ನಾನು ಐದು ವರ್ಷದವಳಿದ್ದಾಗ ಮೊದಲು ಬಣ್ಣ ಹಚ್ಚಿದೆ. ಆಗ ನಾಟಕಕಾರ ಬರೆದಿದ್ದೆಲ್ಲವನ್ನೂ ತಾಲೀಮು ನಡೆಸುತ್ತಿದ್ದೆವು. ಹಾರ್ಮೋನಿಯಂ ಮಾಸ್ತರ್ ಹೇಳುವ ಎಲ್ಲ ಹಾಡುಗಳನ್ನೂ ನಾವೇ ಹಾಡಬೇಕಿತ್ತು. ಅದಕ್ಕೆ ಸಂಗೀತ ಕಲಿಯುವುದು ಅನಿವಾರ್ಯವಾಗಿತ್ತು. ಈಗ ಹೆಣ್ಣು–ಗಂಡು ಧ್ವನಿಗಳಲ್ಲಿ ಒಬ್ಬರೇ ಹಾಡುವವರು ಸಿಗುತ್ತಾರೆ. ಕಲಾವಿದೆಯರಿಗೆ ಶ್ರಮ ಇಲ್ಲ. ಕೈ ತುಂಬ ಹಣ ಸಿಗುತ್ತದೆ. ಆದರೆ ಗೌರವ ಸಿಗುತ್ತಿಲ್ಲ. 12ನೇ ವಯಸ್ಸಿಗೇ ಮೈ ಚಳಿ ಬಿಟ್ಟು ಕುಣಿಯುವವರೂ ನಾಟಕಕ್ಕೆ ಬರುತ್ತಿದ್ದಾರೆ.ಭಾರತಿ ಮನೂಬಾಯಿ ದಾವಣಗೆರೆ
ಆರು ದಶಕ ರಂಗಭೂಮಿಯಲ್ಲಿದ್ದೆ. ನಾಟಕಕ್ಕೆ 25 ರೂಪಾಯಿ ಸಂಭಾವಣೆ ಸಿಗುತ್ತಿತ್ತು. ನಾಟಕ ಅಮೃತ ಎನ್ನುತ್ತಿದ್ದೆವು. ಈಗ ಅಮಲು ಎನ್ನುವಂತಾಗಿದೆ. ಸತ್ಯ ಹರಿಶ್ಚಂದ್ರ ಸುಡಗಾಡು ಕಾದ ಪಾತ್ರ ಕಂಡು ಪ್ರೇಕ್ಷಕರು ಕಣ್ಣೀರು ಹಾಕಿದ್ದನ್ನು ನೋಡಿದ್ದೇನೆ. ಪರಕಾಯ ಪ್ರವೇಶ ಮಾಡಿ ನಾನೂ ಕಣ್ಣೀರು ಹಾಕಿದ್ದೇನೆ. ಅಷ್ಟೊಂದು ತನ್ಮಯತೆ ಇತ್ತು. ಆ ಪರಂಪರೆ ಮಣ್ಣಾಗಿದೆ.ಕೆ.ನಾಗರತ್ನ ಬಳ್ಳಾರಿ
ವರ್ಷಕ್ಕೆ 15 ಸಾವಿರ ನಾಟಕ ಪ್ರದರ್ಶನ ಗ್ರಾಮೀಣ ರಂಗಭೂಮಿ ಬಹಳ ಸಮೃದ್ಧವಾಗುತ್ತ ಸಾಗಿದೆ. ರಾಜ್ಯದಲ್ಲಿ ಆರು ಸಾವಿರಕ್ಕೂ ಹೆಚ್ಚು ಗ್ರಾಮಗಳಿವೆ. ವರ್ಷಕ್ಕೆ ಏನಿಲ್ಲವೆಂದರೂ ಹದಿನೈದು ಸಾವಿರ ನಾಟಕಗಳು ಪ್ರದರ್ಶನವಾಗುತ್ತವೆ. ಪ್ರತಿ ನಾಟಕಕ್ಕೂ ಕನಿಷ್ಠ 5 ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ. ಅಂದಾಜು 75 ಕೋಟಿಯಿಂದ 100 ಕೋಟಿ ರೂಪಾಯಿ ವ್ಯವಹಾರ ನಡೆಯುತ್ತದೆ. ಸರ್ಕಾರ ಅಮೆಚೂರ್ ನಾಟಕಗಳನ್ನು ನಿರ್ಲಕ್ಷ್ಯ ಮಾಡಬಾರದು.-ಮಲ್ಲಿಕಾರ್ಜುನ ಕಡಕೋಳ ವೃತ್ತಿ ರಂಗಾಯಣ ನಿರ್ದೇಶಕ ದಾವಣಗೆರೆ
ಚಿಮಣಾ ಪರಂಪರೆ ನಾಟಕ ಕಲಾವಿದೆಯರಿಗೆ ಮುಂಬೈ ಕರ್ನಾಟಕ ಭಾಗದಲ್ಲಿ ‘ಚಿಮಣಾ’ ಎಂದು ಕರೆಯುವುದು ರೂಢಿ. ಚಿಮಣಾ ಎನ್ನುವುದು ಮರಾಠಿಯ ರಾಧಾನಾಟದಲ್ಲಿ ಬರುವ ಒಂದು ಪಾತ್ರದ ಹೆಸರು. ಈ ಭಾಗದಲ್ಲಿ ರಾಧಾನಾಟ ಎಷ್ಟು ಪ್ರಸಿದ್ಧವಾಗಿತ್ತೆಂದರೆ; ಇದೂವರೆಗಿನ ಎಲ್ಲ ಕಲಾವಿದೆಯರಿಗೂ ಚಿಮಣಾ ಎಂದೇ ಹೆಸರುಬಿದ್ದಿದೆ. ಮರಾಠಿಯಲ್ಲಿ ‘ಚಿಮಣಿ’ ಎಂದರೆ ಗುಬ್ಬಿ. ಅಂಗಳಕ್ಕೆ ಬಂದು ಕಾಳು ಎತ್ತಿಕೊಂಡು ಹಾರಿಹೋಗುವ ಗುಣವಿದೆ ಅದಕ್ಕೆ. ಅದೇ ಪದ ಚಿಮಣಾ ಆಗಿ ಬಳಕೆ ಆಗಿರುವ ಸಾಧ್ಯತೆ ಇದೆ.-ಡಿ.ಎಸ್.ಚೌಗಲೆ ನಾಟಕಕಾರ ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.