ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಫಕೀರಪ್ಪ ಎಂಬ ರಂಗಛಾಪು

Published : 11 ಆಗಸ್ಟ್ 2024, 0:06 IST
Last Updated : 11 ಆಗಸ್ಟ್ 2024, 0:06 IST
ಫಾಲೋ ಮಾಡಿ
Comments

ಎಂಬತ್ಮೂರರ ಏರುಪ್ರಾಯದ ರಂಗಕರ್ಮಿ ವರವಿ ಫಕೀರಪ್ಪ ತೀರಿಕೊಂಡಿದ್ದಾರೆ. ಏಳು ದಶಕಗಳ ಕಾಲ ವೃತ್ತಿ ರಂಗಭೂಮಿಯ ನಿಡಿದಾದ ರಂಗ ಬದುಕು ಬಾಳಿದವರು. ನಾಟಕ ಕಂಪನಿಗಳ ಸುವರ್ಣ ಕಾಲದಲ್ಲಿ ನಟ, ನಿರ್ದೇಶಕ, ನಾಟಕಕಾರ–ಹೀಗೆ ರಂಗ ಸಂಸ್ಕೃತಿಯ ವಿವಿಧ ಆಯಾಮಗಳ ಮೂಲಕ ಅಕ್ಷರಶಃ ಸ್ವಯಂ ಪ್ರತಿಭೆಯಿಂದಲೇ ರಂಗವೈಭವ ಮೆರೆದವರು. ಅಗಾಧ ಜ್ಞಾಪಕಶಕ್ತಿಯ ಅವರ ರಂಗ ನೆನಪುಗಳೆಂದರೆ ಸಮಗ್ರ ಕನ್ನಡ ರಂಗಭೂಮಿಯ ಜೀವಕೋಶದ ಅನಾವರಣ. ಅದು ವೃತ್ತಿ ಮತ್ತು ಹವ್ಯಾಸಿ ರಂಗಗಳ ಆನುಷಂಗಿಕ ಫಲವೂ ಹೌದು. 

ಮಹಾಂತೇಶ ಶಾಸ್ತ್ರೀ, ಮಾಂಡ್ರೆ, ಧುತ್ತರಗಿ, ಕಂದಗಲ್ಲ, ಹೂಗಾರ, ಹಿರಣ್ಣಯ್ಯ, ಜೋಶಿ, ಓಬಳೇಶ್, ಅನಕೃ, ಕಟ್ಟೀಮನಿ... ಹೀಗೆ ವಿದ್ವಜ್ಜನರ ಅಪೂರ್ವ ಒಡನಾಟ. ಅದರಿಂದ ಅಪಾರ ರಂಗಜ್ಞಾನ ಸಂಪನ್ನತೆ ಪ್ರಾಪ್ತವಾದುದನ್ನು ಹೇಳುವಲ್ಲಿ ಫಕೀರಪ್ಪಗೆ ಉಲ್ಲಸಿತ ಉಮೇದು. ಕಂದಗಲ್ಲ ಹಣಮಂತರಾಯರ ‘ರಕ್ತರಾತ್ರಿ’ ನಾಟಕ ರೂಪುಗೊಂಡ ಕತೆಯನ್ನು ಫಕೀರಪ್ಪ ಹೇಳುತ್ತಿದ್ದರೆ, ವರ್ಣಮಯ ನಾಟಕವೊಂದನ್ನು ಕಣ್ತುಂಬಿಸಿಕೊಂಡ ಅನುಭವ. ಅವರ ನಿರೂಪಣಾ ಚಾತುರ್ಯ ಅನನ್ಯವಾದುದು. ಅಷ್ಟೇ ಯಾಕೆ ತನ್ನ ಹೆಸರಿನ ‘ಫಕೀರ ಪ್ರಜ್ಞೆ’ ಕುರಿತೇ ಸೊಗಸಾಗಿ ವಿವರಿಸುತ್ತಿದ್ದರು.

ರಂಗಭೂಮಿ ಎಂದರೆ ಪ್ರದರ್ಶನ ಮತ್ತು ನಟನೆ ಮಾತ್ರವಲ್ಲ, ಅದರಾಚೆಯ ಸಮಾಜಮುಖಿ ಸಜೀವ ಸತ್ಯಗಳ ಪ್ರಸ್ತುತಿ ಎಂಬುದನ್ನು ಪ್ರತಿಪಾದಿಸುತ್ತಿದ್ದ ರಂಗಜ್ಞಾನಿ ಫಕೀರಪ್ಪ. ಅಂತಹ ಕೆಲವು ಪ್ರಯೋಗಗಳನ್ನು ಬೆಂಗಳೂರು ಸೇರಿದಂತೆ ಇಳಕಲ್ ಮತ್ತಿತರೆ ಕಡೆ ಮಾಡಿದ್ದುಂಟು. ತನ್ನದೇ ರಚನೆಯ ಉಮರ ಖಯಾಮ್, ಅನುಭಾವಿ ಅಲ್ಲಮ, ಅಕ್ಬರ್ ಬೀರಬಲ್ ಮತ್ತಿತರ ರಂಗ ಪ್ರಯೋಗಗಳ ಮೂಲಕ ಗಂಭೀರ ವಿಶ್ಲೇಷಣೆಗೆ ತೊಡಗುತ್ತಿದ್ದರು. ಅವರೊಬ್ಬ ಪರಿಪಕ್ವ ರಂಗಕರ್ಮಿ. ಅವರ ರಂಗನಾಟಕಗಳು ಮತ್ತು ಆನುಭಾವಿಕ ವಿಚಾರಗಳನ್ನು ಗಮನಿಸುತ್ತಿದ್ದ ಯಜಮಾನ ಶ್ರೀಹರಿ ಖೋಡೆಯವರು ಫಕೀರಪ್ಪ ಅವರಿಗೆ ಗೌರವ ಸಂಭಾವನೆ ಕೊಟ್ಟು ವರುಷಾನುಗಟ್ಟಲೇ ತಮ್ಮ ಒಡನಾಟದ ಅನುಸಂಧಾನ ಹೊಂದಿದ್ದರೆಂದರೆ ಸುಮ್ಮನಲ್ಲ. 

ಖೋಡೆಯವರು ಬೆಂಗಳೂರು ದೂರದರ್ಶನಕ್ಕಾಗಿ ‘ಶಿಶುನಾಳ ಶರೀಫ’ ಮೆಗಾ ಸೀರಿಯಲ್ ನಿರೂಪಿಸುವಾಗ ಫಕೀರಪ್ಪನವರ ಸಲಹೆಗಳು ಮುಖ್ಯವಾಗಿರುತ್ತಿದ್ದವು. ಖೋಡೆಯವರು ತೀರಿಹೋದ ತರುವಾಯ ಫಕೀರಪ್ಪ ಹುಟ್ಟೂರು ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ವರವಿಗೆ ಹೋಗಿ ನೆಲೆಸುತ್ತಾರೆ. ಕೋಮು ಸಾಮರಸ್ಯಕ್ಕೆ ಹೆಸರಾದ ವರವಿ ಭಾವೈಕ್ಯದ ನೆಲ. ಆ ಊರಿನಲ್ಲಿ ಫಕೀರಪ್ಪನವರ ಹೆಸರಿನ ರಂಗಮಂದಿರವಿದೆ. ವರವಿಗೆ ಆಗಮಿಸುವ ನಾಟಕ ಕಂಪನಿ ಕಲಾವಿದರಿಗೆ ಫಕೀರಪ್ಪನವರ ಮನೆಯಲ್ಲೇ ತಿಂಗಳುಗಟ್ಟಲೆ ಆತಿಥ್ಯ.  

ಫಕೀರಪ್ಪ ಶಾಸ್ತ್ರಬದ್ಧ ಶಿಕ್ಷಣ ಪಡೆದವರಲ್ಲ. ನಾಟಕಗಳ ಚೋಪಡಿ (ಸ್ಕ್ರಿಪ್ಟ್) ಓದುವಷ್ಟು ಕಲಿತವರು. ಆದರೆ ಸಾಹಿತ್ಯದ ಓದಿನಲ್ಲಿ ಮಾತ್ರ ಅವರದು ಎತ್ತಿದ ಕೈ. ಕುಮಾರವ್ಯಾಸನಿಂದ ಕುವೆಂಪುವರೆಗೆ ಹಾಳತವಾದ ಅಧ್ಯಯನದ ಹರಹು. ಕಟ್ಟೀಮನಿ, ಅನಕೃ, ಕಾದಂಬರಿಗಳೆಂದರೆ ಪಂಚಪ್ರಾಣ. ಬೀಚಿಯವರ ಜತೆಗಿನ ‘ಮದ್ಯರಾತ್ರಿ’ಗಳ ಸತ್ಸಂಗವು ಫಕೀರಪ್ಪಗೆ ನಾಟಕ ಕಂಪನಿಯಷ್ಟೇ ಗುಡ್ ಕಂಪನಿ. ಫಕೀರಪ್ಪ ನುಡಿಸುವ ಹಾರ್ಮೋನಿಯಂ, ತಬಲಾ, ಪಿಟೀಲು, ಹಾಡುವ ಕಂದಪದ್ಯಗಳು, ಇಂತಹ ಅನೇಕ ರೋಚಕದ ಕಥನಗಳಿವೆ. ಇದೆಲ್ಲವೂ ಅವರ ಆಪ್ತಮಿತ್ರ ಮತ್ತು ಹೆಸರಾಂತ ಕಲಾವಿದ ನಮ್ಮ ನಡುವಿನ ಶೃಂಗೇರಿ ರಾಮಣ್ಣನವರ ಸ್ನೇಹದ ಒಡಲು ತುಂಬಿಕೊಂಡಿವೆ. ಫಕೀರಣ್ಣ ‘ರಂಗವಿದ್ವಾಂಸ’ನಾಗಿದ್ದರೆಂದೇ ಹೇಳುತ್ತಾರೆ ರಾಮಣ್ಣ.

ಸ್ಪಷ್ಟ ಮತ್ತು ಅಸ್ಖಲಿತ ಸಂಭಾಷಣೆಗಳ ಕಂಚಿನ ಕಂಠಕ್ಕೆ ಸಾವಿನ ಕಡೇ ಕ್ಷಣದವರೆಗೂ ಕಂಟಕ ಅನ್ನುವುದೇ ಇರಲಿಲ್ಲ. ಪಾತ್ರ ಯಾವುದೇ ಇರಲಿ ಅಲ್ಲಿ ಫಕೀರಪ್ಪ ಎಂಬ ರಂಗಛಾಪು ಇರಲೇಬೇಕು. ಅದರಲ್ಲೂ ಮಹಾಂತೇಶ ಶಾಸ್ತ್ರಿಗಳ ಎಲ್ಲಾ ನಾಟಕಗಳ ಎಲ್ಲಾ ಪಾತ್ರಗಳನ್ನು ಆವಾಹಿಸಿಕೊಂಡ ಹೆಗ್ಗಳಿಕೆ. ‘ಕುಂಕುಮ’ದಂತಹ ಹೃನ್ಮನ ಮುಟ್ಟುವ ನಾಟಕದಲ್ಲಿ ಅಭಿನಯಿಸಿದ ಹೆಮ್ಮೆ ತನ್ನದೆಂದು ಹೇಳುತ್ತಿದ್ದರು. ಅಷ್ಟಕ್ಕೂ ಅವರು ವಿನೋದ ಪ್ರಜ್ಞೆಗೆ ಹೇಳಿ ಮಾಡಿಸಿದ ಹೆಸರು. ಅಷ್ಟೇನು ಎತ್ತರವಲ್ಲದ ಪುಟ್ಟ ಶರೀರ, ಗಟ್ಟಿಮುಟ್ಟಾದ ಶಾರೀರ. ಯಾವಾಗಲೂ ಶುಭ್ರ ಶ್ವೇತವರ್ಣದ ಧೋತರ, ಜುಬ್ಬಾ ಉಡುಪು. ಹಿಂದಕ್ಕೆ ಬಾಚಿದ ತಲೆಗೂದಲು. ತಲೆ ಇದ್ದರೆ ಸಾಕು ಬೈತಲೆ ಯಾತಕೆಂಬ ತರ್ಕದ ಮಾತು. ಕಣ್ಣುಗಳು ಮಂಜಾಗುವ ತನಕ ಓದಿನ ಹಂಬಲ ಹಿಂದಾಗಲಿಲ್ಲ. 

ಕಣ್ಣು ಕಿವಿ ನಾಲಗೆಗಳ ಕುರಿತು ಇರಬೇಕಾದ ಕಟ್ಟೆಚ್ಚರದ ರಂಗಶಿಸ್ತು. ಪ್ರದರ್ಶನಕ್ಕೆ ಸಿದ್ಧಗೊಂಡ ರಂಗಪಠ್ಯ ಪರಿಷ್ಕಾರ ಮಾಡುವಲ್ಲಿ ಫಕೀರಪ್ಪ ನಿಷ್ಣಾತ. ವರ್ತಮಾನದ ಫುಲ್ ಕಾಮೆಡಿ ಟ್ಯಾಗ್ ಲೈನ್ ನಾಟಕಗಳ ಕುರಿತು ತೀವ್ರ ವಿಷಾದವಿತ್ತು. ಈಗಿನ ನಟಿಯರಿಗೂ ಆಗಿನ ಅಭಿನೇತ್ರಿಯರಿಗೂ, ಅಂದಿನ ವಿನೋದಕ್ಕೂ ಇಂದಿನ ಹಾಸ್ಯಕ್ಕೂ ಇರುವ ಫರಕುಗಳ ಕುರಿತು ವ್ಯಾಖ್ಯಾನ. ನರಸಿಂಹರಾಜು, ಧೀರೇಂದ್ರ ಗೋಪಾಲ, ದಿನೇಶ್, ಮಾಸ್ಟರ್ ಹಿರಣ್ಣಯ್ಯ ಜತೆಗಿನ ಮರೆಯಲಾಗದ ದ್ಯಾಸಗಳು. ವರನಟ ರಾಜಕುಮಾರ್ ಅವರ ಬನಶಂಕರಿ ಜಾತ್ರೆ ಕ್ಯಾಂಪ್ ನಾಟಕಗಳು, ಪೌರಾಣಿಕ ನಾಟಕಗಳು, ಮಧುರ ರಂಗಗೀತೆಗಳ ಸಂಗೀತಮಯ ನಾಟಕಗಳು. ಹೀಗೆ ಮನದ ತುಂಬಾ ಬನದಂತೆ ತುಂಬಿ ತುಳುಕುವ ರಂಗ ಪರಂಪರೆಗಳ ರಂಗವಲ್ಲಿ.

ಅರವತ್ತರ ದಶಕದ ಅಂತಿಮ ದಿನಗಳು. ಕಲಬುರ್ಗಿಯಲ್ಲಿ ತನ್ನ ರಂಗಗುರು ಓಬಳೇಶ ಕಂಪನಿ ಕ್ಯಾಂಪ್. ಖಾದಿಸೀರೆ, ಮುಂಡೇಮಗ ನಾಟಕಗಳ ಭರ್ಜರಿ ಭರಾಟೆ. ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರಿ ಖಾಯಶ್ ಪಟ್ಟು ನಾಟಕ ನೋಡಿ, ಮೆಚ್ಚಿ ಬಂಗಾರದುಂಗರ ಉಡುಗೊರೆಯಾಗಿ ನೀಡುತ್ತಾರೆ. ಇಂತಹ ಹತ್ತಾರು ನೆನಪುಗಳು ಇನ್ನೂ ನಿನ್ನೆಯಷ್ಟೇ ಜರುಗಿದಷ್ಟು ತಾಜಾತನದ ಪ್ರಸ್ತುತಿ. ಅದು ಫಕೀರಪ್ಪ.

ಸುಳ್ಳದ ದೇಸಾಯರ ಕಂಪನಿ, ಸೂಡಿ ಶೆಟ್ಟರ್ ಕಂಪನಿ, ಗುಡಗೇರಿ ಕಂಪನಿ, ಗುಬ್ಬಿ ಕಂಪನಿ, ಓಬಳೇಶ್ ಕಂಪನಿ, ಹಿರಣ್ಣಯ್ಯ ಮಿತ್ರ ಮಂಡಳಿ ಹೀಗೆ ಅವರು ರಂಗಸೇವೆ ಮಾಡಿ ಪ್ರಮುಖ ನಾಟಕ ಮಂಡಳಿಗಳು. 1977ರಲ್ಲಿ ‘ರಾಘವೇಂದ್ರ ವಿಜಯ ನಾಟ್ಯಸಂಘ’ಎಂಬ ಸ್ವಂತ ನಾಟಕ ಕಂಪನಿ ಸ್ಥಾಪಿಸಿ ಹತ್ತು ವರುಷಗಳಿಗೂ ಹೆಚ್ಚು ಕಾಲ ನಡೆಸುತ್ತಾರೆ. ವ್ಯವಹಾರ ಜ್ಞಾನದ ಕೊರತೆಯಿಂದಾಗಿ ನಿಂತು ಹೋಯಿತು. ಹವ್ಯಾಸಿ ರಂಗ ಚಟುವಟಿಕೆಗಳು ನಿತಾಂತವಾಗಿ ಮುನ್ನಡೆದವು. ಹುಬ್ಬಳ್ಳಿ ಸಿದ್ಧಾರೂಢ, ಕೊಪ್ಪಳ ಗವಿಸಿದ್ಧೇಶ್ವರ, ಕಲಬುರ್ಗಿ ಶರಣ ಬಸವೇಶ್ವರ ಎಂಬ ಮಹಾತ್ಮೆ ಹೆಸರಿನ ನಾಟಕಗಳು ಅವರಿಗೆ ಹೆಸರು ಮತ್ತು ಹಣ ತಂದು ಕೊಟ್ಟವು. ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಗುಬ್ಬಿ ವೀರಣ್ಣ ಪ್ರಶಸ್ತಿ ಸೇರಿದಂತೆ ಸಂಘ ಸಂಸ್ಥೆಗಳು ನೀಡಿದ ಹತ್ತಾರು ಪ್ರಶಸ್ತಿಗಳಿಗೆ ಭಾಜನರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT