ಭಾನುವಾರ, ಸೆಪ್ಟೆಂಬರ್ 19, 2021
24 °C

Bigg Boss 8: ಬಿಗ್‌ ಬಾಸ್‌ ಮನೆಯಿಂದ ದಿವ್ಯಾ ಉರುಡುಗ ಹೊರಕ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ದಿವ್ಯಾ ಉರುಡುಗ

ಬೆಂಗಳೂರು: ಬಿಗ್ ಬಾಸ್ ಸೀಸನ್ 8ರ ಫಿನಾಲೆ ಅಂತಿಮ ಘಟ್ಟದಲ್ಲಿದ್ದು, ಮಂಜು ಪಾವಗಡ ಮತ್ತು ಕೆ.ಪಿ.ಅರವಿಂದ್ ಸೇಫ್‌ ಆಗಿದ್ದಾರೆ. ಬಿಗ್‌ ಬಾಸ್‌ ಮನೆಯಿಂದ ದಿವ್ಯಾ ಉರುಡುಗ ಹೊರಗೆ ಬರುತ್ತಿದ್ದಾರೆ. ದಿವ್ಯಾ11,61,205 ಮತಗಳನ್ನು ಪಡೆದಿದ್ದಾರೆ.

ಮಂಜು ಪಾವಗಡ ಮತ್ತು ಕೆ.ಪಿ.ಅರವಿಂದ್ ಇವರಲ್ಲಿ ಯಾರಿಗೆ ಗೆಲುವು?

ದಿವ್ಯ ಉರುಡುಗ 11,61,205 ಮತ ಪಡೆದಿದ್ದಾರೆ ಎಂದು ಸುದೀಪ್‌ ಘೋಷಿಸಿದರು. ‘ಅರವಿಂದ್‌ ಮತ್ತು ಮಂಜು ಅವರಿಬ್ಬರಲ್ಲಿ ಒಬ್ಬರಿಗೆ 45,03,495 ಮತ ಹಾಗೂ ಮತ್ತೊಬ್ಬರಿಗೆ 43,35,957 ಮತ ಬಂದಿದೆ. ಎಷ್ಟೊಂದು ವ್ಯತ್ಯಾಸ’ ಎಂದು ದಿವ್ಯ ಉರುಡುಗ ಎಲಿಮಿನೇಷನ್ ಸಂದರ್ಭದಲ್ಲೇ ಸುದೀಪ್‌ ಅಂತಿಮ ಘಟ್ಟ ತಲುಪಿದ ಸ್ಪರ್ಧಿಗಳಿಗೆ ಶಾಕ್‌ ನೀಡಿದರು. 

ಮನೆಯಿಂದ ಹೊರಬರುವಾಗ ದಿವ್ಯಾ ಮಾತು:

'ಇದು ನನ್ನ ಜೀವಮಾನದ ಮಹತ್ತರವಾದ ಅನುಭವ ಮತ್ತು ಅವಕಾಶ.' – ದಿವ್ಯಾ ಉರುಡಗ

ಬಿಗ್ ಬಾಸ್ ಮನೆಯಲ್ಲಿ ಎರಡು ಬಾರಿ ಕ್ಯಾಪ್ಟನ್ ಆಗಿದ್ದ ಖ್ಯಾತಿ ಹೊಂದಿರುವ ಏಕೈಕ ಮಹಿಳಾ ಸ್ಪರ್ಧಿ ದಿವ್ಯಾ ಉರುಡುಗ ಟಾಸ್ಕ್‌ಗಳಲ್ಲಿ ಎಲ್ಲರಿಗಿಂತಲೂ ಮುಂದಿದ್ದರು. ನಾನೇ ಮೊದಲ‌ ಮಹಿಳಾ ನಾಯಕಿಯಾಗಬೇಕೆಂಬ ಹಠ ಸಾಧಿಸಿ ತೋರಿಸಿದ್ದರು.

ಕೆ.ಪಿ. ಅರವಿಂದ್ ಜೊತೆ ಆಪ್ತವಾಗಿ ಗುರುತಿಸಿಕೊಂಡಿದ್ದ ದಿವ್ಯಾ ಉರುಡುಗ ಒಮ್ಮೆ ಅಸ್ವಸ್ಥರಾಗಿ ಮನೆಯಿಂದ ಹೊರನಡೆದಿದ್ದರು. ಮತ್ತೊಮ್ಮೆ, ಆಕ್ರಮಣಕಾರಿ ಆಟದ ವೇಳೆ ಮನೆಯ ಗ್ಲಾಸ್ ಡೋರನ್ನೇ ಒಡೆದು ಕೈಗೆ ಗಾಯ ಮಾಡಿಕೊಂಡಿದ್ದರು.

ಈ ಸೀಸನ್‌ನಲ್ಲಿ 17 ಸ್ಪರ್ಧಿಗಳ ಪೈಕಿ ಐವರು ಫಿನಾಲೆ ಹಂತ ತಲುಪಿದ್ದರು.

ಶನಿವಾರದ ಸಂಚಿಕೆಯಲ್ಲಿ ಪ್ರಶಾಂತ್ ಸಂಬರಗಿ ಮತ್ತು ವೈಷ್ಣವಿ ಎಲಿಮಿನೇಟ್ ಆದರು. ಪ್ರಶಾಂತ್ ಸಂಬರಗಿಗೆ 6.69 ಲಕ್ಷಕ್ಕೂ ಅಧಿಕ ಮತಗಳು ಬಿದ್ದಿದ್ದರೆ, ವೈಷ್ಣವಿಗೆ 10 ಲಕ್ಷಕ್ಕೂ ಅಧಿಕ ಮತಗಳು ಬಿದ್ದಿದ್ದವು.

ಬಿಗ್ ಬಾಸ್ ಸೀಸನ್ 8ರ ವಿಜೇತ ಸ್ಪರ್ಧಿಗೆ ₹50 ಲಕ್ಷ ಬದಲಿಗೆ ₹ 53 ಲಕ್ಷ ನೀಡಲಾಗುತ್ತಿದೆ. ಹಾಗೆಯೇ, ಮೊದಲ ರನ್ನರ್‌ ಅಪ್‌ಗೆ ₹ 11 ಲಕ್ಷ, ಎರಡನೇ ರನ್ನರ್‌ ಅಪ್‌ಗೆ ₹ 6 ಲಕ್ಷ ಸಿಗಲಿದೆ.

ಮನೆಯಿಂದ ಹೊರಬಂದು ಮಾತನಾಡಿದ ವೈಷ್ಣವಿ, ‘ಮಂಜು ಪಾವಗಡ ಬಿಗ್‌ಬಾಸ್‌ ವಿಜೇತರಾಗುತ್ತಾರೆ. ಕಲರ್ಸ್‌ ಕನ್ನಡ ನನಗೆ ಜೀವ ನೀಡಿದ ಚಾನೆಲ್‌. ಇದಕ್ಕೆ ನಾನು ಚಿರಋಣಿ’ ಎಂದಿದ್ದಾರೆ. ‘ನೀವು ಬಿಗ್‌ಬಾಸ್‌ ಮನೆಗೆ ಎಂಟರ್‌ಟೈನರ್‌ ಆಗಿದ್ದಿರಿ. ಬಿಗ್‌ಬಾಸ್‌ ಭಾಗವಾಗಿದ್ದಕ್ಕೆ ನಿಮಗೆ ಧನ್ಯವಾದ’ ಎಂದು ಸುದೀಪ್‌ ಹೇಳಿದರು. ಇದೇ ಸಂದರ್ಭದಲ್ಲಿ ಮೂರನೇ ರನ್ನರ್‌ಅಪ್‌ ಆಗಿರುವ ವೈಷ್ಣವಿಗೆ ಸುದೀಪ್‌ ₹3.5 ಲಕ್ಷದ ಚೆಕ್‌ ಹಸ್ತಾಂತರಿಸಿದರು. ಫಿನಾಲೆ ಕಾರ್ಯಕ್ರಮದಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ಕಳೆದ ಸಮಯವನ್ನು ನೆನೆಪಿಸಿಕೊಂಡು ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್‌ ಕಣ್ಣೀರಾದರು.

ಬಿಗ್‌ಬಾಸ್ ಸೀಸನ್‌ 8; ಅಂತಿಮ ಸುತ್ತಿನಲ್ಲಿದ್ದ ಐವರು ಸ್ಪರ್ಧಿಗಳ ಪರಿಚಯ

ಅರವಿಂದ್ ಕೆ.ಪಿ

ಅರವಿಂದ್ ಕೆ.ಪಿ.ಅಂತರಾಷ್ಟ್ರೀಯಮಟ್ಟದ ರೇಸ್‌ ಬೈಕ್ ರೈಡರ್‌. ವಿವಿಧ ಮಟ್ಟದ ಬೈಕ್ ರೇಸ್‌ಗಳಲ್ಲಿ 17 ರಾಷ್ಟ್ರೀಯ ಮತ್ತು ಒಂದು ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಗೆದ್ದು ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮಲಯಾಳಂ ಚಿತ್ರ ‘ಬೆಂಗಳೂರು ಡೇಸ್‌’ನಲ್ಲೂ ನಟಿಸಿದ್ದಾರೆ. ಸದ್ಯ ಬಿಗ್‌ ಬಾಸ್‌ ಸ್ಪರ್ಧಿ.

ಮಂಜು ಪಾವಗಡ

ಮಂಜು ಪಾವಗಡ ಕನ್ನಡ ಕಿರುತೆರೆಯ ಹಾಸ್ಯ ಕಲಾವಿದ. ಕಲರ್ಸ್ ಕನ್ನಡ ವಾಹಿನಿಯ ಮಜಾ ಭಾರತ ಹಾಸ್ಯಪ್ರಧಾನ ಕಾರ್ಯಕ್ರಮದ ಮೂಲಕ ಖ್ಯಾತರಾದವರು. ರಂಗಭೂಮಿ, ಕಲೆ ಇವರ ಆಸಕ್ತಿಯ ಕ್ಷೇತ್ರಗಳು. ಬಿಗ್‌ ಬಾಸ್‌ ಮನೆಯಲ್ಲಿ ತಮ್ಮ ಎಂದಿನ ಹಾಸ್ಯ, ಭಾವುಕತೆಯ ಕಾರಣದಿಂದ ಗಮನ ಸೆಳೆದವರು. ಶಿವರಾಜ್‌ಕುಮಾರ್‌ ಅವರಿಂದ ಶುಭಹಾರೈಕೆ ಬೇಕು ಎಂದು ಬಿಗ್‌ ಬಾಸ್‌ ‘ಕಿವಿ’ಯಲ್ಲಿ ಕೇಳಿ ಅದನ್ನು ಈಡೇರಿಸಿಕೊಂಡು ಸುದ್ದಿಯಾದವರು.

ವೈಷ್ಣವಿ ಗೌಡ

ವೈಷ್ಣವಿ ಗೌಡ ಅವರು ಕಿರುತೆರೆ ನಟಿ. ‘ಅಗ್ನಿಸಾಕ್ಷಿ’ ಧಾರಾವಾಹಿಯ ಸನ್ನಿಧಿ ಪಾತ್ರದ ಮೂಲಕ ಖ್ಯಾತರಾದವರು. ರೂಪದರ್ಶಿ, ಹಲವು ಉತ್ಪನ್ನಗಳ ರಾಯಭಾರಿ. ಝೀ ಕನ್ನಡ ವಾಹಿನಿಯ ‘ದೇವಿ’ ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದವರು. ‘ಪುನರ್‌ವಿವಾಹ’ ಇವರು ನಟಿಸಿದ ಮತ್ತೊಂದು ಪ್ರಮುಖ ಧಾರಾವಾಹಿ.

ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿನಿ. ನಟನೆಯ ಕಾರಣಕ್ಕೆ ಪದವಿ ಶಿಕ್ಷಣ ಅರ್ಧಕ್ಕೆ ಬಿಟ್ಟರು. ನಂತರ ಬೆಂಗಳೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣ ಮೂಲಕ ಪದವಿ ಪಡೆದರು. ಭರತನಾಟ್ಯ, ಕೂಚಿಪುಡಿ ಮತ್ತು ಬೆಲ್ಲಿ ಡ್ಯಾನ್ಸಿಂಗ್‌ನಲ್ಲಿ ಪರಿಣತರು. `ಗಿರಿಗಿಟ್ಲೆ’ ಚಿತ್ರದ ಮೂಲಕ ನಾಯಕಿಯಾಗಿ ಚಂದನವನ ಪ್ರವೇಶಿಸಿದ್ದಾರೆ. `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಶೋದ ನಿರೂಪಕಿ. ‘ಕುಣಿಯೋಣ ಬಾರಾ’ ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಕೂಡ ಭಾಗವಹಿಸಿದ್ದರು.

ಪ್ರಶಾಂತ್‌ ಸಂಬರಗಿ

ಪ್ರಶಾಂತ್‌ ಸಂಬರಗಿ ಮೂಲತಃ ಉದ್ಯಮಿ. ಎಂಬಿಎ ಪದವೀಧರ. ಸಾಮಾಜಿಕ ಕಾರ್ಯಕರ್ತ, ಚಿತ್ರ ನಿರ್ಮಾಪಕ, ವಿತರಕ.

ರಿಲಯನ್ಸ್‌ ಇನ್ಫೋಕಾಂ, ರಿಲಯನ್ಸ್‌ ವರ್ಲ್ಡ್‌ನಲ್ಲಿ ದುಡಿದ ಅನುಭವ, ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ತಮ್ಮದೇ ಸಂಸ್ಥೆಯನ್ನು ಹೊಂದಿದ್ದಾರೆ. ಪ್ರಮುಖ ಚಿತ್ರನಟರಿಗೆ ಮಾಧ್ಯಮ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಬ್ರಾಂಡ್‌ ಬೆಳವಣಿಗೆ, ತಾಂತ್ರಿಕ ಸಲಹೆಗಾರರಾಗಿಯೂ ಕೆಲಸ ಮಾಡುತ್ತಿದ್ದಾರೆ. ನಟ ಅರ್ಜುನ್‌ ಸರ್ಜಾ ಅವರಿಗೆ ಆಪ್ತರೂ ಆಗಿದ್ದಾರೆ.

ದಿವ್ಯಾ ಉರುಡಗ

ದಿವ್ಯಾ ಉರುಡುಗ ಕಿರುತೆರೆ, ಬೆಳ್ಳಿತೆರೆಯಲ್ಲಿ ಹೆಸರು ಮಾಡಿದವರು. ‘ಹುಲಿರಾಯ’ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. `ಧ್ವಜ' ಮತ್ತು `ಫೇಸ್ 2 ಪೇಸ್' ಎಂಬ ಚಿತ್ರಗಳಲ್ಲಿ ನಾಯಕಿ ಪಾತ್ರ ಮಾಡಿದ್ದಾರೆ. ದಿವ್ಯಾ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು.  ಕಿರುತೆರೆಯಲ್ಲಿ `ಚಿಟ್ಟೆ ಹೆಜ್ಜೆ', `ಅಂಬಾರಿ',`ಖುಷಿ’, `ಓಂ ಶಕ್ತಿ ಓಂ ಶಾಂತಿ’ ಸೀರಿಯಲ್‌ಗಳಲ್ಲಿ ನಟಿಸಿದವರು.  ಉದಯ ಟಿವಿಯಲ್ಲಿ ಪ್ರಸಾರವಾದ `ಸೂಪರ್ ಕಬ್ಬಡ್ಡಿ’ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ ಅನುಭವ ಅವರದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು