ಗುರುವಾರ , ಏಪ್ರಿಲ್ 2, 2020
19 °C

ಮೈಸೂರು ರಂಗಭೂಮಿ: ಕುಂಬಾರಿಕೆ ಬಿಟ್ಟು ನಾಟಕದ ಮಾಸ್ತರಾದ ಜವರಶೆಟ್ಟಿ

ಅಕ್ಕಿಹೆಬ್ಬಾಳು ನಾಗರಾಜ Updated:

ಅಕ್ಷರ ಗಾತ್ರ : | |

‘ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ’ ಎನ್ನುವ ಕವಿವಾಣಿ ಹಲವರ ಬದುಕಿನಲ್ಲಿ ಸತ್ಯವಾಗಿದೆ. ಇದಕ್ಕೆ ತಾಜಾ ಉದಾಹರಣೆ ಜವರಶೆಟ್ಟರು.

ಹೆಗ್ಗಡದೇವನಕೋಟೆ ತಾಲ್ಲೂಕಿನ ಹೈರಿಗೆ ಇವರ ಹುಟ್ಟೂರು. ಕುಲ ಕಸುಬು ಕುಂಬಾರಿಕೆ. ಕೆಳ ಮಧ್ಯಮ ವರ್ಗದ ಬದುಕು. ಬಯಕೆಗಳೆಲ್ಲ ಮೊಳಕೆಯಲ್ಲೇ ಬತ್ತಿ ಹೋಗುವ ಪರಿಸ್ಥಿತಿ. ಈ ವಾತಾವರಣದ ನಡುವೆ ಕುಟುಂಬದ ಪರಿಸ್ಥಿತಿ ಅರಿತ ಬಾಲಕನೊಬ್ಬ ಊರಿನ ಲ್ಲಿದ್ದ ಮರಿಶೆಟ್ಟಿ ಅವರಿಂದ ಹಾರ್ಮೋನಿಯಂ, ಯಲ್ಲಶೆಟ್ಟಿ ಅವರಿಂದ ಸಂಗೀತ ಕಲಿತು ಕೊಂಡು ರಂಗ ಲೋಕದ ಪಯಣ ಆರಂಭಿಸಿದ.

ಊರಿನಲ್ಲಿ ಪ್ರದರ್ಶನಗೊಂಡ ‘ದಾನಶೂರ ಕರ್ಣ’ ನಾಟಕದಲ್ಲಿ ‘ಋಷಿಕೇತು’ವಿನ ಪಾತ್ರವನ್ನು ಮೆಚ್ಚಿ ಅಂದಿನ ತಾಲ್ಲೂಕು ಅಧಿಕಾರಿ ಬೆಳ್ಳಿಕಪ್‌ ಅನ್ನು ಕೊಡುಗೆಯಾಗಿ ನೀಡಿದರು. ಅದು ಆ ಬಾಲಕನ  ಬದುಕಿನ ದಿಕ್ಕನ್ನೇ ಬದಲಾಯಿಸಿತು. ಕುಂಬಾರಿಕೆಯ ಕುಲಕಸುಬಿನಿಂದ ಪೌರಾಣಿಕ ನಾಟಕ ಕಲಿಸುವ ಮಾಸ್ತರನ್ನಾಗಿಸಿತು. ಜತೆಗೆ, ಸೋದರಮಾವನ ಯಕ್ಷಗಾನದ ಮದ್ದಳೆ ಪಟ್ಟುಗಳು ಪ್ರೋತ್ಸಾಹವನ್ನು ಇಮ್ಮಡಿಗೊಳಿಸಿದವು. ಆ ಬಾಲಕನೇ ಈಗಿನ ನಾಟಕದ ಮಾಸ್ತರು ಜವರಶೆಟ್ಟಿ.

ಅವರು ಕಲಿಸಿದ ಮೊದಲ ನಾಟಕ ‘ಸುಗ್ರೀವ ಸಖ್ಯ’ ಹುಟ್ಟೂರಿನಲ್ಲೇ ಪ್ರದರ್ಶನ ಗೊಂಡಿತು. ಅದಕ್ಕೆ ಅವರಿಗೆ ಸಿಕ್ಕ ಸಂಭಾವನೆ 2 ಗಾಡಿ ಸೌದೆ ಹಾಗೂ ಮನೆಗೊಂದರಂತೆ ಬಳ್ಳ ರಾಗಿ. ಹೀಗೆ ಆರಂಭಗೊಂಡ ವೃತ್ತಿ ಬದುಕಿನಲ್ಲಿ  ಸಂಪೂರ್ಣ ರಾಮಾಯಣ, ಭಕ್ತ ಪ್ರಹ್ಲಾದ, ದಾನಶೂರಕರ್ಣ, ಕುರುಕ್ಷೇತ್ರ, ಯುದ್ಧಕಾಂಡ ರಾಮಾಯಣ, ಶಬರ ಶಂಕರ ವಿಲಾಸ, ದಶಾವತಾರ, ಸಾಮ್ರಾಟ್ ಸುಯೋಧನ, ಶಿವಭಕ್ತ ಚಂಡಕಾಸುರ, ಪ್ರಭುಲಿಂಗ ಲೀಲೆ, ಅಲ್ಲಮ ಶರಣ ಸಂದರ್ಶನ, ದಕ್ಷ ಯಜ್ಞ, ಶಿವಕುಮಾರ ಚರಿತೆ, ಮೂರವರೆ ವಜ್ರ, ಶಿವ ಜಲಂಧರ, ಜಗಜ್ಯೋತಿ ಬಸವೇಶ್ವರ, ತ್ರಿಜನ್ಮ ಮೋಕ್ಷ ಸೇರಿದಂತೆ ಅನೇಕ ನಾಟಕಗಳನ್ನು ಶಿಷ್ಯರಿಗೆ ಕಲಿಸಿದರು.

ಅವು ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆ ಒಳಗೊಂಡಂತೆ 300 ಕ್ಕೂ ಹೆಚ್ಚುಕಡೆಗಳಲ್ಲಿ ಪ್ರದರ್ಶನಗೊಂಡಿವೆ.. ಕೆಲವೊಂದು ನಾಟಕಗಳು ಇಪ್ಪತ್ತು ಮೂವತ್ತು ಪ್ರಯೋಗಗಳನ್ನು ಕಂಡಿವೆ.

ಹರಿಕಥಾ ವಿದ್ವಾಂಸ ಅರುಣ್‌ಕುಮಾರ್‌ ಅವರ ರಾಮನ ಪಾತ್ರಕ್ಕೆ, ಬಿ.ಪಿ. ರಾಜಮ್ಮ ಅವರ ಆಂಜನೇಯನ ಪಾತ್ರಕ್ಕೆ, ಹಾರ್ಮೋನಿಯಂ ನುಡಿಸಿದ ಹೆಗ್ಗಳಿಕೆ ಇವರದು.

1985ರಲ್ಲಿ ಕಲಾ ಚತುರ ಪ್ರಶಸ್ತಿ, ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಶಸ್ತಿ, ಜಿಲ್ಲಾ, ತಾಲ್ಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಮೈಸೂರಿನ ಟೌನ್‌ಹಾಲಿನಲ್ಲಿ ಪಡೆದ ಕಲಾ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್‌ ನೀಡಿದ, ಮಂಡ್ಯದಲ್ಲಿ ಕೊಡಮಾಡಿದ ‘ಕೌಸ್ತುಭ ಪ್ರಶಸ್ತಿ’ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರ ಮುಡಿಗೇರಿವೆ.

ರಂಗಭೂಮಿಯ ಬದುಕಿನಲ್ಲಿ ನಡೆದ ಅನೇಕ ಏಳುಬೀಳಿನ ಘಟನೆಗಳನ್ನು ಅತ್ಯಂತ ಕೃತಜ್ಞತೆಯಿಂದ ಅವರು ನೆನೆಯುತ್ತಾರೆ. ಕೇವಲ ₹5 ರೂಪಾಯಿ ಸಂಭಾವನೆಯಿಂದ ಆರಂಭಗೊಂಡ ವೃತ್ತಿ ಬದುಕು ₹ 50,000 ತಲುಪಿದ್ದನ್ನು ಸ್ಮರಿಸುವ 82 ವರ್ಷದ ಜವರಶೆಟ್ಟರು ಮಡದಿ ಪುಟ್ಟರಂಗಮ್ಮನ ಸಹಕಾರವನ್ನೂ ನೆನೆಯುತ್ತಾರೆ.

‘ಇತ್ತೀಚಿನ ದಿನಗಳಲ್ಲಿ ನಾಟಕ ಕಲಿಸುವ ಅವಕಾಶ ಕಡಿಮೆಯಾಗಿರುವುದರಿಂದ ಈಗ ಹರಿಕಥೆ ಮುಂತಾದ ಕಾರ್ಯಕ್ರಮಗಳಿಗೆ ಹಾರ್ಮೋನಿಯಂ ನುಡಿಸುತ್ತಾ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಕೊಡಮಾಡುವ ಗೌರವಧನ ಪಡೆಯುತ್ತಾ ಸಂತೃಪ್ತಿಯಿಂದ ಜೀವನ ನಡೆಸುತ್ತಿದ್ದೇನೆ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು