ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಪರಭಾಷೆ ಕಿರುತೆರೆಯಲ್ಲಿ ಇವರದ್ದೆ ಹವಾ!

Last Updated 3 ಅಕ್ಟೋಬರ್ 2020, 8:56 IST
ಅಕ್ಷರ ಗಾತ್ರ
ADVERTISEMENT
""
""
""
""
""

ಕಲೆಗೆ ದೇಶ, ಭಾಷೆ ಹಾಗೂ ಗಡಿ ಎಂಬ ಹಂಗಿಲ್ಲ. ನಟನೆಗೆ ಭಾಷೆ ಎಂಬುದು ಎಂದಿಗೂ ತೊಡಕಲ್ಲ ಎಂಬುದನ್ನು ಹಲವು ಕಲಾವಿದರು ಸಾಬೀತು ಪಡಿಸಿದ್ದಾರೆ. ಸಿನಿರಂಗದಲ್ಲಂತೂ ಕನ್ನಡ ಹಾಗೂ ಕರ್ನಾಟಕದ ಮಂದಿ ಬಾಲಿವುಡ್‌ ಸೇರಿದಂತೆ ಇಡೀ ಭಾರತ ಚಿತ್ರರಂಗದಲ್ಲಿ ಮಿಂಚಿದ್ದಾರೆ. ಬೇರೆ ಭಾಷೆಯಿಂದ ಬಂದ ಅನೇಕ ನಟಿಮಣಿಯರು ಇಂದು ಕನ್ನಡದಲ್ಲಿ ಸ್ಟಾರ್ ನಟಿಯರು ಎನ್ನಿಸಿಕೊಂಡಿದ್ದಾರೆ. ಅಲ್ಲದೇ ಇಲ್ಲೇ ಭದ್ರವಾಗಿ ನೆಲೆ ಕಂಡುಕೊಂಡವರು ಇದ್ದಾರೆ. ಈ ಸಂಪ್ರದಾಯ ಕಿರುತೆರೆಯಲ್ಲೂ ಇದೆ. ಆದರೆ ಇಲ್ಲಿ ಕೊಂಚ ಭಿನ್ನವಾಗಿದೆ. ಕನ್ನಡದ ಅನೇಕ ಯಶಸ್ವಿ ಧಾರಾವಾಹಿಗಳಲ್ಲಿ ನಟಿಸಿ ಹೆಸರು ಗಳಿಸಿದ್ದ ನಾಯಕ–ನಾಯಕಿಯರು ಇಂದು ಪರಭಾಷೆ ಕಿರುತೆರೆ ಅಂಗಳದಲ್ಲಿ ಮಿಂಚುತ್ತಿದ್ದಾರೆ. ಅಲ್ಲದೇ ಅಪಾರ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ. ‘ನಟನಾದವನು ತನ್ನ ಸುತ್ತಲೂ ಪರಿಧಿ ರೂಪಿಸಿಕೊಳ್ಳಬಾರದು, ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತು ಪಡಿಸುವ ವೇದಿಕೆ ಸಿಕ್ಕಾಗ ಸಿಕ್ಕ ಅವಕಾಶವನ್ನು ಬಳಸಿಕೊಂಡು ಮುಂದೆ ಸಾಗಬೇಕು’ ಎನ್ನುವ ಇವರು ಪರಭಾಷೆಯಲ್ಲಿ ಸ್ಟಾರ್ ನಟ–ನಟಿಯರು ಎನ್ನಿಸಿಕೊಂಡಿದ್ದಾರೆ.

ತಮಿಳು, ತೆಲುಗು ಹಾಗೂ ಮಲಯಾಳಂ ಕಿರುತೆರೆಯಲ್ಲಿ ಅನೇಕ ಕನ್ನಡದ ಕಲಾವಿದರು ಮಿಂಚುತ್ತಿದ್ದಾರೆ. ಅಂತಹವರಲ್ಲಿ ಕೆಲವರ ಪರಿಚಯ ಇಲ್ಲಿದೆ.

ಚೈತ್ರಾ ರೈ ‌‌
ಮಂಗಳೂರು ಮೂಲದ ಚೈತ್ರಾ ರೈ ಜೀ ಕನ್ನಡ ವಾಹಿನಿಯ ‘ಗೆಜ್ಜೆಪೂಜೆ’ ಧಾರಾವಾಹಿ ಮೂಲಕ ಮೊದಲ ಬಾರಿ ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ 10 ಧಾರಾವಾಹಿಗಳಲ್ಲಿ ನಟಿಸಿರುವ ಇವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದ್ದು ಜೀ ಕನ್ನಡದಲ್ಲೇ ಪ್ರಸಾರವಾದ ‘ರಾಧಾ ಕಲ್ಯಾಣ’ ಧಾರಾವಾಹಿಯ ‘ವಿಶಾಖ’ ಪಾತ್ರ. ಕನ್ನಡ ಕಿರುತೆರೆಯಲ್ಲಿ ಹೆಸರು ಗಳಿಸಿದ್ದ ಇವರಿಗೆ ಕನ್ನಡದಲ್ಲಿ ನಟಿಸುತ್ತಿರುವಾಗಲೇ ತೆಲುಗು ಕಿರುತೆರೆಯಿಂದ ಅವಕಾಶಗಳು ಹುಡುಕಿ ಬಂದಿದ್ದವು. ಇವರು ನಟಿಸಿದ ಮೊದಲ ತೆಲುಗು ಧಾರಾವಾಹಿ ‘ಅಷ್ಟ ಚಮ್ಮ’. ಕನ್ನಡದಲ್ಲಿ ಇವರು ‘ಕುಸುಮಾಂಜಲಿ, ಬೊಂಬೆಯಾಟವಯ್ಯ, ಬಣ್ಣದ ಬುಗುರಿ, ಪೌರ್ಣಮಿ, ನಾಗಮಣಿ ಹಾಗೂ ಯುಗಾದಿ’ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತೆಲುಗಿನ ‘ಅಲ ಮೊದಲಾಯಿಂದಿ, ದಟ್ ಇಸ್ ಮಹಾಲಕ್ಷ್ಮಿ, ಒಕ್ಕರಿಕಿ ಒಕ್ಕರು’ ಧಾರಾವಾಹಿ ಸೇರಿದಂತೆ ರಿಯಾಲಿಟಿ ಷೋಗಳಲ್ಲೂ ಭಾಗವಹಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ತೆಲುಗು ಕಿರುತೆರೆ ರಂಗದಲ್ಲಿ ಮಿಂಚುತ್ತಿರುವ ಇವರು ಬಹು ಬೇಡಿಕೆಯ ನಟಿ ಎನ್ನಿಸಿಕೊಂಡಿದ್ದಾರೆ. ಸದ್ಯ ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅತ್ತಾರಿಂಟ್ಲೊ ಅಕ್ಕ–ಚೆಲ್ಲಲು’ ಧಾರಾವಾಹಿಯಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕನ್ನಡದಲ್ಲಿ ನಟಿಸಬೇಕು ಎಂಬ ಅಪಾರ ಹಂಬಲ ಹೊಂದಿರುವ ಇವರು ‘ನಾನು ಕೆಲವು ವರ್ಷಗಳಿಂದ ತೆಲುಗು ಕಿರುತೆರೆಯಲ್ಲೇ ಇರುವ ಕಾರಣ ಕನ್ನಡದವರು ನನ್ನನ್ನು ಮರೆತೇ ಬಿಟ್ಟಿದ್ದಾರೆ. ನನಗೆ ಈಗಲೂ ಕನ್ನಡದಲ್ಲಿ ನಟಿಸುವ ಆಸೆ ಇದೆ. ಕನ್ನಡದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದೇನೆ’ ಎನ್ನುತ್ತಾರೆ. ಪ್ರಜ್ವಲ್ ದೇವರಾಜ್ ನಟನೆಯ ‘ಜಂಬೂ ಸವಾರಿ’ ಸಿನಿಮಾದಲ್ಲೂ ನಟಿಸಿದ್ದಾರೆ ಚೈತ್ರಾ.

ದಿವ್ಯಾ ಶ್ರೀಧರ್‌

ದಿವ್ಯಾ ಶ್ರೀಧರ್‌
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಆಕಾಶ ದೀಪ’ ಧಾರಾವಾಹಿಯ ದೀಪಾ ಪಾತ್ರದ ಮೂಲಕ ಕನ್ನಡಿಗರ ಮನೆ ಮಗಳಾಗಿದ್ದವರು ದಿವ್ಯಾ ಶ್ರೀಧರ್‌. ‘ಸಾಗುತಾ ದೂರ ದೂರ, ಅಮ್ಮ, ಕಣ್ಮಣಿ’ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದ ದಿವ್ಯಾ ‘ಕೇಳಡಿ ಕಣ್ಮಣಿ’ ಧಾರಾವಾಹಿ ಮೂಲಕ ತಮಿಳು ಕಿರುತೆರೆ ರಂಗಕ್ಕೆ ಕಾಲಿಡುತ್ತಾರೆ. ಮೊದಲ ಧಾರಾವಾಹಿಯಲ್ಲೇ ಅಪಾರ ಅಭಿಮಾನಿಗಳನ್ನು ಪಡೆದ ದಿವ್ಯಾ ಸದ್ಯ ‘ಮಹಾರಸಿ’ ಧಾರಾವಾಹಿಯಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ.

ಕೊಡಗಿನವರಾದ ಈಕೆ ದಿವಂಗತ ನಟ ಕಾಶೀನಾಥ್ ಅವರ ಮಗ ಅಲೋಕ್ ಕಾಶೀನಾಥ್ ನಟನೆಯ ‘12 am’ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಿದ್ದಾರೆ.

‘ನನಗೆ ಕನ್ನಡ ಕಿರುತೆರೆಯಿಂದ ಅವಕಾಶ ಬಂದಿವೆ. ಆದರೆ ನನಗೆ ಇಷ್ಟವಾಗುವ ಥರದ ಪಾತ್ರಗಳು ಯಾವುದೂ ಬಂದಿಲ್ಲ. ಆ ಕಾರಣಕ್ಕೆ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಒಳ್ಳೆಯ ಕತೆ ಬಂದರೆ ಖಂಡಿತ ಕನ್ನಡದಲ್ಲಿ ನಟಿಸುತ್ತೇನೆ’ ಎನ್ನುತ್ತಾರೆ ದಿವ್ಯಾ.

ಜೈ ಜೂಜೆ ಡಿಸೋಜಾ

ಜೈ ಜೂಜೆ ಡಿಸೋಜಾ
ಕಲರ್ಸ್‌ ವಾಹಿನಿಯಲ್ಲಿ ಪ್ರಸಾರವಾಗಿದ್ದ ‘ಮನೆದೇವ್ರು’ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಕಾಲಿರಿಸಿದವರು ಜೈ ಜೂಜೆ ಡಿಸೋಜಾ. ಕಾರವಾರ ಮೂಲದ ಜೈ ಸದ್ಯ ತೆಲುಗು ಕಿರುತೆರೆ ಲೋಕದ ಭರವಸೆಯ ನಟ. ಮನೆದೇವ್ರು ಧಾರಾವಾಹಿಯಿಂದ ನೇರವಾಗಿ ಸ್ಟಾರ್ ಮಾ ವಾಹಿನಿ ‘ಪವಿತ್ರ ಬಂಧನಂ’ ಧಾರಾವಾಹಿ ಮೂಲಕ ತೆಲುಗು ಕಿರುತೆರೆಗೆ ಪ್ರವೇಶ ಪಡೆಯುತ್ತಾರೆ. ಆದಾದ ನಂತರ ರಾಮೋಜಿ ರಾವ್ ಪ್ರೊಡಕ್ಷನ್‌ನಲ್ಲಿ ಈ ಟಿವಿಯ ‘ಆಡದೇ ಆಧಾರಂ’ ಧಾರಾವಾಹಿಯಲ್ಲೂ ನಟಿಸಲು ಅವಕಾಶ ಸಿಗುತ್ತದೆ. ಈ ಧಾರಾವಾಹಿ ಇವರಿಗೆ ತೆಲುಗಿನಲ್ಲಿ ಹೆಚ್ಚು ಖ್ಯಾತಿ ತಂದು ಕೊಟ್ಟಿದ್ದಲ್ಲದೇ ಇನ್ನಷ್ಟು ಅವಕಾಶಗಳು ಸಿಗುವಂತೆ ಮಾಡಿದೆ. ಸದ್ಯ ಜೀ ತೆಲುಗು ವಾಹಿನಿ ಪ್ರಸಾರವಾಗಬೇಕಿರುವ ಧಾರಾವಾಹಿಯೊಂದರಲ್ಲಿ ನಟಿಸುತ್ತಿದ್ದಾರೆ ಜೈ.

‘ಕನ್ನಡದಲ್ಲಿ ನನಗೆ ಅನೇಕ ಅವಕಾಶಗಳು ಬಂದಿದ್ದವು. ಆದರೆ ಸಮಯ ಹಾಗೂ ದಿನಾಂಕ ಹೊಂದಾಣಿಕೆಯಾಗದ ಕಾರಣ ನಟಿಸಲು ಸಾಧ್ಯವಾಗಿರಲಿಲ್ಲ. ಇಲ್ಲಿ ಧಾರಾವಾಹಿ ಮಾಡುತ್ತಿರುವಾಗ ಕನ್ನಡ ಧಾರಾವಾಹಿಗೆ ಸಮಯ ಹೊಂದಿಸಲು ಕಷ್ಟವಾಗುತ್ತದೆ. ಯಾಕೆಂದರೆ ಕನ್ನಡದಲ್ಲಿ ಸಂಪೂರ್ಣ ತಿಂಗಳು ಸಮಯ ಕೇಳುತ್ತಾರೆ. ಆದರೆ ಇಲ್ಲಿ ಎರಡು ಧಾರಾವಾಹಿಗಳನ್ನು ಒಟ್ಟಿಗೆ ಮಾಡಬಹುದು. ಹಾಗಾಗಿ ಸಮಯ ಹೊಂದಾಣಿಕೆಯಾದರೆ ಮತ್ತೆ ಕನ್ನಡಕ್ಕೆ ಬರುವ ಎಲ್ಲಾ ಯೋಚನೆಗಳು ಇದೆ. ಮುಂದಿನ ದಿನಗಳಲ್ಲಿ ಖಂಡಿತ ಕನ್ನಡ ಇಂಡಸ್ಟ್ರಿಯಲ್ಲಿ ಮಿಂಚುವ ಆಸೆ ಇದೆ’ ಎನ್ನುತ್ತಾರೆ.

ಐಶ್ವರ್ಯಾ ಪಿಸ್ಸೆ

ಐಶ್ವರ್ಯಾ ಪಿಸ್ಸೆ
ಸ್ಟಾರ್ ಸುವರ್ಣ ವಾಹಿನಿಯ ‘ಅನುರೂಪ’ ಧಾರಾವಾಹಿ ಮೂಲಕ ಹೆಸರು ಗಳಿಸಿದ್ದ ನಟಿ ಐಶ್ವರ್ಯಾ ಪಿಸ್ಸೆ. ‘ಗಿರಿಜಾ ಕಲ್ಯಾಣ, ಸರ್ವಮಂಗಳ ಮಾಂಗಲ್ಯೇ’ ಧಾರಾವಾಹಿಗಳೂ ಈಕೆಗೆ ಹೆಸರು ತಂದುಕೊಟ್ಟಿದ್ದವು. ಕನ್ನಡದಲ್ಲಿ ಅವಕಾಶಗಳು ಇರುವಾಗಲೇ ತೆಲುಗು ಧಾರಾವಾಹಿ ಕ್ಷೇತ್ರದಿಂದ ಅವಕಾಶ ಬಂದಿತ್ತು. ತೆಲುಗು, ತಮಿಳು ಧಾರಾವಾಹಿ ಕ್ಷೇತ್ರದಲ್ಲಿ ಮಿಂಚುತ್ತಿರುವ ಈ ಬೆಡಗಿ ಮುಂದಿನ ದಿನಗಳಲ್ಲಿ ಕನ್ನಡದಲ್ಲೂ ಕಾಣಿಸಿಕೊಳ್ಳುವ ಭರವಸೆಯ ಮಾತುಗಳನ್ನಾಡುತ್ತಾರೆ.

‘ನಾ ಪೇರು ಮೀನಾಕ್ಷಿ’ ಧಾರಾವಾಹಿ ಮೂಲಕ ತೆಲುಗು ಕಿರುತೆರೆಗೆ ಪ್ರವೇಶ ಪಡೆದಿದ್ದರೂ ಇವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದ್ದು ‘ಅಗ್ನಿಸಾಕ್ಷಿ’ ಧಾರಾವಾಹಿ. ತಮಿಳಿನ ‘ನಿನೈಕ ತೆರಿಂತ ಮನವೇ’ ಧಾರಾವಾಹಿಯಲ್ಲಿ ನಟಿಸುವ ಮೂಲಕ ತಮಿಳಿನಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಸದ್ಯ ತೆಲುಗಿನ ‘ಕಸ್ತೂರಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಕನ್ನಡದ ಬಗ್ಗೆ ಅಭಿಮಾನ, ಪ್ರೀತಿ ಹೊಂದಿರುವ ಇವರು ‘ಕನ್ನಡ ನನ್ನನ್ನು ಗುರುತಿಸಿ, ಬೆಳೆಸಿದ ಕ್ಷೇತ್ರ. ಕನ್ನಡವನ್ನು ಬಿಡುವ ಮಾತೇ ಇಲ್ಲ. ಈಗಲೂ ಕನ್ನಡ ಧಾರಾವಾಹಿಯೊಂದರ ಕುರಿತು ಮಾತುಕತೆ ನಡೆದಿದೆ. ಸದ್ಯದಲ್ಲೇ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎನ್ನುತ್ತಾರೆ.

ನವ್ಯಾ ಸ್ವಾಮಿ

ನವ್ಯಾ ಸ್ವಾಮಿ
‘ತಂಗಾಳಿ’ ಧಾರಾವಾಹಿ ಮೂಲಕ ನಟನಾ ಬದುಕು ಆರಂಭಿಸಿದವರು ಮೈಸೂರು ಮೂಲದ ನವ್ಯಾಸ್ವಾಮಿ. ಅವರಿಗೆ ಕನ್ನಡದಲ್ಲಿ ಹೆಚ್ಚು ಖ್ಯಾತಿ ತಂದುಕೊಟ್ಟಿದ್ದು ‘ಲಕುಮಿ’ ಧಾರಾವಾಹಿ. ‘ಸ್ಟಾರ್ ಸವಿರುಚಿ’ ಕಾರ್ಯಕ್ರಮದ ನಿರೂಪಕಿಯಾಗಿಯೂ ಕೆಲಸ ಮಾಡಿದ್ದರು ನವ್ಯಾ. ‘ನಾ ಪೇರು ಮೀನಾಕ್ಷಿ’ ಧಾರಾವಾಹಿ ಮೂಲಕ ತೆಲುಗು ಕಿರುತೆರೆಗೆ ಕಾಲಿರಿಸಿದ್ದ ಇವರು ಸದ್ಯ ತೆಲುಗು ಕಿರುತೆರೆಯಲ್ಲಿ ಭದ್ರನೆಲೆ ಕಂಡುಕೊಂಡಿದ್ದಾರೆ. ಈಗ ‘ಆಮೆ ಕಥಾ’ ಧಾರಾವಾಹಿಯಲ್ಲಿ ನಟಿಸುತ್ತಿರುವ ನವ್ಯಾ ಉತ್ತಮ ಅವಕಾಶಗಳು ಬಂದರೆ ಕನ್ನಡದಲ್ಲೂ ನಟಿಸುವ ಇರಾದೆ ಹೊಂದಿದ್ದಾರೆ.

ಅನುಷಾ ಪ್ರತಾ‍ಪ್‌

ಅನುಷಾ ಪ್ರತಾಪ್‌
ಪುತ್ತೂರು ಮೂಲದ ಅನುಷಾ ಪ್ರತಾಪ್‌ ‘ರಾಧಾ ರಮಣ’ ಧಾರಾವಾಹಿಯ ‘ದೀಪಿಕಾ’ ಪಾತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾದವರು. ಕನ್ನಡದಲ್ಲಿ ನಟಿಸುತ್ತಿರುವಾಗಲೇ ತೆಲುಗುನಿಂದಲೂ ಅವಕಾಶ ಹುಡುಕಿ ಬಂದಿತ್ತು. ‘ನಿನ್ನೆ ಪೆಳ್ಳಾಡತಾ’ ಧಾರಾವಾಹಿ ಮೂಲಕ ತೆಲುಗು ಕಿರುತೆರೆಯತ್ತ ಪಯಣ ಬೆಳೆಸುತ್ತಾರೆ ಅನುಷಾ. ಸದ್ಯ ‘ಸೂರ್ಯಕಾಂತಂ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಉತ್ತರಭಾರತ ಮೂಲದ ಹೈದರಾಬಾದ್ ನಿವಾಸಿ ಪ್ರತಾಪ್ ಸಿಂಗ್ ಷಾ ಅವರನ್ನು ಮದುವೆಯಾಗಿರುವ ಈ ಬೆಡಗಿ ಸದ್ಯ ಹೈದರಾಬಾದ್‌ನಲ್ಲೇ ನೆಲೆಸಿದ್ದಾರೆ.

‘ಕನ್ನಡ ಧಾರಾವಾಹಿಗಳಿಂದ ಈಗಲೂ ನನಗೆ ಅವಕಾಶಗಳು ಬರುತ್ತಿವೆ. ಆದರೆ ರಾಧಾ ರಮಣ ಮುಗಿದ ಕೆಲವು ದಿನಗಳಲ್ಲಿ ನನಗೆ ಮದುವೆ ಆಯ್ತು. ಆ ಕಾರಣಕ್ಕೆ ಪ್ರಾಜೆಕ್ಟ್‌ ಒಪ್ಪಿಕೊಂಡಿರಲಿಲ್ಲ. ನನ್ನ ಗಂಡ ಕೂಡ ಹೈದರಾಬಾದ್‌ನವರಾದ ಕಾರಣ ಕನ್ನಡದಿಂದ ಕೆಲ ಕಾಲ ಬ್ರೇಕ್ ತೆಗೆದುಕೊಂಡಿದ್ದೆ. ಮಾರ್ಚ್‌ನಲ್ಲಿ ಪ್ರಾಜೆಕ್ಟ್ ಒಂದನ್ನು ಒಕೆ ಮಾಡಬೇಕಿತ್ತು. ಆದರೆ ಆ ಸಮಯಕ್ಕೆ ಕೊರೊನಾ ಬಂದ ಕಾರಣ ಅದು ಅರ್ಧಕ್ಕೆ ನಿಂತಿದೆ. ಕನ್ನಡದಿಂದಲೇ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದ್ದು. ಕನ್ನಡ ಧಾರಾವಾಹಿಯಲ್ಲಿ ನಾನು ನಟಿಸಿಲ್ಲ ಎಂದಿದ್ದರೆ ತೆಲುಗು ಕಿರುತೆರೆಗೆ ನನ್ನ ಪರಿಚಯವೇ ಆಗುತ್ತಿರಲಿಲ್ಲ. ಹಾಗಾಗಿ ಕನ್ನಡಕ್ಕೆ ಮತ್ತೆ ಬಂದೇ ಬರುತ್ತೇನೆ’ ಎಂದು ವಿನಯದಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT