ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಷಾ ಅಂದ್ರೆ ಗೊತ್ತಾಗ್ಲಿಲ್ವಾ? ನಾನು ‘ಅಗ್ನಿಸಾಕ್ಷಿ’ಯ ರಾಧಿಕಾ

ಆಪ್ತಸಮಾಲೋಚಕಿ ನಟಿಯಾದಾಗ...
Last Updated 8 ಮೇ 2020, 3:12 IST
ಅಕ್ಷರ ಗಾತ್ರ
ADVERTISEMENT
""

ಅನುಷಾ ಎಂದರೆ ಬಹಳಷ್ಟು ಜನರಿಗೆ ಗೊತ್ತಾಗಲಿಕ್ಕಿಲ್ಲ. ಆದರೆ ‘ಅಗ್ನಿಸಾಕ್ಷಿ’ ಧಾರಾವಾಹಿಯ ‘ರಾಧಿಕಾ’ ಎಂದರೆ ಬಹುಶಃ ಎಲ್ಲರಿಗೂ ಗೊತ್ತು.

---

ಆಕೆ ನಟಿಯಾಗುವ ಕನಸು ಚಿಗುರಿಸಿಕೊಂಡು ಬೆಳೆದವರಲ್ಲ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಆಪ್ತಸಮಾಲೋಚಕಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಅವರಿಗೆ ಮೊದಲಿನಿಂದಲೂ ನೃತ್ಯದ ಮೇಲೆ ವಿಪರೀತ ಒಲವು. ಆ ಕಾರಣಕ್ಕೆ, ಮದುವೆಯಾದ ಮೇಲೆ ನೃತ್ಯವನ್ನೇ ಮುಂದುವರಿಸಬೇಕು ಎಂದುಕೊಂಡು ಕೆಲಸಕ್ಕೆ ರಾಜೀನಾಮೆ ನೀಡುತ್ತಾರೆ. ಈ ನಡುವೆ ಆಕಸ್ಮಿಕವಾಗಿ ಆಡಿಷನ್‌ನಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ. ಆದರೆ ಮೊದಲ ಬಾರಿಗೆಅವರು ಆಯ್ಕೆಯಾಗುವುದಿಲ್ಲ. ಅಂದಿನ ಅವರ ಆಡಿಷನ್‌ನ ಫೋಟೊ ನೋಡಿ ಸುವರ್ಣ ವಾಹಿನಿಯ ‘ದುರ್ಗಾ’ ಧಾರಾವಾಹಿಯಲ್ಲಿ ನಟಿಸಲು ಕರೆ ಬರುತ್ತದೆ. ಹೀಗೆ ನಟನಾ‍ಪ್ರಪಂಚಕ್ಕೆ ಕಾಲಿಡುತ್ತಾರೆಅನುಷಾ ರಾವ್‌.

ಅನುಷಾ ಎಂದರೆ ಬಹಳಷ್ಟು ಜನರಿಗೆ ಗೊತ್ತಾಗಲಿಕ್ಕಿಲ್ಲ. ಆದರೆ ‘ಅಗ್ನಿಸಾಕ್ಷಿ’ ಧಾರಾವಾಹಿಯ ‘ರಾಧಿಕಾ’ ಎಂದರೆ ಬಹುಶಃ ಎಲ್ಲರಿಗೂ ಗೊತ್ತು. ಅವಳಿ ಮಕ್ಕಳ ತಾಯಿ ರಾಧಿಕಾ ಪಾತ್ರದ ಮುಗ್ಧತೆ ಇಂದಿಗೂ ಜನರ ಮನಸ್ಸಿನಲ್ಲಿ ಹಾಗೇ ಉಳಿದುಕೊಂಡಿದೆ. ಈ ಧಾರಾವಾಹಿ ನಂತರ ‘ಮನರೂಪ’ ಹಾಗೂ ‘ಚಿತ್ರಕಥಾ’ ಸಿನಿಮಾದಲ್ಲೂ ನಟಿಸಿದ್ದಾರೆ ಅನುಷಾ.

ಸುಬ್ಬಲಕ್ಷ್ಮಿ ಸಂಸಾರ, ದೊಡ್ಮನೆ ಸೊಸೆ ಧಾರಾವಾಹಿಗಳಲ್ಲೂ ನಟಿಸಿರುವ ಇವರು ಕಿರುತೆರೆಯ ಜೊತೆ ಜೊತೆಯಲ್ಲೇ ಸಿನಿರಂಗಕ್ಕೂ ಪಾದಾರ್ಪಣೆ ಮಾಡುತ್ತಾರೆ.

ಮೊದಲು ಇವರು ನಟಿಸಿದ್ದು ಮನರೂಪ ಸಿನಿಮಾದಲ್ಲಿ. ‘ಮನರೂಪ ಸಿನಿಮಾದಲ್ಲೂ ನನಗೆ ಅವಕಾಶ ಸಿಕ್ಕಿದ್ದು ಆಕಸ್ಮಿಕವಾಗಿಯೇ. ಮನರೂಪದ ‘ಉಜ್ವಲ’ ಪಾತ್ರದಲ್ಲಿ ಬೇರೊಬ್ಬರು ನಟಿಸಬೇಕಿತ್ತು. ಆದರೆ ಅವರು ಕಾರಣಾಂತರದಿಂದ ಈ ಪ್ರಾಜೆಕ್ಟ್‌ನಿಂದ ಹೊರಬಂದಿದ್ದರು. ಆಗ ನಿರ್ದೇಶಕ ಕಿರಣ್ ಹೆಗಡೆ ನನ್ನನ್ನು ಭೇಟಿ ಮಾಡಿ ಪಾತ್ರದಲ್ಲಿ ನಟಿಸುವಂತೆ ಕೇಳಿದ್ದರು. ನಾನು ಪಾತ್ರದ ಬಗ್ಗೆ ಕೇಳಿದ ಮೇಲೆ ಖುಷಿಯಿಂದ ಒಪ್ಪಿಕೊಂಡೆ’ ಎಂದು ಸಿನಿಮಾದ ಆರಂಭದ ದಿನಗಳ ಬಗ್ಗೆ ನೆನೆಯುತ್ತಾರೆ.‍

‘ಸಿನಿಮಾದ ಶೂಟಿಂಗ್ ನಡೆದಿದ್ದು ಕಾಡಿನ ಮಧ್ಯೆ. ಆದರೂ ಅನುಭವ ಚೆನ್ನಾಗಿತ್ತು. ನಾನು ಶಿರಸಿ ಕಡೆಯವಳಾದರೂ ಬೆಂಗಳೂರಿನಲ್ಲಿ ಇರುವ ಕಾರಣಕ್ಕೆ ಕಾಡಲ್ಲಿ ಸುತ್ತಾಡಿದ್ದು ಕಡಿಮೆ. ಈ ಸಿನಿಮಾ ಒಂದು ಚಿಕ್ಕ ತಂಡದ ಪ್ರಯತ್ನ. ಪ್ರತಿದಿನ ಕಾಡಿಗೆ ಹೋಗಿ ಶೂಟ್ ಮಾಡುತ್ತಿದ್ದೆವು. ಒಟ್ಟಾರೆ ನಮ್ಮ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿದೆ. ಅದೇ ಖುಷಿ’ ಎಂದು ಕಾಡಿನಲ್ಲಿ ಶೂಟಿಂಗ್ ಮಾಡಿದ ಅನುಭವದ ಬಗ್ಗೆ ಹೇಳುತ್ತಾರೆ.

ಸಿನಿಮಾ ನಿರ್ದೇಶಕರ ಬಗ್ಗೆ ಹೇಳುತ್ತಾ ‘ಕಿರಣ್ ಅವರಿಗೆ ಈ ಸಿನಿಮಾ ಕನಸಿನ ಪ್ರಾಜೆಕ್ಟ್ ಆಗಿತ್ತು. ಸಿನಿಮಾಗೆ ಯಶಸ್ಸು ಸಿಗುತ್ತೊ ಬಿಡುತ್ತೊ ಆದರೆ ಸಿನಿಮಾ ಮಾಡಬೇಕು ಎಂಬ ಹಂಬಲ ಅವರಿಗಿತ್ತು. ಈ ಸಿನಿಮಾದ ವಿಷಯ ತುಂಬಾ ಭಿನ್ನವಾಗಿದೆ. ಇದು ಕಾಲ್ಪನಿಕ ಕಥೆ ಇರುವ ಸಿನಿಮಾವಾದರೂ ತಂತ್ರಜ್ಞಾನ ಮುಂದುವರಿದಂತೆ ಇಂತಹ ಅಪಾಯಗಳು ಎದುರಾಗುತ್ತವೆ ಎಂಬುದನ್ನು ತೋರಿಸುವ ಪ್ರಯತ್ನ. ಇದೊಂದು ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ. ಒಟ್ಟಾರೆ ನಿರ್ದೇಶಕರ ಕನಸು ನನಸಾಗಿರುವುದು ಖುಷಿ ತಂದಿದೆ’ ಎನ್ನುತ್ತಾರೆ.

‘ಸಿನಿಮಾ ಥಿಯೇಟರ್‌ನಲ್ಲಿ ಗಳಿಕೆ ಕಂಡಿದ್ದಕ್ಕಿಂತ ಅಮೆಜಾನ್ ಪ್ರೈಮ್‌ನಲ್ಲಿ ಹೆಚ್ಚು ಜನ ನೋಡಿ ಇಷ್ಟಪಟ್ಟಿದ್ದಾರೆ. ಈ ಸಿನಿಮಾದ ಕಥೆ ಭಿನ್ನವಾಗಿದೆ. ಇದು ಒಂದು ವರ್ಗದ ಜನಕ್ಕೆ ಇಷ್ಟವಾದರೆ ಇನ್ನೊಂದು ವರ್ಗದ ಜನಕ್ಕೆ ಇಷ್ಟವಾಗದೇ ಇರಬಹುದು. ಇಂತಹ ಪ್ರಯೋಗಾತ್ಮಕ ಸಿನಿಮಾ ಎಲ್ಲರಿಗೂ ಇಷ್ಟವಾಗಲೇಬೇಕು ಎಂದೇನಿಲ್ಲ. ಈ ನಡುವೆ ಸಿನಿಮಾಗೆ ಮೂರು ಪ್ರಶಸ್ತಿಗಳು ಸಂದಿರುವುದು ಕೂಡ ಹೆಮ್ಮೆ ಹಾಗೂ ಸಂತಸ ತಂದಿದೆ’ ಎನ್ನುತ್ತಾರೆ.

ತೆಲುಗು ಧಾರಾವಾಹಿಯೊಂದರಲ್ಲಿ ನೆಗೆಟಿವ್ ಪಾತ್ರ ಮಾಡುತ್ತಿರುವ ಇವರು ಕನ್ನಡ ಧಾರಾವಾಹಿಯಲ್ಲೂ ನೆಗೆಟಿವ್ ಪಾತ್ರವೊಂದರಲ್ಲಿ ನಟಿಸುವ ಇರಾದೆ ವ್ಯಕ್ತಪಡಿಸುತ್ತಾರೆ. ಕನ್ನಡ, ತಮಿಳು, ತೆಲುಗು ಧಾರಾವಾಹಿಗಳಿಂದ ಅವಕಾಶಗಳು ಬಂದರೂ ಲಾಕ್‌ಡೌನ್‌ ಗದ್ದಲದ ನಡುವೆ ಸದ್ಯಕ್ಕೆ ನಟನೆಗೆ ಬ್ರೇಕ್ ಬಿದ್ದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಲಿದ್ದಾರೆ.

‘ಸಿನಿಮಾದಲ್ಲಿ ನಟಿಸಲು ಇಂತಹದ್ದೇ ಪಾತ್ರ ಬೇಕು ಎನ್ನುವುದಕ್ಕಿಂತ ನನಗೆ ನೀಡಿದ ಪಾತ್ರಕ್ಕೆ ನಾನು ಪೂರ್ಣ ನ್ಯಾಯ ಒದಗಿಸುತ್ತೇನೆ. ಒಬ್ಬ ನಟ–ನಟಿಗೆ ಪಾತ್ರ ಯಾವುದೇ ಇರಲಿ, ಕೊನೆಗೆ ನಾವು ತಲುಪುವುದು ಜನರನ್ನು. ನಾವು ಮಾಡುವ ಪಾತ್ರ ಜನರ ಮನಸ್ಸಿಗೆ ಇಷ್ಟವಾಗಬೇಕು. ಜನರ ಮನರಂಜಿಸುವುದು ನಟನೆಯ ಮೂಲ ಉದ್ದೇಶ’ ಎಂದು ಮಾತು ಮುಗಿಸುತ್ತಾರೆ ಅನುಷಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT