ಬುಧವಾರ, ಡಿಸೆಂಬರ್ 1, 2021
21 °C

ಯಾರಿವಳು ಸ್ವಾತಿ?

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

ನಟಿಸುವ ಹಂಬಲ ಹೊಂದಿದವರು ಧಾರಾವಾಹಿ, ಸಿನಿಮಾ ಎಂಬ ಪರಧಿಯನ್ನು ಸುತ್ತಿಕೊ‌ಳ್ಳಬಾರದು. ಯಾವುದೇ ಕ್ಷೇತ್ರವಾಗಲಿ ನಟನೆ ಮುಖ್ಯ ಎಂಬ ಭಾವ ಹೊಂದಿರುವವರು ಈ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು ಎನ್ನುತ್ತಾರೆ ನಟಿ ಸ್ವಾತಿ ಕೊಂಡೆ.

‘ನಟನೆ ಎಂದರೆ ಶಿಕ್ಷಣವಿದ್ದಂತೆ. ಬೇರೆ ಬೇರೆ ವಿಷಯಗಳನ್ನು ತರಗತಿಯಲ್ಲಿ ಕುಳಿತು ಕಲಿಯುವಂತೆ ನಟನೆಯಲ್ಲೂ ಅನೇಕ ವಿಷಯಗಳನ್ನು ಕಲಿತು ಪ್ರಬುದ್ಧರಾಗುತ್ತೇವೆ. ಆ ಮೂಲಕ ನಟನೆಯಲ್ಲಿ ಪದವಿ ಗಳಿಸುತ್ತೇವೆ’ ಎಂಬುದು ನಟಿ ಸ್ವಾತಿ ಕೊಂಡೆ ಅಭಿಪ್ರಾಯ. 

‘ಬ್ಯೂಟಿಫುಲ್‌ ಮನಸ್ಸುಗಳು’ ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿರಿಸಿದ ಸ್ವಾತಿ ಸದ್ಯ ಉದಯ ವಾಹಿನಿಯ ‘ಯಾರಿವಳು?’ ಧಾರಾವಾಹಿಯ ಮೂಲಕ ಕಿರುತೆರೆಯತ್ತ ಪಯಣ ಬೆಳೆಸಿದ್ದಾರೆ. 

ಬೆಂಗಳೂರಿನಲ್ಲಿ ನೆಲೆಸಿರುವ ಆವರು ಡಿಪ್ಲೊಂ ಪದವಿಧರೆ. ಓದು ಮುಗಿಸಿದ ತಕ್ಷಣ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಬಾಲ್ಯದಿಂದಲೂ ನೃತ್ಯದಲ್ಲಿ ಪಳಗಿರುವ ಇವರು ಯಾವುದೇ ನೃತ್ಯ ತರಗತಿಗೆ ಹೋದವರಲ್ಲ. ಆದರೆ ಅವರೇ ಹೇಳುವಂತೆ ಯಾವುದೇ ಪ್ರಕಾರದ ನೃತ್ಯವಾದರೂ ಒಮ್ಮೆ ನೋಡಿದರೆ ಅದನ್ನು ತಕ್ಷಣಕ್ಕೆ ಕಲಿತು ಬಿಡುವ ಚಾಣಾಕ್ಷೆ. ಪಿಯುಸಿ ಓದುವಾಗ ಡಾನ್ಸ್ ಶೋಗಳನ್ನು ಮಾಡಬೇಕು ಎಂಬ ಹಂಬಲ ಹೊಂದಿದ್ದರು. ಆದರೆ ಆ ಸಮಯದಲ್ಲೇ ನಟನೆಯ ಅವಕಾಶ ಬಂದು ಅದರಿಂದ ಹಿಂದೆ ಸರಿದಿದ್ದರು. 

ಕಳೆದ ಆರು ವರ್ಷಗಳಿಂದ ಸಿನಿರಂಗದಲ್ಲಿರುವ ಸ್ವಾತಿ ‘ಕಮರೊಟ್ಟು ಚೆಕ್‌ಪೋಸ್ಟ್’‌, ‘ಕಟ್ಟುಕತೆ’, ‘ವೆನಿಲ್ಲಾ’ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಯಾರಿವಳು ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಅವರು ದ್ವಿಪಾತ್ರದಲ್ಲಿ ನಟಿಸುತ್ತಿದ್ದು, ‘ಪ್ರಜಾಪ್ಲಸ್‌’ ಜೊತೆ ವಿವರಗಳನ್ನು ಹಂಚಿಕೊಂಡಿದ್ದಾರೆ.

ಯಾರಿವಳು ಪಾತ್ರದ ಕುರಿತು...

‘ಈ ಧಾರಾವಾಹಿಯಲ್ಲಿ ನನ್ನದು ದ್ವಿಪಾತ್ರ. ಇಬ್ಬರು ಅವಳಿ ಹೆಣ್ಣುಮಕ್ಕಳ ಸುತ್ತ ನಡೆಯುವ ಕತೆ ಈ ಧಾರಾವಾಹಿಯ ಸಾರಾಂಶ. ಅಹಲ್ಯಾ ಹಾಗೂ ಮಾಯಾ ಪಾತ್ರಗಳು ಧಾರಾವಾಹಿಯಲ್ಲಿ ಮುಖ್ಯಪಾತ್ರ ವಹಿಸುತ್ತವೆ. ಈ ಇಬ್ಬರು ನೋಡಲು ಒಂದೇ ರೀತಿಯಾದರೂ ಇಬ್ಬರ ವ್ಯಕ್ತಿತ್ವ ತದ್ವಿರುದ್ಧ. ಮಾಯಾ ಪಾತ್ರದಲ್ಲಿ ನವರಸಗಳನ್ನು ತಂದಿದ್ದಾರೆ. ಕರುಣೆ, ಸಹನೆ, ಕೋಪ, ಆಕ್ರೋಶ ಹೀಗೆ ಎಲ್ಲವೂ ಮಾಯಾ ಪಾತ್ರದಲ್ಲಿ ಅಡಕವಾಗಿದೆ. ಅಹಲ್ಯಾ ಎಂದರೆ ಪ್ರೀತಿ, ಕರುಣೆ, ಸಹನೆ. ಒಟ್ಟಾರೆ ಈ ಎರಡೂ ಪಾತ್ರಗಳಲ್ಲಿ ತುಂಬಾನೇ ವ್ಯತ್ಯಾಸವಿದೆ’ ಎಂದು ಧಾರಾವಾಹಿಯಲ್ಲಿನ ತಮ್ಮ ಪಾತ್ರದ ಕುರಿತು ವಿವರಣೆ ನೀಡುತ್ತಾರೆ. 

ಸಿನಿಮಾ ಧಾರಾವಾಹಿ ನಡುವಿನ ವ್ಯತ್ಯಾಸ 
ಯಾವುದೇ ನಟನಾಗಲಿ ನಟನೆಯ ಹಂಬಲವಿದ್ದರೆ ಸಿನಿಮಾ, ಧಾರಾವಾಹಿ ಎಂಬ ಭೇದ ಮಾಡುವುದಿಲ್ಲ. ಸಿನಿಮಾವಾದರೇನು, ಧಾರಾವಾಹಿಯಾದರೇನು ನಟನೆ ಮುಖ್ಯ ಎನ್ನುವುದು ನನ್ನ ಅಭಿಪ್ರಾಯ. ಸಿನಿಮಾಗಳಿಂದ ಜನರಿಗೆ ಪರಿಚಯವಾಗುವುದಕ್ಕಿಂತ ಧಾರಾವಾಹಿಗಳಿಂದ ಜನರಿಗೆ ಹೆಚ್ಚು ಪರಿಚಿತರಾಗುತ್ತೇವೆ. ನಾನು ಮುಂದೆಯೂ ಸಿನಿಮಾ ಮತ್ತು ಧಾರಾವಾಹಿ ಎರಡಲ್ಲೂ ನಟಿಸುತ್ತೇನೆ. ಯಾವ ಕ್ಷೇತ್ರ ನನ್ನನ್ನು ಹೆಚ್ಚು ಎತ್ತರಕ್ಕೆ ಒಯ್ಯುತ್ತದೋ ಅಲ್ಲಿ ನೆಲೆ ನಿಲ್ಲಲು ಪ್ರಯತ್ನಿಸುತ್ತೇನೆ’ ಎನ್ನುವುದು ಸ್ವಾತಿ ಮಾತು. 

‘ಧಾರಾವಾಹಿಯಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದರೂ ಮಾಯಾ ಪಾತ್ರ ನನ್ನ ವೈಯಕ್ತಿಕ ಬದುಕಿಗೆ ಹೆಚ್ಚು ಸಾಮ್ಯತೆ ಹೊಂದಿದೆ. ನಿಜಜೀವನದಲ್ಲಿ ನಾನು ಮಾಯಾಳಂತೆಯೇ ಗಟ್ಟಿಗಿತ್ತಿ. ನಾನು ಆರನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಬೈಕ್ ಓಡಿಸಲು ಕಲಿತಿದ್ದೆ. ಈ ಧಾರಾವಾಹಿಯಲ್ಲೂ ನಾನು ಬೈಕ್ ಓಡಿಸಿಕೊಂಡು ‘ಹತ್ತರೇ ಹನುಮ’ ಎಂಬ ಡೈಲಾಗ್ ಹೇಳಿಕೊಂಡು ಇರುವ ಖಡಕ್ ಹುಡುಗಿ. ಅಹಲ್ಯಾ ಪಾತ್ರ ನನಗೆ ಕೊಂಚ ಕಷ್ಟವಾಗಬಹುದು. ಆದರೆ ಖಂಡಿತ ಪಾತ್ರಕ್ಕೆ ನ್ಯಾಯ ಒದಗಿಸುತ್ತೇನೆ’ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ ಈ ಬೆಡಗಿ.  

ಸದ್ಯ 3 ಸಿನಿಮಾಗಳ ಕುರಿತು ಮಾತುಕತೆ ನಡೆದಿದ್ದು ಕೊರೊನಾ ಕಾರಣದಿಂದ ಅದು ಅರ್ಧಕ್ಕೆ ನಿಂತಿದೆಯಂತೆ. ‘ಧಾರಾವಾಹಿ ಹಾಗೂ ಸಿನಿಮಾ ಎರಡನ್ನೂ ಸಂಭಾಳಿಸಿಕೊಂಡು ಎರಡೂ ಕ್ಷೇತ್ರದಲ್ಲಿ ಮುಂದುವರಿಯುತ್ತೇನೆ’ ಎನ್ನುತ್ತಾರೆ ಸ್ವಾತಿ. 

‘ನಟಿಯಾಗದಿದ್ದರೆ ಅಪ್ಪನ ಆಸೆಯಂತೆ ಆರ್‌ಟಿಓ ಅಧಿಕಾರಿಯಾಗಿರುತ್ತಿದ್ದೆ’ ಎನ್ನುವ ಅವರಿಗೆ ಈ ಕ್ಷೇತ್ರದಲ್ಲಿ ಮುಂದುವರಿಯಲು ಮನೆಯವರ ಸಂಪೂರ್ಣ ಸಹಕಾರವಿದೆಯಂತೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು