ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಂತರ ರಂಗಭಾರತ, ಸದಾ ಜೀವಂತ

Last Updated 10 ಸೆಪ್ಟೆಂಬರ್ 2018, 14:57 IST
ಅಕ್ಷರ ಗಾತ್ರ

ಸಮಗ್ರ ಭಾರತ ರಂಗಭೂಮಿ ಕಟ್ಟಿಕೊಟ್ಟವರು ರಂಗ ದಿಗ್ಗಜ ಬಿ.ವಿ.ಕಾರಂತರು. ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಯ ಸೇತುವಾಗಿ ಕೊಡು–ಕೊಳ್ಳುವಿಕೆಯನ್ನು ಹದಗೊಳಿಸಿ ಆಧುನಿಕ ರಂಗಸಂಗೀತ ಪ್ರಕಾರವನ್ನು ಚಾಲ್ತಿಗೆ ತಂದವರು ಅವರು. ಅಂತೆಯೇ ನಗರದಲ್ಲಿ ಕಟ್ಟಿದ ‘ಬೆನಕ’ ತಂಡ ಕಾರಂತರು ಬೆಳೆಸಿದ ಕೂಸು.

ಕಾರಂತರ ಆಶಯಗಳನ್ನು ಹೊತ್ತ ‘ಬೆನಕ’ ಸೆಪ್ಟೆಂಬರ್ 11ರಿಂದ 23ರ ತನಕ ಬಿ.ವಿ.ಕಾರಂತ ರಾಷ್ಟ್ರೀಯ ರಂಗೋತ್ಸವ ಆಯೋಜಿಸಿದೆ. ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿ, ಅದೇ ತಿಂಗಳು ಮರಣವನ್ನಪ್ಪಿದ ಕಾರಂತರ ನೆನಪಿಗಾಗಿ ಈ ಮಾಸವಿಡೀ ಬೆನಕ, ಕಾರಂತ ರಂಗೋತ್ಸವ ನಡೆಸುತ್ತಿದೆ. ಅವರ ನೇರ ಮತ್ತು ಪರೋಕ್ಷ ಶಿಷ್ಯ ಪರಂಪರೆ ಈ ದಿನಗಳಲ್ಲಿ ಕಾರಂತರೇ ನಿರ್ದೇಶಿಸಿ, ಸಂಗೀತ ನೀಡಿದ ನಾಟಕಗಳನ್ನು ಪುನರ್ ಸಂಯೋಜನೆ ಮಾಡಿ ಪ್ರದರ್ಶಿಸುತ್ತಿರುವುದು ಈ ರಂಗೋತ್ಸವದ ವಿಶೇಷ. ಹವ್ಯಾಸಿ ರಂಗಸಂಗೀತಕ್ಕೆ ಹೊಸ ಆಯಾಮ ನೀಡಿದ ಕಾರಂತರಿಗೆ ಗೌರವ ಸಲ್ಲಿಸುವ ಸಲುವಾಗಿ ರಂಗ ಗೀತೋತ್ಸವವನ್ನು ನಡೆಸಲಾಗುತ್ತಿದೆ.

‘ಭಾರತದ ರಂಗಭೂಮಿಗೆ ರಾಷ್ಟ್ರೀಯ ರಂಗಭೂಮಿಯನ್ನು ಕಟ್ಟಿಕೊಟ್ಟವರು ಕಾರಂತರು. ಈ ಹಿಂದೆ ಬರೀ ಹಿಂದಿ, ಮರಾಠಿ ಆಂಧ್ರ ಹೀಗೆ ಆಯಾ ಪ್ರಾದೇಶಿಕ ರಂಗಭೂಮಿ ಮಾತ್ರವಿತ್ತು. ಆದರೆ,ಈ ಎಲ್ಲಾ ರಂಗಭೂಮಿಗಳ ಅಂತಃಸತ್ವವನ್ನು ಒಗ್ಗೂಡಿಸಿ ರಂಗದಲ್ಲಿ ಭಾರತೀಯತೆಯನ್ನು ತಂದವರು ಅವರು. ಸುಮಾರು 18 ಭಾಷೆಗಳಲ್ಲಿ 150ಕ್ಕೂ ಹೆಚ್ಚು ನಾಟಕಗಳನ್ನು ಮಾಡಿಸಿದ್ದರು ಅವರು. ಅಷ್ಟೊಂದು ಭಾಷೆಗಳಲ್ಲಿ ಅಷ್ಟು ವೈವಿಧ್ಯಮಯವಾಗಿ ಕೆಲಸ ಮಾಡಿದ ರಂಗಕರ್ಮಿಗಳಲ್ಲಿ ಕಾರಂತರೇ ಅಗ್ರಗಣ್ಯರು’ ಎನ್ನುತ್ತಾರೆ ‘ಬೆನಕ’ ತಂಡದ ಅಧ್ಯಕ್ಷ, ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ.

‘ಎಲ್ಲಕ್ಕಿಂತ ಮುಖ್ಯವಾಗಿ ರಂಗಸಂಗೀತಕ್ಕೆ ಹೊಸ ಆಯಾಮ ಕೊಟ್ಟವರು ಅವರು. ಈ ಹಿಂದೆ ಹವ್ಯಾಸಿ ರಂಗದಲ್ಲಿ ರಂಗಸಂಗೀತ ಬಳಸದಿರುವುದೇ ದೊಡ್ಡ ವಿಷಯವಾಗಿತ್ತು. ಆದರೆ, ಕಾರಂತರು ವೃತ್ತಿ ಮತ್ತು ಹವ್ಯಾಸಿ ನಡುವೆ ಸೇತುವೆಯಂತೆ ಕೆಲಸ ಮಾಡಿ ಭಾರತೀಯ ರಂಗಸಂಗೀತ ರೂಪಿಸಿದರು. ಎರಡರ ಸಮ್ಮಿಶ್ರಣದಲ್ಲಿ ರಂಗಗೀತೆಗಳ ಪ್ರಕಾರವೊಂದನ್ನು ರೂಪಿಸಿದರು. ಅವರು ಕಟ್ಟಿದ ರಂಗಭಾರತ ಸದಾ ಜೀವಂತ. ಹಾಗಾಗಿ, ಈ ಶೀರ್ಷಿಕೆಯಡಿಯಲ್ಲಿಯೇ ಬಿ.ವಿ.ಕಾರಂತರ 89 ರಾಷ್ಟ್ರೀಯ ರಂಗೋತ್ಸವವನ್ನು ಬೆನಕ ಆಯೋಜಿಸಿದೆ. ಇದಕ್ಕೆ ಹಲವರ ಸಹಕಾರಿವದೆ’ ಎಂದು ವಿವರಿಸುತ್ತಾರೆ ಅವರು.

ರಂಗಸಂಗೀತ ಕಾರಂತರಿಗೆ ಪ್ರಿಯವಾದ ಸಂಗತಿ. ಅದಕ್ಕಾಗಿಯೇ ಉತ್ಸವವನ್ನು ರಂಗ ಸಂಗೀತೋತ್ಸವದ ಮೂಲಕ ಉದ್ಘಾಟಿಸಲಾಗುತ್ತಿದೆ. ಸಮಾರೋಪ ದಿನದಂದು ರಂಗ ಗೀತೋತ್ಸವ ರಾಜ್ಯಮಟ್ಟದ ರಂಗಗೀತೆಗಳ ಉತ್ಸವ ನಡೆಯಲಿದೆ. ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ರಂಗಸಂಗೀತವಿರುವುದು ವಿಶೇಷ. ರಂಗೋತ್ಸವದ ಪೂರ್ವಭಾವಿಯಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರಂಗಗೀತೋತ್ಸವದಲ್ಲಿ ಪಾಲ್ಗೊಂಡು ಆಯ್ಕೆಯಾದವರು ರಂಗ ಗೀತೋತ್ಸವದಲ್ಲಿ ಭಾಗವಹಿಸುತ್ತಾರೆ. 23ರ ಸಂಜೆ ಕಲ್ಪನಾ ನಾಗನಾಥ್, ವಾಸುಕಿ ವೈಭವ್ ಮತ್ತು ಬೆನಕ ತಂಡ ಕಾರಂತರ ಕನ್ನಡ ರಂಗಗೀತೆಗಳ ವಿನೂತನ ಪ್ರಯೋಗದ ರಸದೌತಣವನ್ನು ಪ್ರೇಕ್ಷಕರಿಗೆ ಉಣಬಡಿಸಲಿದೆ’ ಎನ್ನುತ್ತಾರೆ ‘ಬೆನಕ’ದ ಖಜಾಂಚಿ ಎಸ್.ಕೆ. ಶ್ರೀನಾಥ್.

ಸೆ.11ರಿಂದ 13ರತನಕ ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನ ಮತ್ತು ರಂಗಗೀತೆ ಕಾರ್ಯುಕ್ರಮ ನಡೆಯಲಿದೆ. ಸೆ. 20ರಿಂದ 22ರ ತನಕ ಪ್ರದರ್ಶನವಾಗಲಿರುವ ನಾಟಕಗಳು ಜೆ.ಪಿ.ನಗರದ ರಂಗಶಂಕರದಲ್ಲಿ ಪ್ರದರ್ಶನವಾಗಲಿವೆ. ರಂಗೋತ್ಸವದ ಸಮಾರೋಪ ಚಾಮರಾಜಪೇಟೆಯ ಡಾ.ರಾಜ್ ಭವನದಲ್ಲಿ ನಡೆಯಲಿದೆ.

ಕಾರಂತ ಮತ್ತು ಪ್ರೇಮಾ ಕಾರಂತ ಅವರ ಆತ್ಮಚರಿತ್ರೆ ಆಧಾರಿತ ರಂಗರೂಪ ‘ಎನಗೂ ಆಣೆ ರಂಗ ನಿನಗೂ ಆಣೆ’ ನಾಟಕ ಸೆ. 22ರಂದು ಮೊದಲ ಬಾರಿಗೆ ರಂಗಶಂಕರದಲ್ಲಿ ಪ್ರದರ್ಶನ ಕಾಣಲಿದೆ. ಆತ್ಮಚರಿತ್ರೆಗೆ ಕೃಷ್ಣಪ್ರಸಾದ್ ಮತ್ತು ಶ್ರೀಪತಿ ಮಂಜನಬೈಲ್ ರಂಗರೂಪ ನೀಡಿದ್ದರೆ, ಪರಿಕಲ್ಪನೆ ಮತ್ತು ನಿರ್ದೇಶನ ಟಿ.ಎಸ್.ನಾಗಾಭರಣ ಅವರದ್ದು. ಆಸಕ್ತರು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲೂ ಖರೀದಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT