ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕೋಗಿಲೆ ಸೂಪರ್‌ ಸೀಸನ್‌: ಟ್ಯಾಲೆಂಟು ನೂರೆಂಟು

Last Updated 5 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಈ ಹಾಡು, ಪ್ರೋಮೊವಿಡಿಯೊ ಮೂಲಕವೇ ಆಕರ್ಷಿಸಿದೆ ಕನ್ನಡ ಕೋಗಿಲೆ ಸೂಪರ್‌ ಸೀಸನ್‌. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಈಗಾಗಲೇ ಎರಡು ಸೀಸನ್‌ಗಳನ್ನು ಯಶಸ್ವಿಯಾಗಿ ಪೂರೈಸಿದ ಈ ಗಾಯನ ಸ್ಪರ್ಧೆ ಇರುವ ಪ್ರತಿಭೆಗಳನ್ನು ಇನ್ನಷ್ಟು ಸಾಣೆ ಹಿಡಿದು ಗುರುತಿಸಲು ಮುಂದಾಗಿದೆ.ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಈ ಕಾರ್ಯಕ್ರಮ ಪ್ರಸಾರ ವಾಗುತ್ತಿದೆ.

ಕನ್ನಡ ಕೋಗಿಲೆ ಸೀಸನ್‌ 2ರ ರನ್ನರ್‌ ಅರ್ಜುನ್‌ ಇಟಗಿ ಸಹ ನಿರೂಪಕನಾಗಿ, ನಿರೂಪಕಿ ಸಿರಿ ಜತೆ ಕಾಣಿಸಿಕೊಳ್ಳಲಿದ್ದಾನೆ. ಇಬ್ಬರ ತುಂಟ ನಿರೂಪಣೆ ಈ ಕಾರ್ಯಕ್ರಮವನ್ನು ಇನ್ನಷ್ಟು ರಂಜನೀಯಗೊಳಿಸಲಿದೆ.

ಯಾರಿಗೆ ಅವಕಾಶ?

ಕನ್ನಡ ಕೋಗಿಲೆ ಸೀಸನ್‌ 1, 2 ಹಾಗೂ ಕನ್ನಡದ ಇತರ ವಾಹಿನಿಗಳಲ್ಲಿ ನಡೆದ ಸಂಗೀತ ಸ್ಪರ್ಧೆಗಳಲ್ಲಿ ಅಂತಿಮ ಸ್ಪರ್ಧೆಯಲ್ಲಿ ರನ್ನರ್‌ ಅಪ್‌ ಆದವರು, ರೇಡಿಯೊ ಸಂಗೀತ ಷೋಗಳಲ್ಲಿ ಅಂತಿಮ ಹಂತದಲ್ಲಿ ಸ್ವಲ್ಪದರಲ್ಲೇ ಗೆಲುವಿನಿಂದ ದೂರವಾದವರನ್ನು ಈ ‘ಸೂಪರ್‌ ಸೀಸನ್‌’ ಗುರುತಿಸಿ ವೇದಿಕೆ ನೀಡುತ್ತಿದೆ. ಉದಾಃ ವಾಯ್ಸ್ ಆಫ್‌ ಇಂಡಿಯಾ (ಆ್ಯಂಡ್‌ಟಿವಿಯಲ್ಲಿ) ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಅದಿತಿ ಖಂಡೆಗಳ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.

ಕಾರ್ಯಕ್ರಮದ ಮೊದಲ ಎಪಿಸೋಡ್‌ನಲ್ಲಿ ಅರುಂಧತಿ ವಸಿಷ್ಠ ಅವರ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. ಕರ್ನಾಟಕದ ಬೇರೆ ಬೇರೆ ಭಾಗಗಳ, ಬೇರೆ ಬೇರೆ ಪ್ರಕಾರದ ಸಂಗೀತದ ಸೊಗಡನ್ನು ಪರಿಚಯಿಸುವ ಪ್ರಯತ್ನ ನಡೆದಿದೆ. ಯಕ್ಷಗಾನ, ಲಾವಣಿ, ಗೀಗಿ ಪದ ಎಲ್ಲವೂ ಅವರ ಹಾಡಿನಲ್ಲಿ ಮಿಳಿತಗೊಂಡಿತ್ತು. ಅದಕ್ಕೆ ತಕ್ಕಂತೆ ಹಿನ್ನೆಲೆಯಲ್ಲಿ ನೃತ್ಯ ಪ್ರದರ್ಶನ ನಡೆದದ್ದು ಕಾರ್ಯಕ್ರಮಕ್ಕೊಂದು ಅದ್ದೂರಿತನ ತಂದುಕೊಟ್ಟಿದೆ. ಇದೇ ತರಹ ಇತರ ಸ್ಪರ್ಧಿಗಳೂ ವಿನೂತನ ಪರಿಕಲ್ಪನೆ ಮೂಲಕ ಪೈಪೋಟಿ ಕೊಟ್ಟಿದ್ದಾರೆ. ಹಿನ್ನೆಲೆ ಗಾಯಕಿ ಸ್ಪರ್ಶ ಆರ್‌.ಕೆ. ಅವರೂ ಸ್ಪರ್ಧೆಯಲ್ಲಿದ್ದಾರೆ.

ಕನ್ನಡ ಕೋಗಿಲೆಯಲ್ಲಿ ರನ್ನರ್‌ ಅಪ್‌ಗಳಾದ ಅಖಿಲಾ ಕರಿಬಸವ ತಡಕಲ್‌, ಪಾರ್ಥ ಚಿರಂತನ್‌, ನಿತಿನ್‌ ರಾಜಾರಾಂ ಶಾಸ್ತ್ರಿ ಅವರೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.ತನುಷ್‌ರಾಜ್, ಪುರುಷೋತ್ತಮ್‌ ಜಿ.ವಿ., ಅನಂತ್‌ರಾಜ್‌ ಮಿಸ್ತ್ರಿ, ನಿಹಾರಿಕಾ ಎ. ಅವರೂ ಸ್ಪರ್ಧಾ ಕಣದಲ್ಲಿದ್ದಾರೆ. ಈ ಕಾರ್ಯಕ್ರಮ 12 ವಾರಗಳ ಕಾಲ ಪ್ರಸಾರವಾಗಲಿದೆ ಎಂದು ಕಾರ್ಯಕ್ರಮ ನಿರ್ಮಾಣ ತಂಡದ ಮೂಲಗಳು ಹೇಳಿವೆ.

ಗೆದ್ದವರಿಗೆ ಭರ್ಜರಿ ನಗದು ಬಹುಮಾನವೂ ಇದೆ. ಅದು ಎಷ್ಟು ಎಂಬುದು ಇನ್ನೂ ಗುಟ್ಟಾಗಿ ಉಳಿದಿದೆ. ಈಗಾಗಲೇ ಬೇರೆ ಬೇರೆ ಕಡೆಗಳಲ್ಲಿ ಭಾಗವಹಿಸಿದ್ದವರು ಇಲ್ಲಿ ಸ್ಪರ್ಧಿಸುತ್ತಿದ್ದಾರೆ. ಹಾಗಾಗಿ ಪ್ರತ್ಯೇಕ ಆಡಿಷನ್‌ ನಡೆಸಿಲ್ಲ.ಸಾಧು ಕೋಕಿಲ, ಅರ್ಚನಾ ಉಡುಪ ಮತ್ತು ಚಂದನ್‌ ಶೆಟ್ಟಿ ತೀರ್ಪುಗಾರರಾಗಿದ್ದಾರೆ. ಜತೆಗೆ ಪ್ರೇಕ್ಷಕರಿಗೂ ಎಸ್‌ಎಂಎಸ್‌ ಮೂಲಕ ಮತದಾನ ಮಾಡಲು ಅವಕಾಶವಿದೆ ಎಂದಿದೆ ಕಾರ್ಯಕ್ರಮ ತಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT