ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕ ಹೃದಯದ ಕವಿ 'ಕಂದಗಲ್ಲ ಹಣಮಂತರಾಯ'

Last Updated 9 ಜನವರಿ 2022, 5:51 IST
ಅಕ್ಷರ ಗಾತ್ರ

ವೃತ್ತಿರಂಗಭೂಮಿಯ ಪೂರ್ವಸೂರಿ ನಾಟಕಕಾರರೆಂದರೆ ಕವಿಗಳೇ.

ಬಾ ಶುಭ ಪ್ರತಿಮಾ ಶಾಮಾ
ಬೆಳಗಲಿ ಭಾರತ

ಎಂಬುದು ಕುರುಕ್ಷೇತ್ರ ನಾಟಕದ ಕಂದಪದ್ಯ. ಇದನ್ನು ರಚಿಸಿದ ಕವಿ, ಕನ್ನಡ ರಂಗಭೂಮಿಯ ಶೇಕ್ಸ್‌ಪಿಯರ್ ಎಂದೇ ಖ್ಯಾತರಾದ ಕಂದಗಲ್ಲ ಹಣಮಂತರಾಯರು. ಕೃಶಕಾಯದ ರಾಯರ ತೋರು ಚಹರೆಯೇ ಸೀದಾ ಮತ್ತು ಸಾದಾ. ಗಾಂಧೀ ಚಾಳೀಸು, ನಾಸೀ ಬಣ್ಣದ ಕೋಟು, ರಟ್ಟಿನ ಕರಿಟೊಪ್ಪಿಗೆ, ಕೋಟಿನ ಕಿಸೆಯಲ್ಲೊಂದು ಕಡ್ಡಿಬೀಡಿ ಕಟ್ಟು. ಇದು ಹೊರಗಣ್ಣಿಗೆ ಕಾಣುವ ಕಂದಗಲ್ಲ ರಾಯರು. ಆದರೆ ರಾಯರ ಅಂತರಂಗದ ಕಟ್ಟುಮಸ್ತಾದ ರಂಗತಾಕತ್ತು ಅಮೋಘ. ತಮ್ಮ ರಂಗಕೃತಿಗಳ ಮೂಲಕ ಕನ್ನಡ ರಂಗಭೂಮಿಯ ಭೂಮತ್ವ ಬಲಾಢ್ಯಗೊಳಿಸಿದವರು ರಾಯರು. ಅವರು ಕಾಲವಾಗಿ (ಜನನ: 11.01.1896, ಮರಣ: 13.09.1966)ಅರ್ಧ ಶತಮಾನಕ್ಕೂ ಹೆಚ್ಚು ಕಾಲವಾಯಿತು.

ರಾಮಾಯಣ ಮಹಾಭಾರತಗಳು ಈ ನೆಲದಲ್ಲಿ ಇರುವವರೆಗೂ ರಾಯರು ಜನಸಾಮಾನ್ಯರ ಹೃದಯದಲ್ಲಿ ನೆಲೆಸಿರುತ್ತಾರೆ. ಪುರಾಣದ ಕಥನಗಳಿಗೆ ರಂಗಕಾವ್ಯದ ಮೆರಗು ತುಂಬಿದವರು ಅವರು. ಹೌದು ಅವರ ನಾಟಕಗಳಿಗೆ ಪದ್ಯಗಂಧೀ ಪರಿಮಳದ ಘಮಲು. ಧ್ಯಾನಸ್ಥತೆ ಮತ್ತು ಧನ್ಯತೆಗಳೆರಡೂ ಅವರ ಪೌರಾಣಿಕ ನಾಟಕಗಳ ಧಾತುಪ್ರಜ್ಞೆ.

ಅಂತೆಯೇ ಕುವೆಂಪು ಅವರು ಕಂದಗಲ್ಲ ರಾಯರನ್ನು ಕುರಿತು ಹೀಗೆ ಹೇಳುತ್ತಾರೆ: ‘ರಗಳೆಗಳನ್ನು ಸರಳೀಕರಿಸಿ ರಂಗಭಾಷೆಯ ಬೆಸುಗೆ ಹಾಕುವ ಯಶಸ್ವಿ ರಂಗಸಾಹಿತ್ಯದ ರಸಋಷಿ ಕಂದಗಲ್ ಹನುಮಂತರಾಯರು’. ಇನ್ನು ಬೇಂದ್ರೆಯವರು ಹೀಂಗ ಹೇಳ್ತಾರ: ‘ಔನ್ನತ್ಯದ ರಂಗನಾಟಕಗಳ ಅರಿವು, ಹರಿವು, ಇರುವನ್ನು ಸಾಹಿತ್ಯದ ವಿದ್ವಾಂಸರಂತೆ ಮುಗ್ಧನೊಬ್ಬನಲ್ಲಿ ಖುಷಿ ಉಕ್ಕಿಸುವ ಕವಿ ನಮ್ಮ ಕಂದಗಲ್ಲ ಹಣಮಂತ್ರಾಯ’.

ನಲವಡಿ ಶ್ರೀಕಂಠ ಶಾಸ್ತ್ರಿಗಳು ರಾಯರನ್ನು ಬೆಳ್ಳಿಚುಕ್ಕಿ ಎಂದು ಕರೆದಿದ್ದಾರೆ. ಹಾಗೆ ಕರೆಯಲು ಮಹತ್ವದ ಸಾಹಿತ್ಯಕ ಕಾರಣವಿತ್ತು. ರಾಯರು ‘ಬೆಳ್ಳಿಚುಕ್ಕಿ’ ಎಂಬ ನಾಟಕ ಬರೆದು ಮುಗಿಸಿ ಮಹಾಂತೇಶ ಶಾಸ್ತ್ರಿ ಮತ್ತು ನಲವಡಿಯವರಿಗೆ ಅದನ್ನು ಓದಿ ಹೇಳುವ ಕಾರ್ಯಕ್ರಮ. ಹಾಗೆ ಓದಿಹೇಳಿ ಸಂವಾದಿಸುವುದು ಆ ಕಾಲದ ರಂಗಸಂಸ್ಕೃತಿಯೇ ಆಗಿತ್ತು.

ಇಂತಹ ಸಹೃದಯ ಓದು ಆಲಿಕೆಯ ರಂಗಾನುಸಂಧಾನದ ಸಂತಸ, ಸಡಗರದಲ್ಲಿ ಪಾಲ್ಗೊಂಡ ನಲವಡಿ ಅವರಿಂದ ತಮ್ಮ ರಂಗಕೃತಿಗೆ ಶುಭ ಹಾರೈಕೆಯ ಹಾಡು ಬರೆಸುವ ಸದಪೇಕ್ಷೆ ರಾಯರದು. ನಲವಡಿಯವರು ದುಸರಾ ಮಾತಾಡದೇ ಶ್ರೀಕಾರ ಹಾಕಿ ಹಾಡು ಬರೆದೇಬಿಟ್ಟರು.

ಮೂಡಿಬಾರ ಬೆಳ್ಳಿಚುಕ್ಕಿ
ಹಾಡತೈತಿ ಬೆಳಗಿನ ಹಕ್ಕಿ...

ಪುಣೆಯ ಸೇನಾಪಡೆಯಲ್ಲಿದ್ದ ಕಾರಕೂನ ನೌಕರಿ ಬಿಟ್ಟುಬಂದ ಹಣಮಂತರಾಯರು ಮಿಲ್ಟ್ರಿಯ ಶಿಸ್ತನ್ನು ಅಲ್ಲೇ ಬಿಟ್ಟು ಬರಲಿಲ್ಲ. ತಾವು ಬರೆಯುವ ನಾಟಕಗಳಿಗೆ ಅದನ್ನು ಹಾಳತವಾಗಿ ಬಳಸಿಕೊಂಡರು. ರಾಮಾಯಣ ಮಹಾಭಾರತ ಕಾವ್ಯಗಳನ್ನು ಕಲಾತ್ಮಕವಾಗಿ ಲೋಕಮಾನಸಕ್ಕೆ ಮುಟ್ಟಿಸುವ ಅವರಷ್ಟು ಸಮರ್ಥ ಇನ್ನೊಬ್ಬರು ಸಾರಸ್ವತ ಜಗದಲಿ ಸಿಗಲಾರರು.

ಸಾಮಾನ್ಯ ಕಲಾವಿದನು ಬಾಯಿಪಾಠ ಮಾಡಿದ ರಾಯರ ನಾಟಕಗಳ ಸಂಭಾಷಣೆಗಳನ್ನು ರಂಗಮಂಟಪದಲ್ಲಿ ಧ್ವನಿಪೂರ್ಣವಾಗಿ ಹೇಳಿದರೆ ಸಾಕು. ಅವಕ್ಕೆ ಚಪ್ಪಾಳೆಗಳ ಸುರಿಮಳೆ. ಯಾಕೆಂದರೆ ಅವು ಬರೀ ಮಾತುಗಳಲ್ಲ, ವಜ್ರದ ನುಡಿಗಡಲು. ತಲಸ್ಪರ್ಶಿ ಡೈಲಾಗುಗಳು ವರ್ತಮಾನದ ಸಮಾಜಮುಖಿ ರಂಗಸಂಸ್ಕೃತಿಯ ಬೆರಗು ಮತ್ತು ಬೆಡಗಿನ ರೂಪಕ ಸಂಕೇತಗಳಾಗಿವೆ.

ಶ್ರೀ ಅರವಿಂದ ಸಂಗೀತ ನಾಟ್ಯ ಮಂಡಳಿ (1940) ಎಂಬ ನಾಟಕ ಕಂಪನಿಯೊಂದನ್ನು ಕಟ್ಟಿದ ರಾಯರು ಅದಕ್ಕೆ ಪೂರ್ವದಲ್ಲಿ (1937) ಲಲಿತ ನಾಟ್ಯ ಸಂಗೀತ ಮಂಡಳಿ ಕಟ್ಟಿ ಮೈ, ಕೈಗಳನ್ನೆಲ್ಲ ಸುಟ್ಟುಕೊಂಡರು. ಅದಕ್ಕಾಗಿ ಸಾಲ ಮಾಡಿದರು. ಮಾಡಿದ ಸಾಲ ತೀರಿಸಲು ಮತ್ತೆ ಸಾಲ ಮಾಡಿದರು. ಸಾಲ ಕೊಟ್ಟ ಧನಾಢ್ಯರು ಸುಮ್ಮನಾಗಲಿಲ್ಲ. ಇವರನ್ನು ಕೋರ್ಟು ಕಟಕಟೆ ಹತ್ತಿಸಿದರು. ಕಡೆಗೆ ಸಾಲ ತೀರಿಸಲಾಗದೇ ರಾಯರು ಜೈಲು ವನವಾಸ ಅನುಭವಿಸಬೇಕಾಯ್ತು.

ಹಾಗೆ ಸೆರೆಮನೆವಾಸದಲ್ಲಿದ್ದಾಗಲೇ ಹುಟ್ಟಿಕೊಂಡ ನಾಟಕವೇ ‘ಬಡತನದ ಭೂತ’ ಎಂಬ ಅನನ್ಯ ರಂಗಕೃತಿ. ಸ್ವತಃ ತಾವೇ ಅನುಭವಿಸಿದ ಕ್ರೂರ ಬಡತನದ ಬುತ್ತಿ ಅದಾಗಿತ್ತು. ಅವರಿಗೆ ಉಂಡುಡಲು ಯಥೇಚ್ಛವಾಗಿದ್ದುದೇ ಬಡತನ. ರಾಯರ 'ಬಡತನದ ಭೂತ' ನಾಟಕ ಪ್ರದರ್ಶನಗಳಿಂದ ಕೆಲವರು ಶ್ರೀಮಂತರಾದರು. ಆದರೆ ಕಂದಗಲ್ಲರ ಕಡುಬಡತನ ಮಾತ್ರ ಸಾವಿನ ಕಡೇ ಗಳಿಗೆವರೆಗೂ ಇಡಿಗಂಟಿನ ಒಡನಾಡಿಯಾಗಿತ್ತು.

ಜೆ.ಎಚ್.ಪಟೇಲರು ಈ ನಾಟಕ ಓದಿ ಪ್ರಭಾವಿತರಾಗಿ ತಮ್ಮೂರಲ್ಲಿ ಪ್ರದರ್ಶನ ಮಾಡಿಸಿದರು. ಈ ನಾಟಕದಲ್ಲಿ ಖುದ್ದು ಪಟೇಲರು ಇಂದ್ರಚರಣ್ ಎಂಬ ಪ್ರಮುಖ ಪಾತ್ರ ಮಾಡಿದರು. ಅವರ ತಮ್ಮ ಎಸ್ ಎಚ್. ಪಟೇಲರು ‘ನೀಲಾ’ ಎಂಬ ಇಂದ್ರಚರಣನ ತಂಗಿಯ ಪಾತ್ರ ಮಾಡಿದರು. ಆ ಕಾಲದ ಅವರ ಹಳ್ಳಿಯ ಅದು ಯಶಸ್ವೀ ಪ್ರದರ್ಶನ. ಅಂದಿನ ಶಿವಮೊಗ್ಗ ಜಿಲ್ಲೆಯ ಕಾರಿಗನೂರೆಂಬ ಹಳ್ಳಿಯ ಶ್ರೀಮಂತ ಸುಶಿಕ್ಷಿತರು, ಪ್ರಖರ ವಾಗ್ಮಿಗಳು, ಕಾನೂನು ತಜ್ಞರು ಆಗಿದ್ದ ಪಟೇಲ ಸಹೋದರರನ್ನು ‘ಬಡತನದ ಭೂತ’ ಪ್ರಭಾವಿಸಿದ್ದು ಅಕ್ಷರಶಃ ಉಲ್ಲೇಖನೀಯ.

ಹಿಂದೂಸ್ತಾನ ಮತ್ತು ಪಾಕಿಸ್ತಾನ ಅವಳಿ ಸಂಬಂಧಗಳ ಅಗಾಧ ಐತಿಹ್ಯ ಪ್ರಜ್ಞೆಗಳು ಅವರಲ್ಲಿ ಅಚ್ಚೊತ್ತಿದ್ದವು. ಅಂತೆಯೇ ಕಂದಗಲ್ಲರ ಮನೋವಾಂಛೆಯ ಪ್ರಗಲ್ಭ ಪರಿಕಲ್ಪನೆಗಳು ಅನೂಹ್ಯವಾಗಿದ್ದವು. ಇಂತಹ ಅನಂತ ಸೂಕ್ಷ್ಮತೆಯ ಮಹಾಭಾರತದ ಸೋದರ ಕಲಹಗಳ ಐತಿಹಾಸಿಕ ಸತ್ಯಗಳನ್ನು ಚರಿತ್ರೆಗಳೊಂದಿಗೆ ತಾದಾತ್ಮ್ಯಗೊಳಿಸಿದರು. ಹಾಗೆ ಮಾಡುವ ಮೂಲಕ ದೃಶ್ಯಾಂಕಗಳಿಗೆ ಬಗೆ ಬಗೆಯ ಬಣ್ಣ ತುಂಬಿದರು. ರಕ್ತರಾತ್ರಿ, ಕುರುಕ್ಷೇತ್ರ ನಾಟಕಗಳ ಕರಡು (ಸ್ಕ್ರಿಪ್ಟ್ ) ಪ್ರತಿ ಹಿಡಕೊಂಡು ನಾಟಕ ಕಂಪನಿಗಳಿಗೆ ಅಲೆದಾಡಿದರು. ಕಾವ್ಯಾತ್ಮಕ ಸಂಭಾಷಣೆಗಳನ್ನು ಕಬ್ಬಿಣದ ಕಡಲೆಯೆಂದು ಹೆದರಿ ಯಾರೊಬ್ಬರೂ ಪ್ರದರ್ಶನಕ್ಕೆ ಮುಂದೆ ಬರಲ್ಲ. ಕಡೆಗೆ ಗಟ್ಟಿ ಮತ್ತು ಕೆಟ್ಟ ಧೈರ್ಯ ಮಾಡಿದವರೆಂದರೆ ಶಾರದಾ ನಾಟ್ಯ ಮಂಡಳಿಯ ಗೋಕಾಕ ಭಗವಂತಪ್ಪ ಮತ್ತು ಬಸವಣ್ಣೆಪ್ಪನವರು. ಇದೆಲ್ಲ ಅಜಮಾಸು ಎಂಬತ್ತು ವರ್ಷಗಳ ಹಿಂದಿನ ಹಕೀಕತ್ತು. ಆದರೆ ಅದಕ್ಕೆ ಮೊದಲು ಅವರು ಎರಾಸಿ ಭರಮಪ್ಪನವರ ವಾಣಿ ವಿಲಾಸ ನಾಟಕ ಕಂಪನಿಗೆ ರಚಿಸಿಕೊಟ್ಟ ನಾಟಕದ ಹೆಸರು ವರಪ್ರದಾನ.

ಅಂತೆಯೇ ರಾಯರ ರಕ್ತರಾತ್ರಿ, ಕುರುಕ್ಷೇತ್ರ, ಅಕ್ಷಯಾಂಬರ, ಚಿತ್ರಾಂಗದ ನಾಟಕಗಳನ್ನು ಆಡದ ಹಳ್ಳಿಗಳೇ ಕನ್ನಡ ನಾಡಿನಲ್ಲಿ ಇಲ್ಲ ಎನ್ನುವಷ್ಟು ಅವು ಸುಪ್ರಸಿದ್ದಿಯನ್ನು ಗಳಿಸಿದವು. ವರ್ತಮಾನದಲ್ಲೂ ಈ ನಾಟಕಗಳ ಪ್ರಸ್ತುತತೆ ಬೇಡಿಕೆಯಂತೆ ಇರುವುದನ್ನು ಯಾರಿಂದಲೂ ಅಲ್ಲಗಳೆಯಲಾಗದು.

ರಾಯರಿಂದ ನಾಟಕಗಳನ್ನು ಬರೆಸಿಕೊಂಡ ಪ್ರಕಾಶಕರು, ನಾಟಕ ಕಂಪನಿ ಮಾಲೀಕರು ಉದ್ದಾರವಾದರು. ಅಷ್ಟಕ್ಕೂ ಆಗ ಗದಗ ಪಟ್ಟಣ ಪುಸ್ತಕ ಪ್ರಕಟಣ ಜಗತ್ತೇ ಆಗಿತ್ತು. ಇವರ ಕೈಬರಹದ ನಾಟಕಗಳನ್ನು ಪ್ರಕಟಿಸುವ ಪ್ರಕಾಶಕರು ರಾಯರಿಗೊಂದು ಮಸಿಕುಡಿಕೆಯ ದೌತಿಗುಳ್ಳಿ ( Inkpot ), ಟಾಕು (ಲೆಕ್ಕಣಿಕೆ), ಒಂದು ಬುರುಜು ಗದಗ ನರಸಿಂಗಸಾ ಬೀಡಿ ಬಂಡಲ್ ಕೊಡಿಸಿ ಅವರ ಕೈಯಲ್ಲಿ ನಲವತ್ತೋ ಐವತ್ತೋ ರುಪಾಯಿ ಇಟ್ಟರೆ ಅದೇ ದೊಡ್ಡಮೊತ್ತದ ಗೌರವ. ಮೇಲಾಗಿ ಗಂಟೆಗೊಂದು ಕಪ್ ಬೆಲ್ಲದ ಚಹ ವ್ಯವಸ್ಥೆ (ಹೌದು ರಾಯರಿಗೆ ಮನೆಯಲ್ಲಿ ಅರ್ಧ ತಾಸಿಗೊಂದು ಬಾರಿ ಹಿತ್ತಾಳಿ ವಾಟಿಯ ಚಹ ಖಾಯಂ ಬೇಕಿತ್ತು). ಅಂತೆಯೇ ರಾಯರ ವಾರಗೆಯ ಮತ್ತೊಬ್ಬ ಮಹತ್ವದ ನಾಟಕಕಾರ ಎಚ್. ಟಿ. ಮಹಾಂತೇಶ ಶಾಸ್ತ್ರಿಯವರು ’ರಾಯರಿಗೆ ತುಂಬಾ ಕಮ್ಮೀ ಸಂಭಾವನೆ ನೀಡುತ್ತಿದ್ದೀರಿ‘ ಎಂದು ಅಂತಹ ಪ್ರಕಾಶಕರಿಗೆ ಬರೋಬ್ಬರಿ ಕ್ಲಾಸ್ ತಗೊಂತಿದ್ದರಂತೆ.

ಪಾರ್ಸಿ, ಬಂಗಾಲಿ, ಇಂಗ್ಲಿಷ್ ರಂಗಸಾಹಿತ್ಯದ ಪರಿಚಯವಿದ್ದ ರಾಯರಿಗೆ ಮರಾಠಿ ನಾಟಕಗಳ ನಿತಾಂತ ಪ್ರಭಾವ. ಕಿರ್ಲೋಸ್ಕರ್, ಗಡ್ಕರಿ, ಅತ್ರೇಯವರಂತಹ ಮರಾಠಿ ನಾಟಕಕಾರನ್ನು ಓದಿ, ನಾಟಕಗಳನ್ನು ನೋಡಿ ಅರಿತುಕೊಂಡಿದ್ದರು. ಹೀಗೆ ಮರಾಠಿ ರಂಗಭೂಮಿಯಿಂದ ಎಷ್ಟೇ ಪ್ರಭಾವಿತರಾಗಿದ್ದರೂ ಕನ್ನಡದ ದೇಸಿ ನೆಲೆಯ ಸರೋವರದೊಳಗೆ ಮುಳುಗಿ ಬರೆಯುವಲ್ಲಿ ರಾಯರು ನಿಷ್ಣಾತರು. ಅದು ಅವರ ಬದ್ಧಕಾವ್ಯದ ಸೋಪಜ್ಞತೆಯೇ ಹೌದು. ಜನಸಾಮಾನ್ಯರ ಮನೋಭೂಮಿಕೆಗೆ ಮಿಡಿಯುವ ಪ್ರಾಣಮಿತ್ರತ್ವದ ಆಪ್ತ ರಂಗಶಕ್ತಿ ಅವರ ರಂಗನಾಟಕಗಳ ಜೀವಾಳ.

ಆದರೆ, ಕನ್ನಡ ವಿಮರ್ಶಾಲೋಕದ ಬೃಹಸ್ಪತಿಗಳು ರಾಯರ ರಂಗಸಾಹಿತ್ಯ ಗುರುತಿಸದೇ ಹೋದುದು ಸಾಂಸ್ಕೃತಿಕ ದುರಂತವೇ ಸೈ. ರಂಗಮೀಮಾಂಸಕರಿಗೆ ಆಧುನಿಕ ರಂಗಭೂಮಿಯ ಮೇಲಿದ್ದ ಅರ್ಧದಷ್ಟು ಪ್ರೀತಿ ವೃತ್ತಿರಂಗದ ಮೇಲಿರಲಿಲ್ಲ. ಕನ್ನಡ ರಂಗಭೂಮಿ ಚರಿತ್ರೆಕಾರರು ವೃತ್ತಿ ರಂಗಭೂಮಿಯನ್ನು ಕಡೆಗಣ್ಣಿನಿಂದ ಕಂಡಿದ್ದಾರೆ. ವೃತ್ತಿ ರಂಗಸಾಹಿತ್ಯವನ್ನು ಪ್ರಧಾನ ಸಂಸ್ಕೃತಿ ಧಾರೆಗೆ ಸೇರಿಸುವುದು ಒತ್ತಟ್ಟಿಗಿರಲಿ, ಅಧೀನ ರಂಗ ಸಂಸ್ಕೃತಿಯಂತೆಯೂ ಕಾಣಲಿಲ್ಲ. ಎರಡನೇ ದರ್ಜೆಯ ಸಾಹಿತ್ಯದಂತೆ ನಿರ್ಲಕ್ಷಿತ ನೆಲೆಗಳಲ್ಲಿಟ್ಟು ನೋಡಿದರು. ವಾಸ್ತವವಾಗಿ ಇದು ಪ್ರಧಾನ ಸಂಸ್ಕೃತಿಗೆ ಸೇರಬೇಕಾದ ಪ್ರಾಕಾರ. ಇದು ಹಣಮಂತರಾಯರನ್ನು ಕುರಿತು ಹೇಳುವ ಉಲ್ಲೇಖನೀಯ ಮಾತಾಗಿರದೇ, ಸಮಗ್ರ ವೃತ್ತಿ ರಂಗಭೂಮಿಯನ್ನು ಕಡೆಗಣಿಸಿರುವ ಮತ್ತು ರಂಗೇತಿಹಾಸಕಾರರು ತೋರಿದ (ಅ)ಪ್ರಜ್ಞಾಪೂರ್ವಕ ಅವಜ್ಞೆಯೇ ಆಗಿದೆ. ಆದರೆ, ವೃತ್ತಿರಂಗಭೂಮಿ ಜನಸಾಮಾನ್ಯರ ಲೋಕ ಮೀಮಾಂಸೆಯ ಅಖಂಡ ಪ್ರೀತಿ ಗಳಿಸಿ ಲೋಕೋಪಯೋಗಿ ಸಂಸ್ಕೃತಿಯಂತೆ ಬೆಳೆಯಿತು.

ಕನ್ನಡ ರಂಗಸಂಸ್ಕೃತಿಯ ಮೇರುಪರ್ವತವೇ ಆಗಿರುವ ರಾಯರ ಕೃತಿಗಳ ಸಮಗ್ರ ಅಧ್ಯಯನ, ಸಂಶೋಧನೆ, ಅನ್ಯಶಿಸ್ತುಗಳ ಮೂಲಕ ಗ್ರಹಿಸುವ ವಿವೇಕದ ಒಳನೋಟಗಳ ಕೆಲಸಗಳು ಆಗಬೇಕಿದೆ. ಅವರ ಹೆಸರಲ್ಲಿ ಅಂತಹದ್ದೊಂದು ವೃತ್ತಿ ರಂಗಭೂಮಿ ಅಭಿವೃದ್ಧಿ ಪ್ರಾಧಿಕಾರ ಪ್ರತಿಷ್ಟಾಪನೆಯ ಅಗತ್ಯವಿದೆ. ಅವರು ತೀರಿಹೋಗಿ ಅರ್ಧ ಶತಮಾನವೇ ಮೀರಿದರೂ ಸರಕಾರ ಮತ್ತು ಸಂಸ್ಕೃತಿ ಇಲಾಖೆ ಆ ದಿಕ್ಕಿನಲ್ಲಿ ಆಲೋಚನೆ ಕೂಡ ಮಾಡಿಲ್ಲ.

ಅದೇ ಅವಿಭಜಿತ ವಿಜಯಪುರ ಜಿಲ್ಲೆಯವರಾದ ಆಧುನಿಕ ರಂಗಭೂಮಿಯ ಶ್ರೀರಂಗರ ಕುರಿತು ’ಶ್ರೀರಂಗ ಸಾರಸ್ವತ‘ ಎಂಬ ಸಹಸ್ರ, ಸಹಸ್ರ ಪುಟಗಳ ಸಂಪುಟಗಳನ್ನೇ ಇಲಾಖೆ ಪ್ರಕಟಿಸಿದೆ. ಅದು ಸ್ವಾಗತಾರ್ಹ. ಆದರೆ ಅದೇ ಜಿಲ್ಲೆಯ ಕಂದಗಲ್ಲರ ವ್ಯಕ್ತಿತ್ವ, ರಂಗ ಸಾಧನೆ ಕುರಿತು ಗಂಭೀರ ಚಿಂತನೆ ಮಾಡಲಿಲ್ಲ. ಅದು ಒತ್ತಟ್ಟಿಗಿರಲಿ ಕನ್ನಡ ರಂಗಸಂಸ್ಕೃತಿಯ ಮಹತ್ವದ ಪ್ರಾಕಾರವೇ ಆಗಿರುವ ಸಮಗ್ರ ವೃತ್ತಿರಂಗಭೂಮಿಯ ಕುರಿತಾದ ಒಂದೇ ಒಂದು ಸಂಪುಟ ಗಾತ್ರದ ಪುಸ್ತಕ ಪ್ರಕಟಿಸಬಾರದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT