ಶನಿವಾರ, ಮಾರ್ಚ್ 25, 2023
28 °C

Bigg Boss: ಮ್ಯಾಚ್ ಫಿಕ್ಸಿಂಗ್ ಆರೋಪ– ಆರ್ಯವರ್ಧನ್ ವಿರುದ್ಧ ಸುದೀಪ್ ಕೆಂಡಾಮಂಡಲ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್‌ ಬಾಸ್ ಸೀಸನ್ 9ರ ಮೂರನೇ ವಾರಾಂತ್ಯದಲ್ಲಿ ನಿರೂಪಕ ಕಿಚ್ಚ ಸುದೀಪ್ ಮತ್ತು ಸ್ಪರ್ಧಿ ಆರ್ಯವರ್ಧನ್ ನಡುವೆ ಭಾರೀ ಕಿಚ್ಚು ಹೊತ್ತಿಕೊಂಡಿತ್ತು.

ಬಿಗ್‌ ಬಾಸ್ ಟಾಪ್–2 ಯಾರಾಗಬಹುದು ಎಂದು ಸುದೀಪ್ ಎಲ್ಲರ ಬಳಿ ಅಭಿಪ್ರಾಯ ಕೇಳಿದ್ದರು. ಈ ಸಂದರ್ಭ ಆರ್ಯವರ್ಧನ್ ಮಾಡಿದ ಮ್ಯಾಚ್ ಫಿಕ್ಸಿಂಗ್ ಆರೋಪ ಸುದೀಪ್ ಪಿತ್ತ ನೆತ್ತಿಗೆ ಏರುವಂತೆ ಮಾಡಿತ್ತು.

ಅನುಪಮಾ ಗೌಡ ಟಾಪ್ 2ರಲ್ಲಿ ಬರಬಹುದು. ಏಕೆಂದರೆ ಅವರಿಗೆ ಬಿಗ್ ಬಾಸ್ ಅವರಿಂದಲೇ ಬೆಂಬಲ ಇದ್ದಂತೆ ತೋರುತ್ತಿದೆ. ಚಿನ್ನದ ಟಾಸ್ಕ್ ವೇಳೆಯೂ ಅವರಿಗೆ ಎಲ್ಲರ ಬಳಿ ಎಷ್ಟು ಚಿನ್ನವಿದೆ ಎಂಬುದು ಗೊತ್ತಾಗಿತ್ತು. ಬೇರೆ ಆವೃತ್ತಿಯಲ್ಲಿ ಸೋತವರನ್ನು ಮತ್ತೆ ಕರೆಸುತ್ತಾರೆಂದರೆ, ಬಿಗ್ ಬಾಸ್‌ಗೆ ಅನುಪಮಾ ಮುಂದುವರಿಯಲಿ ಎಂಬ ಆಸೆ ಇದ್ದಂತಿದೆ. ಇದೊಂದು ರೀತಿ ಮ್ಯಾಚ್ ಫಿಕ್ಸಿಂಗ್ ಥರಾ ತೋರುತ್ತಿದೆ ಎಂದು ಆರೋಪಿಸಿದರು. ಇದನ್ನು ಅಲ್ಲಗಳೆದ ಸುದೀಪ್, ನಿಮ್ಮ ತಲೆಯನ್ನು ಎಲ್ಲೆಂದರಲ್ಲಿ ಓಡಲು ಬಿಡಬೇಡಿ. ಅಭಿ‍ಪ್ರಾಯ ಹಿಂಪಡೆದುಕೊಳ್ಳಿ ಎಂದು ತಿಳಿ ಹೇಳಿದರು.

ಆದರೂ ಹಠ ಮುಂದುವರಿಸಿದ ಆರ್ಯವರ್ಧನ್, ನಾನು ಯೋಚಿಸಿಯೇ ಹೇಳಿರುವೆ ಎಂದು ಉತ್ತರಿಸಿದರು. ಇದರಿಂದ ತೀವ್ರ ಕೋಪಗೊಂಡ ಸುದೀಪ್, ಮ್ಯಾಚ್ ಫಿಕ್ಸಿಂಗ್ ಏನಾಗಿದೆ ಎಂಬುದನ್ನು ತೋರಿಸಿ. ಇಲ್ಲಿರುವವರಿಗೆಲ್ಲ ಯೋಗ್ಯತೆ ಇಲ್ಲದೆ ಇಲ್ಲಿಗೆ ಬಂದಿದ್ದಾರಾ? ಎಂದು ಪ್ರಶ್ನಿಸಿದರು. ಬಿಗ್ ಬಾಸ್ ವೇದಿಕೆಯ ಮರ್ಯಾದೆ ಕಳೆದರೆ ಸುಮ್ಮನೆ ಇರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮನೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮನೆಯ ಸದಸ್ಯರೆಲ್ಲರೂ ಆರ್ಯವರ್ಧನ್ ಹೇಳಿಕೆಗೆ ಅಸಮಾಧಾನ ಹೊರಹಾಕಿದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು