ಮಂಗಳವಾರ, ಫೆಬ್ರವರಿ 18, 2020
21 °C

ಮಿನುಗಲು ‘ಸೇವಂತಿ’ ಬಯಕೆ

ಕೆ.ಎಂ. ಸಂತೋಷ್‌ ಕುಮಾರ್‌ Updated:

ಅಕ್ಷರ ಗಾತ್ರ : | |

ಬಹುತೇಕ ನಟಿಯರು ನಾಯಕಿಯಾಗಿ ಮಿಂಚಲು ಕನಸು ಕಂಡರೆ ನಟಿ ಪಲ್ಲವಿಗೌಡ ಅವರ ಕನಸು ಕೊಂಚ ವಿಭಿನ್ನವಾಗಿದೆ. ಅವರಿಗೆ ಖಳನಾಯಕಿ ಪಾತ್ರಗಳೆಂದರೆ ತುಂಬಾ ಇಷ್ಟವಂತೆ.

ಕಿರುತೆರೆ ವೀಕ್ಷಕರಿಗೆ ‘ಸೇವಂತಿ’ ಚಿರಪರಿಚಿತೆ ಅಷ್ಟೇ ಅಲ್ಲ, ಅಚ್ಚುಮೆಚ್ಚು ಕೂಡ. ಉದಯ ಟಿ.ವಿಯಲ್ಲಿ ಈಗ ಸುಮಾರು 200 ಎಪಿಸೋಡ್‌ ಮುಗಿಸಿ ಮುನ್ನಡೆಯುತ್ತಿರುವ ‘ಸೇವಂತಿ’ ಧಾರಾವಾಹಿಯ ನಾಯಕಿ ಪಾತ್ರದ ಹೆಸರು ಸೇವಂತಿ. ಈ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಬೆಂಗಳೂರಿನ ಪಲ್ಲವಿಗೌಡ. ಸಾಕು ತಂದೆಯನ್ನು ಜೈಲಿನಿಂದ ಬಿಡುಗಡೆ ಮಾಡಿಸಲು ವಕೀಲನ ಜತೆಗೆ ಒಂದು ವರ್ಷದ ಅವಧಿಗೆ ಒಪ್ಪಂದದ ಮದುವೆ ಮಾಡಿಕೊಳ್ಳುವ ಸೇವಂತಿಯ ಪಾತ್ರಕ್ಕೆ ಚೆಂದುಳ್ಳಿ ಚೆಲುವೆ ಜೀವ–ಭಾವ ತುಂಬುತ್ತಿದ್ದಾರೆ.  

ಈಗಾಗಲೇ ತೆಲುಗು, ಮಲಯಾಳ ಭಾಷೆಯ ಧಾರಾವಾಹಿಗಳಲ್ಲೂ ಅಭಿನಯ ಚಾತುರ್ಯ ತೋರಿರುವ ಇವರು, ಹಿರಿತೆರೆಯಲ್ಲಿ ಬದುಕು ಗಟ್ಟಿ ಮಾಡಿಕೊಳ್ಳಲು ಕನಸುಗಳನ್ನು ಹೆಣೆಯುತ್ತಿದ್ದಾರೆ. ಪಲ್ಲವಿ ಈಗಾಗಲೇ ಮೂರು ಕನ್ನಡ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇವರು ನಟಿಸಿದ ಮೊದಲ ಚಿತ್ರ ‘ಪ್ರೇಮ ಗೀಮ ಜಾನೆ ದೋ’, ಎರಡನೇ ಚಿತ್ರ ‘ಕಿಡಿ’. ಇವರು ಮೊದಲ ಬಾರಿಗೆ ನಟಿಸುತ್ತಿರುವ ಕಾಮಿಡಿ ಚಿತ್ರ ‘ಕೊಡೆಮುರುಗ’ದ ಚಿತ್ರೀಕರಣ ನಡೆಯುತ್ತಿದೆ. ‘ಈ ಚಿತ್ರದಲ್ಲಿ ಮುರುಗ ನಾಯಕನಾಗಿ ನಟಿಸುತ್ತಿದ್ದು, ಕಥೆ ತುಂಬಾ ವಿಭಿನ್ನವಾಗಿದೆ. ಇದೊಂದು ಹಾಸ್ಯಮಯ ಕಥಾವಸ್ತು ಒಳಗೊಂಡ ಚಿತ್ರ. ಹಾಸ್ಯ ಚಿತ್ರದಲ್ಲಿ ಅಭಿನಯಿಸಲು ನನ್ನಿಂದ ಅಸಾಧ್ಯವೆಂದುಕೊಂಡಿದ್ದೆ. ಆದರೆ, ಒಳ್ಳೆಯಪ್ರಯತ್ನ ಮಾಡಿದ್ದೇನೆ. ತೆಲುಗಿನ ಚಿತ್ರವೊಂದರಲ್ಲಿ ನಟಿಸಿದ್ದು, ಅದು ಇನ್ನಷ್ಟೇ ತೆರೆಕಾಣಬೇಕಿದೆ’ ಎನ್ನುವ ಮಾತು ಸೇರಿಸಿದರು ಪಲ್ಲವಿ. 

ಇವರು ಖಳನಾಯಕಿಯಾಗಿ ಕಾಣಿಸಿಕೊಂಡಿರುವ ‘ನಮ್ ಗಣಿ ಬಿ.ಕಾಂ ಪಾಸ್‌’ ಇತ್ತೀಚೆಗೆ ತೆರೆಕಂಡಿದ್ದು, ಇವರ ಅಭಿನಯಕ್ಕೂ ಪ್ರೇಕ್ಷಕರಿಂದ ಸಾಕಷ್ಟು ಪ್ರಶಂಸೆಗಳು ಬಂದಿವೆಯಂತೆ. ನೆಗೆಟಿವ್‌ ಪಾತ್ರಗಳನ್ನು ಇಷ್ಟಪಡಲು ಕಾರಣ ಕೇಳಿದರೆ, ‘ನೆಗೆಟಿವ್‌ ಪಾತ್ರಗಳಲ್ಲಿ ಭಾವಾಭಿನಯಕ್ಕೆ ತುಂಬಾ ಅವಕಾಶಗಳಿರುತ್ತವೆ. ಅಂಥ ಪಾತ್ರಗಳಲ್ಲೇ ನಮ್ಮ ನಿಜವಾದ ಅಭಿನಯ ಪ್ರತಿಭೆ ತೋರಿಸಬಹುದು’ ಎನ್ನುವುದು ಅವರ ಸಮಜಾಯಿಷಿ.

ಇದನ್ನೂ ಓದಿ: ಗಣೇಶನಿಗಾಗಿ ಬದಲಾದ ಧಾರಾವಾಹಿ ಸಮಯ

ಬಣ್ಣದ ಬದುಕಿನ ನಂಟು ಬೆಳೆದ ಬಗ್ಗೆ ಮಾತು ಹೊರಳಿಸಿದ ಅವರು, ಅಡುಗೆ ಕಾರ್ಯಕ್ರಮದ ಮೂಲಕವೇ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟೆ. ನನಗೆ ಬಗೆಬಗೆಯ ಅಡುಗೆ ಮಾಡುವುದೆಂದರೆ ತುಂಬಾ ಇಷ್ಟ. ಈಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಸವಿರುಚಿ’ ಕಾರ್ಯಕ್ರಮದ ಮೂಲಕ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದೆ. ಅಡುಗೆ ಕಾರ್ಯಕ್ರಮದ ಎಪಿಸೋಡ್‌ ನೋಡಿ ಸುಂದರ್‌ಶ್ರೀ ಅವರು ನನಗೆ ಕರೆ ಮಾಡಿ, ನನ್ನಲ್ಲಿ ಅಭಿನಯ ಪ್ರತಿಭೆ ಇರುವುದನ್ನು ಗುರುತಿಸಿದರು. ನಂತರ ನನಗೆ ‘ಮನೆಯೊಂದು ಮೂರು ಬಾಗಿಲು’ ಧಾರಾವಾಹಿಯಲ್ಲಿ ನಟಿಸುವ ಅವಕಾಶವನ್ನು ಸಕ್ರೆಬೈಲು ಶ್ರೀನಿವಾಸ್‌ ನೀಡಿದರು. ಅದಾದ ನಂತರ ‘ಪರಿಣಯ’, ‘ಚಂದ್ರಚಕೋರಿ’ ಧಾರಾವಾಹಿಗಳಲ್ಲಿ ಅಭಿನಯಿಸಿದೆ. ‘ಗಾಳಿಪಟ’ ಧಾರಾವಾಹಿಯಲ್ಲಿ ನಿರ್ದೇಶಕ ರೇಣುಕಾ ಪ್ರಸಾದ್ ಅವರು ನನಗೆ ನಟನೆಯನ್ನು ಕಲಿಸಿದ ನಿಜವಾದ ಗುರು ಎಂದುಕೊಳ್ಳುತ್ತೇನೆ. ಹಾಗೆಯೇ ‘ಜೋಡಿಹಕ್ಕಿ’ ಧಾರಾವಾಹಿಯಲ್ಲಿ ಮೊದಲ ಬಾರಿಗೆ ನೆಗೆಟಿವ್‌ ಪಾತ್ರ ಮಾಡುವ ಅವಕಾಶವೂ ಸಿಕ್ಕಿತು. ನಂತರ ತೆಲುಗಿನ ‘ಪಸುಕು ಕುಂಕುಮ’ ಧಾರಾವಾಹಿಯಲ್ಲಿ ನಟಿಸಿದೆ. ಅದಂತೂ ಅಪಾರ ಯಶಸ್ಸು ಕಂಡಿತು. ನನಗೂ ಜನಪ್ರಿಯತೆ ತಂದುಕೊಟ್ಟಿತು. ಈ ಧಾರಾವಾಹಿಯಿಂದಲೇ ನಾಲ್ಕು ಬಾರಿ ಅತ್ಯುತ್ತಮ ನಾಯಕಿ ನಟಿ ಪ್ರಶಸ್ತಿಯೂ ಸಿಕ್ಕಿತು. ಕಳೆದ ವರ್ಷ ಮಲಯಾಳದ ‘ಅಲ್ಲಿ ಆ್ಯಂಬೆಲ್‌’ ಧಾರಾವಾಹಿಯಲ್ಲಿ ಟೀಚರ್‌ ಪಾತ್ರ ಮಾಡಿದೆ. ಇದು ‘ಜೋಡಿಹಕ್ಕಿ‘ ಧಾರಾವಾಹಿಯ ರೀಮೇಕ್‌. ಕನ್ನಡದಲ್ಲಿ ನೆಗೆಟಿವ್‌ ಪಾತ್ರ ಮಾಡಿದ್ದರೆ, ಮಲಯಾಳದಲ್ಲಿ ಪಾಸಿಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡೆ ಎಂದು ಪಲ್ಲವಿಗೌಡ ತಮ್ಮ ನಟನಾ ಬದುಕಿನ ಪಯಣದ ಬಗ್ಗೆ ಅರುಹಿದರು.

ಅಭಿಮಾನಿಗಳ ಪೈಕಿ ಕೆಲವರ ಬಗ್ಗೆ ತುಂಬಾ ಬೇಸರವಿದೆಯಂತೆ ಇವರಿಗೆ. ಇವರ ಹೆಸರು ಹೇಳಿಕೊಂಡು ಕೆಲವು ಅಭಿಮಾನಿಗಳು ಪಲ್ಲವಿಯವರ ಕುಟುಂಬ ಸಂಕಷ್ಟದಲ್ಲಿದೆ ಎಂದು ಹೈದರಾಬಾದ್‌ನಲ್ಲಿ ಹಣ ಸಂಗ್ರಹಿಸಿದ್ದರಂತೆ, ಆ ಬಗ್ಗೆ ಪೊಲೀಸ್‌ ದೂರು ಕೂಡ ನೀಡಿದ್ದರಂತೆ ಪಲ್ಲವಿ. ಇನ್ನು ಸಿಲಿಕಾನ್‌ ಸಿಟಿಯಲ್ಲೂ ಕೆಲವು ಅಭಿಮಾನಿಗಳು ‘ನಮಗೆ ಪಲ್ಲವಿಯವರ ವೈಯಕ್ತಿಕ ಪರಿಚಯವಿದೆ. ಅವರ ಬಳಿ ಆಟೋಗ್ರಾಫ್‌ ಕೊಡಿಸುತ್ತೇವೆ ಮತ್ತು ಅವರನ್ನು ಭೇಟಿ ಮಾಡಿಸುತ್ತೇವೆ’ ಎಂದು ನಂಬಿಸಿ ಕೆಲವರನ್ನು ವಂಚಿಸಿರುವುದು ಪಲ್ಲವಿಯರ ಗಮನಕ್ಕೂ ಬಂದಿದೆಯಂತೆ. ಇದೆಲ್ಲ ಅವರಿಗೆ ಬೇಸರ ಉಂಟು ಮಾಡಿದ್ದು, ಹೆಸರಿಗೆ ಮಸಿ ಬಳಿಯುವಂಥ ಅಭಿಮಾನಿಗಳು ಮಾತ್ರ ಬೇಡವೇ ಬೇಡ ಎನ್ನುತ್ತಾರೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಯಾವ ಸಂಕಷ್ಟವೂ ಇಲ್ಲ. ಹಾಗೇನಾದರೂ ಸಮಸ್ಯೆ ಇದ್ದರೆ ನೆರವು ನೀಡಿ ಎಂದು ಯಾರೂ ಸಹ ಅಭಿಮಾನಿಗಳ ಬಳಿ ಕೈಚಾಚುವುದಿಲ್ಲ, ಮಾಧ್ಯಮಗಳ ಎದುರು ನೋವು ತೋಡಿಕೊಳ್ಳುತ್ತಾರೆ. ಯಾವುದೇ ಕಲಾವಿದರು ಅಭಿಮಾನಿಗಳನ್ನು ಬಹಳ ಎತ್ತರದ ಸ್ಥಾನದಲ್ಲಿಟ್ಟು ನೋಡುತ್ತಾರೆ ಎನ್ನುವ ಪಲ್ಲವಿ, ‘ಅಭಿಮಾನಿಗಳೇ ದೇವರು’ ಎನ್ನುವ ಅಣ್ಣಾವ್ರ ಮಾತನ್ನು ನೆನಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು