ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗದ ಮೇಲೂ.. ತೆರೆಯ ಮೇಲೂ... ಬಾಪೂ

Last Updated 18 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಗಾಂಧಿಯನ್ನು ಬಹುಮಾಧ್ಯಮ ರಂಗಪ್ರಸ್ತುತಿಯ ಮೂಲಕ ಅರ್ಥೈಸುವ ಹೊಸದೊಂದು ಪ್ರಯತ್ನವನ್ನು ಇತ್ತೀಚೆಗೆ ಮಾಡಿದ್ದಾರೆ ಚಿಂತಕ ಎನ್‌.ಎಸ್‌. ಶಂಕರ್‌. ‘ಇದು ರಾಷ್ಟ್ರಪಿತನ ಜೀವನ ಚರಿತ್ರೆಯಲ್ಲ, ಗಾಂಧಿವಾದದ ಪ್ರತಿಪಾದನೆಯೂ ಅಲ್ಲ. ಆದರೆ ನಮ್ಮ ಕಾಲದ ಸವಾಲುಗಳಿಗೆ ಗಾಂಧಿ ಮಾರ್ಗದಲ್ಲಿ ಉತ್ತರ ಹುಡುಕುವ ಯತ್ನ’ ಎನ್ನುತ್ತಾರೆ ಅವರು

***

ಮಹಾತ್ಮ ಗಾಂಧಿ ಈ ದೇಶಕ್ಕೊಂದು ಆದರ್ಶವೂ ಹೌದು, ವ್ಯಸನವೂ ಹೌದು. ನಾಲ್ಕು ಬಗೆಯಲ್ಲಿ ಗಾಂಧಿಯನ್ನು ನೆನಪಿಸಿಕೊಳ್ಳುವ ವರ್ಗಗಳು ಭಾರತದಲ್ಲಿ ಈಗಲೂ ಇವೆ. ಶುದ್ಧ ಗಾಂಧೀವಾದಿಗಳಾಗಿ ಗಾಂಧಿಯ ಪುಣ್ಯಸ್ಮರಣೆಯಲ್ಲಿ ನಿರತರಾದವರದ್ದು ಒಂದು ಗುಂಪಾದರೆ, ಗಾಂಧಿಯ ಆದರ್ಶಗಳನ್ನು ಸ್ಮರಿಸುತ್ತಲೇ ಗಾಂಧೀವಾದದ ಒಳಿತು-ಕೆಡುಕುಗಳನ್ನು ಪರೀಕ್ಷಿಸುತ್ತಾ ಮೆಚ್ಚಿಕೊಳ್ಳುವುದು ಇನ್ನೊಂದು ಗುಂಪು. ಇತರ ವಾದಗಳ ಜೊತೆಗೆ (ಮುಖ್ಯವಾಗಿ ಅಂಬೇಡ್ಕರ್‌ವಾದ) ಗಾಂಧೀವಾದವನ್ನು ಸಂಘರ್ಷಕ್ಕೆ ಒಡ್ಡುತ್ತಾ ಗಾಂಧೀವಾದದ ದೌರ್ಬಲ್ಯಗಳನ್ನು ವೈಭವೀಕರಿಸುವುದು ಮೂರನೆಯ ಗುಂಪಾದರೆ; ಗಾಂಧಿ ಈ ದೇಶದ ಮೇಲೆ ಮಾಡಿರುವ ಸತ್ಪ್ರಭಾವವನ್ನು ಸಹಿಸಲಾಗದೆ ಗಾಂಧೀವಾದವನ್ನು ಸದಾ ಹೀಗಳೆಯುವ ನಾಲ್ಕನೇ ಗುಂಪೊಂದಿದೆ. ಹಾಗೆಂದೇ ಗಾಂಧಿ ಈ ದೇಶಕ್ಕೆ ಇವತ್ತಿಗೂ ಆದರ್ಶವಾಗಿ, ಕನಸಾಗಿ, ಹಳಹಳಿಕೆಯಾಗಿ, ವ್ಯಸನವಾಗಿ ಜೀವಂತವಾಗಿದ್ದಾರೆ. ಗಾಂಧಿಯನ್ನು ನೀವು ಹೊಗಳಬಹುದು ಅಥವಾ ತೆಗಳಬಹುದು, ಆದರೆ ನಿರ್ಲಕ್ಷಿಸುವಂತಿಲ್ಲ ಎನ್ನುವುದು ಇವತ್ತಿಗೂ ಸತ್ಯ.

ಪತ್ರಕರ್ತ, ಚಿಂತಕ ಮತ್ತು ಸಿನಿಮಾ ನಿರ್ದೇಶಕ ಎನ್.ಎಸ್.ಶಂಕರ್, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ, ಗಾಂಧಿಯನ್ನು ಬಹುಮಾಧ್ಯಮ ರಂಗಪ್ರಸ್ತುತಿಯ ಮೂಲಕ ಅರ್ಥೈಸುವ ಹೊಸದೊಂದು ಪ್ರಯತ್ನವನ್ನು ಇತ್ತೀಚೆಗೆ ಮಾಡಿದ್ದಾರೆ. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೆಂಬಲದೊಂದಿಗೆ ಶಂಕರ್ ರಚಿಸಿ, ನಿರ್ದೇಶಿಸಿರುವ ಈ ರಂಗಪ್ರಸ್ತುತಿ ಇತ್ತೀಚೆಗೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಮೂರು ಪ್ರದರ್ಶನಗಳನ್ನು ಕಂಡಿತು. ನಾಟಕವಾಗಿ ಆರಂಭವಾಗುವ ದೃಶ್ಯಗಳು ಅಲ್ಲಿಂದ ಹಿನ್ನೆಲೆಯಲ್ಲಿ ಇರುವ ತೆರೆಯ ಮೇಲೆ ಒಮ್ಮೆ ಸಾಕ್ಷ್ಯಚಿತ್ರವಾಗಿ, ಇನ್ನೊಮ್ಮೆ ಸಿನಿಮಾ ಆಗಿ ಮುಂದುವರಿಯುತ್ತವೆ. ಜೊತೆಗೆ ಗಾಂಧೀವಾದದ ಕುರಿತು, ಗಾಂಧೀ ವ್ಯಕ್ತಿತ್ವದ ಕುರಿತು ಸಂದರ್ಶನಗಳ ತುಣುಕುಗಳೂ ಕಾಣಿಸಿಕೊಳ್ಳುತ್ತವೆ. ರಂಗಕ್ಕೆ ಮರಳುವ, ತೆರೆಗೆ ಜಿಗಿಯುವ ಈ ಕಣ್ಣೋಟದ ಆಟದ ಮೂಲ, ನಾಟಕವೇ ಆಗಿರುವುದರಿಂದ ರಂಗಾಸಕ್ತರ ಕುತೂಹಲವನ್ನು ಕೆಣಕುವಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ.

‘ಇದು ರಾಷ್ಟ್ರಪಿತನ ಜೀವನ ಚರಿತ್ರೆಯಲ್ಲ, ಗಾಂಧಿವಾದದ ಪ್ರತಿಪಾದನೆಯೂ ಅಲ್ಲ. ಆದರೆ ನಮ್ಮ ಕಾಲದ ಸವಾಲುಗಳಿಗೆ ಗಾಂಧಿ ಮಾರ್ಗದಲ್ಲಿ ಉತ್ತರ ಹುಡುಕುವ ಯತ್ನ’ ಎನ್ನುತ್ತಾರೆ ಶಂಕರ್. ಮುಖ್ಯವಾಗಿ ಅಹಿಂಸೆ ಮತ್ತು ಸತ್ಯಾಗ್ರಹ, ಹಿಂದೂ-ಮುಸ್ಲಿಂ ಏಕತೆ, ಅಸ್ಪೃಶ್ಯತೆ ನಿವಾರಣೆ ಮತ್ತು ಜೀವನ ಶೈಲಿಯ ಕುರಿತು ಗಾಂಧಿ ವಿಚಾರಗಳನ್ನು ಪಾತ್ರಗಳ ಸಂವಾದ, ಸಿನಿಮಾ ದೃಶ್ಯಾವಳಿ ಮತ್ತು ಸಂದರ್ಶನಗಳ ಮೂಲಕ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನವನ್ನು ಶಂಕರ್ ಮಾಡಿದ್ದಾರೆ. ರಿಚರ್ಡ್ ಅಟೆನ್‌ಬರೋ ಅವರ ‘ಗಾಂಧಿ’, ಶ್ಲೋಕ್ ಶರ್ಮಾ ನಿರ್ದೇಶನದ ‘ಬಾಂಬೆ ಮಿರರ್’ ಸಿನಿಮಾದ ದೃಶ್ಯಗಳು, ಚಾರ್ಲಿ ಚಾಪ್ಲಿನ್ ಸಿನಿಮಾದ ದೃಶ್ಯಗಳು, ಎಚ್.ಎಸ್.ದೊರೆಸ್ವಾಮಿ ಮತ್ತು ದೇವನೂರ ಮಹಾದೇವ ಅವರ ಸಂದರ್ಶನದ ತುಣುಕುಗಳು, ಪಿಚ್ಚಳ್ಳಿ ಶ್ರೀನಿವಾಸ್ ಅವರ ತತ್ವಪದ ಗಾಯನ ಮುಂತಾಗಿ ತೆರೆಯ ಮೇಲಿನ ಎಲ್ಲ ದೃಶ್ಯಗಳೂ ರಂಗದ ಮೇಲೆ ನಡೆಯುವ ನಾಟಕಕ್ಕೆ ಪೂರಕವಾಗಿದ್ದು ರಂಗಪ್ರಸ್ತುತಿಯ ಹೊಸ ಅನುಭವವೊಂದನ್ನು ಕಟ್ಟಿಕೊಡುತ್ತದೆ.

ರಂಗಭೂಮಿಯ ಜೊತೆಗೆ ಮಾಧ್ಯಮದ ಇತರ ಆಯಾಮಗಳೂ ಸೇರಿಕೊಂಡು ರೂಪಗೊಳ್ಳುವ ಈ ಬಗೆಯ ರಂಗಪ್ರಸ್ತುತಿ ನಿಜಕ್ಕೂ ಅಪರೂಪದ್ದು. ಹಲವು ವರ್ಷಗಳ ಹಿಂದೆ ಕನ್ನಡದಲ್ಲಿ ಆರುಂಧತಿ ನಾಗ್ ಅವರು ನಟಿಸಿದ್ದ ‘ಒಡಕಲು ಬಿಂಬ’ ನಾಟಕದಲ್ಲಿ ಟಿವಿ ತೆರೆಯಲ್ಲಿ ತನ್ನದೇ ಪಾತ್ರದ ಜೊತೆ ಸಂಭಾಷಣೆ ನಡೆಸುತ್ತಾ ಮುಂದುವರಿಯುವ ಪ್ರಯೋಗ ಯಶಸ್ವಿಯಾಗಿತ್ತು. ಆದರೆ ಶಂಕರ್ ಅವರ ಪ್ರಯತ್ನ ರಾಜಕೀಯ ತಾತ್ವಿಕತೆಯ ಹಿನ್ನೆಲೆಯಲ್ಲಿ ರೂಪುಗೊಂಡಿದ್ದು ರಂಗ ಸಾಧ್ಯತೆಯ ಇನ್ನಷ್ಟು ಆಯಾಮಗಳನ್ನು ಒಳಗೊಂಡಿದೆ.

ಸಮಕಾಲೀನ ರಾಜಕೀಯ ಸನ್ನಿವೇಶದಲ್ಲಿ ಬಾಪೂ ಅವರನ್ನು ಮತ್ತಷ್ಟು ಅರ್ಥೈಸುವ ಮತ್ತು ಹೊಸ ತಲೆಮಾರಿಗೆ ಅರ್ಥವತ್ತಾಗಿ ಪರಿಚಯಿಸುವ ಪ್ರಯತ್ನಗಳ ಅಗತ್ಯವಿದೆ ಎನ್ನುವುದಂತೂ ನಿಸ್ಸಂಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT