‘ಕ್ಷಮಾ’ರೂಪಿ ಶ್ವೇತಾ

ಮಂಗಳವಾರ, ಮಾರ್ಚ್ 26, 2019
23 °C

‘ಕ್ಷಮಾ’ರೂಪಿ ಶ್ವೇತಾ

Published:
Updated:
Prajavani

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕ್ಷಮಾ’ ಧಾರಾವಾಹಿಯಲ್ಲಿ ವಯಸ್ಸಿಗೆ ಮೀರಿದ ಪಾತ್ರ ಮಾಡುತ್ತಿದ್ದಾರೆ ಶ್ವೇತಾ ರಾವ್.

ಎರಡು ಮಕ್ಕಳ ತಾಯಿಯ ಪಾತ್ರ ಪೋಷಣೆ ಮಾಡಿರುವ ಅವರು, ಈ ಹೊಸ ಸವಾಲನ್ನು ಸಂತಸದಿಂದಲೇ ಸ್ವೀಕರಿಸಿದ್ದಾರೆ. ‘ಗಂಡ ಬಿಟ್ಟು ಹೋದ ಗೃಹಿಣಿಯ ಪಾತ್ರಕ್ಕೆ ನಾನು ಬಣ್ಣ ಹಚ್ಚಿದ್ದೇನೆ. ಧಾರಾವಾಹಿ ಈ ಪಾತ್ರದ ಮೇಲೆಯೇ ನಿಂತಿದೆ. ವಯಸ್ಸಿಗೆ ಮೀರಿದ ಪಾತ್ರವನ್ನು ಮಾಡುವುದು ಸವಾಲೆನಿಸುತ್ತದೆ. ಆದರೆ, ನಾನೂ ಒಂದು ಮಗುವಿನ ತಾಯಿಯಾಗಿರುವುದರಿಂದ ಈ ಜವಾಬ್ದಾರಿಯನ್ನು ನಿರ್ವಹಿಸುವುದು ಕಷ್ಟವಾಗಿಲ್ಲ’ ಎಂದು ಹೇಳುತ್ತಾರೆ ಶ್ವೇತಾ.

‘ಸಿಂಗಲ್‌ ಪೇರೆಂಟ್‌’ ಆಗಿರುವ ನಾಯಕಿ ಕ್ಷಮಾಳ ಹೋರಾಟ, ಗಂಡ ಬಿಟ್ಟು ಹೋದಾಗ ಸಂಸಾರದ ಬಂಡಿ ಎಳೆಯಬೇಕಾದಾಗ ಅವಳಿಗೆ ಎದುರಾಗುವ ಸವಾಲುಗಳು, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅವಳು ಪಡುವ ಕಷ್ಟಗಳ ಎಳೆಯೊಂದಿಗೆ ಕಥೆ ಸಾಗುತ್ತದೆ. ಇದರ ಜೊತೆಗೆ, ಕ್ಷಮಾ ಜೀವನದ ‘ಫ್ಲ್ಯಾಷ್‌ಬ್ಯಾಕ್‌’ಗಳ ದೃಶ್ಯಗಳು ಧಾರಾವಾಹಿಗೆ ಒಂದು ಲವಲವಿಕೆಯನ್ನು ತಂದುಕೊಡಲಿವೆ. 

ಶ್ವೇತಾರ ತಾತ ರಂಗಭೂಮಿಯ ಹಿನ್ನೆಲೆಯವರಾಗಿದ್ದರಿಂದ ಅಭಿನಯ ಕಲೆ ಅವರಿಗೆ ರಕ್ತಗತವಾಗಿ ಬಂದಿದೆ. ತುಮಕೂರಿನ ಶ್ವೇತಾ ಈ ಮೊದಲು ‘ಪ್ರಿಯದರ್ಶಿನಿ’, ‘ಸಾಗರ ಸಂಗಮ’, ‘ಲವಲವಿಕೆ’ ಧಾರಾವಾಹಿಗಳಲ್ಲಿ ನಟಿಸಿ, ಪ್ರೇಕ್ಷಕರ ಮನ ಗೆದ್ದಿದ್ದಾರೆ. ಹಲವು ವಾಹಿನಿಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದ ಶ್ವೇತಾ ಒಂದೆರಡು ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ. 

‘15ರಿಂದ 20 ವರ್ಷ ವಯಸ್ಸಿನ ಮಕ್ಕಳ ತಾಯಿ ಪಾತ್ರ ಮಾಡಲು ಒಂದು ಮೆಚ್ಯೂರಿಟಿ ಬೇಕಾಗುತ್ತದೆ. ಧ್ವನಿ ಸ್ವಲ್ಪ ಗಡುಸು ಮಾಡಿಕೊಂಡು ಈ ಪಾತ್ರಕ್ಕೆ ಜೀವ ತುಂಬಿದ್ದೇನೆ. ಈವರೆಗೆ ಕೆಲವೇ ಕಂತುಗಳು ಪ್ರಸಾರವಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗಿದೆ. ನನ್ನ ಪಾತ್ರದ ವಸ್ತ್ರವಿನ್ಯಾಸ, ಲುಕ್‌ ಮಹಿಳೆಯರಿಗೆ ಇಷ್ಟವಾಗಿದೆ’ ಎಂದು ಕಣ್ಣರಳಿಸುತ್ತಾರೆ ಶ್ವೇತಾ.

‘ಈ ಕಾಲದ ಮಧ್ಯವಯಸ್ಸಿನ ಮಹಿಳೆ ಎದುರಿಸುವ ಸವಾಲುಗಳಿಗೆ ಸ್ಪಂದಿಸುವ ಪಾತ್ರಕ್ಕೆ ಜೀವ ತುಂಬುತ್ತಿರುವುದು ಸಂತಸ ತಂದಿದೆ. ಸಿನಿಮಾಗಳಲ್ಲಿ ಕೂಡ ಇಂತಹ ತಾಯಿ ಪಾತ್ರ ಸಿಕ್ಕರೂ ನಾನು ನಿಸ್ಸಂಕೋಚವಾಗಿ ಮಾಡುತ್ತೇನೆ. ಯಾವುದೇ ಪಾತ್ರವಾದರೂ ಕಲಾವಿದರಿಗೆ ಒಂದೇ ಎಂಬ ಭಾವನೆ ನನ್ನದು. ಆದರೆ, ಎಕ್ಸ್‌ಪೋಸ್‌ ಬಯಸುವ ಪಾತ್ರಗಳನ್ನು ನಾನು ಇಷ್ಟಪಡುವುದಿಲ್ಲ’ ಎಂದು ಅವರು ಕಡ್ಡಿ ತುಂಡು ಮಾಡಿದಂತೆ ಹೇಳುತ್ತಾರೆ.

‘ನಾನು ಸಿನಿಮಾ ಅಥವಾ ಕಿರುತೆರೆ ಪ್ರವೇಶಿಸುವುದು ತಂದೆಗೆ ಇಷ್ಟವಿರಲಿಲ್ಲ. ಆದರೆ, ಈಗ ಈ ಕ್ಷೇತ್ರದಲ್ಲಿ ನನ್ನ ಬೆಳವಣಿಗೆ ಕಂಡು ತಂದೆಗೆ ಸಂತಸವಾಗಿದೆ. ‘ಕ್ಷಮಾ’ ಪಾತ್ರ ಅವರಿಗೆ ಇಷ್ಟವಾಗಿದೆ. ಪತಿಯೂ ಸಂಪೂರ್ಣ ಸಹಕಾರ ನೀಡುತ್ತಾರೆ’ ಎಂದು ಶ್ವೇತಾ ಹೇಳಿದರು. 

ಹಲವು ಯಶಸ್ವಿ ಧಾರಾ–ವಾಹಿಗಳನ್ನು ನಿರ್ದೇಶಿಸಿರುವ ಭಾರತೀಶ್ ‘ಕ್ಷಮಾ’ಗೆ ಆ್ಯಕ್ಷನ್‌–ಕಟ್‌ ಹೇಳಿದ್ದಾರೆ. ‘ಮೀಡಿಯಾ ಹೌಸ್‌’ ಸಂಸ್ಥೆ ಈ ಧಾರಾವಾಹಿ ನಿರ್ಮಾಣ ಮಾಡಿದೆ.  ವಿಶ್ವಾಸ್ ಭಾರದ್ವಾಜ್, ಮಾಲತಿ ಮೈಸೂರು ಸೇರಿದಂತೆ ಹಲವು ಕಲಾವಿದರು ಈ ಧಾರಾವಾಹಿಗೆ ಬಣ್ಣ ಹಚ್ಚಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8ಕ್ಕೆ ಇದು ಪ್ರಸಾರವಾಗುತ್ತಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !