ಸೋಮವಾರ, ಮೇ 10, 2021
21 °C

ಪ್ರೇಕ್ಷಕರ ಮನಗೆದ್ದ ‘ಮರ ಮಾತಾಡಿತು‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ನಮಗೆ ಕೊಡುವುದು ಗೊತ್ತು, ನಿಮಗೆ ಕಡಿಯುವುದು ಗೊತ್ತು. ನಮಗೆ ಜಾತಿಗಳೇ ಇಲ್ಲ, ಏನಿದ್ದರೂ ನಿಮ್ಮ ಕೊಡಲಿಯ ಭೀತಿ’ -ಹೀಗೆಂದು ಮರದ ಪಾತ್ರವನ್ನು ಮಾಡಿದ ಕಲಾವಿದೆ ಅಕ್ಷತಾ ಹೂಗಾರ ಹೇಳಿದಾಗ ಇಡೀ ಸಭಾಂಗಣ ಕರತಾಡನ ಮಾಡಿತು.

ಇಲ್ಲಿಯ ಗೆಳೆಯರ ಬಳಗದ ಪ್ರಾಥಮಿಕ ಶಾಲಾ ಆವರಣದಲ್ಲಿ ‘ವಿಶ್ವ ರಂಗಭೂಮಿ ದಿನಾಚರಣೆ’ ಪ್ರಯುಕ್ತ ‘ಮರ ಮಾತಾಡಿತು’ ಎಂಬ ನಾಟಕದ ಸಂಭಾಷಣೆಯ ತುಣುಕಿದು.

ಗೆಳೆಯರ ಬಳಗ, ಸ್ವರ ರಾಗ ಸಂಗಮ  (ಸ್ವರಾಗಂ) ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಆಶ್ರಯದಲ್ಲಿ ಸತೀಶ ಕುಲಕರ್ಣಿ ವಿರಚಿತ, ಶಿವನಗೌಡ ಹೊಟ್ಟಿಗೌಡ್ರ ಮತ್ತು ಶಂಕರ ತುಮ್ಮಣ್ಣನವರ ನಿರ್ದೇಶನದ ‘ಮರ ಮಾತಾಡಿತು ಎಂಬ ನಾಟಕ ಪ್ರೇಕ್ಷಕರ ಮನಗೆದ್ದಿತು. 

ಈ ನಾಟಕದ ಮುಖ್ಯ ಪಾತ್ರಧಾರಿಗಳು ಮರಗಳೇ ಆಗಿದ್ದರು. ಬೇರೆ ಬೇರೆ ಕಾಲಘಟ್ಟದಲ್ಲಿ ಮರಗಳು ಮಾತನಾಡುವ ವಸ್ತುವಿದು. ಶಾಲಾ ಮಕ್ಕಳಿಗೆ ಬಾಲ್ಯದಲ್ಲಿ ಹಣ್ಣುಗಳನ್ನು ತಿನ್ನಲು ಕೊಟ್ಟು, ಬೆಳೆದಂತೆ ಕೊಂಬೆಗಳನ್ನೇ ಕ್ರಿಕೆಟ್‌ ಬ್ಯಾಟುಗಳಾಗಿ ಕೊಟ್ಟು, ಮದುವೆಯಾದ ಯೌವ್ವನದಲ್ಲಿ ಮನೆಯಾಗಿಸಲು, ಎಲ್ಲವನ್ನು ಕೊಡುವ ಕೊನೆಯಲ್ಲಿ ಸೋತು ಸಾಯುವಾಗ ಅವೇ ಮಕ್ಕಳು ಜ್ಞಾನೋದಯವಾಗಿ ಮರಗಳನ್ನು ರಕ್ಷಿಸುವ ಸಂಕಲ್ಪ ತೊಡುವರು. ಮರದಂತೆ ಮನುಷ್ಯರು ಇರಬೇಕೆಂಬುದೇ ನಾಟಕದ ತಾತ್ಪರ್ಯ. 

ಮಕ್ಕಳ ಮುಗ್ಧ ಅಭಿನಯ, ಗುಂಪು ಚಲನೆ, ಮರದ ಪರಿಕಲ್ಪನೆಯ ವೇಷಭೂಷಣ, ಹಿನ್ನಲೆಯಲ್ಲಿ ಅರ್ಥಪೂರ್ಣ ಹಾಡುಗಳು  (ಶಂಕರ ತುಮ್ಮಣ್ಣನವರ ) ಇವೆಲ್ಲ ನೋಡುಗರ ಗಮನ ಸೆಳೆದವು. 

ಸ್ವರಾಸಂ ಕಲಾ ತಂಡದ ಬಾಲ ಕಲಾವಿದರಾದ ಸುಚಿತಾ ಕಬಾಡಿ, ದೀಕ್ಷಿತಾ ಬಣಕಾರ, ನಿಧಿಶ್ರೀ ಎಂ. ಹಾವೇರಿ, ಹರೀಶ ಜೆ ಸುರಳೇಶ್ವರ, ಧನವೀರ ಬೆಳಲದವರ, ಅಕ್ಷತಾ ವಾಗೀಶ ಹೂಗಾರ, ಚಾರ್ವಿ ಹುದ್ದಾರ, ಸಾಕ್ಷಿ ಸಿ.ಕೆ. ವಿನೂತಾ ಅಂಗಡಿ, ವಿನ್ಯಾಸ ವಿ. ಕುಂದ್ರಾ, ಸುಚಿತ್ ಸರಗಿ, ಮಣಿ ರೊಡ್ಡಗೂಳಪ್ಪನವರ ಹಾಗೂ ರವಿ ರೊಡ್ಡಗೂಳಪ್ಪನವರ ಅಭಿನಯಿಸಿದ್ದರು.

ಮಕ್ಕಳ ರಂಗಭೂಮಿಯನ್ನು ಬೆಳೆಸುತ್ತ ಮಕ್ಕಳಲ್ಲಿ ರಂಗ ಪ್ರಜ್ಞೆಯ ಜೊತೆಗೆ ಕಲಾಭಿರುಚಿಯನ್ನು ಉತ್ತೇಜಿಸುವುದೇ ಸ್ವರಾಸಂ ತಂಡದ ಉದ್ದೇಶ ಎಂದು ಹೇಳಿದ ರಾಘವೇಂದ್ರ ಕಬಾಡಿಯವರ ಮಾತು ಅಕ್ಷರಶಃ ಸತ್ಯವಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.