ಬುಧವಾರ, ಸೆಪ್ಟೆಂಬರ್ 29, 2021
21 °C

ಪ್ರಚಲಿತಕ್ಕೆ ಸ್ಪಂದಿಸುವ‘ಯುವರ್ಸ್‌ ಟ್ರೂಲಿ ಥಿಯೇಟರ್‌’

ಹೇಮಾ ವೆಂಕಟ್‌ Updated:

ಅಕ್ಷರ ಗಾತ್ರ : | |

ರಂಗಭೂಮಿಯಲ್ಲಿ ನಿರಂತರವಾಗಿ ಪ್ರಯೋಗಗಳು ನಡೆಯುತ್ತಲೇ ಇವೆ. ಬೆಂಗಳೂರಿನ ಒಂದೊಂದು ಮೂಲೆಯಲ್ಲಿ ರಂಗಮಂದಿರಗಳಿವೆ. ದಕ್ಷಿಣ ಭಾಗದಲ್ಲಿರುವ ರಂಗಮಂದಿರಕ್ಕೆ ಹೋಗುವುದು ಉತ್ತರ ಭಾಗದಲ್ಲಿ ನೆಲೆಸಿರುವವರಿಗೆ ಕಷ್ಟ. ಉತ್ತರಕ್ಕೆ ಹೋಗುವುದು ದಕ್ಷಿಣದವರಿಗೆ ಕಷ್ಟ. ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಇದ್ದರೆ ಕೆಲವರಿಗೆ ಅನುಕೂಲ. ರಂಗಶಂಕರದಲ್ಲಾದರೆ ಆ ಭಾಗದವರಿಗೆ ಅನುಕೂಲ. ವಾಹನದಟ್ಟಣೆಯ ಸಮಸ್ಯೆಯಿಂದಾಗಿ ಐದಾರು ಕಿಲೋಮೀಟರ್‌ ದೂರಕ್ಕೂ ಹೋಗಲೂ ಪರದಾಡಬೇಕಾಗಿದೆ. ಹೀಗಾಗಿ ನಾಟಕ ನೋಡಬೇಕು ಎಂಬ ಮನಸ್ಸಿದ್ದರೂ, ಸುಮ್ಮನಾಗುವವರೇ ಹೆಚ್ಚು.

ಅದರಲ್ಲೂ ಐಟಿ ಸಂಸ್ಥೆಗಳಲ್ಲಿ ದುಡಿಯುವವರ ವಾರಾಂತ್ಯಗಳು ಭಿನ್ನವಾಗಿರುತ್ತವೆ. ನಾಟಕ, ಸಂಗೀತ ಆಸ್ವಾದಿಸುವುದರಿಂದ ಕೆಲಸದ ಒತ್ತಡಕ್ಕೆ ಪರಿಹಾರ ಸಿಗುತ್ತದೆ. ಆದರೆ, ಇದನ್ನು ಅವರಿಗೆ ಮನಗಾಣಿಸುವುದು ಹೇಗೆ? ಹೀಗೆ ಯೋಚಿಸಿದ ‘ಯುವರ್ಸ್‌ ಟ್ರೂಲಿ ಥಿಯೇಟರ್’ ನಾಟಕ ತಂಡ, ಐಟಿ ಕಂಪೆನಿಗಳು, ಸಾರ್ವಜನಿಕ ಸ್ಥಳಗಳಲ್ಲಿ ನಾಟಕ ಪ್ರದರ್ಶನ ನೀಡುತ್ತಿದೆ. ನಾಟಕ ಕಾರ್ಯಾಗಾರ, ಒತ್ತಡ ನಿರ್ವಹಣೆ, ನಾಯಕತ್ವ ಗುಣಗಳನ್ನು ರೂಢಿಸಿಕೊಳ್ಳುವ ಬಗ್ಗೆಯೂ ತರಬೇತಿ ನೀಡುತ್ತಿದೆ. 

ಯುವರ್ಸ್‌ ಟ್ರೂಲಿ ತಂಡಕ್ಕೀಗ 15ರ ಹರೆಯ. 2003ರಲ್ಲಿ ಕಲಾವಿದೆ ನಂದಿನಿ ರಾವ್‌ ಈ ತಂಡವನ್ನು ಕಟ್ಟಿದ್ದಾರೆ. ಈಗ ಈ ತಂಡದಲ್ಲಿ ಹಲವು ಯುವ ಕಲಾವಿದರಿದ್ದಾರೆ. ಕೆಲವರು ವೃತ್ತಿನಿರತರು. ಮಿಕ್ಕವರು ಇದನ್ನೇ ಪೂರ್ಣ ಪ್ರಮಾಣದಲ್ಲಿ ವೃತ್ತಿ ಮಾಡಿಕೊಂಡವರು. ಇಷ್ಟು ವರ್ಷಗಳಲ್ಲಿ ತಂಡ ಹಲವಾರು ಪ್ರಯೋಗಗಳನ್ನು ಮಾಡಿದೆ. ಬೇರೆ ನಾಟಕಗಳಿಗಿಂತ ಇವರದ್ದು ಭಿನ್ನ. ಸಮಕಾಲೀನ ಸಮಸ್ಯೆಗಳ ಎಳೆಯನ್ನು ಇಟ್ಟುಕೊಂಡು ಚಿಕ್ಕ ಚಿಕ್ಕ ನಾಟಕಗಳನ್ನು ಸ್ಥಳದಲ್ಲಿಯೇ ಪ್ರದರ್ಶಿಸುತ್ತಾರೆ. ಒತ್ತಡ ನಿವಾರಣೆಗೆ ಮೊದಲ ಆದ್ಯತೆ. ಹಾಗಾಗಿ ಇವರ ಪ್ರದರ್ಶನಗಳು ಸಂವಾದದೊಂದಿಗೆ ನಡೆಯುತ್ತದೆ. 

ಸಂವಾದವೇ ಆಧಾರ

ಇವರ ವಿಶೇಷವೆಂದರೆ ಜನರೊಂದಿಗೆ ಸಂವಾದ ಮಾಡುತ್ತ, ಅಲ್ಲೇ ಅಭಿನಯಿಸುವುದು. ಇದೊಂದು ವಿಶೇಷ ಪ್ರತಿಭೆ. ಸಭಾಂಗಣ, ಕಚೇರಿ, ಸಾರ್ವಜನಿಕ ಸ್ಥಳ ಹೀಗೆ ಯಾವುದೇ ಇರಲಿ, ಅಲ್ಲಿರುವ ಜನರ ಜೊತೆ ಪ್ರಚಲಿತ ವಿದ್ಯಮಾನದ ಬಗ್ಗೆ ಇರುವ ಅಭಿಪ್ರಾಯ ಕೇಳುತ್ತಾರೆ. ಉದಾಹರಣೆಗೆ ಸುದ್ದಿ ಮಾಧ್ಯಮಗಳ ಬಗ್ಗೆ ಅಭಿಪ್ರಾಯ ಕೇಳಲಾಗುತ್ತದೆ. ಅವರ ಅಭಿಪ್ರಾಯವನ್ನೇ ನಟನೆಯ ಮೂಲಕ ಪ್ರಸ್ತುತಪಡಿಸಲಾಗುತ್ತದೆ. ಯುವತಿಯೊಬ್ಬಳು ತನ್ನ ಹದಿಹರೆಯದಲ್ಲಿ ಖಿನ್ನತೆಗೆ ಒಳಗಾದ ಘಟನೆಯೊಂದನ್ನು ವಿವರಿಸುತ್ತಾರೆ. ಅದಕ್ಕೆ ಮನೆಯವರ, ಗೆಳೆಯರ ಸ್ಪಂದನೆ ಹೇಗಿತ್ತು, ನಂತರ ಏನಾಯ್ತು, ಅದರಿಂದ ಹೊರಬಂದ ಬಗೆ ಹೇಗೆ ಎಂಬ ವಿವರ ಕೇಳಿದ ನಂತರ ತಂಡದ ಸದಸ್ಯರು ಸ್ಥಳದಲ್ಲಿಯೇ ಆ ಘಟನೆಯ ಸಂದರ್ಭವನ್ನು ನಟನೆಯ ಮೂಲಕ ಕಟ್ಟಿಕೊಡುತ್ತಾರೆ. ಇಂತಹ ಸುಮಾರು 500 ಸಂವಾದಾತ್ಮಕ ಪ್ರದರ್ಶನವನ್ನು ತಂಡ ನೀಡಿದೆ. ವಿದೇಶದಲ್ಲಿಯೂ ಪ್ರದರ್ಶನ ನೀಡಿದ್ದಾರೆ.  

ತಂಡಕ್ಕೆ 15 ವರ್ಷದ ತುಂಬಿದ ಸಂಭ್ರಮದಲ್ಲಿ ಡಿಸೆಂಬರ್‌ 16ರಂದು ಇಡೀ ದಿನ ಸಂವಾದ, ನಾಟಕ ಪ್ರದರ್ಶನ ಮುಂತಾದ ವಿವಿಧ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಬೆಳಿಗ್ಗೆ 11ರಿಂದ 1ಗಂಟೆಯವರೆಗೆ ಮಕ್ಕಳ ನಾಟಕಗಳ ಕುರಿತು ಚರ್ಚೆ, ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಕಾರ್ಪೊರೇಟ್‌ ಸಂಸ್ಥೆಗಳಲ್ಲಿ ರಂಗಭೂಮಿಯನ್ನು ತೊಡಗಿಸಿಕೊಳ್ಳುವ ಕುರಿತು ಚರ್ಚೆ, ಸಂಜೆ 5ರಿಂದ 6.30ರವರೆಗೆ ರಂಗಭೂಮಿ ಆಟಗಳು, ಕಿರು ನಾಟಕಗಳ ಪ್ರದರ್ಶನವಿದೆ. 

ಕಾರ್ಪೊರೇಟ್‌ ಜಗತ್ತಿಗೆ ರಂಗಭೂಮಿ

‘ಪ್ರಭಾತ್ ಕಲಾವಿದರು' ಖ್ಯಾತಿಯ ಟಿ. ವಿ. ಗೋಪೀನಾಥ ದಾಸರು, ಕರ್ನಾಟಕದ ಹರಿಕಥಾ ವಿದ್ವಾಂಸರಾಗಿ, ಸಂಗೀತ ವಿದ್ವಾಂಸರಾಗಿ, ರಂಗಭೂಮಿಯಲ್ಲಿ, ವಿನೂತನ ಪ್ರಯೋಗಗಳಿಗಾಗಿ ಪ್ರಸಿದ್ಧರಾದವರು. ಇವರ ಮೊಮ್ಮಗಳು ನಂದಿನಿ ರಾವ್‌. ಪ್ರಭಾತ್‌ ಕಲಾವಿದರು ತಂಡವನ್ನು ಮುನ್ನಡೆಸುತ್ತಿರುವ ನಟಿ, ನೃತ್ಯಗಾತಿ ಹೇಮಾ ಮಂಚಮುಖಿ ಅವರ ಸಹೋದರಿ. ಯುವರ್ಸ್‌ ಟ್ರೂಲಿ ಥಿಯೇಟರ್‌ ಮೂಲಕ ನಾಟಕ ಕಾರ್ಯಾಗಾರ, ನಾಟಕ ಥೆರಪಿ, ಕಿರು ನಾಟಕಗಳನ್ನು ಮಾಡುತ್ತಾ ಕಾರ್ಪೊರೇಟ್‌  ಅಂಗಳಕ್ಕೆ ನಾಟಕಗಳನ್ನು ತಲುಪಿಸಿದವರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು