ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮತ್ತೆ ಮಾಯಾಮೃಗ’ದ ಬೆನ್ನತ್ತಿ

Last Updated 15 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

‘ಮತ್ತೆ ಮಾಯಾಮೃಗ’ ಧಾರಾವಾಹಿ ಸೆಟ್ಟೇರಿದೆ. ಹಳೆಯದು ಹೊನ್ನು ಎಂಬ ಮಾತು ಧಾರಾವಾಹಿ ಕ್ಷೇತ್ರದಲ್ಲೂ ನಿಜವೆನಿಸಿದೆ. ಆ ಹೊನ್ನಿನ ಜಿಂಕೆಯ ಬೆನ್ನಟ್ಟಿ ಮೂವರು ‘ಬೇಟೆ’ಗಾರರು ಹೊರಟಿದ್ದಾರೆ. ಟಿ.ಎನ್‌. ಸೀತಾರಾಂ, ಪಿ. ಶೇಷಾದ್ರಿ, ನಾಗೇಂದ್ರ ಷಾ. ಹಳೆಯ ಕಥೆಯ ಮುಂದುವರಿದ ಭಾಗಕ್ಕೆ ಬೇಡಿಕೆ ಬಂದದ್ದು ಹೇಗೆ? ಇದರಲ್ಲಿ ಹೊಸ ತಲೆಮಾರಿಗೆ ಏನು ಹೇಳಲಾಗುತ್ತಿದೆ ಎಂಬ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ ಟಿ.ಎನ್‌. ಸೀತಾರಾಂ. ಇದನ್ನು ಅವರ ಲಹರಿಯಲ್ಲೇ ಕೇಳೋಣ.

ವೀಕ್ಷಕರ ನಾಡಿ ಮಿಡಿತವನ್ನು ಗಮನಿಸಿದ್ದೇನೆ. ‘ಮಾಯಾಮೃಗ’ವನ್ನು ನಾವು ಯುಟ್ಯೂಬ್‌ನಲ್ಲಿ ಪ್ರಸಾರ ಮಾಡಿದಾಗ ಅದು ಅಪಾರ ವೀಕ್ಷಣೆಗೊಳಗಾಯಿತು ಮತ್ತು ಸಾಕಷ್ಟು ಅಭಿಪ್ರಾಯಗಳೂ ಬಂದವು. ಇದೇ ವೇಳೆ ಸಿರಿ ಕನ್ನಡ ವಾಹಿನಿಯವರು ಬಂದು ಒಂದು ಧಾರಾವಾಹಿ ಮಾಡಿಕೊಡುವಂತೆ ಕೇಳಿದರು. ನನ್ನಿಂದಾಗದು ಎಂದು ಹೇಳಿ ಕಳುಹಿಸಿದ್ದೆ. ಕೆಲ ಕಾಲ ಕಳೆದ ನಂತರ ಮತ್ತೆ ಬಂದರು. ಮಾಯಾಮೃಗವನ್ನೇ ಮತ್ತೆ ಮಾಡಬಹುದೇ ಎಂಬ ಚರ್ಚೆ ನಡೆಸಿದರು. ಕೊನೆಗೆ ನಿರ್ದೇಶಕ ಗೆಳೆಯರಾದ ಪಿ. ಶೇಷಾದ್ರಿ, ನಾಗೇಂದ್ರ ಷಾ ಜೊತೆಗೆ ಚರ್ಚಿಸಿದೆ. ನಾನಿದ್ದರೆ ಅವರೂ ಧೈರ್ಯ ಮಾಡುವುದಾಗಿ ಹೇಳಿದರು. ಹೀಗೆ ಪರಸ್ಪರರ ಮೇಲಿನ ಧೈರ್ಯದಿಂದ ಈ ಸಾಹಸಕ್ಕೆ ಮುಂದಾಗಿದ್ದೇವೆ. ಮೂವರೂ ಈ ಧಾರಾವಾಹಿಯನ್ನು ನಿರ್ವಹಿಸಿಕೊಂಡು ಹೋಗುತ್ತೇವೆ.

ಹೊಸ ತಲೆಮಾರಿಗೆ ಕಥೆ ಹೇಳಬೇಕಾದ ಸವಾಲು ಇದೆ. ನೋಡಿ, ಒಂದು ವರ್ಷದ ಬೆಳವಣಿಗೆಯಲ್ಲಿ ಸಮಾಜವು ತಂತ್ರಜ್ಞಾನದ ನೆಲೆಯಲ್ಲಿ ಮೂರು ವರ್ಷ ಮುಂದಕ್ಕೆ ಬೆಳೆದುಬಿಡುತ್ತದೆ. ಅದು ಬುದ್ಧಿಯ ವೇಗ. ಸಮಾಜದ ವೇಗವೂ ಅದಕ್ಕೆ ತಕ್ಕ ಹಾಗಿದೆ. ಆದರೆ, ಹೃದಯದ ವೇಗ ಇದೆಯಲ್ಲಾ ಅದು ಸ್ಥಿರವಾಗಿಯೇ ಇರುತ್ತದೆ. ಭಾವನೆಗೆ ತಕ್ಕಂತೆ ಸ್ಪಂದಿಸುತ್ತದೆ. ಇದು ಆಗಬೇಕಾದದ್ದು. ಶಿಥಿಲಗೊಳ್ಳುತ್ತಿರುವ ಸಂಬಂಧ, ತಾಂತ್ರಿಕ ಬೆಳವಣಿಗೆಯ ಕಾರಣಗಳಿಂದಾಗಿ ಸಂಬಂಧಗಳಲ್ಲಿ ಅಂತರ ಹೆಚ್ಚಿರುವುದು ಇತ್ಯಾದಿ ಅನೇಕ ಬದಲಾವಣೆಗಳನ್ನು ಕಾಣುತ್ತಲೇ ಇದ್ದೇವೆ. ಈ ಎಲ್ಲ ಧಾವಂತದ ನಡುವೆ ನಮ್ಮ ಬದುಕು ಸಹಜತೆಯಿಂದ ಹೇಗೆ ಕೂಡಿರಬೇಕು? ನೈತಿಕ ಪ್ರಜ್ಞೆ, ನೆಲೆಗಟ್ಟಿನಲ್ಲಿ ಬದುಕುವುದು ಹೇಗೆ ಇತ್ಯಾದಿಯನ್ನು ಹೊಸ ಆವೃತ್ತಿಯಲ್ಲಿ ಹೇಳಲು ಪ್ರಯತ್ನಿಸಿದ್ದೇವೆ.

ಹಳೆ ಮಾಯಾಮೃಗದ ಪಾತ್ರಗಳ ಮುಂದಿನ ತಲೆಮಾರು ಏನು ಮಾಡುತ್ತಿದೆ ಎಂಬುದನ್ನು ಇಲ್ಲಿ ತೋರಿಸಲು ಹೋಗಿದ್ದೇವೆ.

ನಮ್ಮ ಧಾರಾವಾಹಿಯಲ್ಲಿ ವೈಭವೀಕರಣ ಇಲ್ಲ. ಎಲ್ಲಿ ಹೇಗಿದೆಯೋ ಹಾಗೆಯೇ ತೋರಿಸುತ್ತೇವೆ. ಅದೂ ಸರಳವಾಗಿ. ಅದೇ ನಮ್ಮ ಧಾರಾವಾಹಿಯ ಪ್ಲಸ್‌ ಪಾಯಿಂಟ್‌. ಇಲ್ಲಿ ನಾನೂ ವಕೀಲನಾಗಿಯೇ ಇರುತ್ತೇನೆ. ಆದರೆ, ಬೇರೆ ಧಾರಾವಾಹಿಗಳಲ್ಲಿ ಕಾಣುವಂತೆ ಕೋರ್ಟು ಕೇಸುಗಳು ಅಷ್ಟಾಗಿ ಇರುವುದಿಲ್ಲ. ವಕೀಲನೊಬ್ಬನ ನೈತಿಕ ನೆಲೆಗಟ್ಟಿನ ಜವಾಬ್ದಾರಿಯನ್ನು ತೋರಿಸಿದ್ದೇನೆ.

ವೀಕ್ಷಕರ ಸ್ಪಂದನವನ್ನೂ ಗಮನಿಸುತ್ತೇನೆ. ಅದರ ಪ್ರಕಾರ ನಾನು ಮಾಡುತ್ತಿರುವುದು ಸರಿ ಇದೆಯೇ ಎಂದು ತರ್ಕಕ್ಕೆ ಒಳಪಡಿಸಿಕೊಳ್ಳುತ್ತೇನೆ. ಹೀಗೆ ವೀಕ್ಷಕರೊಂದಿಗೆ ಒಂದು ಅನುಸಂಧಾನ ಇದ್ದೇ ಇರುತ್ತದೆ ನೋಡಿ.

ವೀಕ್ಷಕರು ಅಂದು – ಇಂದು ಹಾಗೆಯೇ ಇದ್ದಾರೆ. ನಾವು ಒಂದು ಹೆಜ್ಜೆ ಇಡಬೇಕು ಅಷ್ಟೇ. ನಮ್ಮ ಹೆಜ್ಜೆಗಳು ಯಾವುದೇ ಮಾಧ್ಯಮದ ಮೂಲಕ ಅವರಿಗೆ ಸುಲಭವಾಗಿ ಸಿಗುವಂತಾಗಬೇಕು. ಏನು ಕೊಟ್ಟರೂ ಸ್ವೀಕರಿಸುತ್ತಾರೆ ಎಂಬ ಮನೋಭಾವವೇನೋ ಇರಬಹುದು. ಆದರೆ, ನಾವು ಕೊಡುವುದು ಒಳ್ಳೆಯದಷ್ಟೇ ಆಗಿರಬೇಕು ಎಂಬ ಖಚಿತತೆ ನಮ್ಮಲ್ಲಿರಬೇಕು. ಹಾಗಾಗಿ ಈ ಚೌಕಟ್ಟುಗಳನ್ನು ಹಾಕಿಕೊಂಡೇ ‘ಮತ್ತೆ ಮಾಯಾಮೃಗ’ ನಿಮ್ಮ ಮುಂದೆ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT