ಸೋಮವಾರ, ಮೇ 17, 2021
28 °C

ಕಿರುತೆರೆ | ‘ನನ್ನರಸಿ ರಾಧೆ’ಗೆ ಯಶಸ್ಸಿನ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಬಣ್ಣದ ಲೋಕಕ್ಕೆ ಕಾಲಿಡಬೇಕು ಎಂಬ ಮನಸ್ಸಿತ್ತು. ಆದರೆ ಈ ಕ್ಷೇತ್ರದ ಗಂಧಗಾಳಿಯೂ ಗೊತ್ತಿರಲಿಲ್ಲ. ಹೀಗಿರುವಾಗಲೇ ನಟಿ ಮಾನ್ವಿತಾ ಹರೀಶ್‌ ಅವರ ಮೂಲಕ ಆಚಾನಕ್ಕಾಗಿ ಕಿರುತೆರೆಯ ಅವಕಾಶವೊಂದು ಹುಡುಕಿಕೊಂಡು ಬಂತು. ಈಗ ಎಲ್ಲರೂ ನನ್ನನ್ನು ಇಂಚರಾ ಎಂದೇ ಗುರುತಿಸುತ್ತಾರೆ’. 

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ನನ್ನರಸಿ ರಾಧೆ’ ಧಾರಾವಾಹಿಯಲ್ಲಿ ನಾಯಕಿ ಇಂಚರಾ ಪಾತ್ರಕ್ಕೆ ಜೀವ ತುಂಬುತ್ತಿರುವ ಬೆಂಗಳೂರಿನ ಬಸವನಗುಡಿಯ ಕೌಸ್ತುಭ ಮಣಿ ಎಸ್‌. ಅವರು ತಮ್ಮ ಬಗ್ಗೆ ಪರಿಚಯ ಮಾಡಿಕೊಂಡಿದ್ದು ಹೀಗೆ. 

ಕೌಸ್ತುಭ ಓದಿದ್ದು ಎಂಬಿಎ. ಶಿಕ್ಷಣ ಮುಗಿಸಿ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸಣ್ಣ ವಯಸ್ಸಿನಿಂದಲೂ ನಟನೆಯ ಬಗ್ಗೆ ಒಲವಿತ್ತು. ಅವಕಾಶ ಸಿಕ್ಕಾಗ ವೇದಿಕೆ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮ ಕೊಡುತ್ತಿದ್ದರು. ಆದರೆ ನಟನಾ ಕ್ಷೇತ್ರದಲ್ಲಿ ಯಾರೂ ಗಾಡ್‌ಫಾದರ್‌ಗಳು ಇಲ್ಲದಿದ್ದರಿಂದ ಅಲ್ಲಿಗೆ ಹೋಗುವ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಒಮ್ಮೆ ಸಿನಿಮಾ ಸಂಬಂಧಿತ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ಅಲ್ಲಿ ನಟಿ ಮಾನ್ವಿತಾ ಹರೀಶ್‌ ಅವರನ್ನು ಭೇಟಿ ಮಾಡಿದ್ದರು. ಫೋನ್‌ ನಂಬರ್‌ಗಳ ವಿನಿಮಯವಾಯಿತು. ಅದೇ ದಿನ ಸಂಜೆ ‘ನನ್ನರಸಿ ರಾಧೆ’ ಧಾರಾವಾಹಿ ತಂಡದ ಕಡೆಯಿಂದ ಆಡಿಷನ್‌ಗೆ ಕರೆ ಬಂತು ಎಂದು ಹೇಳುತ್ತಾರೆ ಕೌಸ್ತುಭ. 

‘ನನಗೆ ನಟನೆ ಬಗ್ಗೆ ಏನೂ ಗೊತ್ತಿರಲಿಲ್ಲ. ರಂಗಭೂಮಿ ಹಿನ್ನೆಲೆ ಇಲ್ಲ. ನಮ್ಮ ಕುಟುಂಬದಲ್ಲಿಯೂ ಯಾರೂ ನಟನಾ ಕ್ಷೇತ್ರದಲ್ಲಿ ಇರಲಿಲ್ಲ. ಆದರೂ ಒಂದು ಬಾರಿ ಪ್ರಯತ್ನ ಮಾಡುತ್ತೇನೆ’ ಎಂದು ನಿರ್ದೇಶಕರ ಬಳಿ ಹೇಳಿದೆ. ಚಿತ್ರೀಕರಣಕ್ಕೂ ಮುನ್ನ ಆ್ಯಕ್ಟಿಂಗ್‌ ಕಾರ್ಯಾಗಾರದಲ್ಲಿ ಭಾಗಿಯಾದೆ. ಅದರಲ್ಲಿ ಹಳೆ ಸ್ಕ್ರಿಪ್ಟ್‌ಗಳನ್ನು ಕೊಟ್ಟು ಅಭಿನಯಿಸು ಎನ್ನುತ್ತಿದ್ದರು. ಹೀಗೆ ಒಂದೊಂದಾಗಿ ಕಲಿಯುತ್ತಾ ಹೋದೆ’ ಎನ್ನುತ್ತಾರೆ. 

ಈಗ ಎಲ್ಲ ಕಡೆಯಿಂದಲೂ ಇಂಚರಾ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆಯಂತೆ. ‘ಮುದ್ದು ಮನಸು, ಜಗಳಗಂಟಿ, ಸದಾ ಇತರರ ಒಳಿತು ಬಯಸುವ ಇಂಚರಾ ಪಾತ್ರಕ್ಕೂ ನನಗೂ ಸಾಮ್ಯತೆಗಳಿವೆ. ಆದರೆ ನಾನು ಜಗಳ, ಕಿರಿಕಿರಿಗಳಿಂದ ದೂರ. ಯಾರಾದರೂ ನನಗೆ ಕಿರಿಕಿರಿ ಮಾಡುತ್ತಿದ್ದರೆ ಆ ಸ್ಥಳದಿಂದ ಎದ್ದು ಹೋಗುತ್ತೇನೆ’ ಎಂದು ತಮ್ಮ ಸ್ವಭಾವದ ಪರಿಚಯ ಮಾಡಿಕೊಡುತ್ತಾರೆ. 

ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಸಿನಿಮಾದ ಅವಕಾಶಗಳೂ ಅವರನ್ನು ಅರಸಿಬಂದಿವೆ. ‘ಉತ್ತಮ ನಟಿಯಾಗಿ ಯಶಸ್ವಿಯಾಗಬೇಕು ಎಂಬುದು ನನ್ನ ಕನಸು. ಈಗಷ್ಟೇ ನಾನು ಕಿರುತೆರೆಗೆ ಬಂದಿದ್ದೇನೆ. ಇನ್ನೂ ಕಲಿಯಲು ಬೇಕಾದಷ್ಟಿದೆ. ಸ್ವಲ್ಪ ದಿನಗಳ ನಂತರ ಉತ್ತಮ ತಂಡ, ಚಿತ್ರಕತೆ ಸಿಕ್ಕರೆ ಹಿರಿತೆರೆಗೂ ಹೋಗುತ್ತೇನೆ. ಸದ್ಯಕ್ಕೆ ಯಾವುದನ್ನೂ ಒಪ್ಪಿಕೊಂಡಿಲ್ಲ’ ಎಂಬ ವಿನಯ ಅವರದು. 

ಫಿಟ್‌ನೆಸ್‌ಗಾಗಿ ಜಿಮ್‌
ನೈಸರ್ಗಿಕವಾಗಿ ಫಿಟ್‌ ಆಗಿದ್ದೇನೆ ಎಂಬ ಖುಷಿ ಕೌಸ್ತುಭ ಅವರದು. ಮೈಗ್ರೇನ್‌ ಸಮಸ್ಯೆಯಿಂದಾಗಿ ಬಿ.ಕಾಂ ಓದುತ್ತಿದ್ದಾಗಲೇ ಜಿಮ್‌ಗೆ ಹೋಗುತ್ತಿದ್ದರು. ಈಗ ಆ ಅಭ್ಯಾಸವೇ ಅವರನ್ನು ಫಿಟ್‌ ಆಗಿ ಇರಿಸಲು ಸಹಾಯ ಮಾಡಿದೆಯಂತೆ. ಸಾಕಷ್ಟು ನೀರು ಕುಡಿಯುವುದು, ಎಣ್ಣೆ ಪದಾರ್ಥಗಳನ್ನು ಸೇವಿಸದೇ ಇರುವುದು, ಆಹಾರದಲ್ಲಿ ಜಾಸ್ತಿ ಹಣ್ಣು– ತರಕಾರಿಗಳನ್ನು ಬಳಸುವುದು ಕೌಸ್ತುಭ ಅವರ ಫಿಟ್‌ನೆಸ್‌ ಗುಟ್ಟು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು