ಸೋಮವಾರ, ಅಕ್ಟೋಬರ್ 26, 2020
23 °C
ಕಿರುತೆರೆ

‘ಲಗ್ನಪತ್ರಿಕೆ’ಯ ಸೂರಜ್‌ಗೆ ನಟನೆಯೆಂದರೆ ಜೀವ

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

ನೋಡಲು ಸುಂದರವಾಗಿರುವ ಶ್ರೀಮಂತ ಮನೆತನದ ಹುಡುಗ ಶಶಾಂಕ್‌. ಜಾಹೀರಾತು ಕಂಪನಿಯಲ್ಲಿ ಉದ್ಯೋಗಿಯಾಗಿರುವ ಅವನಿಗೆ ಮದುವೆ ಎಂದರೆ ಅಲರ್ಜಿ. ತಾನು ಕೆಲಸ ಮಾಡುವ ಕಂಪನಿಯಲ್ಲೇ ಇಂಟರ್ನಿಯಾಗಿ ಸೇರುವ ಹುಡುಗಿ ಮಯೂರಿ ಎಂದರೆ ಕಿರಿಕಿರಿ. ಆದರೆ ಅದೇ ಮಯೂರಿ ಜೊತೆಗೆ ಮನೆಯವರು ಶಶಾಂಕ್‌ ಮದುವೆ ನಿಶ್ಚಯ ಮಾಡುತ್ತಾರೆ. ಹುಡುಗ–ಹುಡುಗಿ ಇಬ್ಬರಿಗೂ ಇಷ್ಟವಿಲ್ಲದ ಮದುವೆಗೆ ಮನೆಯವರೇ ಕಾರಣ. ಇದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಲಗ್ನಪತ್ರಿಕೆ’ ಧಾರಾವಾಹಿಯ ಕತೆ. ಈ ಧಾರಾವಾಹಿ ಬಹುಬೇಗ ಜನರ ಮನಸ್ಸನ್ನು ಸೆಳೆದಿದೆ. 

‘ಲಗ್ನಪತ್ರಿಕೆ’ಯಲ್ಲಿ ಶಶಾಂಕ್ ಪಾತ್ರದಲ್ಲಿ ನಟಿಸಿದವರು ಬೆಳಗಾವಿ ಮೂಲದ ಸೂರಜ್ ಹೂಗಾರ್‌. ಇವರದ್ದು ಕಲಾರಾಧಕರ ಕುಟುಂಬ. ಅಜ್ಜ ರಂಗಭೂಮಿ ಕಲಾವಿದರು. ಕುಟುಂಬದಲ್ಲಿ ಹಲವರು ನೃತ್ಯ, ಸಂಗೀತ ಕ್ಷೇತ್ರದಲ್ಲಿದ್ದಾರೆ. ಶಾಲಾ ದಿನಗಳಿಂದಲೂ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ. ಬಾಲ್ಯದ ದಿನಗಳಲ್ಲಿ ತಾತನ ಕಾರಣದಿಂದ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ಕ್ರಿಕೆಟ್ ಕೋಚ್ ಇವರಿಗೆ ‘ನೀನ್ಯಾಕೆ ಮಾಡೆಲಿಂಗ್‌ಗೆ ಹೋಗಬಾರದು?’ ಎಂದಿದ್ದರು. ಅದು ಅವರ ತಲೆಯಲ್ಲಿ ಕುಳಿತು ಬಿಟ್ಟಿತ್ತು. ಆದರೆ ಓದಿನಲ್ಲಿ ಆಸಕ್ತಿಯಿದ್ದ ಇವರು ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಈ ನಡುವೆ ನಟನೆಯತ್ತ ಆಸಕ್ತಿ ಹೊರಳಿತು.

ಸೂರಜ್ ತಮ್ಮ ಮಾಡೆಲಿಂಗ್ ಹಾಗೂ ಧಾರಾವಾಹಿ ಪಯಣದ ಕುರಿತು ‘ಪ್ರಜಾಪ್ಲಸ್’ ಜೊತೆ ಮಾತನಾಡಿದ್ದಾರೆ.

ಮಾಡೆಲಿಂಗ್‌ ಹಾದಿ..

ಎಂಜಿನಿಯರಿಂಗ್‌ ಮುಗಿಸಿ ಮುಂಬೈಗೆ ತೆರಳಿದ್ದ ಸೂರಜ್‌ ಒಂದು ವರ್ಷ ಕಾಲ ಶಾಂತಿಲಾಲ್‌ ಪಟೇಲ್ ಎಂಬುವವರ ಬಳಿ ನಟನಾ ತರಬೇತಿ ಪಡೆದಿದ್ದಾರೆ. ನಂತರ ಬೆಂಗಳೂರಿಗೆ ಬಂದು ಸಿನಿಮಾ, ಧಾರಾವಾಹಿಗಳಿಗೆ ಆಡಿಷನ್‌ ನೀಡುತ್ತಾ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿರಿಸಿದ್ದರು. ಬೆಂಗಳೂರು, ಚೆನ್ನೈ ಹಾಗೂ ಮುಂಬೈನಲ್ಲಿ ನಡೆದ ಮಾಡೆಲಿಂಗ್‌ ಶೂಟ್‌ಗಳಲ್ಲಿ ಭಾಗವಹಿಸಿದ್ದಾರೆ. ಕೆಲವು ಜಾಹೀರಾತುಗಳು ಹಾಗೂ ಪ್ರಮೋಶನಲ್‌ ವಿಡಿಯೊಗಳಲ್ಲೂ ನಟಿಸಿದ್ದಾರೆ ಈ ನಟ‌.

ಧಾರಾವಾಹಿಯಲ್ಲಿ ಅವಕಾಶ

ಸೂರಜ್ ಮೊದಲು ನಟಿಸಿದ್ದು ‘ಮಂಗಳಗೌರಿ ಮದುವೆ’ ಧಾರಾವಾಹಿಯಲ್ಲಿ. ‘ರಾಣಾ’ ಎಂಬ ಶಾರ್ಪ್‌ಶೂಟರ್ ಪಾತ್ರದ ಮೂಲಕ ಮೊದಲ ಬಾರಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ‘ರಾಣಾ ಪಾತ್ರ ಸಣ್ಣದಾದರೂ ಅದಕ್ಕೆ ಅದರದ್ದೇ ಪ್ರಾಮುಖ್ಯತೆ ಇತ್ತು’ ಎನ್ನುವ ಶಶಾಂಕ್‌ಗೆ ‘ಲಗ್ನಪತ್ರಿಕೆ’ ಎರಡನೇ ಧಾರಾವಾಹಿ.

ಧಾರಾವಾಹಿಗೆ ಆಯ್ಕೆಯಾದ ಬಗ್ಗೆ ಮಾತನಾಡುವ ಇವರು ‘ನಾನು ಇಸ್ಕಾನ್‌ಗೆ ಸಂಬಂಧಿಸಿದ್ದ ವಿಡಿಯೊವೊಂದರಲ್ಲಿ ನಟಿಸಿದ್ದೆ. ಅದಾದ ಮೇಲೆ ಅವಕಾಶಕ್ಕಾಗಿ ಹುಡುಕಾಟ ನಡೆಸಿದ್ದೆ. ಆಗ ನನಗೆ ಅರವಿಂದ್‌ ಕೌಶಿಕ್ ಅವರ ಸಂಪರ್ಕ ಸಿಕ್ಕಿತ್ತು. ಅವರು ‘ಒಂದು ಪ್ರಾಜೆಕ್ಟ್ ಇದೆ, ಬಂದು ಆಡಿಷನ್ ನೀಡಿ’ ಎಂದು ಕರೆದಿದ್ದರು. ನನಗೆ ಅದು ಧಾರಾವಾಹಿ ಎಂಬುದೂ ತಿಳಿದಿರಲಿಲ್ಲ. ಹೋಗಿ ಆಡಿಷನ್ ಕೊಟ್ಟು ಬಂದೆ. ಮೂರು ವಾರಗಳ ಬಳಿಕ ಕರೆ ಬಂತು. ನಾನು ನಾಯಕನ ಪಾತ್ರಕ್ಕೆ ಆಯ್ಕೆಯಾಗಿದ್ದೆ ಎಂದು. ನಿಜಕ್ಕೂ ಆ ಖುಷಿ ವಿವರಿಸಲು ಸಾಧ್ಯವಿಲ್ಲ’ ಎಂದು ಸಂಭ್ರಮದಿಂದ ಹೇಳುತ್ತಾರೆ.

‘ನಟನೆಯ ತರಬೇತಿ ಇರುವುದರಿಂದ ಕ್ಯಾಮೆರಾ ಎದುರಿಸುವುದು, ನಟಿಸುವುದು ಕಷ್ಟವಾಗಲಿಲ್ಲ. ಆದರೆ ನನ್ನದು ಉತ್ತರಕರ್ನಾಟಕದ ಭಾಷೆಯಾದ ಕಾರಣ ಕೊಂಚ ಭಾಷೆಯ ತೊಡಕಾಗಿತ್ತು. ಈಗ ಎಲ್ಲವೂ ನಿಧಾನಕ್ಕೆ ಸುಧಾರಿಸುತ್ತಿದೆ’ ಎನ್ನುತ್ತಾರೆ ಸೂರಜ್‌.

ನಟಿಸುವುದು ಮುಖ್ಯ

‘ಸಿನಿಮಾ ಇರಲಿ ಅಥವಾ ಧಾರಾವಾಹಿ ಇರಲಿ, ಹೀರೊ ಆಗಲಿ ಅಥವಾ ವಿಲನ್ ಆಗಲಿ ನಟಿಸುವುದು ಮುಖ್ಯ. ಜೊತೆಗೆ ಅವಕಾಶ ಸಿಗುವುದು ಕೂಡ ಅಷ್ಟೇ ಮುಖ್ಯ. ಸಿಕ್ಕಿರುವ ಪಾತ್ರಕ್ಕೆ ನ್ಯಾಯ ನೀಡುವ ಜೊತೆಗೆ ಕಲೆಗೆ ಬೆಲೆ ಕೊಡಬೇಕು’ ಎಂದು ಸೂರಜ್‌ ಮಾತು ಮುಗಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು