ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದೆಯ ಕದವ ತೆರೆವ ಕೆಲಸದವಳ ಒಳತೋಟಿ

Published 16 ಜುಲೈ 2023, 0:59 IST
Last Updated 16 ಜುಲೈ 2023, 0:59 IST
ಅಕ್ಷರ ಗಾತ್ರ

– ಮಂಗಳ ಟಿ.ಎಸ್. ತುಮರಿ

ರಂಗಭೂಮಿಯ ಇತಿಹಾಸವನ್ನು ಬಗೆಯುತ್ತ ಹೋದರೆ ವೈವಿಧ್ಯಮಯವಾದ ಪ್ರಯೋಗಗಳು ಕಾಲಾತೀತವಾಗಿ ನಡೆಯುತ್ತಲೇ ಬಂದಿವೆ. ಅಂತಹ ಭಿನ್ನ ವಿಭಿನ್ನ ಪ್ರಯೋಗಗಳಲ್ಲಿ ಏಕವ್ಯಕ್ತಿ ರಂಗಪ್ರಸ್ತುತಿ ಕೂಡ ಒಂದು. ಆದರೆ ಇಂತಹ ರಂಗಪ್ರಸ್ತುತಿಗಳಿಗೆ ತನ್ನದೇ ಆದ ಕೆಲವು ಮಿತಿಗಳೂ ಇವೆ. ಒಬ್ಬನೇ(ಳೇ) ನಟ ಅಥವಾ ನಟಿ ಇಡೀ ನಾಟಕವನ್ನು ಆವರಿಸಿಕೊಳ್ಳುವರು. ಅಲ್ಲಿ ರಂಗದಲ್ಲಿ ಸರ್ವಾಂಗದಲ್ಲಿ ಮುಂಚೂಣಿಯಲ್ಲಿದ್ದು ಪ್ರೇಕ್ಷಕರಲ್ಲಿ ತೀವ್ರ ಆಸಕ್ತಿ ಮೂಡಿಸಿದಾಗ ಮಾತ್ರ ಅವುಗಳಿಗೆ ಯಶಸ್ಸು ದೊರೆಯುತ್ತದೆ. ಆದ್ದರಿಂದ ಮನೋಜ್ಞವಾದ ಅಭಿನಯ, ಕಥೆಯ ಹೆಣಿಗೆಯಲ್ಲಿ ಅಚ್ಚುಕಟ್ಟುತನ, ಸಂಭಾಷಣೆಯಲ್ಲಿ ಸ್ಪಷ್ಟತೆ, ಹೊಮ್ಮುವ ಸಂಗೀತ, ಬೆಳಕು, ವಸ್ತು ವಿನ್ಯಾಸ ಸಂಯೋಜನೆ ಒಂದಕ್ಕೊಂದು ಪೂರಕವಾಗಿದ್ದಾಗ ಮಾತ್ರ ಏಕವ್ಯಕ್ತಿ ಪ್ರದರ್ಶನಗಳು ಯಶಸ್ವಿಯಾಗುತ್ತವೆ. ಇಲ್ಲದಿದ್ದಲ್ಲಿ ಕೇವಲ ಪ್ರಯೋಗವಾಗಿಯೇ ಉಳಿದುಬಿಡಬಹುದು. ಅಂತಹ ಒಂದು ವಿಶಿಷ್ಟ ರಂಗಪ್ರಯೋಗ ನಾದಿರಾ ಬಬ್ಬರ್‌ ಅವರು ಹಿಂದಿಯಲ್ಲಿ ರಚಿಸಿದ ‘ಸಕುಬಾಯಿ ಕಾಮವಾಲಿ’ ನಾಟಕ. ಅದನ್ನು ಡಾ.ಡಿ.ಎಸ್.ಚೌಗಲೆ ಅವರು ಅಷ್ಟೇ ಸಶಕ್ತವಾಗಿ ಕನ್ನಡಕ್ಕೆ ತಂದು ‘ಸಕುಬಾಯಿ’ ಆಗಿಸಿದ್ದಾರೆ.

ನುಡಿ ಸುದರ್ಶನ್ ಸಕುಬಾಯಿಯಾಗಿ ಅಭಿನಯಿಸಿದ ನಾಟಕದ ರಂಗವಿನ್ಯಾಸ ಹಾಗೂ ನಿರ್ದೇಶನ ಹುಲುಗಪ್ಪ ಕಟ್ಟಿಮನಿಯವರದ್ದು. ಈ ಏಕವ್ಯಕ್ತಿ ಪ್ರಸ್ತುತಿ ನಾಟಕದ ಅಭಿವ್ಯಕ್ತಿ ಗಟ್ಟಿಯಾಗಿದೆ.ಮುಂಬೈನ ಒಟ್ಟು ಘಮಲನ್ನು ರಂಗದ ಮೇಲೆ ತರುವ ಪ್ರಾಮಾಣಿಕ ಪ್ರಯತ್ನವಿದೆ. ಮರಾಠಿ, ಹಿಂದಿ ಭಾಷೆಗಳು ಇಣುಕುವ, ಮುಂಬಯಿ ಸೊಗಡು ಜ್ಞಾಪಿಸುವ ಚೌಗಲೆಯವರ ಉತ್ತರ ಕರ್ನಾಟಕದ ಭಾಷೆ ನಾಟಕದ ಹೈಲೈಟ್! ಆ ನೆಲದ ಭಾಷೆ ಸಕುಬಾಯಿಯ ಪಾತ್ರಕ್ಕೆ ಹೊಂದುವಂತೆ ಇರುವುದರಿಂದ ಪಾತ್ರವನ್ನು ಕಟ್ಟುವಲ್ಲಿ, ಪೋಷಿಸುವಲ್ಲಿ ನಿರ್ದೇಶಕರು ಗೆಲುವು ಸಾಧಿಸಿದ್ದಾರೆ. ಅಲ್ಲದೆ ಅಷ್ಟೇ ಪರಿಣಾಮಕಾರಿಯಾದ ನಟನೆಯಿಂದ ನುಡಿಗಳಲ್ಲಿಯ ಒಳದನಿಯನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ನುಡಿ ಸುದರ್ಶನ್‌ ಅವರ ನಟನೆ ಕೂಡ ಒದಗಿಬಂದಿದೆ.

ಮಹಾರಾಷ್ಟ್ರದ ಹಳ್ಳಿಯ ಹೆಣ್ಣುಮಗಳೊಬ್ಬಳು ಕೆಲಸಕ್ಕಾಗಿ ಮುಂಬಯಿ ಸೇರುತ್ತಾಳೆ. ತನ್ನ ತಾಯಿಯೊಂದಿಗೆ ಬದುಕು ಕಟ್ಟಿಕೊಳ್ಳಲು ಹೆಣಗುತ್ತಾಳೆ. ಕನಸಿನ ಶಹರು ಮುಂಬಯಿ ಸೇರಿದ ಸಕುಬಾಯಿಯ ಬಾಲ್ಯದಲ್ಲಿ ಕಂಡ ಕನಸುಗಳು ಕಮರುತ್ತವೆ. ಆದರೆ ಬದುಕು ಒಡ್ಡಿದ ಸವಾಲುಗಳನ್ನು, ಸಂಕಷ್ಟಗಳನ್ನು ಎದುರಿಸುತ್ತ, ಆಶಾವಾದಿತನದಿಂದ ಬದುಕನ್ನು ಕಟ್ಟಿಕೊಳ್ಳಲು ಸಂಘರ್ಷ ಮಾಡುತ್ತಾಳೆ. ಇದನ್ನೇ ಮೂಲ ವಸ್ತುವಾಗಿಟ್ಟುಕೊಂಡ ನಾಟಕ ಎಲ್ಲಿಯೂ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ. ಕವಿಯಾಗಲು ಹಂಬಲಿಸುವ ತನ್ನ ಮಗಳು ಸಾಯಿಲಿಯ ಕನಸಿಗೆ ಕಸುವು ತುಂಬುತ್ತಾಳೆ. ಕಾಯಕಯೋಗಿಯೂ ದಿಟ್ಟೆಯೂ ಎನ್ನಿಸುತ್ತಾಳೆ.

ರಂಗದಲ್ಲಿ ಕದ ತೆಗೆಯುವ ಮೂಲಕ ಆರಂಭವಾಗುವ ನಾಟಕವು ಮನೆ ಕೆಲಸದಾಕೆಯೊಬ್ಬಳ ಮನದ ಒಳತೋಟಿಗಳನ್ನು ಬಿಚ್ಚಿಡುತ್ತಲೇ ಸಾಗುತ್ತದೆ. ನಮ್ಮ ಎದೆಯ ಕದವನ್ನೂ ತಟ್ಟುತ್ತದೆ. ನಮ್ಮ ಸುತ್ತಮುತ್ತ ಬದುಕುವ ಹೆಣ್ಣುಮಗಳೊಬ್ಬಳ ಹೃದಯ ಭಿತ್ತಿಯೊಳಗಿನ ಸ್ವಗತದಂತೆಯೂ ಭಾಸವಾಗುತ್ತದೆ. ನಾಟಕಕ್ಕೆ ಈ ಬಗೆಯ ಒಂದು ಗತಿ ದಕ್ಕಿರುವುದರಿಂದಲೇ ಪ್ರೇಕ್ಷಕರ ಮನದೊಳಗೆ ಸಕುಬಾಯಿ ಒಂದು ಅನುಭವವಾಗಿ ಕಾಡುತ್ತಾಳೆ.

ಕೇವಲ ನಾಟಕ ಆಕೆಯ ಜೀವನದ ಸುತ್ತ ಗಿರಕಿ ಹೊಡೆದಿದ್ದರೆ ಬಹುಶಃ ಇದೊಂದು ರಂಗಪ್ರಸ್ತುತಿಯಾಗಿ ಗೆಲ್ಲುತ್ತಿರಲಿಲ್ಲವೇನೋ. ನಗರ ಬದುಕಿನೊಳಗೆ ಆವರಿಸಿರುವ ಶೂನ್ಯವನ್ನು, ಟೊಳ್ಳುತನವನ್ನು ಮತ್ತು ಜನರ ಸಣ್ಣತನಗಳನ್ನು ಸಕುಬಾಯಿಯ ಕಥನದೊಂದಿಗೆ ಅಂದಗೆಡದಂತೆ ಎರಕಗೊಳಿಸಲಾಗಿದೆ. ಈ ಹೆಣಿಕೆಯನ್ನು ನೋಡುವುದಕ್ಕಾದರೂ ಸಕೂಬಾಯಿಯನ್ನು ಒಮ್ಮೆ ನೋಡಬೇಕು. ಹೀಗೆ ನಾಟಕದ ಪ್ರಮುಖ ಅಂಶಗಳನ್ನು ಹದವಾಗಿ ಬೆರೆಸದಿದ್ದರೆ, ಬೇಕೆಂತಲೇ ಒಂದಿಷ್ಟು ವಿಚಾರಗಳನ್ನು ತುರುಕಿಸಿದಂತೆಯೂ ಆಗಿ, ಅನಗತ್ಯ ವಿವರಗಳಿಂದ ಫ್ರಧಾನ ಆಶಯ ಕಾಣದಾಗುತ್ತಿತ್ತು. ಆದರೆ, ಸಕುಬಾಯಿ ನಾಟಕದಲ್ಲಿ ಮುಖ್ಯ ವಸ್ತುವಿನೊಡನೆ ಇತರ ವಿವರಗಳನ್ನು ಜಾಣ್ಮೆಯಿಂದ ಹದವಾಗಿ ಬೆರೆಸಿದ್ದಾರೆ. ಅಲ್ಲದೇ ಭಾವಪೂರ್ಣವಾದ ನಟನೆಯಿಂದ, ಗಟ್ಟಿಯಾದ ಸ್ಪಷ್ಟ ಧ್ವನಿಯಿಂದ ಸಕುಬಾಯಿ ಪಾತ್ರಕ್ಕೆ ಮೈಸೂರಿನ ನುಡಿ ಸುದರ್ಶನ ಜೀವತುಂಬುತ್ತಾ ಸಾಗುವುದು ಕೂಡ ಈ ನಾಟಕದ ಹೆಚ್ಚುಗಾರಿಕೆಯೇ ಸರಿ. ಅವರ ಪಾತ್ರಕ್ಕೆ ಹೊಂದುವಂತಿರುವ ವಸ್ತುವಿನ್ಯಾಸ ಕೂಡ ಪಾತ್ರಕ್ಕೆ ಪೂರಕವಾಗಿದೆ. ಆಗಾಗ ಧ್ವನಿಗೂಡುವ ಪ್ರಾಸಂಗಿಕ ಹಳೆಯ ಹಿಂದಿ ಹಾಡುಗಳು, ಮರಾಠಿ ಅಭಂಗಗಳು ಪ್ರಯೋಗದಲ್ಲಿ ಹಾಲು ಜೇನಂತೆ ಬೆರೆತಿವೆ.

ನಾದಿರಾ ಬಬ್ಬರ್‌ ಅವರ ಹಿಂದಿಯ ಈ ನಾಟಕ ಸ್ವಂತ ಕನ್ನಡದ್ದೇ ಎಂಬಷ್ಟು ಸಹಜವಾಗಿದೆ. ಎಸ್.ಚೌಗಲೆಯವರ ಬರವಣಿಗೆಯ ಗಟ್ಟಿ ಯಾದ ಛಾಪು ಇದೆ.

‘ಅವ್ವ ಎದ್ದೇಳು, ತಲೆಎತ್ತು, ಕಾಲ ಬಂದದ ನೋಡುಹಿಂಗ ಹತಾಶಳಾಗಬೇಡ...’ ಎಂಬ ಕವಿತೆಯೊಂದಿಗೆ ಅಂತ್ಯಗೊಳ್ಳುವ ನಾಟಕವು ಅಂತರಂಗದಲ್ಲಿ ಒಂದು ಬೆಳಕಿನ ಕುಡಿಯಾಗಿ ಬೆಳಗುತ್ತದೆ. ನಾಟಕದ ಪರಿಣಾಮವು ಮಾನವನಲ್ಲಿ ಭವಿಷ್ಯದ ಕುರಿತು ಭರವಸೆ ಹುಟ್ಟಿಸುತ್ತದೆ. ವರ್ತಮಾನದಲ್ಲಿ ಬದುಕು ಸಂಘರ್ಷಮಯವಾಗಿರಬಹುದು. ಇದು ವಿರಮಿಸುವ ಕಾಲವೂ ಹೌದು! ಆದರೆ ಭವಿಷ್ಯ ಮಾತ್ರ ಉಜ್ವಲ ಬೆಳಕಾಗಿ ಕೈಹಿಡಿಯುತ್ತದೆ ಎಂಬ ಆಶಾವಾದವನ್ನು ಮುನ್ನೆಲೆಗೆ ತಂದು ಕೊನೆಗೊಳ್ಳುತ್ತದೆ.

ಜಾಗತೀಕರಣದ, ಮಾಧ್ಯಮಗಳ ಪ್ರಭಾವದಿಂದ ರಂಗಭೂಮಿ, ನಾಟಕ ಹಾಗೂ ಇತರ ಲಲಿತಕಲೆಗಳು ಹಿನ್ನೆಲೆಗೆ ಸಾಗುವ, ಸಾಗುತ್ತಿರುವ ಈ ಕಾಲಘಟ್ಟದಲ್ಲಿ ಅವನ್ನು ಉಳಿಸಿಕೊಳ್ಳುವುದೂ ಒಂದು ದೊಡ್ಡ ಜವಾಬ್ದಾರಿಯಾಗಿದೆ. ಕಾಲದ ಒಂದೊಂದೇ ಹನಿಗಳನ್ನು ಕೂಡಿಸಿ ನದಿಯಾಗಿ ಹರಿಸೀತು ಎಂಬ ಭಾವವನ್ನು ಪ್ರಯೋಗ ನೀಡುವುದು. ಇಂತಹ ಪ್ರಸ್ತುತಿಗಳ ಮುಂದೆಯೂ ಸಾಕಷ್ಟು ಸವಾಲುಗಳಿವೆ. ಅವುಗಳನ್ನು ಮೀರಿ ನಾಟಕ ಯಶಸ್ಸಾಗಬೇಕಾದರೆ ಸೂಕ್ತ ಪ್ರೋತ್ಸಾಹ ಸಕಾಲದಲ್ಲಿ ಸಿಗಬೇಕಾಗಿದೆ.

ಸಕುಬಾಯಿ ನಾಟಕದ ಸಂಗೀತ ವಿನ್ಯಾಸ ಉಮೇಶ ಸಾಲಿಯಾನ, ನಿರ್ವಹಣೆ ಗಣೇಶ ಭೀಮನಕೋಣೆ ಅವರದು. ನೆಳಲು ಬೆಳಕಿನ ಆಟವನ್ನು ನಿರ್ವಹಿಸಿದವರು ಅರುಣಮೂರ್ತಿ. ನೇಪಥ್ಯ ವಿನ್ಯಾಸ ಮತ್ತು ನಿರ್ದೇಶನ ಹುಲುಗಪ್ಪ ಕಟ್ಟೀಮನಿ. ಜುಲೈ 27 ರಂದು ಬೆಂಗಳೂರಿನ ರಂಗಶಂಕರದಲ್ಲಿ ನಾಟಕವು ಪ್ರಯೋಗ ಕಂಡಿತ್ತು.

ನುಡಿ ಸುದರ್ಶನ್
ನುಡಿ ಸುದರ್ಶನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT