ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೋಮ್‌ ಥಿಯೇಟರ್‌‘ನಲ್ಲಿ ಪುಸ್ತಕ ಓದುವುದನ್ನು ನೋಡಿ, ಕೇಳಿ !

Last Updated 19 ಜೂನ್ 2020, 12:29 IST
ಅಕ್ಷರ ಗಾತ್ರ

ಕೆಲವರಿಗೆ ಓದು ಒಂದು ಧ್ಯಾನವಾದರೆ, ಇನ್ನೂ ಕೆಲವರಿಗೆ ಪುಸ್ತಕ ಅಂದ್ರೆನೇ ಬೋರು. ಈಗೀಗಂತೂ ಪುಸ್ತಕ ಓದುವ ಹವ್ಯಾಸಿಗರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಜನರಲ್ಲಿ ಓದುವ ಅಭಿರುಚಿ ಹೆಚ್ಚಿಸಬೇಕು. ಪುಸ್ತಕದ ಬಗ್ಗೆ ಪ್ರೀತಿ ಬೆಳೆಸಬೇಕು ಎಂಬ ಉದ್ದೇಶದಿಂದ ಪ್ರದರ್ಶನ ಕಲಾ ಸಂಸ್ಥೆ (ಪ್ರಕಾಸಂ) ಎಂಬ ರಂಗಭೂಮಿ ತಂಡ ‘ಹೋಮ್‌ ಥಿಯೇಟರ್’‌ ಎಂಬ ಹೊಸ ಪರಿಕಲ್ಪನೆಯ ಕಾರ್ಯಕ್ರಮವನ್ನು ರೂಪಿಸಿದೆ.

ಪ್ರಸಿದ್ಧ ಕೃತಿಗಳನ್ನು ಜನಪ್ರಿಯ ರಂಗಭೂಮಿ ಮತ್ತು ಸಿನಿಮಾ ಕಲಾವಿದರಿಂದ ಓದಿಸಿ, ವಿಡಿಯೊ ಮಾಡಿಸಿ ಅದನ್ನು ಯೂಟ್ಯೂಬ್‌ ಚಾನೆಲ್‌ ಮೂಲಕ ಬಿಡುಗಡೆ ಮಾಡುವುದು. ಈ ಮೂಲಕ ಪುಸ್ತಕಗಳನ್ನು ಜನರ ಬಳಿಗೆ ತಲುಪಿಸುವುದು. ಇದು ‘ಹೋಮ್‌ ಥಿಯೇಟರ್‌‘ ಕಾರ್ಯಕ್ರಮದ ಉದ್ದೇಶ. ಹೋಮ್‌ ಥಿಯೇಟರ್‌ನ ಮತ್ತೊಂದು ಹೆಸರೇ ‘ವಿಡಿಯೊ ಬುಕ್‌‘

ಈ ‘ವಿಡಿಯೊ ಬುಕ್‌‘ ಪ್ರಕಾಸಂ ಸಂಸ್ಥೆಯ ಪಿ.ಡಿ.ಸತೀಶ್‌ಚಂದ್ರ ಅವರ ಪರಿಕಲ್ಪನೆ. ಇದರಲ್ಲಿ ರಂಗಭೂಮಿ, ಸಿನಿಮಾ, ಕಿರುತೆರೆಯ ಜನಪ್ರಿಯ ನಟ– ನಟಿಯರು, ಹಿರಿಯ ಸಾಹಿತಿಗಳು, ಪ್ರಸಿದ್ಧ ಲೇಖಕರ ಕೃತಿಗಳನ್ನು ಆಯ್ದುಕೊಂಡು, ಆ ಕೃತಿಗಳಲ್ಲಿನ ಒಂದೊಂದು ಅಧ್ಯಾಯವನ್ನು ತಮ್ಮದೇ ಆದ ಶೈಲಿ, ಆಂಗಿಕ ಅಭಿನಯದ ಮೂಲಕ ಓದುತ್ತಾರೆ. ಅವರು ಓದುವುದನ್ನು ವಿಡಿಯೊ ಮಾಡಿ,ಪಿ.ಡಿ.ಸತೀಶ್‌ಚಂದ್ರ ಅವರು ತಮ್ಮ ಯೂಟ್ಯೂಬ್‌ ಚಾನೆಲ್‌ ಮೂಲಕ ಬಿಡುಗಡೆ ಮಾಡುತ್ತಾರೆ.

ಈಗಾಗಲೇ ಲೇಖಕರಾದ ಜೋಗಿ ಅವರ ‘ಲೈಫ್‌ ಈಸ್‌ ಬ್ಯೂಟಿಫುಲ್’‌ ಮತ್ತುಕೇಶವ ಮಳಗಿ ಅವರ ‘ಅಂಗದ ಧರೆ' ಕಿರು ಕಾದಂಬರಿ ‘ವಿಡಿಯೊ ಬುಕ್‘‌ ಆಗಿದೆ.

ರಿಷಭ್‌ ಶಟ್ಟಿ, ಪ್ರಮೋದ್‌ ಶೆಟ್ಟಿ, ಸುಮನ್‌ ನಗರ್‌ಕರ್‌, ಭಾವನಾ, ಖ್ಯಾತ ಕಿರುತೆರೆ ನಿರ್ದೇಶಕರಾದ ಟಿ.ಎನ್‌.ಸೀತಾರಾಮ್‌, ಸಿಹಿಕಹಿ ಚಂದ್ರು, ನಟ, ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಸೇರಿದಂತೆ 51 ಮಂದಿ ರಂಗಭೂಮಿಯ ಹಿರಿಯ ನಟರು ‘ಲೈಫ್‌ ಈಸ್‌ ಬ್ಯೂಟಿಫುಲ್’‌ 51 ಅಧ್ಯಾಯಗಳನ್ನು ಓದಿದ್ದಾರೆ. ಇದು 3 ಗಂಟೆ 40 ನಿಮಿಷದ ವಿಡಿಯೊ ಬುಕ್‌.

ಕೇಶವಮಳಗಿಯವರ ‘ಅಂಗದ ಧರೆ' ಕಿರು ಕಾದಂಬರಿಯನ್ನು ರಾಜ್‌ ಪಿ.ಶೆಟ್ಟಿ, ಅಚ್ಯುತ್‌ಕುಮಾರ್,‌ ಸುಕೃತ ವಾಗ್ಳೆ ಸೇರಿದಂತೆ 62 ಮಂದಿ ನಟ–ನಟಿಯರು, ರಂಗಭೂಮಿ ಕಲಾವಿದರು ಓದಿದ್ದಾರೆ. ಈ ಕೃತಿಯ ಆರಂಭದಲ್ಲಿರುವ ವಚನಕ್ಕೆ ಎಂ.ಡಿ ಪಲ್ಲವಿ ಅವರು ಸಂಗೀತ ನೀಡಿದ್ದಾರೆ. ‘ಹೋಮ್‌ ಥಿಯೇಟರ್‌‘ನ ಈ ಎರಡನೇ ವಿಡಿಯೊ ಬುಕ್,‌ ಪಲ್ಲವಿ ಅವರ ವಚನಗಾಯನದೊಂದಿಗೆ ಆರಂಭವಾಗುತ್ತದೆ.

‘ವಿಡಿಯೊ ಬುಕ್‌‘ ಶುರುವಾಗಿದ್ದು:

ವಿಡಿಯೊ ಬುಕ್‌ ಪರಿಕಲ್ಪನೆ ಹುಟ್ಟು, ಬೆಳವಣಿಗೆ ಹಾಗೂ ಅದು ಸಾಕಾರಗೊಂಡು ‘ಹೋಮ್‌ಥಿಯೇಟರ್‌‘ ಆಗಿದ್ದನ್ನು ಸತೀಶ್‌ಚಂದ್ರ ವಿವರಿಸಿದ್ದು ಹೀಗೆ;

‘ಪ್ರತಿ ವರ್ಷ ಜನವರಿಯಿಂದ ಮಾರ್ಚ್‌ ತಿಂಗಳಲ್ಲಿ ನಮ್ಮ ಸಂಸ್ಥೆಯ ರಂಗಭೂಮಿ ಚಟುವಟಿಕೆಗಳು, ಪ್ರದರ್ಶನಗಳು ಹೆಚ್ಚಾಗಿ ನಡೆಯುತ್ತವೆ. ಆದರೆ ಈ ಬಾರಿ ಕೊರೊನಾದಿಂದಾಗಿ ಎಲ್ಲಾ ನಿಂತುಹೋಯಿತು. ಲಾಕ್‌ಡೌನ್‌ ಅವಧಿಯಲ್ಲಿ ಲೈವ್‌ ಮೂಲಕ ನಾಟಕಗಳ ಓದು, ನಾಟಕಗಳ ವಿಡಿಯೊ ಪ್ರದರ್ಶನದಂತಹ ಕಾರ್ಯಕ್ರಮಗಳನ್ನು ಮಾಡಿದೆವು. ಇದೇ ಸಮಯದಲ್ಲಿ ಯೋಚಿಸುತ್ತಿದ್ದಾಗ, ‘ವಿಡಿಯೊ ಬುಕ್‘‌ ಆಲೋಚನೆ ಹೊಳೆಯಿತು’ ಎಂದರು.

‘ನಮ್ಮ ಸ್ನೇಹ ಬಳಗದಲ್ಲಿದ್ದವರೆಲ್ಲ ಕಲಾವಿದರು. ಅವರನ್ನೇಬಳಸಿಕೊಂಡು, ಪುಸ್ತಕಗಳನ್ನು ಓದಿಸಿ, ವಿಡಿಯೊ ಮಾಡಿ ಜನರ ಬಳಿ ತೆಗೆದುಕೊಂಡು ಹೋಗಲು ತೀರ್ಮಾನಿಸಿದೆವು. ಮೊದಲು ಒಂದು ಕೃತಿ ಆಯ್ಕೆ ಮಾಡಿಕೊಂಡು, ಎಲ್ಲರೂ ಅದರಲ್ಲಿರುವ ಒಂದೊಂದು ಕಥೆಯನ್ನು ಓದಿ, ವಿಡಿಯೊ ಮಾಡೋಣ. ನಂತರ ಅದನ್ನು ಎಡಿಟ್‌ ಮಾಡಿ ನಮ್ಮದೇ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡೋಣ ಎಂದು ನಿರ್ಧರಿಸಿದೆವು. ಆದರೆ, ‘ಯಾವ ಪುಸ್ತಕ ಆಯ್ಕೆ ಮಾಡಿಕೊಳ್ಳೋದು‘ ಎಂಬ ಪ್ರಶ್ನೆ ಎದುರಾಯಿತು. ಆಗ ನೆನಪಿಗೆ ಬಂದಿದ್ದೇ ಜೋಗಿಯವರ ‘ಲೈಫ್ ಈಸ್ ಬ್ಯೂಟಿಫುಲ್’ ಪುಸ್ತಕ. ಏಕೆಂದರೆ, ಆ ಕೃತಿಯನ್ನು ನನ್ನ ನಟನಾ ಕಾರ್ಯಾಗಾರಕ್ಕೆ ಬಳಸಿದ್ದೆ. ಹಾಗಾಗಿ ಆ ಪುಸ್ತಕದ ಕಂಟೆಂಟ್ ಗೊತ್ತಿತ್ತು. ಅದು ಈಗಿನ ಕಾಲಕ್ಕೆ ಹೊಂದುತ್ತದೆ ಎಂದು ಎನಿಸಿತು. ಈ ಬಗ್ಗೆ ಜೋಗಿಯವರನ್ನು ಕೇಳಿದಾಗ, ಅವರು ಪುಸ್ತಕ ಉಪಯೋಗಿಸಲು ಅನುಮತಿ ಕೊಟ್ಟಿದ್ದಲ್ಲದೆ, ಈ ಪರಿಕಲ್ಪನೆಗೆ ‘ಹೋಮ್ ಥಿಯೇಟರ್’ ಎಂದು ನಾಮಕರಣ ಕೂಡ ಮಾಡಿದರು’.

‘ನೋಡು ನೋಡುತ್ತಿದ್ದಂತೆ ಮೊದಲ ವಿಡಿಯೊ ಬುಕ್‌ ಮುಗಿದೇ ಹೋಯಿತು. ಅನೇಕ ಸ್ನೇಹಿತರು ‘ಇನ್ನೊಂದು ಪುಸ್ತಕ ಮಾಡು‘ ಎಂಬ ಸಲಹೆ ಕೊಟ್ಟರು. ಆಗ ಕಥೆಗಾರ ವಸುದೇಂಧ್ರ ಅವರು ಕೇಶವ ಮಳಗಿಯವರ ‘ಅಂಗದ ಧರೆ‘ ಕಿರು ಕಾದಂಬರಿ ಬಗ್ಗೆ ತಿಳಿಸಿದರು. ಈ ವಿಷಯವನ್ನು ಕೇಶವ ಮಳಗಿ ಅವರ ಎದುರು ಇಟ್ಟಾಗ, ತಕ್ಷಣ ಒಪ್ಪಿದರು‘ ಎಂದು ಎರಡನೆಯ ವಿಡಿಯೊ ಬುಕ್‌ ಹಿಂದಿನ ಯಶಸ್ಸಿನ ಕಥೆಯನ್ನೂ ತೆರೆದಿಟ್ಟರು ಸತೀಶ್‌ ಚಂದ್ರ.

ಮೊದಲ ವಿಡಿಯೊ ಬುಕ್‌ನಲ್ಲಿ ಸುನೇತ್ರ ಪಂಡಿತ್‌, ಪ್ರಮೋದ್‌ ಶೆಟ್ಟಿಯವರು ತಾವು ಓದಬೇಕಾದ ಅಧ್ಯಾಯವನ್ನು ಪೂರ್ಣ ಬಾಯಿ ಪಾಠ ಮಾಡಿಕೊಂಡು ಏಕಪಾತ್ರಾಭಿನಯದ ಮೂಲಕ ಓದಿದ್ದಾರೆ. ಇಂತಹ ಅನೇಕ ಸಂಗತಿಗಳು ವಿಡಿಯೊ ಬುಕ್‌ ಅನ್ನು ಮತ್ತಷ್ಟು ಆಕರ್ಷಣೀಯವಾಗಿಸಿವೆಯಂತೆ.

ಭವಿಷ್ಯದ ‘ವಿಡಿಯೊ ಬುಕ್‌‘ಗಳು

ಮೊದಲ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಮೊದಲ ಎರಡು ‘ವಿಡಿಯೊ ಬುಕ್‘‌ಗಳನ್ನು 7 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗ ಮೂರನೇ ಬುಕ್ ಓದಲು 172 ಜನ ಓದಲು ಸಿದ್ಧರಾಗಿದ್ದಾರೆ. ಇದರಿಂದ ಉತ್ತೇಜನಗೊಂಡಿರುವ ತಂಡ ಮುಂದೆಕುವೆಂಪು, ಪೂರ್ಣಚಂದ್ರ ತೇಜಸ್ವಿ, ಶಿವರಾಮ ಕಾರಂತ ಸೇರಿದಂತೆ ಪ್ರಸಿದ್ಧ ಲೇಖಕರ ಕೃತಿಗಳನ್ನು ವಿಡಿಯೊ ಬುಕ್‌ ಮಾಡುವ ಆಲೋಚನೆ ಈ ತಂಡಕ್ಕಿದೆ. ಕೃತಿಗಳ ಹಕ್ಕನ್ನು ಪಡೆದುಕೊಂಡು ಮುಂದುವರಿಯುವುದಾಗಿ ತಂಡ ಹೇಳಿದೆ. ಓದುಗರನ್ನು–ನೋಡುಗರನ್ನು ಹೆಚ್ಚು ಆಕರ್ಷಿಸುವ ದೃಷ್ಟಿಯಿಂದ ಪ್ರಕಾಸಂ ತಂಡ, ವಿಡಿಯೊ ಬುಕ್‌ ಕಾರ್ಯಕ್ರಮವನ್ನು ಟ್ರೇಲರ್‌, ಪೋಸ್ಟರ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಲು ಮುಂದಾಗಿದೆ.

ನೋಡುತ್ತಾ, ಕೇಳುತ್ತಾ ಓದಬಹುದು.

ಈ ವಿಡಿಯೊ ಬುಕ್‌ನಲ್ಲಿ ಪುಸ್ತಕ ಓದುತ್ತಿರುವಾಗ, ಎಡ ಭಾಗದಲ್ಲಿ ನಟ–ನಟಿಯರು ಓದುತ್ತಿರುವ ಪುಸ್ತಕದ ಪುಟವೂ ಕಾಣುತ್ತಿರುತ್ತದೆ. ಆಸಕ್ತರು ವಿಡಿಯೊ ನೋಡುತ್ತಾ, ಕೇಳಿಸಿಕೊಳ್ಳುತ್ತಾ ಪುಸ್ತಕವನ್ನು ಓದಲೂಬಹುದು. ಕನ್ನಡ ಓದಲು ಬಾರದವರು ವಿಡಿಯೊ ನೋಡುತ್ತಾ, ಕೇಳಿಸಿಕೊಳ್ಳಬಹುದು.

‘ಬರೀ ಆಡಿಯೊ ಅಷ್ಟೇ ಇದ್ದರೆ, ಓದುಗರಿಗೆ ಬೋರ್‌ ಎನಿಸುತ್ತದೆ. ವಿಡಿಯೊ ಬುಕ್‌ನಲ್ಲಿ ಆಡಿಯೊ– ವಿಡಿಯೊ ಎರಡೂ ಇದ್ದು, 5–10 ನಿಮಿಷಗಳಿಗೊಮ್ಮೆ ಕಲಾವಿದರೂ ಬದಲಾಗುವುದರಿಂದ, ಅವರವರ ಸ್ವರದಲ್ಲೇ ಕೃತಿಯನ್ನು ದಕ್ಕಿಸಿಕೊಳ್ಳಬಹುದು. ಭಾವನೆಗಳು ಬದಲಾಗಬಹುದು’ ಎನ್ನುತ್ತಾರೆ ಸತೀಶ್‌ಚಂದ್ರ.

ಹೋಮ್‌ ಥಿಯೇಟರ್‌– ವಿಡಿಯೊ ಬುಕ್‌ ವೀಕ್ಷಿಸಲು– http://www.prakasamtrust.org/ht/

ನೀವೂ ವಿಡಿಯೊ ಬುಕ್‌ನಲ್ಲಿ ಓದಬೇಕಾ ?

ಈ ವಿಡಿಯೊ ಬುಕ್‌ನಲ್ಲಿ ಪಾಲ್ಗೊಳ್ಳಲು ಇಷ್ಟಪಡುವವರು ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಪಿ.ಡಿ. ಸತೀಶ್‌ ಚಂದ್ರ ಅವರಿಗೆ ತಮ್ಮ ಆಸಕ್ತಿಯನ್ನು ತಿಳಿಸಬಹುದು. ಇಮೇಲ್‌ ಕೂಡ ಮಾಡಬಹುದು. ಸತೀಶ್‌ ಚಂದ್ರ ಅಥವಾ ತಂಡ ಯಾವ ಕೃತಿಯ, ಯಾವ ಪುಟವನ್ನು ವಿಡಿಯೊ ಮಾಡಿ ಕಳುಹಿಸಬೇಕೆಂದು ತಿಳಿಸುತ್ತದೆ. ಇಮೇಲ್‌ ವಿಳಾಸ– pdschandra@gmail.com

ದೇಣಿಗೆ ಸಂಗ್ರಹ

PD Sathish Chandra ಅವರಯೂಟ್ಯೂಬ್‌ ಚಾನೆಲ್‌ ಮೂಲಕ ವಿಡಿಯೊ ಬುಕ್‌ ಅನ್ನು ಉಚಿತವಾಗಿ ನೋಡಬಹುದು. ಆದರೆ ಈಗ ಲಾಕ್‌ಡೌನ್‌ ಕಾರಣದಿಂದ ರಂಗಭೂಮಿ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ. ವಿಡಿಯೊ ಬುಕ್‌ಗಾಗಿ ವಿಡಿಯೊ ಎಡಿಟ್‌, ಸಂಕಲನ, ಹಿನ್ನೆಲೆಯಲ್ಲಿ ನೂರಾರು ಜನ ಕೆಲಸ ಮಾಡುತ್ತಿದ್ದಾರೆ. ಅವರಿಗಾಗಿ ಸತೀಶ್‌ ಚಂದ್ರ ಅವರು ದೇಣಿಗೆ ಸಂಗ್ರಹ (ಕ್ರೌಡ್‌ ಫಂಡಿಂಗ್‌) ಆರಂಭಿಸಿದ್ದಾರೆ.ಯಾರಾದರೂ ಇಚ್ಚಿಸಿದ್ದಲ್ಲಿ ದೇಣಿಗೆ ನೀಡಬಹುದು. ಈಗಾಗಲೇ ₹36 ಸಾವಿರ ಸಂಗ್ರಹವಾಗಿದೆ ಎನ್ನುತ್ತಾರೆ ಸತೀಶ್‌ ಚಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT