ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಜೋಕಾಲಿಯೂ ಜೀಕಲಿಲ್ಲ; ವಿಮಾನವೂ ಹಾರಲಿಲ್ಲ!

ಕೋರ್ಟ್‌ನಲ್ಲಿ ಪಾಟೀಸವಾಲು ಹಾಕಿ, ಎಲ್ಲರನ್ನೂ ತಬ್ಬಿಬ್ಬುಗೊಳಿಸುವ ‘ಸಿಎಸ್ಪಿ’, ಕನ್ನಡದ ಧಾರಾವಾಹಿಗಳ ಗುಣಮಟ್ಟದ ಕುರಿತ ಪ್ರಶ್ನೆಗೆ ಉತ್ತರ ಹುಡುಕುವಲ್ಲಿಯೂ ವಕಾಲತ್ತು ವಹಿಸುವರೇ?
Last Updated 12 ಸೆಪ್ಟೆಂಬರ್ 2020, 4:51 IST
ಅಕ್ಷರ ಗಾತ್ರ

ಚಲನಶೀಲ ಗುಣವನ್ನು ಕಳೆದುಕೊಂಡ ಕನ್ನಡದ ಬಹುತೇಕ ಟಿ.ವಿ ಧಾರಾವಾಹಿಗಳ ಕುರಿತು ಗಂಗಾವತಿ ಪ್ರಾಣೇಶ್‌ ಅವರು ಮಾಡುವ ತಮಾಷೆಯೊಂದು ಹೀಗಿದೆ:

ಅತ್ತೆ, ಸೊಸೆಯನ್ನು ಕೇಳುತ್ತಾಳೆ: ‘ಅಮೃತಾ, ಸಾರಿಗೆ ಉಪ್ಪು ಹಾಕಿದೆಯೇನೇ?’

‘ಇಲ್ಲ ಅತ್ತೆ. ಈಗ ಹಾಕುತ್ತೇನೆ’ ಎಂದು ಉತ್ತರಿಸುವ ಅಮೃತಾ, ಡಬ್ಬಿ ತೆಗೆದು ಉಪ್ಪು ಹಾಕಲು ಮುಂದಾಗುತ್ತಾಳೆ. ‘ಡಿಡಿಣ್‌ ಟಣಣ್‌, ಡಿಡಿಣ್‌ ಟಣಣ್‌, ಡಿಡಿಣ್‌ ಟಣಣ್‌, ಡಿಡಿಣ್‌ ಟಣಣ್‌...’ ಎಂಬ ಹಿಮ್ಮೇಳದೊಂದಿಗೆ ‘ಸ್ಲೋ ಮೋಷನ್‌’ನಲ್ಲಿ ಅವಳು ಡಬ್ಬಿಯಲ್ಲಿ ಚಮಚ ಹಾಕುತ್ತಾಳೆ. ‘ತೋಂತನನ, ತೋಂತನನ, ತೋಂತನನ...’ ಎಂಬ ಹಿಮ್ಮೇಳದಲ್ಲಿ ನಿಧಾನವಾಗಿ ಒಲೆಯ ಮೇಲಿನ ಪಾತ್ರೆಯ ಕಡೆಗೆ ಹೊರಳುತ್ತಾಳೆ. ಈ ಮಧ್ಯೆ ಎರಡು ಸಲ ಜಾಹೀರಾತು ಬ್ರೇಕ್‌ಗಳು ಮುಗಿದು, ಧಾರಾವಾಹಿಯ ಆ ದಿನದ ಕಂತು ಕೂಡ ಮುಗಿದು ಹೋಗುತ್ತದೆ. ಅಮೃತಾ, ಸಾರಿಗೆ ಉಪ್ಪು ಹಾಕಿದಳೋ ಇಲ್ಲವೋ ಎಂಬ ಕುತೂಹಲ ತಣಿಯಲು ಮರುದಿನದ ಅದೇ ಸಮಯದವರೆಗೆ ಕಾಯಬೇಕು!

*****

ರಷ್ಯನ್‌ ಹಾಗೂ ಚೀನಿ ಭಾಷೆಗಳ ಧಾರಾವಾಹಿಗಳು ಚಲನಶೀಲತೆಗೆ ಹೆಸರಾಗಿವೆ. ತಾಜಾ ಆಗಿವೆ. ತುಂಬಾ ಲವಲವಿಕೆಯಿಂದಲೂ ಕೂಡಿವೆ. ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುವಂತಹ ಕಥಾವಸ್ತುಗಳು, ಕಥೆಗೆ ಪೂರಕವಾದ ಸೆಟ್‌ಗಳು, ಮೈನವಿರೇಳಿಸುವ ಸಾಹಸದ ದೃಶ್ಯಗಳು, ಸದಾ ಕಾಡುವಂತಹ ಭಾವುಕ ಕ್ಷಣಗಳು... ಅಲ್ಲಿನ ಧಾರಾವಾಹಿಗಳಲ್ಲಿ ಏನಿಲ್ಲ ಹೇಳಿ? ಐತಿಹಾಸಿಕ ಘಟನೆಗಳನ್ನು ಇಟ್ಟುಕೊಂಡೂ ಹಲವು ಟಿ.ವಿ ಧಾರಾವಾಹಿಗಳನ್ನು ಅಲ್ಲಿ ನಿರ್ಮಾಣ ಮಾಡಲಾಗಿದೆ. ರಷ್ಯನ್‌ ಭಾಷೆಯ ‘ಎನಿಮಿ ವಿಂಗ್ಸ್‌’ ಅಂತಹ ಧಾರಾವಾಹಿಗಳಲ್ಲಿ ಒಂದು. ರುದಾಕೋವ್‌ ಎಂಬ ರಷ್ಯಾದ ಯುದ್ಧ ವಿಮಾನದ ಪೈಲಟ್‌, ಜರ್ಮನಿ ವಿರುದ್ಧ ಕಾರ್ಯಾಚರಣೆಗೆ ಹೋದಾಗ, ಆತನ ವಿಮಾನವು ವೈರಿಯ ನೆಲದಲ್ಲಿ ಪತನಗೊಳ್ಳುತ್ತದೆ. ಜರ್ಮನ್‌ ವಾಯುಪಡೆಯ ನೆಲೆಗೆ ನುಗ್ಗುವ ಆತ, ಅಲ್ಲಿನ ವಿಮಾನವನ್ನೇ ಹೈಜಾಕ್‌ ಮಾಡಿ, ನಾಜಿ ಸೈನಿಕರ ಮೇಲೆ ಸೇಡು ತೀರಿಸಿಕೊಳ್ಳುತ್ತಾನೆ. ಸೇನಾ ಬಂಕ್‌ಗಳ ಮೇಲೆ ಬಾಂಬ್‌ ಸ್ಫೋಟಿಸುವ, ಗೆರಿಲ್ಲಾಗಳ ಮಾದರಿಯಲ್ಲಿ ರಾತ್ರಿಯ ಹೊತ್ತು ಗುಡ್ಡಗಳ ನಡುವಿನಿಂದ ಶತ್ರು ಸೇನೆಯ ಮೇಲೆ ಮುಗಿಬೀಳುವ ಸಾಹಸದ ದೃಶ್ಯಗಳು ರೋಮಾಂಚನಕಾರಿ ಆಗಿವೆ. ಹಾರಾಡುವ ವಿಮಾನಗಳ ಮಧ್ಯೆ ನಡೆಯುವ ಸಮರದ ನೋಟಗಳನ್ನು ಶೂಟ್‌ ಮಾಡಿದ ಛಾಯಾಗ್ರಾಹಕರ ಕೌಶಲಕ್ಕೆ ಭೇಷ್‌ ಎನ್ನಲೇಬೇಕು.

ಯುದ್ಧದ ದೃಶ್ಯಗಳ ನಡುವೆಯೇ ರುದಾಕೋವ್‌ನ ಪುಟ್ಟ ಕುಟುಂಬದ ಕಥೆಯೂ ಬಂದು ಹೋಗುತ್ತದೆ. ನರ್ಸ್‌ ಆಗಿದ್ದ ಆತನ ಹೆಂಡತಿಯು ಸೈನಿಕರನ್ನು ಆರೈಕೆ ಮಾಡುವುದು, ಆತನ ಪುಟ್ಟ ಮಗ, ಶತ್ರು ಸೈನಿಕರಿಂದ ಬಚಾವಾಗಿ ರಷ್ಯನ್‌ ಸೈನಿಕರ ಸುರಕ್ಷಿತ ಕೈಗಳಲ್ಲಿ ಸಿಗುವುದು… ಹೀಗೆ ಕ್ಷಣಕ್ಷಣವೂ ಕುತೂಹಲ ಕೆರಳಿಸುವ ಕಥಾವಸ್ತು ಈ ಧಾರಾವಾಹಿಯದ್ದು. ಯುದ್ಧದ ದೃಶ್ಯಗಳನ್ನು ಫ್ರಂಟ್‌ಲೈನ್‌ನಲ್ಲಿ ನಿಂತು, ನಾವೇ ಸಾಕ್ಷಾತ್‌ ನೋಡುತ್ತಿರುವಂತಹ ಅನುಭವವನ್ನು ಈ ಧಾರಾವಾಹಿ ನೀಡುತ್ತದೆ. ಕನ್ನಡದಲ್ಲಿ ಈ ಧಾರಾವಾಹಿ ನಿರ್ಮಾಣವಾಗಿದ್ದರೆ ಸಾಹಸ ದೃಶ್ಯಗಳ ನೈಜತೆ ಮಾಯವಾಗಿ ಫ್ಯಾಂಟಸಿ ಮಟ್ಟಕ್ಕೆ ಕುಸಿದುಬಿಡುತ್ತಿದ್ದವು ಎನಿಸುತ್ತದೆ. ಅಲ್ಲದೆ, ಅದು ನೂರಾರು ಕಂತುಗಳನ್ನಾದರೂ ಕಂಡಿರುತ್ತಿತ್ತೇನೋ. ಆದರೆ, ರಷ್ಯನ್ನರು ಅದನ್ನು ಬಬಲ್‌ ಗಮ್‌ನಂತೆ ಎಳೆಯದೆ ಆರೇ ಕಂತುಗಳಲ್ಲಿ ಮುಗಿಸಿದ್ದಾರೆ.

‘ಕಿಲ್‌ ಸ್ಟಾಲಿನ್‌’ ಅಂತಹದ್ದೇ ಮತ್ತೊಂದು ಐತಿಹಾಸಿಕ ಕಥಾವಸ್ತುವುಳ್ಳ ಧಾರಾವಾಹಿ. ಸ್ಟಾಲಿನ್‌ ಅವರ ಕೊಲೆಗೆ ನಡೆಯುವ ಸಂಚು, ಅದನ್ನು ವಿಫಲಗೊಳಿಸಲು ರಷ್ಯಾದ ಸೇನೆ ನಡೆಸುವ ಯತ್ನಗಳ ಸುತ್ತ ಬಿಚ್ಚಿಕೊಳ್ಳುವ ಕಥೆಯಿದು. ಗಡಿಯನ್ನು ಹಂಚಿಕೊಂಡು ಇತಿಹಾಸದ ಉದ್ದಕ್ಕೂ ಹಾವು–ಮುಂಗುಸಿಯಂತೆ ಕಾದಾಟಕ್ಕೆ ಇಳಿಯುತ್ತಲೇ ಬಂದ ರಷ್ಯಾ ಮತ್ತು ಜರ್ಮನಿಗಳದು ಸದಾ ರಕ್ತಸಿಕ್ತ ಸಂಬಂಧ. ಆ ದೇಶದ ಗುಪ್ತಚರರು ಈ ದೇಶದಲ್ಲಿ ತಿರುಗುವುದು, ಈ ದೇಶದ ಗುಪ್ತಚರರು ಆ ದೇಶದಲ್ಲಿ ಮಾಹಿತಿ ಕಲೆಹಾಕುವುದು, ಸೈನಿಕರನ್ನು ಹಿಡಿದು ಹಾಕಿ ಚಿತ್ರಹಿಂಸೆ ಕೊಡುವುದು, ನಾಗರಿಕರನ್ನು ನಿರ್ದಾಕ್ಷಿಣ್ಯವಾಗಿ ಕೊಂದು ಹಾಕುವುದು... ಚರಿತ್ರೆಯ ಉದ್ದಕ್ಕೂ ನಡೆದುಕೊಂಡು ಬಂದ ವಿದ್ಯಮಾನ. ಸಹಜವಾಗಿಯೇ ಅಂತಹ ಘಟನಾವಳಿಗಳ ನೈಜ ಕಥೆಗಳೇ ರಷ್ಯನ್‌ ಭಾಷೆಯ ಧಾರಾವಾಹಿಗಳ ಕಥಾವಸ್ತು ಆಗಿರುವುದು ಹೆಚ್ಚು. ಇಂತಹ ಧಾರಾವಾಹಿಗಳಿಗೆ ಅಲ್ಲಿನ ಸರ್ಕಾರ ಹಣಕಾಸಿನ ನೆರವನ್ನೂ ನೀಡುತ್ತದೆ.

ಅಪರಾಧ ಪ್ರಕರಣಗಳನ್ನು ಭೇದಿಸುವ ರೋಚಕ ಪತ್ತೇದಾರಿ ಧಾರಾವಾಹಿಗಳೂ ಅಲ್ಲಿ ಇಲ್ಲದಿಲ್ಲ. ‘ಅಂಡರ್‌ ಕರೆಕ್ಷನ್‌’ ಅಂತಹ ಧಾರಾವಾಹಿಗಳಲ್ಲಿ ಒಂದು. ರೈಲಿನಲ್ಲಿ ನಡೆಯುವ ದರೋಡೆ ಪ್ರಕರಣವನ್ನು ಪತ್ತೆ ಮಾಡುವುದು ಇಲ್ಲಿನ ಕಥಾವಸ್ತು. 12–13 ಕಂತುಗಳ ಈ ಧಾರಾವಾಹಿ, ಇನ್ನಷ್ಟು ಇರಬೇಕಿತ್ತು ಎನ್ನುವ ಭಾವ ಕಾಡುತ್ತಿರುವಾಗಲೇ ಮುಗಿದುಹೋಗುತ್ತದೆ. ‘ಫ್ರಂಟ್‌’, ‘ಡಿಟೆಕ್ಟಿವ್‌ ಅನ್ನಾ’, ‘ವಿಂಡ್‌ ಆನ್‌ ಫೇಸ್‌’… ಭಿನ್ನ ಕಥಾವಸ್ತುವುಳ್ಳ ಈ ತೆರನಾದ ರಷ್ಯನ್‌ ಧಾರಾವಾಹಿಗಳು ಬೇಕಾದಷ್ಟಿವೆ.

ಭಾರತದಂತೆ ಚೀನಾ ಕೂಡ ನೂರಾರು ರಾಜರ ಆಳ್ವಿಕೆಗೆ ಒಳಪಟ್ಟಿದೆ. ಆಯಾ ರಾಜರ ನಡುವಿನ ಸ್ನೇಹ, ಹಗೆತನ, ರಾಜಕುಮಾರಿಯರ ವಿಷಯವಾಗಿ ನಡೆಯುವ ಯುದ್ಧ, ಆಡಳಿತದ ಮೇಲೆ ಹಿಡಿತ ಸಾಧಿಸಲು ಅಂತಃಪುರದಿಂದ ನಡೆಯುವ ಮಸಲತ್ತು, ಬೇಹುಗಾರಿಕೆ ಎಲ್ಲವೂ ರೋಚಕ. ಗಿಡಮೂಲಿಕೆಗಳ ಕುರಿತು ಅಲ್ಲಿನ ಜನರಿಗೆ ಅಪಾರ ಜ್ಞಾನ. ಅಲ್ಲಿನ ವೈದ್ಯರು ಯಾವುದೋ ಸೊಪ್ಪನ್ನು ಅರೆದು ಯಾರನ್ನು ಬೇಕಾದರೂ ಕೊಲ್ಲಬಲ್ಲರು. ವಿಷ ಉಂಡವರಿಗೆ ಮದ್ದು ನೀಡಿ ಬದುಕಿಸಲೂ ಬಲ್ಲರು. ಸಮರ ಕಲೆಗಳಲ್ಲೂ ಅಲ್ಲಿನವರು ನಿಪುಣರು. ಅಲ್ಲಿನ ಒಂದೊಂದು ಪ್ರಾಂತ್ಯದಲ್ಲೂ ಒಬ್ಬೊಬ್ಬ ರಾಜನ ಕಥೆ, ಅದರ ಜತೆ ತಳಕು ಹಾಕಿಕೊಂಡ ಹತ್ತಾರು ಉಪಕಥೆಗಳು ಹಲವು ಚೀನಿ ಧಾರಾವಾಹಿಗಳಿಗೆ ಕಥಾವಸ್ತುಗಳಾಗಿವೆ. ‘ಪ್ರಿನ್ಸೆಸ್‌ ಲಿ ವಿ ಯಾಂಗ್‌’, ‘ಸಿಲ್ವರ್‌ ಪ್ರಿನ್ಸೆಸ್‌’, ‘ಸೀಕ್ರೆಟ್‌ ಆಫ್‌ ತ್ರೀ ಕಿಂಗ್ಡಮ್ಸ್‌’, ‘ಫೇಕ್‌ ಪ್ರಿನ್ಸೆಸ್‌’... ಅಂತಹ ಕೆಲವು ಧಾರಾವಾಹಿಗಳು.

ಅರಮನೆಗಳು, ಓಲಗ ಶಾಲೆಗಳು, ಕೋಟೆ–ಕೊತ್ತಲಗಳು, ಮಾರುಕಟ್ಟೆಗಳು, ತಿಂಡಿ–ಪೇಯಕ್ಕಾಗಿ ಆಗಿನ ಜನ ಬಳಸುತ್ತಿದ್ದ ಆ್ಯಂಟಿಕ್‌ ಸಲಕರಣೆಗಳು, ರಾಜರ ರಥಗಳು, ಜನಸಾಮಾನ್ಯರ ಬಂಡಿಗಳು, ಯುದ್ಧಕ್ಕೆ ನಿಂತ ಸೇನೆಗಳು, ರಾಜನಿಂದ ಸೈನಿಕನವರೆಗೆ ಎಲ್ಲರಿಗೂ ತೊಡಿಸಿದ ಕಾಸ್ಟೂಮ್‌ಗಳು ಎಲ್ಲದರಲ್ಲೂ ನೈಜತೆ ಕಾಪಾಡಿಕೊಳ್ಳುವ ತುಡಿತ! ಪರಿಪೂರ್ಣತೆಯನ್ನು ಸಾಧಿಸುವತ್ತಲೇ ಚಿತ್ತ. ನಮ್ಮಲ್ಲಿ ಅಂತಹ ವೃತ್ತಿಪರ ಮನೋಭಾವ ತುಂಬಾ ಅಪರೂಪ.

ದೂರದ ರಷ್ಯನ್‌, ಚೀನಿ ಭಾಷೆಗಳ ಧಾರಾವಾಹಿಗಳನ್ನು ಬಿಡಿ. ಇಲ್ಲಿಯೇ, ನಮ್ಮ ಮರಾಠಿ, ಬಂಗಾಳಿ ಧಾರಾವಾಹಿಗಳ ಎತ್ತರಕ್ಕೂ ನಮಗೆ ಬೆಳೆಯಲಾಗಿಲ್ಲ. ಮಹಾದೇವ ರಾನಡೆ ಹಾಗೂ ರಮಾಬಾಯಿ ದಂಪತಿಯ ಕಥೆಯನ್ನು ಹೊಂದಿದ ಮರಾಠಿಯ ‘ಉಂಚ ಮಾಝಾ ಜೋಕಾ’ (ನನ್ನ ಜೋಕಾಲಿ ಎತ್ತರಕ್ಕೆ ಜೀಕಲಿ), ಸಿಂಪಲ್‌ ಆಗಿ ಒಂದು ಲವ್‌ ಸ್ಟೋರಿಯನ್ನು ಹೊಂದಿದ ‘ಕಾಹೆ ದಿಯಾ ಪರದೇಸ್‌’ ತರಹದ ಧಾರಾವಾಹಿಗಳನ್ನೂ ಕನ್ನಡದಲ್ಲಿ ಕಾಣಲು ಸಾಧ್ಯವಾಗಿಲ್ಲ. ರವೀಂದ್ರನಾಥ ಟ್ಯಾಗೋರ್‌ ಅವರ ಸಣ್ಣ ಕಥೆಗಳನ್ನು ಆಧರಿಸಿ ಬಂದ ಬಂಗಾಳಿ ಭಾಷೆಯ ಧಾರಾವಾಹಿಗಳ ಹತ್ತಿರಕ್ಕೂ ನಾವು ಸುಳಿಯಲು ಸಾಧ್ಯವಾಗಿಲ್ಲ.

ಬೇರೆ ಭಾಷೆಗಳ ಧಾರಾವಾಹಿಗಳನ್ನು ನೋಡಿದಾಗ ಕನ್ನಡದ ಬಹುತೇಕ ಟಿ.ವಿ ಧಾರಾವಾಹಿಗಳ ಕಥಾವಸ್ತು (ಐತಿಹಾಸಿಕ, ಸಾಮಾಜಿಕ, ಸಾಹಸಮಯ ಇತ್ಯಾದಿ), ನಿರೂಪಣಾಶೈಲಿ, ಅಭಿನಯ, ಅಭಿರುಚಿ ಎಷ್ಟೊಂದು ಕಳಪೆ ಎಂಬ ನಿರಾಸೆ ನಮ್ಮನ್ನು ಆವರಿಸುತ್ತದೆ. ಛಾಯಾಗ್ರಹಣದಲ್ಲಾಗಲೀ ಸಂಗೀತದಲ್ಲಾಗಲೀ ತಾಂತ್ರಿಕ ಸಿದ್ಧಿಯಲ್ಲಾಗಲೀ ಆ ಭಾಷೆಗಳ ಧಾರಾವಾಹಿಗಳಷ್ಟು ಎತ್ತರಕ್ಕೆ ಬೆಳೆಯಲು ನಮ್ಮಿಂದ ಏಕೆ ಸಾಧ್ಯವಾಗಿಲ್ಲ?

ಕನ್ನಡದಲ್ಲಿ ಒಳ್ಳೆಯ ಪ್ರಯತ್ನಗಳು ನಡೆದೇ ಇಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಆದರೆ, ಹೊಟ್ಟಿನಲ್ಲಿ ಹೂತುಹೋದ ಗಟ್ಟಿಕಾಳುಗಳಂತೆ ಅವುಗಳ ಸಂಖ್ಯೆ ತೀರಾ ಸಣ್ಣದು. ‘ಮಾಯಾಮೃಗ’, ‘ಮನ್ವಂತರ’, ‘ಮುಕ್ತ’, ‘ಮುಕ್ತ ಮುಕ್ತ’ ಮೊದಲಾದ ಸದಭಿರುಚಿಯ ಧಾರಾವಾಹಿಗಳನ್ನು ಕೊಟ್ಟ ‘ಸಿಎಸ್ಪಿ’ ಟಿ.ಎನ್‌.ಸೀತಾರಾಂ, ‘ಮಗಳು ಜಾನಕಿ’ವರೆಗಿನ ದೀರ್ಘಯಾನದಲ್ಲಿ ಕೋರ್ಟ್‌ ರೂಮ್‌ನಿಂದ ಹೊರಗೆ ಬರಲಿಲ್ಲ. ಕರಿ ಕೋಟನ್ನೂ ಬಿಚ್ಚಿಡಲಿಲ್ಲ. ಕೋರ್ಟ್‌ನಿಂದ ಆಚೆಗೆ ಬೇರೆಯದೇ ಬೆರಗಿನ ಲೋಕವನ್ನು ಕಟ್ಟಿಕೊಡುವತ್ತ ಈ ಸೃಜನಶೀಲ ನಿರ್ದೇಶಕ ಮನಸ್ಸು ಮಾಡಿದ್ದರೆ ಇನ್ನೂ ಕೆಲವು ಉತ್ಕೃಷ್ಟ ಧಾರಾವಾಹಿಗಳನ್ನು ಕನ್ನಡಿಗರು ಕಾಣಬಹುದಿತ್ತೇನೋ.

ವೈಶಾಲಿ ಕಾಸರವಳ್ಳಿಯವರ ‘ಮೂಡಲ ಮನೆ’ಯು ಉತ್ತರ ಕರ್ನಾಟಕದ ಭಾಷೆಯನ್ನು ಸಮರ್ಥವಾಗಿ ದುಡಿಸಿಕೊಂಡು ಗಮನಸೆಳೆದಂತಹ ಧಾರಾವಾಹಿ. ಇನ್ನೂ ಹುಡುಕಿದರೆ ‘ಗುಡ್ಡದ ಭೂತ’, ‘ಗೃಹಭಂಗ’ದಂತಹ ಕೆಲವೇ ಕೆಲವು ಧಾರಾವಾಹಿಗಳು ನೆನಪಾಗುತ್ತವೆ. ಭಾರತದ ಅತ್ಯಂತ ಯಶಸ್ವಿ ಧಾರಾವಾಹಿಗಳು ಎಂದರೆ ನಾವು ಈಗಲೂ ಹಿಂದಿಯ ‘ರಾಮಾಯಣ’, ‘ಮಹಾಭಾರತ’, ‘ಮಾಲ್ಗುಡಿ ಡೇಸ್‌’, ‘ಭ್ಯೋಮಕೇಶ್ ಭಕ್ಷಿ’ ಕಡೆಗೇ ಹೊರಳಿ ನೋಡುವಂತಾಗಿದೆ.

ನಮ್ಮಲ್ಲಿ ಮರಾಠಿಯಂತೆ ಜೋಕಾಲಿ ಜೀಕಿಸುವ ಧಾರಾವಾಹಿಯೂ ಬರಲಿಲ್ಲ; ರಷ್ಯನ್ನರಂತೆ ವಿಮಾನ ಹಾರಿಸುವ ಧಾರಾವಾಹಿಯನ್ನೂ ಕಾಣಲಾಗಲಿಲ್ಲ. ಬೇರೆ ಭಾಷೆಗಳ ಧಾರಾವಾಹಿಗಳತ್ತ ನಮ್ಮ ಧಾರಾವಾಹಿಗಳ ನಿರ್ದೇಶಕರು ಒಮ್ಮೆ ದೃಷ್ಟಿಹರಿಸಲಿ. ಸದ್ಯಕ್ಕೆ ಅಂತಹ ಉತ್ಕೃಷ್ಟ ‘ಕೃತಿ’ಗಳು ಬಾರದಿದ್ದರೂ ಪರವಾಗಿಲ್ಲ; ಕನ್ನಡದ ಪ್ರೇಕ್ಷಕರ ಮೇಲಿನ ಅವರ ‘ಹಿಂಸೆ’ಯಾದರೂ ಕಡಿಮೆಯಾಗಲಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT