ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಜ್ರ’ದ ಹೊಳಪಿನಲ್ಲಿ ರವೀಂದ್ರ ಕಲಾಕ್ಷೇತ್ರ

Published 2 ಡಿಸೆಂಬರ್ 2023, 23:30 IST
Last Updated 2 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ
ಕರ್ನಾಟಕದ ಸಾಂಸ್ಕೃತಿಕ ಭೂಪಟದಲ್ಲಿ ಕಾಯಂ ಸ್ಥಾನ ಪಡೆದಿರುವ ರವೀಂದ್ರ ಕಲಾಕ್ಷೇತ್ರಕ್ಕೀಗ ವಜ್ರ ಮಹೋತ್ಸವದ ಸಂಭ್ರಮ. ಈ ನೆಪದಲ್ಲಿ ಕಲಾಕ್ಷೇತ್ರದ ಇತಿಹಾಸದ ಪುಟಗಳ ಹೊಳಪುಗಳ ಮರುನೋಟ ಇಲ್ಲಿದೆ...

ಭಾರತಕ್ಕೆ ಮೊದಲ ನೊಬೆಲ್ ಪ್ರಶಸ್ತಿ ತಂದುಕೊಟ್ಟ ಕವಿ ರವೀಂದ್ರನಾಥ ಟ್ಯಾಗೋರರ ಜನ್ಮ ಶತಮಾನೋತ್ಸವದ ನೆನಪಿನಲ್ಲಿ ಜನ್ಮತಳೆದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರಕ್ಕೂ ಕನ್ನಡ ಸಾಂಸ್ಕೃತಿಕ ಲೋಕಕ್ಕೂ ಅವಿನಾಭಾವ ನಂಟಿದೆ. ರಂಗಭೂಮಿ, ಸಾಹಿತ್ಯ, ಸಂಗೀತ, ನೃತ್ಯ ಕ್ಷೇತ್ರಗಳಷ್ಟೇ ಅಲ್ಲ; ನಾಡಿನ ಹಲವು ಹೋರಾಟ, ಚಳವಳಿಗಳಿಗೂ ಈ ಕಲಾಕ್ಷೇತ್ರದ ಕೊಡುಗೆ ಅವಿಸ್ಮರಣೀಯ.

1961ರಲ್ಲಿ ಟ್ಯಾಗೋರರ ಜನ್ಮಶತಾಬ್ದಿಗಾಗಿ ದೇಶದಾದ್ಯಂತ ರಂಗಮಂದಿರ ನಿರ್ಮಿಸಬೇಕೆಂಬ ಸಲಹೆ ಬಂದಿದ್ದೇ ಕನ್ನಡತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರಿಂದ. ಅಂತೆಯೇ ಕೋಲ್ಕತ್ತ, ಮುಂಬೈ, ಹೈದರಾಬಾದ್, ಭೋಪಾಲ್ ಮತ್ತು ಬೆಂಗಳೂರು ಹೀಗೆ ದೇಶದ ಐದು ಕಡೆ ರವೀಂದ್ರರ ನೆನಪಿನಲ್ಲಿ ರಂಗಮಂದಿರಗಳು ರೂಪುಗೊಂಡವು. 

1960ರ ದಶಕದಲ್ಲಿ ಕೊಳೆಗೇರಿಯಾಗಿದ್ದ ಜಾಗದಲ್ಲಿ ಕಲಾಕ್ಷೇತ್ರ ತಲೆಎತ್ತಿದ್ದು. 1963ರಲ್ಲಿ ಲೋಕಾರ್ಪಣೆಗೊಂಡ ರವೀಂದ್ರ ಕಲಾಕ್ಷೇತ್ರಕ್ಕೀಗ ವಜ್ರ ಮಹೋತ್ಸವದ ಸಂಭ್ರಮ.

ಕಲಾಕ್ಷೇತ್ರ ನಿರ್ಮಾಣದ ಮುಕ್ತಾಯ ಹಂತದಲ್ಲಿ ಹಣದ ಕೊರತೆ ಎದುರಾಗಿತ್ತು. ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್‌. ನಿಜಲಿಂಗಪ್ಪ ಅವರು ಒಂದೂವರೆ ಲಕ್ಷ ರೂಪಾಯಿ ಅನುದಾನ ನೀಡಿದ್ದರು. ವಿಶೇಷವೆಂದರೆ, ಕಲಾಕ್ಷೇತ್ರದ ನಿರ್ಮಾಣಕ್ಕೆ ಸಾರ್ವಜನಿಕರೂ ದೇಣಿಗೆ ನೀಡಿದ್ದರು. ಸರ್ಕಾರಿ ಉದ್ಯಮಗಳೂ ಸೇರಿದಂತೆ ರಂಗಕರ್ಮಿ ಎಚ್.ಸಿ. ಮಹಾದೇವಪ್ಪ ಹಾಗೂ ತಮಿಳಿನ ಖ್ಯಾತನಟ
ಶಿವಾಜಿ ಗಣೇಶನ್ ಅವರೂ ದೇಣಿಗೆ ನೀಡಿದ್ದರು.

ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ರಾಜ್

ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ರಾಜ್

ಕಲ್ಲಿನಿಂದಲೇ ಕಟ್ಟಲಾಗಿರುವ ಈ ಕಟ್ಟಡದ ವಾಸ್ತುಶಿಲ್ಪಿ ಆಗಿದ್ದವರು ಅಮೆರಿಕದ ಚಾರ್ಲ್ಸ್ ವಿಲ್ಸನ್. ಆಗಿನ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಬಿ.ಆರ್. ಮಾಣಿಕ್ಯಂ ನಿರ್ಮಾಣ ನಿರ್ವಹಣೆಯ ಹೊಣೆ ಹೊತ್ತಿದ್ದರು. 1963ರ ಮಾರ್ಚ್ 12ರಂದು ಅಂದಿನ ಕೇಂದ್ರ ಸಚಿವ ಪ್ರೊ. ಹುಮಾಯೂನ್ ಕಬೀರ್ ಅವರಿಂದ ಕಲಾಕ್ಷೇತ್ರ ಉದ್ಘಾಟನೆಗೊಂಡಿತು. ಮೈಸೂರು ಮಹಾರಾಜ ಹಾಗೂ ರಾಜ್ಯಪಾಲ ಜಯಚಾಮರಾಜೇಂದ್ರ ಒಡೆಯರ್ ಅಧ್ಯಕ್ಷತೆ ವಹಿಸಿದ್ದರು. ಪ್ರದರ್ಶನಕ್ಕೆ ಅವಕಾಶ ಲಭಿಸಿದ್ದು ಆಗಸ್ಟ್‌ನಲ್ಲಿ.

1970–80ರ ದಶಕ ರವೀಂದ್ರ ಕಲಾಕ್ಷೇತ್ರದ ಪಾಲಿಗೆ ಸುವರ್ಣಯುಗ. ಆಧುನಿಕ ಕನ್ನಡ ರಂಗಭೂಮಿಯ ಹಲವು ದಿಗ್ಗಜರು ಇಲ್ಲಿಂದಲೇ ತಮ್ಮ ವೃತ್ತಿ ಬದುಕು ಆರಂಭಿಸಿದರು. ಶ್ರೀರಂಗ, ಬಿ.ವಿ.ಕಾರಂತ, ಎಂ.ಎಸ್. ಸತ್ಯು, ಸಿ.ಆರ್. ಸಿಂಹ, ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರ, ಪಿ. ಲಂಕೇಶ್, ಸಿ.ಜಿ. ಕೃಷ್ಣಸ್ವಾಮಿ (ಸಿಜಿಕೆ) ಆರ್. ನಾಗೇಶ್, ಶ್ರೀನಿವಾಸ ಜಿ. ಕಪ್ಪಣ್ಣ, ಜೆ. ಲೋಕೇಶ್, ಟಿ.ಎಸ್. ನಾಗಾಭರಣ, ಬಿ.ಜಯಶ್ರೀ, ಉಮಾಶ್ರೀ, ಪ್ರಕಾಶ್ ರೈ ಸೇರಿ ಅನೇಕರು ಕಲಾಕ್ಷೇತ್ರದ ಮೂಲಕ ಪ್ರವರ್ಧಮಾನಕ್ಕೆ ಬಂದವರು.

ಸಾರ್ಕ್ ಸಮ್ಮೇಳನ, ರಷ್ಯಾ, ಐಸಿಸಿಆರ್‌ ಸೇರಿ ಅನೇಕ ಉತ್ಸವಗಳು ಇಲ್ಲಿ ಯಶಸ್ವಿಯಾಗಿ ನಡೆದಿವೆ. ಕಾಲಕ್ಕೆ ತಕ್ಕಂತೆ ಕಲಾಕ್ಷೇತ್ರ ತಾಂತ್ರಿಕವಾಗಿ ಅಪ್‌ಗ್ರೇಡ್‌ಗೆ ಒಳಗಾಗಿದೆ. ಆಗಾಗ ರಿಪೇರಿಯ ಕಾರಣಕ್ಕಾಗಿ ಕಲಾಕ್ಷೇತ್ರದ ಬಾಗಿಲು ಮುಚ್ಚಿದರೂ, ನಾಡಿನ ರಂಗಕರ್ಮಿಗಳು ಕಲಾಕ್ಷೇತ್ರವನ್ನು ತಮ್ಮ ಚಟುವಟಿಕೆಗಳ ಮೂಲಕ ಜೀವಂತವಾಗಿರಿಸಿದ್ದಾರೆ. 1972ರಲ್ಲಿ ಬಿ.ವಿ. ಕಾರಂತರ ಬಯಲು ರಂಗೋತ್ಸವ ಹಾಗೂ 1983–84ರ ಅವಧಿಯಲ್ಲಿ ಹವ್ಯಾಸಿ ರಂಗ ತಂಡಗಳ ‘ಕೈಲಾಸಂ ಕಲಾಕ್ಷೇತ್ರ’ ತಾಲೀಮು ಕೊಠಡಿಯನ್ನೇ ವೇದಿಕೆಯನ್ನಾಗಿಸಿದ ಸಿಜಿಕೆ ಅವರು ಇಲ್ಲಿ ನಾಟಕಗಳನ್ನು ಪ್ರದರ್ಶಿಸಿದ್ದು ಇತಿಹಾಸ. ಅಂತೆಯೇ 1973ರಲ್ಲಿ ಏರ್ಪಡಿಸಿದ್ದ ‘ಅಲ್ ಇಂಡಿಯಾ ಥಿಯೇಟರ್ ಅಂಡ್ ಡ್ರಾಮಾ ಫೆಸ್ಟಿವಲ್’ ಸಲುವಾಗಿ ಕಲಾಕ್ಷೇತ್ರದ ಹಿಂಭಾಗದಲ್ಲಿ ರೂಪುಗೊಂಡ ಸಂಸ ಬಯಲು ರಂಗಮಂದಿರಕ್ಕೀಗ ಸುವರ್ಣ ಸಂಭ್ರಮ.

1978ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತೆಕ್ಕೆಗೆ ಬಂದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಸಂಗೀತ ಮತ್ತು ನೃತ್ಯ ಅಕಾಡೆಮಿ, ಯಕ್ಷಗಾನ, ಲಲಿತಕಲಾ, ಶಿಲ್ಪಕಲಾ ಅಕಾಡೆಮಿಗಳೂ ಬಂದವು. ಪುಸ್ತಕ ಪ್ರೇಮಿಗಳ ‘ಸಿರಿಗನ್ನಡ ಮಳಿಗೆ’, ಕಲಾವಿದ–ಪ್ರೇಕ್ಷಕರ ಹೊಟ್ಟೆ ತುಂಬಿಸಲು ಕ್ಯಾಂಟೀನ್, ರಿಹರ್ಸಲ್‌ಗಾಗಿ ತಾಲೀಮು ಕೊಠಡಿಯೂ ಇಲ್ಲಿದೆ. ಕಲಾಕ್ಷೇತ್ರವು ಸಾಂಸ್ಕೃತಿಕ ಚಟುವಟಿಕೆಗಳಲ್ಲದೇ ರೈತ, ಕಾವೇರಿ, ಗೋಕಾಕ ವರದಿ, ಬಾಬರಿ ಮಸೀದಿ ಪ್ರಕರಣ ಸೇರಿದಂತೆ ಅನೇಕ ಹೋರಾಟಗಳಿಗೂ ಸಾಕ್ಷಿಯಾಗಿದೆ. ಅಂತೆಯೇ ಸಾಂಸ್ಕೃತಿಕ ಲೋಕದ ಗಣ್ಯ ವ್ಯಕ್ತಿಗಳು ನಿಧನರಾದಾಗ ಸಂಸ ಬಯಲು ರಂಗಮಂದಿರವು ಗಣ್ಯರ ಅಂತಿಮ ದರ್ಶನದ ಗೌರವ ಸಮರ್ಪಣೆಯ ತಾಣವೂ ಆಗಿದೆ.  

ಶಿವಾಜಿ ಗಣೇಶನ್ ದೇಣಿಗೆ

ರಂಗಭೂಮಿ ಬಗ್ಗೆ ಪ್ರೀತಿ ಹೊಂದಿದ್ದ ಶಿವಾಜಿ ಗಣೇಶನ್ ಅವರು ತಮ್ಮ ತಂಡ ಕಟ್ಟಿಕೊಂಡು ‘ವೀರಪಾಂಡ್ಯ ಕಟ್ಟಬೊಮ್ಮನ್’ ನಾಟಕವನ್ನು ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಪ್ರದರ್ಶನ ನೀಡಿ 22 ಸಾವಿರ ರೂಪಾಯಿ ಸಂಗ್ರಹಿಸಿದ್ದರು. ಈ ಹಣವನ್ನು ರವೀಂದ್ರ ಕಲಾಕ್ಷೇತ್ರ ನಿರ್ಮಾಣಕ್ಕೆ ದೇಣಿಗೆಯನ್ನಾಗಿ ನೀಡಿದ್ದರು.

ವೇದಿಕೆಯಲ್ಲೇ ಹಾರ ಬದಲಿಸಿಕೊಂಡಿದ್ದೆವು!: ನಟಿ ಗಿರಿಜಾ ಲೋಕೇಶ್

ರವೀಂದ್ರ ಕಲಾಕ್ಷೇತ್ರ ನನ್ನ ಪಾಲಿಗೆ ದೇಗುಲವಿದ್ದಂತೆ. ಕಲಾವಿದರಿಗೆ ಇಲ್ಲಿ ನಾಟಕ ಮಾಡುವುದೆಂದರೆ ಹೆಮ್ಮೆಯ ಭಾವ. ಟಿಕೆಟ್ ತೆಗೆದುಕೊಳ್ಳಲು ಹಣವಿರದ ಕಾಲದಲ್ಲಿ ಹೇಮಾಮಾಲಿನಿ, ಜಯಲಲಿತಾ ಅವರ ನೃತ್ಯಗಳನ್ನು ಕಲಾಕ್ಷೇತ್ರದ ಕಿಟಕಿಯಲ್ಲಿ ನಿಂತು ನೋಡುತ್ತಿದ್ದೆ. ರಾತ್ರಿ 7.30ಕ್ಕೆ ನಾನು ಮತ್ತು ಲೋಕೇಶ್ ದೇವಸ್ಥಾನದಲ್ಲಿ ಮದುವೆಯಾಗಿ, 9.30ಕ್ಕೆ ಕಲಾಕ್ಷೇತ್ರದಲ್ಲಿ ‘ಕಾಕನಕೋಟೆ’ ನಾಟಕದಲ್ಲಿ ತಂದೆ–ಮಗಳಾಗಿ ಅಭಿನಯಿಸಿದ್ದೆವು. ನಾಟಕ ಮುಗಿದ ಬಳಿಕ ಇದೇ ಕಲಾಕ್ಷೇತ್ರದಲ್ಲೇ ಪ್ರೇಕ್ಷಕರ ಎದುರಲ್ಲಿ ಇಬ್ಬರೂ ಹಾರ ಬದಲಾಯಿಸಿಕೊಂಡಿದ್ದೆವು.

ಪ್ರೇಕ್ಷಕರನ್ನೂ ಬೆಳೆಸಿ: ನಿರ್ದೇಶಕ ಟಿ.ಎಸ್. ನಾಗಾಭರಣ

1968ರಿಂದಲೂ ರವೀಂದ್ರ ಕಲಾಕ್ಷೇತ್ರದೊಂದಿಗೆ ನನಗೆ ಅವಿನಾಭಾವ ನಂಟಿದೆ. ಈ ರಂಗಮಂದಿರವನ್ನು ಪೂರ್ಣಪ್ರಮಾಣದ ರಂಗಕ್ರಿಯೆಗೆ ಮೀಸಲಿಟ್ಟಿದ್ದರೆ ಚೆನ್ನಾಗಿರುತ್ತಿತ್ತು. ಇಲ್ಲಿ ಒಳಗಿರುವ ಕೆಲ ಸೌಲಭ್ಯಗಳನ್ನು ಸುಧಾರಿಸಬೇಕಿದೆ. ಕಲಾಕ್ಷೇತ್ರವನ್ನು ಕಾಯಂ ಆಗಿ ರಿಪೇರಿ ಮಾಡಬೇಕು ಅಂತ ಯಾರಿಗೂ ಅನಿಸಿಲ್ಲ. ಹಾಗಾಗಿ, ಇದು ಆಗಾಗ ರಿಪೇರಿ ಆಗುತ್ತಲೇ ಇರುತ್ತದೆ. 

ನಾಟಕ ಪ್ರದರ್ಶನ
‘ನಾಟಕ ಬೆಂಗ್ಳೂರು’, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಬೆಂಗಳೂರು ರಂಗಕಲಾವಿದರ ವಿವಿಧೋದ್ದೇಶ ಸಹಕಾರ ಸಂಘದ ಸಹಯೋಗದಲ್ಲಿ ಡಿ. 4ರಿಂದ 2024ರ ಮಾರ್ಚ್ 27ರ ತನಕ ವಜ್ರ ರಂಗೋತ್ಸವ ಹಮ್ಮಿಕೊಂಡಿದೆ. ಬೆಂಗಳೂರಿನ 30 ತಂಡಗಳು, 30 ನಾಟಕಗಳನ್ನು ಪ್ರದರ್ಶಿಸಲಿವೆ. ‘ನಾಟಕ ಬೆಂಗ್ಳೂರು’ ಕಾಲೇಜುಗಳ ಕಡೆಗೆ ಹವ್ಯಾಸಿ ರಂಗ ನಡಿಗೆ, ಸ್ಮರಣ ಸಂಚಿಕೆ– ಕಲಾಕ್ಷೇತ್ರ 60, ನಾಟಕ ರಚನಾ ಸ್ಪರ್ಧೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT