ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಿಯ ಹಾಡಿಗೆ ರಂಗದ ರೂಹು

Published 5 ಆಗಸ್ಟ್ 2023, 23:30 IST
Last Updated 5 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಸುಕೃತಾ ಎಸ್‌

2021ನೇ ಇಸವಿ. ಹಾಸನದ ದಿಂಡಗೂರು ಗ್ರಾಮದಲ್ಲಿ ಪರಿಶಿಷ್ಟರಿಗೆ ದೇವಸ್ಥಾನ ಪ್ರವೇಶ ನಿಷಿದ್ಧವಿತ್ತು. ಸಮಾನತೆಯ ಕನಸು ಹೊತ್ತಿದ್ದ ಯುವಕರೂ ಸೇರಿ ಊರಿನ ಇಡೀ ಪರಿಶಿಷ್ಟ ಸಮುದಾಯವು ದೇವಸ್ಥಾನವನ್ನು ಪ್ರವೇಶಿಸಿತ್ತು. ಇದಕ್ಕೆ ಪೊಲೀಸರ ಭದ್ರತೆಯೂ ಇತ್ತು. ಶಾಂತಿ ಸಭೆಯಲ್ಲಿ ದೇವಾಲಯ ಪ್ರವೇಶಕ್ಕೆ ತೊಂದರೆ ಇಲ್ಲ ಎಂದಿದ್ದ ಪ್ರಬಲ ಜಾತಿಯವರು, ದೇವಸ್ಥಾನ ಪ್ರವೇಶದ ಘಟನೆಯ ನಂತರ, ಪರಿಶಿಷ್ಟರಿಗೆ ಅಘೋಷಿತ ಬಹಿಷ್ಕಾರ ಹಾಕಿದ್ದರು. ಸಮಾನತೆಯ ಕನಸು ಹೊತ್ತಿದ್ದ ಯುವಕ, ರಂಗಭೂಮಿ ನಟ ಸಂತೋಷ್‌ ಇದರಿಂದ ಬೇಸರಗೊಂಡು, ದಿಕ್ಕೆಟ್ಟಿದ್ದರು. ಸ್ನೇಹಿತರೊಂದಿಗೆ ಸಂತೋಷ್‌ ಅವರು ಕೇರಿಯ ಪರಿಸ್ಥಿತಿ, ಜನರ ಮನಃಸ್ಥಿತಿಗಳ ಕುರಿತು ಹಂಚಿಕೊಂಡರು. ಆ ಸ್ನೇಹಿತರಲ್ಲಿ ನಾನೂ ಒಬ್ಬನಾಗಿದ್ದೆ.

ಅಸ್ಪೃಶ್ಯತೆಯ, ತಾರತಮ್ಯದ ಕೆಟ್ಟ ಅನುಭವ ಹೊಂದಿರುವ ನನಗೆ ಸಂತೋಷ್‌ ಅವರ ನೋವನ್ನು ಅರಿತುಕೊಳ್ಳಲು ಅನುಭಾವ ತತ್ವದ ಮೊರೆಹೋಗಬೇಕಾಗಿ ಬರಲಿಲ್ಲ. ದಿಂಡಗೂರಿನ ಪರಿಶಿಷ್ಟರ ಸಮುದಾಯದ ಜನರ ಕಷ್ಟ ನೀಗಿಸಲು ಆರ್ಥಿಕವಾಗಿ ಅವರಿಗೆ ಯಾವ ಸಹಾಯ ಮಾಡುವ ಶಕ್ತಿಯೂ ನನಗೆ ಇರಲಿಲ್ಲ. ನನಗೆ ಗೊತ್ತಿದ್ದುದು ರಂಗಭೂಮಿ. ಅದನ್ನು ಬಿಟ್ಟರೆ ಬೇರೆ ಏನೂ ಇರಲಿಲ್ಲ. ಅವರ ಕಷ್ಟಕಾಲದಲ್ಲಿ ನಾವು ಅವರೊಂದಿಗೆ ಇರಬೇಕು ಎಂದು ನಾನು, ನನ್ನ ಕೆಲವು ಸ್ನೇಹಿತರು ನಿರ್ಧರಿಸಿದೆವು. ರಂಗಭೂಮಿ ಮೂಲಕವೇ ಇದನ್ನು ಸಾಧಿಸಬೇಕು ಎಂದೂ ತೀರ್ಮಾನಿಸಿ, ದಿಂಡಗೂರಿಗೆ ಹೊರಟು ನಿಂತೆವು.

ರಂಗಭೂಮಿಯಿಂದ ಮಾತ್ರವೇ ಇವರ ಕಥೆಯನ್ನು ಹೇಳಲು ಸಾಧ್ಯವಿತ್ತು. ಯಾಕೆಂದರೆ, ಸಮಾಜದ ಕೆಳಸ್ತರದಲ್ಲಿ ಬದುಕುತ್ತಿರುವವರ ಕಥೆಯನ್ನು ಯಾರು ತಾನೆ ಹೇಳಿಯಾರು? ಇಂಥ ಜನರ ಕಥೆ ಯಾರಿಗೆ ತಾನೆ ಮೆಚ್ಚು? ನಿಮ್ಮ ಕಷ್ಟ ಹೇಳಿಕೊಳ್ಳಿ ಎಂದು ಯಾರು ಬಂದು ಇವರನ್ನು ಸಂದರ್ಶಿಸುತ್ತಿದ್ದರು... ಅಲ್ಲವೆ?

ನಾಟಕದ ಮೂಲಕ ನಾವು ಜನರಿಗೆ ಬುದ್ಧಿ ಹೇಳುತ್ತೇವೆ. ಶೇಕ್ಸ್‌ಪಿಯರ್‌ನ ನಾಟಕ ಆಡಿ ತೋರಿಸುತ್ತೇವೆ. ಒಂದು ಕಾಲದಲ್ಲಿ ಬೀದಿ ರಂಗಭೂಮಿಯು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿತ್ತು; ಪ್ರತಿಭಟಿಸುತ್ತಿತ್ತು. ಈಗ ಸರ್ಕಾರದ ಯಾವುದೋ ಇಲಾಖೆಯ, ಅವರಿಗೆ ಬೇಕಾದ ವಿಷಯದ ಕುರಿತು ಈಗ ಬೀದಿ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ರಂಗಭೂಮಿ ಹೀಗಾಗಬಾರದು. ದಿಂಡಗೂರಿನ ಪರಿಶಿಷ್ಟರ ನೋವು–ಸಂಕಟಗಳನ್ನು ಇಟ್ಟುಕೊಂಡು ನಾವೂ ಒಂದು ಪ್ರತಿಭಟನೆ ದಾಖಲಿಸಬೇಕು ಎಂದು ನಿರ್ಧರಿಸಿಯೇ ‘ಕೇರಿ–ಹಾಡು’ ಕಟ್ಟಿದೆವು.

‘ಕೇರಿ–ಹಾಡು’ ಹುಟ್ಟಿಕೊಂಡದ್ದು ಪೇಪರಿನಿಂದಲ್ಲ. ಹೆಸರೇ ಹೇಳುವಂತೆ ಕೇರಿಯ ಬೀದಿ ಬೀದಿಗಳಿಂದ. ಸಂಜೆ ಆರರ ನಂತರ ಅಲ್ಲಿನ ಅಂಬೇಡ್ಕರ್‌ ಭವನದಲ್ಲಿ ಒಂದು ಶಿಬಿರ ಆಯೋಜನೆ ಮಾಡಿದೆವು. ಮೊದ ಮೊದಲು ಜನ ಬರಲಿಲ್ಲ; ಕೆಲವರಷ್ಟೆ ಬಂದರು. ನಂತರ ಬರುವವರ ಸಂಖ್ಯೆ ಹೆಚ್ಚತೊಡಗಿತು. ಬಂದು ತಮ್ಮ ನೋವನ್ನು ಹೇಳಿಕೊಂಡು ಹಗುರಾದರು. ಅವರಿಗೆ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುವ ವೇದಿಕೆ ಬೇಕಿತ್ತು. ಅವರ ಸಂಕಟಗಳನ್ನು ಕೇಳಿಸಿಕೊಳ್ಳುವ ಕಿವಿ ಬೇಕಿತ್ತು. ರಂಗಭೂಮಿ ಈ ಎರಡನ್ನೂ ಅವರಿಗೆ ಒದಗಿಸಿತು. ಒಬ್ಬೊಬ್ಬರ ಕಥೆಗಳನ್ನೇ ಇಟ್ಟುಕೊಂಡು, ಒಟ್ಟು 25 ಕಥೆಗಳ ಮೂಲಕ ದೃಶ್ಯಕಟ್ಟುತ್ತಾ ಹೋದೆವು. ಹೋರಾಟದ ಹಾಡುಗಳು ಅದಕ್ಕೆ ಸಾಥ್‌ ನೀಡಿದವು.

ತಮ್ಮದೇ ಕಾರಣಗಳಿಂದಾಗಿ ಬೇರೆಯಾಗಿದ್ದ ಆ ಊರಿನ ಪರಿಶಿಷ್ಟ ಜನರು ಈ ಎಲ್ಲಾ ಚಟುವಟಿಕೆಗಳಿಂದ ಒಂದಾದರು. ಒಂದು ತಿಂಗಳ ಈ ಚಟುವಟಿಕೆ ಅವರಿಗೆ ಹೊಸ ಉತ್ಸಾಹ, ಆತ್ಮವಿಶ್ವಾಸ ತಂದುಕೊಟ್ಟಿತು. ನಾವೆಲ್ಲರೂ ಒಂದಾಗಿದ್ದರೆ ಯಾವ ಕಷ್ಟವನ್ನೂ ಎ‌ದುರಿಸಬಹುದು ಎಂಬ ನಂಬಿಕೆ ಅವರಲ್ಲಿ ಮೊಳಕೆ ಒಡೆಯಿತು. ಇದಕ್ಕಿಂತ ಬೇರೆ ಏನು ಬೇಕಿತ್ತು ಹೇಳಿ. ರಂಗಭೂಮಿಯ ಶಕ್ತಿ ಇದು.

ಈ ನಾಟಕ ಹುಟ್ಟಿಕೊಂಡ ಬಗೆ ನಿಜಕ್ಕೂ ಚಕಿತಗೊಳಿಸುವಂಥದ್ದು. ಪೂರ್ವ ನಿರ್ಧರಿತ ಎಂದು ಹೇಳಿಕೊಳ್ಳುವ ಯಾವುದೂ ಇರದೆ ಹುಟ್ಟಿಕೊಂಡಂತಹದ್ದು. ತಮ್ಮ ಕಥೆ ಹೇಳಿಕೊಂಡ ಜನರಂತೂ ಮೈಭಾರ ಇಳಿಸಿಕೊಂಡಿದ್ದರು. ಹಾಸನ, ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ (ಬಿಐಸಿ) ಸೇರಿದಂತೆ ಹಲವು ಕಡೆಗಳಲ್ಲಿ ಪ್ರದರ್ಶನ ನೀಡಿದ್ದೇವೆ. ಬಿಐಸಿನಲ್ಲಿ ನಾಟಕದ ಕುರಿತು ಚರ್ಚೆ ಕೂಡ ನಡೆಯಿತು. ಜನರು ತುಂಬಾ ಒಳ್ಳೆಯ ಪ್ರತಿಕ್ರಿಯೆ ನೀಡಿದರು. ಬೆಂಗಳೂರನ್ನೇ ನೋಡಿರದ ಅಲ್ಲಿನ ಜನರು ಸಂತೋಷಪಟ್ಟರು. ನಮ್ಮ ಕಥೆಗಳನ್ನೂ ಕೇಳುವವರು ಇದ್ದಾರೆ ಎಂದು ಸಮಾಧಾನಪಟ್ಟುಕೊಂಡರು.

ದಿಂಡಗೂರು ಮಾತ್ರವಲ್ಲ, ದೇಶದ ಎಲ್ಲೆಡೆಯೂ ಪರಿಶಿಷ್ಟ ಸಮುದಾಯಗಳ ಜನರ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಮೊದಲೇ ಹೇಳಿದ ಹಾಗೆ ಜಾತಿಯ ಕಾರಣಕ್ಕಾಗಿಯೇ ನಾನು ಇಂಥ ಅಪಮಾನಗಳನ್ನು ಅನುಭವಿಸಿದ್ದೇನೆ. ಒಮ್ಮೆ ಕೇರಳದ‌ಲ್ಲಿ ಬೇರೆಯ ನಾಟಕವೊಂದಕ್ಕೆ ತಯಾರಿ ನಡೆಸುತ್ತಿದ್ದ ವೇಳೆ ನನ್ನ ಸ್ನೇಹಿತ, ಆ ನಾಟಕದ ಸಹ ನಟ ಅನಿರುದ್ಧ್ ನಾಯರ್ ಅಂತ ಆತನ ಹೆಸರು. ಹೀಗೇ ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾಗ ನನ್ನ ಅಪಮಾನಗಳ ಬಗ್ಗೆ ಹೇಳಿಕೊಂಡೆ. ಆತನಿಗೆ ಇಂಥ ಅನುಭವ ಎಂದೂ ಆಗಿರಲಿಲ್ಲ. ಆಗುವುದಕ್ಕೆ ಸಾಧ್ಯವೂ ಇರಲಿಲ್ಲ ಬಿಡಿ. ನಮ್ಮಿಬ್ಬರ ಇದೇ ಮಾತುಕತೆಗೆ ನಾಟಕ ರೂಪ ನೀಡಲು ನಿರ್ಧರಿಸಿದೆವು. ಹೀಗೆ ರೂಪುಗೊಂಡದ್ದೆ ‘ಕ್ರಿಮಿನಲ್ ಟ್ರೈಬ್ಸ್ ಆ್ಯಕ್ಟ್‌’. ಸುಮಾರು ಒಂದು ತಾಸಿನ ನಾಟಕ. ಜಪಾನ್‌, ಸ್ವಿಟ್ಜರ್ಲೆಂಡ್‌, ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಈ ನಾಟಕವನ್ನು ಆಡಿದ್ದೇವೆ.

ನಾನು ಮತ್ತು ನನ್ನ ಕೆಲವು ಸ್ನೇಹಿತರು ಸೇರಿ ‘ಜಂಗಮ ಕಲೆಕ್ಟಿವ್’ ಅಂತ ಒಂದು ತಂಡ ಕಟ್ಟಿಕೊಂಡಿದ್ದೇವೆ. ಸರ್ಕಾರಿ ಶಾಲೆಗೆ ಹೋಗಿ, ಅವರ ಪಠ್ಯಕ್ಕೆ ಸಂಬಂಧಿಸಿದಂತೆ ನಾಟಕ ಆಡಿಸುತ್ತೇವೆ ಇಲ್ಲವೇ ಪಾಠ ಮಾಡುತ್ತೇವೆ. ದಲಿತ ಕಾವ್ಯಗಳನ್ನು ಆಧರಿಸಿ ಲಕ್ಷ್ಮಣ ಕೆ.ಪಿ. ಅವರ ‘ದಕ್ಲಕಥಾ ದೇವಿಕಾವ್ಯ’ ನಾಟಕವನ್ನು ದೇಶದಾದ್ಯಂತ ಆಡಿದ್ದೇವೆ.

ಟ್ರಾನ್ಸ್‌ಜೆಂಡರ್‌ ರೇವತಿ ಅವರ ‘ಬದುಕು ಬಯಲು’ ಆತ್ಮಕಥೆಯನ್ನು ‘ಜನಮನದಾಟ’ ರಂಗ ತಂಡದಲ್ಲಿ ಗಣೇಶ್‌ ಮೇಷ್ಟ್ರು ನಾಟಕ ಆಡಿಸಿದ್ದರು. ಇದರಲ್ಲೂ ನಟಿಸಿದ್ದೇನೆ. ಟ್ರಾನ್ಸ್‌ಜೆಂಡರ್‌ಗಳೇ ಕಟ್ಟಿಕೊಂಡಿರುವ ‘ಪಯಣ’ ಮತ್ತು ‘ರಾಹಿ’ ತಂಡದಲ್ಲಿ ಸಕ್ರಿಯನಾಗಿದ್ದೇನೆ. ಅವರಿಗಾಗಿ, ಅವರ ಕಥೆಗಳನ್ನು ಇಟ್ಟುಕೊಂಡು ಹಲವು ನಾಟಕಗಳನ್ನು ನಿರ್ದೇಶಿಸಿದ್ದೇನೆ. ಕನ್ನಡ ರಂಗಭೂಮಿಯಲ್ಲಿ ಕೆಲವೇ ತಂಡಗಳಷ್ಟೇ ಸಮುದಾಯಗಳನ್ನು ಒಳಗೊಂಡಂತೆ ನಾಟಕಗಳನ್ನು ಕಟ್ಟಿವೆ. ಉಳಿದಂತೆ ರಾಶಿ ರಾಶಿ ಕ್ಲೀಷೆಗಳಿಂದ ತುಂಬಿಹೋಗಿದೆ ಅನ್ನಿಸುತ್ತದೆ. ಅಂಬೇಡ್ಕರ್ ವಿಚಾರಗಳನ್ನು ನಾಟಕಗಳ ಮೂಲಕ ಜನ ಮಾನಸಕ್ಕೆ ತಲುಪಿಸುವ ಆಸೆಯೂ ಇದೆ.

ಇದು ಯಾವುದೋ ಇಂಗ್ಲಿಷ್‌ ಲೇಖಕ ಬರೆದ ಕಥೆ ಆಗಿರಲಿಲ್ಲ. ಇದು ನಟರ ಬದುಕಿನ ಶತ ಶತಮಾನಗಳ ಅನುಭವಗಳಾಗಿದ್ದವು. ಶಾಸ್ತ್ರೀಯವಾಗಿ ಸಂಗೀತ ಕಲಿತವರು ಈ ಕಥೆಗೆ ಸಂಗೀತ ನೀಡಿರಲಿಲ್ಲ. ಇವು ನಟರ ಶತ ಶತಮಾನಗಳ ಅನುಭವಗಳಿಂದ ಹುಟ್ಟಿದ ಪ್ರತಿರೋಧದ ಹಾಡುಗಳಾಗಿದ್ದವು. ನಟರು ಶತಮಾನಗಳ ಕಾಲ ನಡೆಸಿದ ಜೀವನ ಅವರು ಆಚರಿಸಿದ ಹಬ್ಬಗಳು ಆಚರಣೆಗಳೇ ರಂಗ ಪರಿಕರಗಳಾಗಿದ್ದವು. ಇದೇ ದಿಂಡಗೂರು ಗ್ರಾಮದ ಪರಿಶಿಷ್ಟ ಜನರ ‘ಕೇರಿ–ಹಾಡು’. ನಾನೇ ಈ ನಾಟಕವನ್ನು ನಿರ್ದೇಶಿಸಿದ್ದೆ
– ಚಂದ್ರಶೇಖರ್‌ ಕೆ.
ಚಂದ್ರಶೇಖರ್‌ ಕೆ.
ಚಂದ್ರಶೇಖರ್‌ ಕೆ.
ಯಾವುದೇ ಸಿದ್ಧ ಚೌಕಟ್ಟಿಗೆ ಜೋತು ಬೀಳದೆಯೇ ಬೇರೆ ಬೇರೆ ಸಮುದಾಯಗಳ ಜೊತೆಯಲ್ಲಿ ಅವರ ಬದುಕಿನ ಭಾಗವಾಗಿ ಅವರ ಕಥೆಗಳನ್ನು ‘ಕೇರಿ–ಹಾಡು’ ರೀತಿಯಲ್ಲಿಯೇ ರಂಗಭೂಮಿ ಮೇಲೆ ತರುವ ಕನಸಿದೆ. ರಂಗಭೂಮಿ ಈತನಕ ಇಂಥ ಕಥೆಗಳಿಗೆ ಸಾಕ್ಷಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT