ಬುಧವಾರ, ಡಿಸೆಂಬರ್ 2, 2020
25 °C

ನಾಟ್ಯಕ್ಕೆ ಯಾವ ಅಡ್ಡಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂಕ್ರಾಮಿಕ ಕಾಯಿಲೆಯಂತಹ ಅಸಾಧಾರಣ ಸಂದರ್ಭದಲ್ಲೂ ನಾವು ಪ್ರದರ್ಶನ ನೀಡುವಂತಾಗಲು ತಾಂತ್ರಿಕ ಪರಿಣತಿಯನ್ನು ಕರಗತ ಮಾಡಿಕೊಳ್ಳುವುದು ಅತ್ಯಗತ್ಯ ಎನ್ನುತ್ತಾರೆ ಒಡಿಸ್ಸಿ ನೃತ್ಯ ಕಲಾವಿದೆ ಪ್ರಾಚಿ ಹೋಟಾ. ಲಂಡನ್‌ ಫಿಲಂ ಸ್ಕೂಲ್‌ನ ವಿದ್ಯಾರ್ಥಿನಿಯಾಗಿರುವ ಅವರು, ತಮ್ಮ ಪ್ರದರ್ಶನಗಳಿಗೆ ಬಹುಬೇಗ ಡಿಜಿಟಲ್‌ ವೇದಿಕೆಯನ್ನು ಬಳಸಿಕೊಂಡ ಕಲಾವಿದರಲ್ಲಿ ಒಬ್ಬರು.

‘ಸಭಾಂಗಣಗಳು, ತರಗತಿ ಕೋಣೆಗಳಿಗೆಲ್ಲ ಬೀಗ ಹಾಕಿದ್ದರಿಂದ ನೃತ್ಯ ಪ್ರದರ್ಶನ ನೀಡಲು ನಾನು ಡಿಜಿಟಲ್‌ ವೇದಿಕೆಯನ್ನು ಕಂಡುಕೊಂಡೆ. ಏಕೆಂದರೆ, ಕಲಾವಿದರಾದವರು ಪ್ರದರ್ಶನಗಳನ್ನು ನೀಡಲೇಬೇಕಲ್ಲ? ಲಾಕ್‌ಡೌನ್‌ ಘೋಷಣೆಯಾದ ಬೆನ್ನಹಿಂದೆಯೇ ವೆಬಿನಾರ್‌ಗಳು ಶುರುವಾದವು. ಪೂಜಾ ವಿಧಿ–ವಿಧಾನಗಳನ್ನೂ ಫೇಸ್‌ಬುಕ್‌ ಲೈವ್‌ ಮಾಡುವ ಪರಿಪಾಟ ಆರಂಭವಾಯಿತು. ಅದೇ ರೀತಿ ನಾನೂ ಆನ್‌ಲೈನ್‌ ಪ್ರದರ್ಶನ ನೀಡಲು ನಿರ್ಧರಿಸಿದೆ’ ಎಂದು ಅವರು ವಿವರಿಸುತ್ತಾರೆ.

ಡಿಜಿಟಲ್‌ ವೇದಿಕೆಯಲ್ಲಿ ನಾನು ಇದುವರೆಗೆ ಮೂರು ಪ್ರದರ್ಶನಗಳನ್ನು ನೀಡಿದ್ದೇನೆ. ಪ್ರೇಕ್ಷಕರನ್ನು ಅವರ ಮನೆಯಲ್ಲೇ ತಲುಪಿ, ಪ್ರದರ್ಶನ ನೀಡಿದ್ದು ಖುಷಿ ಕೊಟ್ಟಿದೆ. ದೇಶದ ದೊಡ್ಡ ನಗರಗಳಲ್ಲಿ ಪ್ರದರ್ಶನಗಳು ಏರ್ಪಾಟಾದಾಗ ಟ್ರಾಫಿಕ್‌ ಜಾಮ್‌ಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಜನರಿಗೂ ಈ ಆನ್‌ಲೈನ್‌ ಪ್ರದರ್ಶನಗಳು ಖುಷಿ ನೀಡಬಲ್ಲವು. ಸಭಾಂಗಣದಲ್ಲಿ ಸಿಗುವ ಸ್ಪಂದನೆಯೇ ಬೇರೆ. ಹಾಗೆಂದು ಡಿಜಿಟಲ್‌ ವೇದಿಕೆಯ ಪ್ರದರ್ಶನಗಳ ಕುರಿತು ಬೇಸರ ಹೊಂದಬೇಕಿಲ್ಲ. ಪ್ರೇಕ್ಷಕರಿಂದ ಅಲ್ಲಿಯೂ ಫೀಡ್‌ಬ್ಯಾಕ್‌ ಸಿಗುತ್ತದೆ ಎಂದು ಅವರು ಹೇಳುತ್ತಾರೆ.

ವಿದೇಶಗಳಲ್ಲಿ ಆನ್‌ಲೈನ್‌ ಪ್ರದರ್ಶನಗಳಿಗೂ ದರ ನಿಗದಿ ಮಾಡಲಾಗುತ್ತದೆ. ಆದರೆ, ಭಾರತದ ಬಹುತೇಕ ಪ್ರದರ್ಶನಗಳು ಉಚಿತವಾಗಿವೆ. ಡಿಜಿಟಲ್‌ ವೇದಿಕೆಯಲ್ಲಿ ಪ್ರದರ್ಶನ ನೀಡಲು ಸಾಕಷ್ಟು ಹಣ ವ್ಯಯಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಭಾರತದಲ್ಲೂ ಆನ್‌ಲೈನ್‌ ಪ್ರದರ್ಶನಗಳನ್ನು ಜನ ದುಡ್ಡು ಕೊಟ್ಟು ನೋಡಬಹುದು ಎನ್ನುವ ಆಶಾವಾದ ಪ್ರಾಚಿ ಅವರದು.

ಆನ್‌ಲೈನ್‌ ಪ್ರದರ್ಶನ ನೀಡುವಾಗ ವಹಿಸಬೇಕಾದ ಎಚ್ಚರಿಕೆಗಳ ಕುರಿತೂ ಈ ಕಲಾವಿದೆ ವಿವರವಾಗಿ ಮಾತನಾಡುತ್ತಾರೆ. ‘ನಾವು ಬಳಸುವ ಆಡಿಯೊ ಸಿಸ್ಟಂ ಗುಣಮಟ್ಟದ್ದಾಗಿರಬೇಕು. ಹಿನ್ನೆಲೆಯು ಸೃಜನಶೀಲತೆಯಿಂದ ಕೂಡಿರಬೇಕು. ಪ್ರದರ್ಶನದ ಕೋಣೆಯಲ್ಲಿ ಬೆಳಕಿನ ವ್ಯವಸ್ಥೆಯೂ ಚೆನ್ನಾಗಿರಬೇಕು. ಕ್ಯಾಮೆರಾ ಎಲ್ಲಿದೆ ಎಂಬುದರ ಅರಿವು ಇಟ್ಟುಕೊಂಡು ಪ್ರದರ್ಶನ ನೀಡಬೇಕು. ಹೀಗಾಗಿ ಸಭಾಂಗಣದ ವೇದಿಕೆಗಳಲ್ಲಿ ಸಿಗುವಷ್ಟು ಸ್ಥಳಾವಕಾಶ ಡಿಜಿಟಲ್‌ ಕಣ್ಣಮುಂದೆ ಮನೆಯಿಂದ ಪ್ರದರ್ಶನ ನೀಡುವಾಗ ಸಿಗುವುದಿಲ್ಲ’ ಎಂದು ಅವರು ವಿವರಿಸುತ್ತಾರೆ. ಸಾಂಕ್ರಾಮಿಕದ ಪ್ರಭಾವ ಸಂಪೂರ್ಣವಾಗಿ ತಗ್ಗಿ, ಜಗತ್ತು ಸಹಜಸ್ಥಿತಿಗೆ ಬಂದ ಬಳಿಕವೂ ಆನ್‌ಲೈನ್‌ ಪ್ರದರ್ಶನಗಳು ಸಹ ಮುಂದುವರಿಯುವಲ್ಲಿ ಸಂಶಯವಿಲ್ಲ ಎಂದು ಪ್ರಾಚಿ ಹೇಳುತ್ತಾರೆ.

12ನೇ ವಯಸ್ಸಿನಲ್ಲೇ ಕೋಲ್ಕತ್ತಾದಲ್ಲಿ ಒಡಿಸ್ಸಿ ನೃತ್ಯದ ದೀಕ್ಷೆ ಪಡೆದ ಪ್ರಾಚಿ, ಸಾಂಪ್ರದಾಯಿಕ ಕಲೆಯಲ್ಲಿ ಹೊಸತನ್ನು ಕೊಡುವ ಉಮೇದನ್ನು ಹೊಂದಿದವರು. ‘ನೃತ್ಯ ಕಲೆಯು ಎಲ್ಲ ಅಡೆತಡೆಗಳನ್ನೂ ಮೀರಿ ಪ್ರೇಕ್ಷಕರ ಮನೆ ಬಾಗಿಲಿಗೆ ತಲುಪುತ್ತಿರುವುದು ಹೆಮ್ಮೆಯ ಸಂಗತಿ. ಪ್ರಬುದ್ಧ ಪ್ರೇಕ್ಷಕರೊಂದಿಗೆ ಸಂವಾದಗಳು ಹೆಚ್ಚಲೂ ಆನ್‌ಲೈನ್‌ ಕಾರಣವಾಗಿದೆ. ಕಲಾ ಪ್ರದರ್ಶನಗಳನ್ನು ನೀಡುವುದು ವೆಬಿನಾರ್‌ ನಡೆಸಿದಷ್ಟು ಸುಲಭವಲ್ಲ ಎನ್ನುವುದು ನನಗೆ ಗೊತ್ತು. ಆದರೆ, ಮನಸ್ಸಿದ್ದರೆ ಮಾರ್ಗವಂತೂ ಇದ್ದೇ ಇದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು