗೆ ಇದು ನಾಂದಿಯಾಯಿತು.

ಎಪ್ಪತ್ತು- ಎಂಬತ್ತರ ದಶಕಗಳಲ್ಲಿ ಮಾಸೂರ‌ ಅನೇಕ ಯುವಕರನ್ನು ಕಲೆಹಾಕಿ ಅದ್ಭುತವಾದ ನಾಟಕಗಳನ್ನು ನಿರ್ದೇಶಿಸಿದರು. ಬಯಲುಸೀಮೆಯ ಲಕ್ಷ್ಮೇಶ್ವರದಿಂದ ಬಂದ ಈ ಹಿರಿಯ ಕಲಾವಿದ, ಸಾಗರದ ಒಂದು ಪೆಟ್ರೋಲ್ ಬಂಕಿನಲ್ಲಿ ಗುಮಾಸ್ತರಾಗಿ ಬದುಕು ಸಾಗಿಸುತ್ತಿದ್ದ ಸರಳ ಸಾಮಾನ್ಯ ವ್ಯಕ್ತಿ. ಯಾವ ವಿದ್ಯಾಭ್ಯಾಸವೂ ಇಲ್ಲ, ರಂಗ ತರಬೇತಿಯೂ ಇಲ್ಲ, ಹಣವಂತೂ ಮೊದಲೇ ಇಲ್ಲ! ಆದರೆ ಅಪಾರವಾದ ಆತ್ಮವಿಶ್ವಾಸ, ಅದಮ್ಯವಾದ ರಂಗಾಸಕ್ತಿ, ಕಲಿಯುವ ಮನಸ್ಸು, ಹುಮ್ಮಸ್ಸನ್ನು ತುಂಬಿಕೊಂಡು ಬೆಂಗಳೂರು, ಮೈಸೂರು, ಹಾಸನ, ಶಿವಮೊಗ್ಗ, ರಾಯಚೂರು, ಧಾರವಾಡ, ಶಿರಸಿ, ಬೆಳಗಾವಿ ಮುಂತಾದ ಕಡೆ ಶ್ರೀರಂಗರ ನಾಟಕಗಳನ್ನೇ ಹೆಚ್ಚಾಗಿ ಆಡಿಸುತ್ತಾ ನಡೆದರು ಈ ರಂಗ ಭೂಪ!


ಎನ್‌.ಆರ್‌. ಮಾಸೂರ –ಚಿತ್ರ: ಕೆ.ಜಿ.ಸೋಮಶೇಖರ್

ಇವರ ಮನೆತನ ದೀಕ್ಷಿತರದ್ದು. ಪೂರ್ಣ ಹೆಸರು ನಾರಾಯಣ ರಾಮಚಂದ್ರ ದೀಕ್ಷಿತ ಯಾನೆ ಮಾಸೂರ. ತಾನೂ ರಂಗ ದೀಕ್ಷೆ ತೆಗೆದುಕೊಂಡು ಇತರರಿಗೂ ರಂಗ ದೀಕ್ಷೆ ನೀಡುತ್ತಿದ್ದ ಈ ‘ರಂಗ ದೀಕ್ಷಿತ’ ಬದುಕಿದ್ದರೆ 101 ವರ್ಷ ತುಂಬಿರುತ್ತಿತ್ತು (12.6.1920). ರಂಗಾಸಕ್ತರ ಪಾಲಿಗೆ ಇವರು ಮಾಸೂರ ಎಂದೇ ಪರಿಚಿತರು.

‘ಉದಯ ಕಲಾವಿದರು’ ತಂಡದ ಹೆಗ್ಗಳಿಕೆಯೆಂದರೆ, ಮಾಸೂರ ಅವರಿಂದ ಕಲಿತ ಡೈಲಾಗ್ ಡೆಲಿವರಿ, ಉಸಿರಿನ ನಿಯಂತ್ರಣ, ದನಿಯ ಏರಿಳಿತಗಳು, ರಂಗ ಚಲನೆ ಹಾಗೂ ಮಾತುಗಳ ಸ್ಪಷ್ಟ ಉಚ್ಚಾರಣೆ. ವರ್ತಕರು, ವಕೀಲರು, ಉಪನ್ಯಾಸಕರು, ಬ್ಯಾಂಕ್ ಅಧಿಕಾರಿಗಳು, ಎಲ್ಐಸಿ, ಬಿಎಸ್ಎನ್ಎಲ್ ಅಧಿಕಾರಿಗಳು, ಕೃಷಿಕರು, ನಿರುದ್ಯೋಗಿಗಳು ಮುಂತಾದವರನ್ನೆಲ್ಲಾ ಕಟ್ಟಿಕೊಂಡು ಉಚ್ಚಾರದ ಮಹತ್ವ, ಆಂಗಿಕ ಶಿಸ್ತು ಕಲಿಸುತ್ತಾ, ಕಸ ಹೊಡೆಸಿ, ಪರದೆ ಕಟ್ಟಿಸಿ, ದೀಪಗಳೇರಿಸಿ, ಬಣ್ಣ ಹಚ್ಚಿಸಿ, ರಂಗದ ಮೇಲೂ ಅವತರಿಸಿ, ಕಡಿಮೆ ವೆಚ್ಚದಲ್ಲಿ ಪ್ರದರ್ಶನಗಳನ್ನು ನೀಡುತ್ತಾ, ಮತ್ತೆ ವ್ಯಾನು, ಬಸ್ಸುಗಳಲ್ಲಿ ನಾಡಿನಾದ್ಯಂತ ಅಲೆದಾಡಿದ್ದೇ ಇಂದು ಕೆಲವು ತಂಡಗಳು ಮಾಡುತ್ತಿರುವ ತಿರುಗಾಟದಂಥ ಪ್ರಯೋಗಗಳಿಗೆ ಮಾದರಿ ಎಂದರೆ ಅತಿಶಯೋಕ್ತಿಯಲ್ಲ.

ಉದಯ ಕಲಾವಿದರು ನಾಟಕದ ತಾಲೀಮು ನಡೆಸುತ್ತಿದ್ದ ‘ಅಟ್ಟ’ ಕನ್ನಡ ನಾಡಿನ ರಂಗಭೂಮಿ ಕಲಾವಿದರಿಗೆ ಚಿರಪರಿಚಿತ. ಪ್ರತೀ ಸಂಜೆ ‘ಅಟ್ಟ’ದಲ್ಲಿ ಯಾವುದಾದರೂ ನಾಟಕದ ತಾಲೀಮು ನಡೆಯುತ್ತಲೇ ಇರುತ್ತಿತ್ತು. ಈ ‘ಅಟ್ಟ’ಕ್ಕೆ ವರಕವಿ ಬೇಂದ್ರೆ, ನಿರ್ದೇಶಕ ಬಿ.ವಿ.ಕಾರಂತ, ನಟ ಅಮೋಲ್‌ ಪಾಲೇಕರ್, ಮೋಹನ ಮಹರ್ಷಿ ಮುಂತಾದ ಖ್ಯಾತನಾಮರು ಭೇಟಿ ನೀಡಿದ್ದರು. ಕೈಲಾಗದೆ ಹಾಸಿಗೆ ಹಿಡಿದಾಗಲೂ ಮಾಸೂರ ‘ಅಟ್ಟ’ಕ್ಕೆ ಹಗ್ಗ ಹಿಡಿದು ಮೆಟ್ಟಿಲು ಹತ್ತುತ್ತ ಬರುತ್ತಿದ್ದರು.

ಮಾಸೂರ ನಂತರವೂ ‘ಉದಯ ಕಲಾವಿದರು’ ಹಲವಾರು ವರ್ಷಗಳ ಕಾಲ ಹತ್ತಾರು ಪ್ರಸಿದ್ಧ ನಾಟಕಗಳನ್ನು ನೀಡಿದ್ದಾರೆ. ಅನಿವಾರ್ಯ ಕಾರಣಗಳಿಂದಾಗಿ ನಿಷ್ಕ್ರಿಯವಾಗಿದ್ದ ಈ ತಂಡ ಈಗ ಸಂಪೂರ್ಣ ಸ್ತಬ್ಧವಾಗಿದೆ. ಗಿಜಿಗುಡುವ ರಂಗತಾಣವಾಗಿದ್ದ ‘ಅಟ್ಟ’ ಕಣ್ಮರೆಯಾಗಿ, ಕೇವಲ ನೆನಪಾಗಿ ಉಳಿದಿದೆ. ಈ ನೆನಪು ನಿರಂತರವಾಗಿ ಇರಬೇಕಾದಲ್ಲಿ ಮಾಸೂರ ಹೆಸರಿನಲ್ಲಿ ರಂಗಮಂದಿರವೊಂದು ಸಾಗರದಲ್ಲಿ ನಿರ್ಮಾಣವಾಗಬೇಕು. ಮಾಸೂರ ಹಾಗೂ ಅನೇಕ ಹಿರಿಯ ‘ಉದಯ ಕಲಾವಿದ’ರಿಗೆ ಗೌರವ ಸಲ್ಲಿಸಲು ‘ಮಾಸೂರ ರಂಗಮಂದಿರ’ ಮಾತ್ರವೇ ಸರಿಯಾದ ವೇದಿಕೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು