ಗುರುವಾರ , ಸೆಪ್ಟೆಂಬರ್ 16, 2021
29 °C

ಒಳ್ಳೆ ಹುಡುಗಿ ಸಿಕ್ಕಿದ ತಕ್ಷಣ ಮದುವೆ ಎಂದ ಬಿಗ್ ಬಾಸ್ ವಿಜೇತ ಮಂಜು ಪಾವಗಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲರ್ಸ್‌ ಕನ್ನಡ ವಾಹಿನಿಯ ಬಿಗ್‌ಬಾಸ್‌ 8ನೇ ಆವೃತ್ತಿಯ ವಿಜೇತ ಸ್ಪರ್ಧಿ ಮಜಾಭಾರತ ಖ್ಯಾತಿಯ ಹಾಸ್ಯಕಲಾವಿದ ಮಂಜು ಪಾವಗಡ ಅವರಿಗೆ ಅಭಿಮಾನಿಗಳು ಹೊಸ ಕಾಟ ಕೊಡಲಾರಂಭಿಸಿದ್ದಾರೆ. ಬಿಗ್‌ಬಾಸ್‌ ಮನೆಯಿಂದ ಹೊರಬಂದ ಕೂಡಲೇ ‘ಯಾವಾಗ ಮದುವೆ?’ ಎಂದು ಪದೇಪದೇ ಪ್ರಶ್ನೆ ಕೇಳಲಾರಂಭಿಸಿದ್ದಾರೆ.

ಈ ಪ್ರಶ್ನೆಗಳಿಗೆ ಇನ್‌ಸ್ಟಾಗ್ರಾಂನಲ್ಲಿ ಲೈವ್‌ ಮುಖಾಂತರ ಉತ್ತರ ನೀಡಿರುವ ಮಂಜು, 120 ದಿನಗಳ ಬಿಗ್‌ಬಾಸ್‌ ಪಯಣದ ಅನುಭವವನ್ನೂ ಜನರೆದುರು ಇಟ್ಟಿದ್ದಾರೆ. 

ಭಾನುವಾರವಷ್ಟೇ ಬಿಗ್‌ಬಾಸ್‌ ‘ಗ್ರ್ಯಾಂಡ್‌ ಫಿನಾಲೆ’ ನಡೆದಿತ್ತು. 45,03,495 ದಾಖಲೆ ಮತಗಳನ್ನು ಪಡೆಯುವ ಮುಖಾಂತರ ಮಂಜು ಪಾವಗಡ ವಿಜೇತರಾಗಿದ್ದರು. ಜೊತೆಗೆ ₹53 ಲಕ್ಷ ನಗದು ಬಹುಮಾನವನ್ನೂ ಮಂಜು ಗೆದ್ದಿದ್ದರು. ಈ ಕುರಿತು ಮಾತನಾಡಿದ ಮಂಜು ಪಾವಗಡ, ‘ಬಿಗ್‌ಬಾಸ್‌ ಮನೆಯನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಮನೆಯಿಂದ ಹೊರಬಂದ ಬಳಿಕ ಬಹಳ ಬೇಜಾರಾಗುತ್ತಿದೆ. ಇಳಿಸಂಜೆಯ ಈ ಹೊತ್ತಿನಲ್ಲಿ ಇಷ್ಟು ಹೊತ್ತಿಗೆ ಬಿಗ್‌ಬಾಸ್‌ ಮನೆಯೊಳಗೆ ಬೀನ್‌ ಬ್ಯಾಗ್‌ನಲ್ಲಿ ಅಥವಾ ಗಾರ್ಡನ್‌ ಏರಿಯಾದಲ್ಲಿ ಕುಳಿತಿರುತ್ತಿದ್ದೆವು. ಈಗ ಸಣ್ಣ ಮನೆ, ಒಂದೇ ಬಾತ್‌ರೂಂ...ಬಿಗ್‌ಬಾಸ್‌ ಪಯಣ ಮಜಮಜವಾಗಿತ್ತು’ ಎಂದಿದ್ದಾರೆ. 

ಮದುವೆ ಯಾವಾಗ ಎಂಬ ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸಿರುವ ಮಂಜು, ‘ಒಳ್ಳೆ ಹುಡುಗಿ ಸಿಕ್ಕಿದ ತಕ್ಷಣ ಮದುವೆಯಾಗುತ್ತೇನೆ. ದಿವ್ಯ ಸುರೇಶ್‌ ಅವರನ್ನು ಬೇಡ ಎಂದಿಲ್ಲಲ್ವ, ಎಲ್ಲರ ಜೊತೆಯೂ ಖುಷಿ ಖುಷಿಯಾಗಿರಬೇಕು. ಮದುವೆ ವಿಚಾರದಲ್ಲಿ ಎಲ್ಲರ ಕಣ್ಣು ನನ್ನ ಮೇಲೆಯೇ ಬಿದ್ದಿರುವ ಹಾಗಿದೆ. ನಿಮ್ಮ ಕಡೆ ಒಳ್ಳೆಯ ಹುಡುಗಿ ಇದ್ದರೆ ಹೇಳಿ ನೋಡೋಣ’ ಎಂದು ಪ್ರೇಕ್ಷಕರನ್ನೇ ಕೇಳಿದ್ದಾರೆ.

‘ಸಿಕ್ಕಿರುವ ಬಹುಮಾನದ ಮೊತ್ತವನ್ನು ಏನು ಮಾಡಬೇಕು ಎಂದು ಇಲ್ಲಿಯವರೆಗೂ ಯೋಚಿಸಿಲ್ಲ. ಮುಂದೆ ನೋಡಬೇಕು. ದುಡ್ಡು ಕೊಟ್ಟಿರೋದು ಖರ್ಚು ಮಾಡುವುದಕ್ಕೆ ತಾನೆ’ ಎಂದಿದ್ದಾರೆ ಮಂಜು.

ಮನೆಯೊಳಗಿದ್ದ ಸ್ಪರ್ಧಿಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಮಂಜು, ‘ನಿಧಿ ಒಳ್ಳೆಯ ಗೆಳತಿ. ನೇರ ಮಾತು. ನನಗೂ ಅವಳಿಗೂ ಸಲುಗೆ ಜಾಸ್ತಿ. ನನಗೆ ಆಕೆ ಉತ್ತಮ ಸ್ನೇಹಿತೆ. ಗುಂಡಮ್ಮ(ಶುಭಾ ಪೂಂಜ) ಮುಗ್ಧ ಮನಸ್ಸಿನ ಪುಟ್ಟ ಮಗು. ಮನಸ್ಸಿಗೆ ಬಂದ ಹಾಗೆ ಆಡುತ್ತದೆ. ವೈಷ್ಣವಿ ಚೆನ್ನಾಗಿ ಅಡುಗೆ ಮಾಡುತ್ತಾರೆ. ಅಡುಗೆ ಚೆನ್ನಾಗಿ ಇದ್ದರೂ ನಾನು ಕಾಲೆಳೆಯುತ್ತಿದ್ದೆ. ದಿವ್ಯ ಸುರೇಶ್‌ ನನ್ನ ಒಳ್ಳೆಯ ಸ್ನೇಹಿತೆ. ಟಾಸ್ಕ್‌ ವಿಚಾರಕ್ಕೆ ಬಂದಾಗ ಆಕೆ ತುಂಬಾ ಸ್ಟ್ರಿಕ್ಟ್‌. ದಿವ್ಯಾ ಉರುಡುಗ ನಗು ನನಗೆ ಬಹಳ ಇಷ್ಟ. ಸುದೀಪ್‌ ಅವರು ನನ್ನನ್ನು ಹಾಗೂ ದಿವ್ಯಾ ಉರುಡುಗ ಅವರನ್ನು ಅವಳಿ ಜವಳಿ ಎನ್ನುತ್ತಿದ್ದರು. ಸುದೀಪ್‌ ಅವರು ನನ್ನನ್ನು ಮಂಜಣ್ಣಾ..ಎಂದು ಕರೆಯುತ್ತಿದ್ದರು. ಈ ರೀತಿ ಕರೆಯುವುದೇ ಒಂದು ಖುಷಿ ನೀಡುತ್ತಿತ್ತು’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು