ರಂಗದಲ್ಲಿನ ವಿಭಿನ್ನ ಪ್ರಯೋಗಗಳಿಗೆ ಮತ್ತೊಂದು ಹೆಸರು ಎಂಬಂತಿದೆ ‘ಅಭಿನಯ ತರಂಗ’. ಇಲ್ಲಿನ ವಿದ್ಯಾರ್ಥಿಯಾಗಿದ್ದು ಈಗ ನಿರ್ದೇಶನದತ್ತ ಹೊರಳಿರುವ ವೈಷ್ಣವಿ ವಿ.ಎ. ಅವರು ಇದೀಗ ವಿಶಿಷ್ಠ ಪ್ರಯೋಗವೊಂದಕ್ಕೆ ಕೈಹಾಕಿದ್ದಾರೆ. ಕಲಾವಿದ ಎ.ಎಂ. ಪ್ರಕಾಶ್ ಅವರ ರೇಖಾಚಿತ್ರಗಳನ್ನು ‘ಒಳ ಹೊರಗೆ’ ರಂಗ ಪ್ರದರ್ಶನವಾಗಿ ಮಾರ್ಪಡಿಸಿದ್ದಾರೆ.

ಕ್ಯಾನ್ವಾಸ್ ಮೇಲೆ ಎಳೆದ ರೇಖೆಗಳು ರಂಗದ ಮೇಲೆ ಪಾತ್ರಗಳಾಗಿ ಎದ್ದು ಬರಬಹುದೇ? ಕಂಬಳಿಹುಳು ಚಿಟ್ಟೆಯಾಗಿ ರೂಪಾಂತರಗೊಳ್ಳುವ ಹಾಗೆ? ಇಂತಹ ಒಂದು ವಿಭಿನ್ನ ಪ್ರಯೋಗಕ್ಕೆ ಮುಂದಾದದ್ದು ‘ಅಭಿನಯ ತರಂಗ’. ಅ. ನ. ಸುಬ್ಬರಾಯರು ಕಲೆಗೆ ಹೊಸ ಆಯಾಮ ನೀಡಲು ‘ಕಲಾಮಂದಿರ’ ಹುಟ್ಟು ಹಾಕಿದರು. ಅವರ ಮಗ ಎ.ಎಸ್. ಮೂರ್ತಿಯವರು ಅದರೊಂದಿಗೆ ರಂಗಭೂಮಿಗೂ ಜಾಗ ನೀಡಲು ‘ಅಭಿನಯ ತರಂಗ’ ಹುಟ್ಟು ಹಾಕಿದರು. ಈ ಎರಡೂ ಸಂಸ್ಥೆಗಳು ಕಲೆ, ರಂಗಭೂಮಿಯ ಜೊತೆಗೆ ಕವಿತೆ, ಫೋಟೋಗ್ರಫಿ, ಹಾಡು ಹೀಗೆ ಹಲವು ಸೃಜನಶೀಲ ಕ್ಷೇತ್ರದಲ್ಲಿನ ಪ್ರಯೋಗದ ತಾಣವಾಗಿ ಬದಲಾಯಿತು. ಇಂತಹ ಪ್ರಯೋಗಗಳ ಸಾಲಿಗೆ ಹೊಸ ಸೇರ್ಪಡೆ- ‘ಒಳ ಹೊರಗೆ’ ರಂಗ ಪ್ರದರ್ಶನ.

ಅಭಿನಯ ತರಂಗದ ವಿದ್ಯಾರ್ಥಿಯಾಗಿದ್ದು ಈಗ ನಿರ್ದೇಶನದತ್ತ ಹೊರಳಿರುವ ವೈಷ್ಣವಿ ವಿ.ಎ. ಅವರು ಕಲಾವಿದ ಎ.ಎಂ. ಪ್ರಕಾಶ್ ಅವರ ರೇಖಾಚಿತ್ರಗಳನ್ನು ಬೆಂಗಳೂರಿನಲ್ಲಿ ‘ಒಳ ಹೊರಗೆ’ ರಂಗ ಪ್ರದರ್ಶನವಾಗಿ ಮಾರ್ಪಡಿಸಿದ್ದರು.

‘ಅಮ್ಮನ ಸಾವು ನನ್ನೊಳಗೆ ರೇಖೆಗಳು ಮೂಡಲು, ಆಡಲು ಕಾರಣವಾಯಿತು’ ಎನ್ನುತ್ತಾರೆ ಕಲಾವಿದ ಎ.ಎಂ. ಪ್ರಕಾಶ್. ಇವರು ಕಲಾ ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ಅವರ ತಾಯಿ ಐಸಿಯುಗೆ ದಾಖಲಾಗಿ ಸಾವು ಬದುಕಿನ ನಡುವೆ ಹೊಯ್ದಾಡುತ್ತಿದ್ದರು. ‘ಎದುರಿಗಿದ್ದ ಮಾನಿಟರ್ನಲ್ಲಿ ಏರಿಳಿಯುತ್ತಿದ್ದ ರೇಖೆಗಳು ನಂತರ ಅಡ್ಡಗೆರೆಯಾಗಿ ಬದಲಾಯಿತು. ಅಲ್ಲಿಂದ ನನ್ನ ಗೆರೆಗಳ ದಿಕ್ಕೇ ಬದಲಾಯಿತು’ ಎನ್ನುತ್ತಾರೆ. ಬಹುಶಃ ತಲ್ಲಣ ಹಾಗೂ ರೇಖೆ ಜೊತೆ ಜೊತೆಯಾಗಿಯೇ ಇವರೊಳಗೆ ಹೆಜ್ಜೆ ಹಾಕಿತ್ತೇನೋ.

ಕೋವಿಡ್ ಇಡೀ ಜಗತ್ತನ್ನು ನುಂಗಿ ನೊಣೆಯಲು ಹೊರಟಾಗ ಕಲಾವಿದ ಪ್ರಕಾಶ್ ಕಂಡದ್ದು ಮತ್ತೆ ಈ ರೇಖೆಗಳ ಆಟವನ್ನೇ. ಏರಿಳಿಯುವ ರೇಖೆಗಳು ಅಡ್ಡಗೆರೆಯಾಗಿ ಬಿಡುವ ಆತಂಕವನ್ನು. ಇದರ ಹಿಂದೆ ಇರುವ ರೋದನ, ಹಾಹಾಕಾರ, ಕಣ್ಣೀರು ಅವರನ್ನು ಇನ್ನಿಲ್ಲದಂತೆ ಕಾಡಿತ್ತು. ಕಪ್ಪು ಬಿಳಿ ರೇಖೆಗಳಲ್ಲಿ ಆತಂಕವನ್ನೂ ಹಾಗೂ ಸಂಭ್ರಮವನ್ನೂ ದಾಖಲಿಸುತ್ತಾ ಹೋದರು. ಸಾವಿನ ಆತಂಕ, ಅದರ ನಡುವೆಯೇ ಅರಳುವ ಪ್ರಕೃತಿಯ ಸಂಭ್ರಮ ಎರಡೂ ಅವರ ಚಿತ್ರಗಳ ಉಸಿರು.

ಪ್ರಕಾಶ್ ತಮ್ಮ ರೇಖಾಚಿತ್ರ ಪ್ರದರ್ಶನವನ್ನು ‘ನನ್ನೊಳಗಿನ ಮಾತುಕತೆ’ ಎಂದೇ ಕರೆದುಕೊಂಡಿದ್ದರು. ಆ ಕಲೆಗೆ ಹೊರ ಮಾತು ಜೋಡಿಸಿದ್ದಕ್ಕಾಗಿ ಇರಬೇಕು ನಿರ್ದೇಶಕಿ ವೈಷ್ಣವಿ ಇದನ್ನು ‘ಒಳ ಹೊರಗೆ’ ಎಂದು ಕರೆದಿದ್ದಾರೆ. ಈ ರಂಗಕೃತಿಯನ್ನು ಅಭಿನಯಿಸಿದ ಕಲಾವಿದರು ಪ್ರಕಾಶ್ ಅವರ ಅಷ್ಟೂ ಕಲಾಕೃತಿಗಳ ಪೈಕಿ ತಮ್ಮನ್ನು ಇನ್ನಿಲ್ಲದಂತೆ ಕಾಡಿದ ಒಂದು ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಆ ಒಂದು ಕಲಾಕೃತಿ ಇವರೊಳಗೆ ಚಿಮ್ಮಿಸಿದ ಭಾವಗಳನ್ನು ಅಭಿನಯದ ಮೂಲಕ ಹೊರಗೆಡಹಿದ್ದರು. ಹಾಗೆ ಎಲ್ಲಾ ನಟರ ಅಭಿವ್ಯಕ್ತಿ ಯನ್ನು ಹುರಿಗೊಳಿಸಿ ಅದಕ್ಕೆ ಮತ್ತೊಂದು ಆಯಾಮವನ್ನು ಸೇರಿಸಿ ರಂಗ ಕೃತಿಯಾಗಿಸಲಾಗಿದೆ.
ಕ್ಯಾನ್ವಾಸ್ನೊಳಗಿಂದ ಚಿಮ್ಮಿದ ಒಂದು ಚಿಟ್ಟೆ ರಂಗದ ಮೇಲೆ ಹಾರಾಡಿದ ಹಾಗೆ.

ಕಲಾಕೃತಿಯೊಳಗೆ ಬಿಳಿಯ ಹಾಳೆಯ ಮೇಲೆ ಕಪ್ಪು ರೇಖೆಗಳಿಂದ ಮೂಡಿದ ಚಿತ್ರಗಳಿವೆ. ಅಂತೆಯೇ ಕಪ್ಪು ಹಾಳೆಯ ಮೇಲೆ ಬಿಳಿಯ ರೇಖೆಗಳೂ ಇವೆ. ಒಟ್ಟು ಐದು ಕಲಾಕೃತಿಗಳ ಮೂಲಕ ನಾಲ್ಕು ಕಲಾವಿದರು ಕಟ್ಟಿದ ಕಥನ ಇದು. ಹರ್ಷವರ್ಧನ, ಪ್ರಮೋದ್, ಅಮೃತ ಬಿರಾದಾರ್, ಗೌತಮ್ ಎಚ್. ಜಿ. ಇವರು ಆಯ್ಕೆ ಮಾಡಿದ ಕೃತಿಗಳಿಗೆ ನೀಡಿದ ದೈಹಿಕ ಅಭಿವ್ಯಕ್ತಿ ಕಾಡುವಂತಿತ್ತು. ಕೋವಿಡ್ ಕಾಲದ ತಳಮಳ, ರೋದನ, ಅಸಹಾಯಕತೆ ಎಲ್ಲವನ್ನೂ ಮಾತು ಇಲ್ಲದೆ ಕೇವಲ ದೈಹಿಕ ಚಲನೆಗಳ ಮೂಲಕ ಕಟ್ಟಿಕೊಟ್ಟರು. ಕೋವಿಡ್ ಕಾಲ ಸರಿದು ಲಾಕ್ ಡೌನ್ ಮುಗಿಯುತ್ತಿ ದ್ದಂತೆ ಮತ್ತೆ ಬದುಕು ಕಟ್ಟಿಕೊಳ್ಳುತ್ತಾ ಹೋದದ್ದನ್ನೂ ಬಿಂಬಿಸಿದರು. ಈ ಎರಡರ ನಡುವಣ ವ್ಯತ್ಯಾಸವನ್ನು ವೈಷ್ಣವಿ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ. ಇದನ್ನು ಸಂಗೀತದಲ್ಲಿ ಸುನೀಲ್ ಸಮರ್ಥವಾಗಿ ತಂದಿದ್ದಾರೆ. ಈ ನಾಟಕದ ಕೊನೆಗೆ ಅದುವರೆಗೂ ಬೆನ್ನು ತಿರುಗಿಸಿ ನಿಂತಿದ್ದ ಕಲಾಕೃತಿ ಹಸಿರು ಚಿಮ್ಮಿಸುವ ಚಿತ್ರವನ್ನು ಕಾಣಿಸಿದಾಗ ಒಂದು ನಿಟ್ಟುಸಿರು ಹೊರಚೆಲ್ಲುವಂತಾ
ಗುತ್ತದೆ. ಇದೇ ನಾಟಕದ ಗೆಲುವು ಕೂಡಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.