ಮಂಗಳವಾರ, ಮಾರ್ಚ್ 2, 2021
21 °C

ಬಿಗ್ ಬಾಸ್ ಸ್ಪರ್ಧಿ, ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಿಗ್‌ ಬಾಸ್’ ರಿಯಾಲಿಟಿ ಶೋ ಮೂಲಕ ಹೆಸರು ಮಾಡಿದ್ದ ನಟಿ ಜಯಶ್ರೀ ರಾಮಯ್ಯ (32) ಅವರು ಭಾನುವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮಾಗಡಿ ರಸ್ತೆಯ ಕಡಬಗೆರೆ ಬಳಿ ಇರುವ ‘ಸಂಧ್ಯಾ ಕಿರಣ’ ಪುನರ್ವಸತಿ ಕೇಂದ್ರದಲ್ಲಿ ಜಯಶ್ರೀ ಉಳಿದುಕೊಂಡಿದ್ದರು. ಅದೇ ಕೇಂದ್ರದ ಕೊಠಡಿಯಲ್ಲಿ ನೇಣು ಹಾಕಿಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಠಡಿಯಲ್ಲಿ ಮರಣಪತ್ರ ಸಿಕ್ಕಿದೆ’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

‘ತಮ್ಮ ಮಾವನ ಬಗ್ಗೆ ಮರಣಪತ್ರದಲ್ಲಿ ಬರೆದಿರುವ ಜಯಶ್ರೀ, ಅವರ ಕ್ಷಮೆಯಾಚಿಸಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

'ಜಯಶ್ರೀ ಅವರ ತಾಯಿಗೆ ಆರು ಮನೆಗಳಿದ್ದು, ಅವುಗಳನ್ನು ಬಾಡಿಗೆಗೆ ಕೊಡಲಾಗಿದೆ. ಬಾಡಿಗೆ ರೂಪದಲ್ಲಿ ಬರಬೇಕಾದ ಒಂದೂವರೆ ಲಕ್ಷ ರೂಪಾಯಿ ಬಗ್ಗೆಯೂ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ‘ ಎಂದು ತಿಳಿಸಿವೆ.

ಸಿನಿಮಾಗಳಲ್ಲೂ ನಟನೆ: ರೂಪದರ್ಶಿ ಆಗಿದ್ದ ಜಯಶ್ರೀ, ‘ಬಿಗ್‌ಬಾಸ್’ 3ನೇ ಆವೃತ್ತಿಯಲ್ಲಿ ಸ್ಪರ್ಧಿ ಆಗಿದ್ದರು. ಅದರಿಂದ ಹೊರಬಂದ ನಂತರ, ‘ಉಪ್ಪು ಹುಳಿ ಖಾರ’ ಹಾಗೂ ‘ಕನ್ನಡ್‌ ಗೊತ್ತಿಲ್ಲ’ ಸೇರಿದಂತೆ ಕೆಲ ಸಿನಿಮಾಗಳಲ್ಲೂ ನಟಿಸಿದ್ದರು.

‘ತಾಯಿಯೊಂದಿಗೆ ನೆಲೆಸಿದ್ದ ಜಯಶ್ರೀ, ಕೆಲ ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸಿ, ಹಲವು ಬಾರಿಗೆ ಆತ್ಮಹತ್ಯೆಗೂ ಯತ್ನಿಸಿದ್ದರು. ಚಿಕಿತ್ಸೆಗಾಗಿ ಅವರನ್ನು ಸಂಧ್ಯಾ ಕಿರಣ ಕೇಂದ್ರಕ್ಕೆ ಸೇರಿಸಲಾಗಿತ್ತು. ಈ ಬಗ್ಗೆ ಸಂಬಂಧಿಕರು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಭಾನುವಾರ ರಾತ್ರಿ ಊಟ ಮುಗಿಸಿದ್ದ ಜಯಶ್ರೀ, ಎಂದಿನಂತೆ ಕೊಠಡಿಗೆ ಹೋಗಿದ್ದರು. ಸೋಮವಾರ ಬೆಳಿಗ್ಗೆಯಾದರೂ ಕೊಠಡಿಯಿಂದ ಹೊರಗೆ ಬಂದಿರಲಿಲ್ಲ. ಅನುಮಾನಗೊಂಡ ಸಿಬ್ಬಂದಿ, ಕಿಟಕಿಯಲ್ಲಿ ನೋಡಿದಾಗಲೇ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡಿತ್ತು’ ಎಂದೂ ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು