ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೊತೆಗಿರುವನು ಚಂದಿರ’.. ಅಮೋಘ ನಾಟಕವೊಂದರ ವಜ್ರ ಮಹೋತ್ಸವ ವರ್ಷ

‘ಜೊತೆಗಿರುವನು ಚಂದಿರ‘ ಒಂದು ಸುಂದರ ಬೆಳದಿಂಗಳು: ಮಂಜುನಾಥ್ ಬಿ.ಆರ್. ಅವರ ಲೇಖನ
ಮಂಜುನಾಥ್ ಬಿ.ಆರ್.
Published 24 ಏಪ್ರಿಲ್ 2024, 9:18 IST
Last Updated 24 ಏಪ್ರಿಲ್ 2024, 9:18 IST
ಅಕ್ಷರ ಗಾತ್ರ

ಕಳೆದ ವಾರ ಬೆಂಗಳೂರಿನ ರಂಗ ಶಂಕರದಲ್ಲಿ ‘ಜೊತೆಗಿರುವನು ಚಂದಿರ’ ನಾಟಕ ಪ್ರದರ್ಶನದ ವೇಳೆ ಇಳೆಗಿಳಿದಿಹ ಬೆಳದಿಂಗಳಲ್ಲಿ ಜಳಕ ಮಾಡಿದಂತಹ ಅನುಭವ . ಸುಮಾರು 2 ಗಂಟೆ 20 ನಿಮಿಷಗಳ ಕಾಲ ಬಹುತೇಕ ಈ ತಲೆಮಾರಿನ ಯುವಕರೇ ಆಗಿದ್ದ ಪ್ರೇಕ್ಷಕರು ಹಾಡು, ನೃತ್ಯ, ಚುರುಕಾದ ಸಂಭಾಷಣೆ, ಹದವಾದ ಅಭಿನಯ, ಮೃದುವಾದ ಹಾಸ್ಯಗಳಲ್ಲಿ ಮಿಂದು ಖುಷಿಯಿಂದ ಹೊರಬಂದುನ್ನು ನೋಡುವುದೇ ಚೆಂದ.

ಯಾವುದೋ ಗತಕಾಲದ ಸಿನಿಮಾದಲ್ಲಿ ಕೇಳಿ ಬಂದಂತೆ ಕ್ಷಣಕ್ಕೊಮ್ಮೆ ಸಿಳ್ಳೆಗಳು, ಚಪ್ಪಾಳೆಗಳು. ಹಾಗೆಂದು ಸೊಂಟದ ಕೆಳಗಿನ ಹಾಸ್ಯಕ್ಕೋ ಅಥವಾ ಕೀಳು ಮನರಂಜನೆಗೋ ಸಿಕ್ಕ ಸ್ಪಂದನೆ ಅಲ್ಲ ಇದು. ಒಂದು ಗಾಢವಾದ ಅನುಭವ, ಒಂದು ಬದುಕಿನ ಕುರಿತಾದ ಗಂಭೀರ ಒಳನೋಟ.

ಇವೆಲ್ಲವನ್ನು ಹೊಂದಿದ್ದೂ ಕೂಡ ಕಥೆಯೊಂದು ನಮ್ಮ ಎದುರು ಮನಸ್ಸನ್ನು ರಂಜಿಸುತ್ತಾ ಬಿಚ್ಚಿಕೊಂಡ ಪರಿ ಅದ್ಭುತ.

ಆದರೆ, ಜೊತೆಗಿರುವನು ಚಂದಿರ ನಾಟಕದ ಮಹತ್ವ ಇದರ ಆಚೆಗೂ ಇದೆ. ಇದು ನಮ್ಮ ಸಮಕಾಲಿನ ಬದುಕಿಗೆ ಕನ್ನಡಿಯಾಗಬಲ್ಲದು, ಟೀಕೆಯಾಗಬಲ್ಲದು. ಮತ್ತೆ ಬೆಳದಿಂಗಳಿಗೆ ಇರುವುದು ಕೇವಲ ಮನೋಹರತೆಯ ಗುಣ ಮಾತ್ರ ಅಲ್ಲ, ಅದು ಕಾಡಿನ ಕತ್ತಲಿನಲ್ಲಿ ಕಂಗೆಟ್ಟವರಿಗೆ ಕಂಡ ದಾರಿಯೂ ಆಗಬಹುದು.

‘ಜೊತೆಗಿರುವನು ಚಂದಿರ’ ನಾಟಕದ ಮೊದಲ ರೂಪವು 1964ರಲ್ಲಿ ನ್ಯೂಯಾರ್ಕ್ ನಗರದ ಬ್ರಾಡ್ವೇಯಲ್ಲಿ ಪ್ರದರ್ಶನ ಕಂಡಿತು. ಅಂದರೆ ಈ ನಾಟಕಕ್ಕೆ ಈಗ ವಜ್ರ ಮಹೋತ್ಸವ. ಇದು ಎಂಥಾ ಯಶಸ್ವಿ ನಾಟಕವಾಯಿತೆಂದರೆ ಸತತವಾಗಿ 3,242 ಪ್ರದರ್ಶನಗಳನ್ನು ಕಂಡಿತು.

ನಂತರ ಲಂಡನ್‌ನಲ್ಲಿಯೂ 2000ಕ್ಕೂ ಹೆಚ್ಚು ಪ್ರದರ್ಶನಗಳು. ಆಸ್ಟ್ರೇಲಿಯಾ ಜರ್ಮನಿ, ಫ್ರಾನ್ಸ್ ಹೀಗೆ ಹೋದಲ್ಲೆಲ್ಲ ಜಯಭೇರಿ. ಮೂಲ ಕಥೆಗಾರ ಶೋಲೇಂ ಆಲ್ಕೈಮ್ 1905ರ ಉಕ್ರೇನ್ ನ ಹಳ್ಳಿಗಾಡಿನ ಯಹೂದಿ ಕುಟುಂಬದ ಕಥೆಯಾಗಿ ಇದನ್ನು ಬರೆದಿದ್ದ. ಹೆಸರು ‘ಟೇವ್ಯೆ ಮತ್ತು ಆತನ ಹೆಣ್ಣು ಮಕ್ಕಳು’. ನಾಟಕ ರೂಪವನ್ನು ಮುಗಿಸುವ ಮುನ್ನ ತೀರಿಕೊಂಡಿದ್ದ. 20ನೆಯ ಶತಮಾನದ ಪೂರ್ವಾರ್ಧದಲ್ಲಿಯೇ ಯಿದ್ದಿಶ್ ಭಾಷೆಯಲ್ಲಿ ಇದು ನಾಟಕವೂ, ನಂತರ ಚಲನಚಿತ್ರವೂ ಆಗಿ ಯಶಸ್ವಿಯಾಗಿತ್ತು.

ಜೊತೆಗಿರುವನು ಚಂದಿರ

ಜೊತೆಗಿರುವನು ಚಂದಿರ

ಈ ನಾಟಕ ಎಲ್ಲರ ಗಮನವನ್ನು ಸೆಳೆದದ್ದು ಅಮೆರಿಕದಲ್ಲಿ ಚಲನಚಿತ್ರವಾಗಿ. 1971 ರಲ್ಲಿ ಆ ವರ್ಷದ ಅತ್ಯಂತ ಹೆಚ್ಚು ಹಣಗಳಿಕೆಯ ಚಿತ್ರವಾಗಿ 'ಫಿಡ್ಲರ್ ಆನ್ ದಿ ರೂಫ್' ಜಯಭೇರಿ ಬಾರಿಸಿತು. ಕನ್ನಡದಲ್ಲಿ ನೀನಾಸಂ ಸಂಸ್ಥೆಯು ತನ್ನ ವಾರ್ಷಿಕ ತಿರುಗಾಟದ ಭಾಗವಾಗಿ ಈ ನಾಟಕವನ್ನು 1998-99 ರಲ್ಲಿ ಮೊದಲ ಬಾರಿಗೆ ಪ್ರದರ್ಶಿಸಿತು. ಹೀಗಾಗಿ ಕನ್ನಡದಲ್ಲಿ ಇದಕ್ಕೆ ಬೆಳ್ಳಿ ಹಬ್ಬ.

ಈ ಬಾರಿ ಮೈಸೂರಿನ 'ಸಂಕಲ್ಪ' ತಂಡದಿಂದ ’ಜೊತೆಗಿರುವನು ಚಂದಿರ’ ನಾಟಕ ರಂಗಶಂಕರದಲ್ಲಿ ಪ್ರೇಕ್ಷಕರನ್ನು ಸಂಪೂರ್ಣವಾಗಿ ಗೆದ್ದುಕೊಂಡು ಸತತವಾಗಿ ಹೌಸ್ ಫುಲ್ ಆಗಿ ಪ್ರದರ್ಶಿತವಾಯಿತು.

ಸುಮಾರು 30 ವರ್ಷಗಳ ಹಿಂದೆ ಸಾಹಿತಿ ಎ. ಎನ್. ಮೂರ್ತಿರಾಯರು ಬಹಳ ಪ್ರೀತಿಯಿಂದ ಈ ಸಿನಿಮಾದ ಬಗ್ಗೆ ಮಾತನಾಡಿದ್ದರು. ಹೊಸ ಮೌಲ್ಯ, ಆಕಾಂಕ್ಷೆಗಳನ್ನು ಹೊಂದಿದ ಇಂದಿನ ತಲೆಮಾರೊಂದು, ಹಿಂದಿನ ಪರಂಪರೆ - ಸಂಪ್ರದಾಯವನ್ನು ಮೀರಿ ಹೊರಟಾಗ ಕುಟುಂಬವೊಂದರಲ್ಲಿ ತಾಯಿ ತಂದೆ ಎದುರಿಸುವ ಸವಾಲುಗಳೇನು? ನೋವುಗಳೇನು? ಆದರೆ, ಅವರು ಅದನ್ನು ಮೀರಿ ಹೇಗೆ ಹೊರಗೆ ಬರಬೇಕು ಇಂದು ವಿವರಿಸುತ್ತಾ, ನಮ್ಮ ತಲೆಮಾರು ಇದನ್ನು ಅನುಭವಿಲೇಬೇಕಾಯಿತು ಎಂದು ತೋಡಿಕೊಂಡಿದ್ದರು.

ಅವರ ಮಾತು ನಿಜ. ಸಮಾಜ ಒಂದು ಸ್ಥಿತ್ಯಂತರ ಘಟ್ಟದಲ್ಲಿದ್ದಾಗ, ಹಳೆಯ ಮತ್ತು ಹೊಸ ಮೌಲ್ಯಗಳ ನಡುವೆ ಸಂಘರ್ಷ ಬಂದಾಗ ಒಂದು ತಲೆಮಾರು ಸಂಕಟಗಳನ್ನು ಅನುಭವಿಸಿ ಮಾನಸಿಕವಾಗಿ ಮರುಹುಟ್ಟು ಪಡೆಯುತ್ತದೆ. ಆದರೆ, ಕನ್ನಡದಲ್ಲಿ ಬಂದಿರುವ ರೂಪಾಂತರದಲ್ಲಿ ಇದಕ್ಕೆ ಇನ್ನಷ್ಟು ಅರ್ಥಗಳು ಹುಟ್ಟಿಕೊಂಡಿವೆ.

ಮೂಲ ಕಥೆಯಲ್ಲಿ ಇದ್ದ ಯಹೂದಿ ಕುಟುಂಬದ ಬದಲಾಗಿ ಇಲ್ಲಿ ಇದು ಮುಸ್ಲಿಂ ಕುಟುಂಬದ ಸುತ್ತಲೂ ನಡೆಯುತ್ತದೆ. ಮನೆಯ ಯಜಮಾನ ಬಡೇ ಮಿಯಾ ಇಲ್ಲಿ ನಾಯಕ. ಆತನ ಮಡದಿ ಮುನೀರ್ ಜಾನ್. ಇವರಿಗೆ ಮೂವರು ಹೆಣ್ಣು ಮಕ್ಕಳು. ಆ ಸಂಪ್ರದಾಯನಿಷ್ಠ ಸ್ವತಂತ್ರ ಪೂರ್ವ ಭಾರತದ ಮುಸ್ಲಿಂ ಕುಟುಂಬದಲ್ಲಿ, ಪ್ರೇಮವನ್ನು ಆಧರಿಸಿದ ಮದುವೆ ಎಂಬುದನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ತಂದೆ ನಿರ್ಧರಿಸುವ ಮತ್ತು ಮಧ್ಯಸ್ಥಿಕೆದಾರರು ಕುದುರಿಸುವ ಸಾಂಪ್ರದಾಯಿಕ ಮದುವೆ ಮಾತ್ರ ಅವರಿಗೆ ಗೊತ್ತು. ಆದರೆ ಅದು ಹೇಗೋ ಏನೋ ಬಡೇ ಮಿಯಾನ ಮೂವರು ಹೆಣ್ಣು ಮಕ್ಕಳೂ ತಂದೆ ತಾಯಿ ನಿರೀಕ್ಷಿಸದಿದ್ದ ರೀತಿಯಲ್ಲಿ ತಮ್ಮ ಹೃದಯದ ಕರೆಗೆ ಓಗೊಟ್ಟು ಮದುವೆಯಾಗುತ್ತಾರೆ. ಮನಸ್ಸಿನಲ್ಲಿ ನಡೆಯುವ ಎಲ್ಲಾ ತಾಕಲಾಟ ವಿರೋಧಗಳನ್ನು ಮೀರಿ ತಾಯಿ ತಂದೆಯರು ತಮ್ಮ ಮಕ್ಕಳ ಆಯ್ಕೆಯನ್ನು ಹಂತ ಹಂತವಾಗಿ ಸ್ವೀಕರಿಸುತ್ತಾ ಉದಾತ್ತ ಮನುಷ್ಯರಾಗಿ ಅರಳಿಕೊಳ್ಳುತ್ತಾ ಹೋಗುತ್ತಾರೆ.

ಅವರ ಸುತ್ತಲಿನ ಹಳ್ಳಿಯ ಬದುಕಿನಲ್ಲಿ ಸಣ್ಣತನವಿದೆ, ಗಾಸಿಪ್ ಇದೆ, ಜಗಳಗಂಟತನವಿದೆ, ಕೋಮು ದ್ವೇಷವೂ ಇದೆ, ಎಲ್ಲಕ್ಕಿಂತಲೂ ಮಿಗಿಲಾಗಿ ಕಾಡುವ ಬಡತನವಿದೆ. ಆದರೆ ಬಹುತೇಕ ಎಲ್ಲರಲ್ಲೂ ಮಾನವೀಯತೆಯ ಹಣತೆಯು ಬೆಳಗುತ್ತದೆ. ಇಡೀ ನಾಟಕವನ್ನು ಒಂದು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವುದು ಇದೇ ಗುಣವೇ.

ಕಥೆ ಭಾರತದ ವಿಭಜನೆಯ ಹಿನ್ನೆಲೆಯನ್ನು ಹೊಂದಿದೆ. ಅರ್ಥಹೀನ ಕೋಮು ದ್ವೇಷ, ಹಿಂಸೆ ಮತ್ತು ದಂಗೆ ಈ ಬೆಳಗುವ ಮಾನವತೆಯ ಹಿನ್ನೆಲೆಯ ಅಂಧಕಾರವಾಗಿ ನಮ್ಮ ಕಣ್ಣಿಗೆ ಕಟ್ಟುತ್ತದೆ. ಆದ್ದರಿಂದಲೇ ಇದು ಸಮಕಾಲೀನ.

ಕನ್ನಡಕ್ಕೆ ಇದನ್ನು ರೂಪಾಂತರಿಸಿದ ಜಯಂತ ಕಾಯ್ಕಿಣಿಯವರು ಮೂಲದಲ್ಲಿ ಇರುವ ಪಾತ್ರ ಚಿತ್ರಣ, ಒಟ್ಟಾರೆ ವಾತಾವರಣ, ಹಾಡು ಮತ್ತು ನೃತ್ಯದ ನವಲವಿಕೆ ಎಲ್ಲವನ್ನು ಹಿಡಿದಿಡುವಂತೆ ಅನುವಾದ ಮಾಡಿದ್ದಾರೆ.

ಆದರೆ, ಅದನ್ನು ನಮ್ಮ ಭಾರತೀಯ ಸಂಧರ್ಭಕ್ಕೆ ಹಾಗೂ ಮುಸ್ಲಿಂ ಸಮುದಾಯದ ಸಂಸ್ಕೃತಿಗೆ ಒಗ್ಗುವಂತೆ ರೂಪಾಂತರಿಸಿರುವ ಪ್ರತಿಭೆ ಇದೆಯಲ್ಲ, ಅದು ಅಸಾಧಾರಣವಾದದ್ದು. ಎಷ್ಟೋ ಕಡೆ ಅವರ ಅನುವಾದ ಮೂಲವನ್ನು ಮೀರಿದೆ. ಉದಾಹರಣೆಗೆ 'ವಿಸ್ಮಯ ಆಹಾ ವಿಸ್ಮಯ' ಎಂಬ ಹಾಡು ಮತ್ತು ಬಡೇ ಮಿಯಾ ಹುಟ್ಟಿಸಿಕೊಂಡು ಅಭಿನಯಿಸುವ ಕನಸಿನ ದೃಶ್ಯದಲ್ಲಿ ಸೇರಿಕೊಂಡಿರುವ ಅಂಶಗಳು. ನಾಟಕದ ಉದ್ದಕ್ಕೂ ಬಡೇ ಮಿಯಾ ಆಗಿ ನಟಿಸಿರುವ ಹಾಗೂ ನಾಟಕದ ನಿರ್ದೇಶನ ಸಹ ಮಾಡಿರುವ ಹುಲಿಗಪ್ಪ ಕಟ್ಟಿಮನಿ ಹಾಗೂ ತಾಯಿ ಮುನೀರ್ ಜಾನ್ ಪಾತ್ರದಲ್ಲಿ ಎನ್. ಮಂಗಳ ಅಮೋಘವಾದ ಅಭಿನಯ ನೀಡಿದ್ದಾರೆ.

ನಾಟಕದ ಕೊನೆಯಲ್ಲಿ ದೇಶ ವಿಭಜನೆಯಾಗಿದೆ, ಕುಟುಂಬವು ಕೈಗ ಸಿಕ್ಕಷ್ಟು ಸಾಮಾನುಗಳನ್ನು ಗಂಟುಮೂಟೆ ಕಟ್ಟಿಕೊಂಡು ಗುಳೇ ಹೊರಟಿದೆ. ಅಪ್ಪ ತನ್ನ ಧರ್ಮವನ್ನು ದಾಟಿ ಮದುವೆಯಾದ ಕೊನೆಯ ಮಗಳನ್ನು ಕ್ಷಮಿಸಲಾರ. ತಂದೆಯನ್ನು ಕೊನೆಯ ಬಾರಿ ನೋಡದೆ ಮಗಳು ಇರಲಾರಳು. ಅವಳು ವಿದಾಯ ಹೇಳಲು ಬಂದಿದ್ದಾಳೆ. ಸಂಪ್ರದಾಯಕ್ಕೆ ಬದ್ಧನಾದ, ಸ್ವಭಾವಕ್ಕೆ ವಿರುದ್ಧವಾದ ಕಠೋರ ನಿಲುವನ್ನು ತೆಗೆದುಕೊಂಡಿರುವ ತಂದೆ ಏನು ಮಾಡಬೇಕು?

ಜೊತೆಗಿರುವನು ಚಂದಿರ

ಜೊತೆಗಿರುವನು ಚಂದಿರ

ಇಲ್ಲಿ ನಟ - ನಿರ್ದೇಶಕರು ನಾಟಕದ ಸ್ಕ್ರಿಪ್ಟನ್ನು ಮೀರಿ ಅಭಿನಯಿಸುತ್ತಾರೆ. ನಾಟಕವನ್ನು ರೂಪಾಂತರ ಮಾಡಿದ ಲೇಖಕರು ಮೂಲವನ್ನು ಮೀರಿ ಬರೆದಿಲ್ಲವೇ! ಹಾಗೆ ಇವರೂ ತಮ್ಮ ಹಕ್ಕನ್ನು ಸ್ವಾತಂತ್ರವನ್ನು ಚಲಾಸಿದ್ದಾರೆ. ಇದು ಸರಿಯೇ ತಪ್ಪೇ ಎಂಬ ಪ್ರಶ್ನೆಗೆ ಅವಕಾಶವೇ ಇಲ್ಲ. ಭಾಷಾಂತರ ಮಾಡುವಾಗ, 'ಯಾವುದು ಬಂದು ಸೇರಿಕೊಳ್ಳುತ್ತದೋ ಅದೇ ಕಾವ್ಯ' ಎಂಬ ಮಾತಿದೆ. 'ಲೇಖಕನು ಬರೆದ ಶಬ್ದಗಳನ್ನು ಮೀರಿ ನಟನು ಹೊಸ ಅರ್ಥವೊಂದನ್ನು ರಂಗದ ಮೇಲೆ ಸೃಷ್ಟಿಸುತ್ತಾನಲ್ಲ ಅದೇ ಅಭಿನಯ' ಎಂದು ನಾವು ಹೇಳಬಹುದು!

ಆ ದಿನದ ಪ್ರದರ್ಶನದಲ್ಲಿನ ಅತ್ಯಂತ ಅದ್ಭುತ ಕ್ಷಣ ಎಂದರೆ ಅದೇ.ಪ್ರೇಮದ ಹಕ್ಕಿನ ಸುತ್ತಲೂ ಕೋಮು ಗಲಭೆಗಳು ವಿದ್ವೇಷಗಳು ನಡೆಯುವ ಈ ಕಾಲದಲ್ಲಿ ರಂಗಮಂದಿರವನ್ನು ತುಂಬಿದ್ದ 350 ಜನ 350 ರೀತಿಗಳಲ್ಲಿ ಚಪ್ಪಾಳೆ ತಟ್ಟಿದರು. ತಂದೆ ಮತ್ತು ಮಗಳು ಉಕ್ಕಿ ಬಂದ ಅಂತಃಕರಣಕ್ಕೆ ಶರಣಾಗಿ, ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾ ಮಾಡುವ ಆ ಸಂಪ್ರದಾಯದ ಉಲ್ಲಂಘನೆಯನ್ನು ಪ್ರೋತ್ಸಾಹಿಸಿದರು. ನೋಡುವವರೆಲ್ಲರ ಕಣ್ಣು ತೇವವಾಗಿತ್ತು, ನಾಟಕ ಗೆದ್ದಿತ್ತು.

****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT