ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಣೆ ಇದ್ದರೆ ಯಾವ ಪಾತ್ರ ಆದರೇನು?

Last Updated 25 ಏಪ್ರಿಲ್ 2019, 12:53 IST
ಅಕ್ಷರ ಗಾತ್ರ

ಝೀ ಕನ್ನಡದ ‘ಉಘೇ ಉಘೇ ಮಾದೇಶ್ವರ’ದ ಓಜಯ್ಯ ಆಗಿ ಸಂಗೀತ ನಿರ್ದೇಶಕನಾಗೇಂದ್ರ ಪ್ರಸಾದ್‌ ಮಿಂಚುತ್ತಿದ್ದಾರೆ. ಈ ಬಗ್ಗೆ ಅವರು ಹೇಳುವುದೇನು? ಅವರ ಮಾತುಗಳಲ್ಲೇ ಕೇಳಿ

ಪಾಸಿಟಿವ್‌ ಅಲೆಯನ್ನು ಸಂಗೀತದಲ್ಲಿ ಹೊರಹೊಮ್ಮಿಸುತ್ತಿದ್ದ ನಿಮಗೆ ನೆಗೆಟಿವ್‌ ಪಾತ್ರಕ್ಕೆ ಅವಕಾಶ ಬಂದಾಗ ಹೇಗೆನಿಸಿತು?

ಮೂಲತಃ ನಾನು ರಂಗಭೂಮಿ ಹಿನ್ನೆಲೆಯಿಂದ ಬೆಳೆದಿರುವವನು. ಪಾತ್ರ ನಿರ್ವಹಣೆ ಇದೇ ಹೊಸತಲ್ಲ. ಆಗಾಗ ಸ್ನೇಹಿತರ ಒತ್ತಾಯಕ್ಕೆ ಮಾತ್ರ ಮಾಡಿದ್ದುಂಟು. ಈ ಓಜಯ್ಯನ ಪಾತ್ರ ಕೂಡ ಹಾಗೆಯೇ ಒಂದು. ಮೊದಲಿಂದಲೂ ನನಗೆ ಪಾತ್ರದ ಪೋಷಣೆ ಮುಖ್ಯ ಅನ್ನಿಸಿದೆಯೇ ಹೊರತು ಪಾತ್ರ ಅಲ್ಲ. ಪಾತ್ರಗಳನ್ನು ಅವುಗಳ ಇಮೇಜ್‌ಗಳಿಂದ ಆಚೆಯೇ ಯೋಚಿಸುತ್ತೇನೆ. ಇವತ್ತು ಖಳನಾಯಕನ ಮಾಡಿರಬಹುದು. ನಾಳೆ ನಾಯಕನಾಗಿ ಮತ್ತೊಂದು ಪಾತ್ರವನ್ನೇ ಮಾಡಬಹುದು.

ನಾನು ಮಂಡ್ಯ ಜಿಲ್ಲೆಯವನು ಈ ಪ್ರದೇಶದಲ್ಲಿ ‘ಮಹಾದೇಶ್ವರ’ ಖಂಡಕಾವ್ಯ ತುಂಬ ಜನಪ್ರಿಯ. ಈ ಸೀಮೆಯಲ್ಲಿ ಬೆಳೆದ ನನಗೆ ಕಾವ್ಯ ಇಷ್ಟ. ಅದನ್ನು ತುಂಬ ಸಾರಿ ಓದಿದ್ದೇನೆ, ಕೇಳಿದ್ದೇನೆ. ಭಕ್ತಿ ಚಳವಳಿಯನ್ನು ಹುಟ್ಟು ಹಾಕಿದ ಜನಪದ ಕಾವ್ಯವಿದು. ಜನಪದರ ಭಕ್ತಿಯನ್ನು ಜಾನಪದೀಯವಾಗಿ ಹಿಡಿದಿಟ್ಟಿರುವ ಕಥೆ. ಅಂತಹ ಮಹಾಕಾವ್ಯದಲ್ಲಿ ಒಂದು ಪಾತ್ರವನ್ನು ಮಾಡುತ್ತಿದ್ದೇನೆ ಅಷ್ಟೆ. ಅದರಲ್ಲಿ ಯಾವ ಪಾತ್ರ ಆದರೇನು? ಕಥೆಯಲ್ಲಿ ಪಾತ್ರಕ್ಕೆ ಒಳ್ಳೆಯ ಪೋಷಣೆ ಸಿಗಬೇಕು ಅಷ್ಟೇ.

ಮಹಾದೇಶ್ವರ ಮಹಾಕಾವ್ಯ ಎಲ್ಲ ಕಾಲಕ್ಕೂ ಆಕರ್ಷಣೆ ಹುಟ್ಟಿಸುವ ವಿಶೇಷ ಏನು ಅಂತ ನಿಮಗೆ ಅನ್ನಿಸುತ್ತೆ?

ಅದಕ್ಕೆ ಮೂಲ ಕಾರಣ ಕಾವ್ಯದಲ್ಲಿ ಅಡಗಿರುವ ಧ್ವನಿ. ಅದು ತಳ ಸಮುದಾಯದ ನಂಬಿಕೆ– ಶ್ರದ್ಧೆಯನ್ನು ಪ್ರತಿನಿಧಿಸುತ್ತದೆ. ಜನಪದರು ಆ ನಂಬಿಕೆಗಳಿಗೆ ಸಂಗೀತ ಮತ್ತು ಸಾಹಿತ್ಯದ ಲಯದಲ್ಲಿ ಕಾವ್ಯವನ್ನು ಕಟ್ಟಿಕೊಟ್ಟಿದ್ದಾರೆ. ಹಾಗಾಗಿ ಅದು ಜನನುಡಿಯಾಗಿ ಜನರ ನಡುವೆ ಉಸಿರಾಗಿರುತ್ತದೆ. ನಮ್ಮ ಪ್ರಾಂತ್ಯದ ಸಾಮಾನ್ಯರ ಬಾಯಲ್ಲೂ ಅದು ಹರಿದಾಡುತ್ತದೆ. ಅದಕ್ಕೆ ಅದರದೇ ಆದ ಸಂಗೀತ, ಲಯ, ಭಕ್ತಿ ಮೇಳೈಸಿದೆ ಎಂದು ನನಗೆ ಅನ್ನಿಸುತ್ತದೆ. ಉತ್ತರ ಕರ್ನಾಟದ ಕಡೆ ಸೌದತ್ತಿ ಎಲ್ಲಮ್ಮ, ಮೈಲಾರಲಿಂಗ ಸಂಬಂಧಿ ಸಾಹಿತ್ಯ ಸೇರಿದಂತೆ ಗೀಗೀಪದಗಳು, ಡೊಳ್ಳುಪದಗಳು ಕೂಡ ಜನಮಾನಸದಲ್ಲಿ ಉಳಿಯುವ ಸಾಹಿತ್ಯವೇ. ಆದರೆ ಅವು ಖಂಡಕಾವ್ಯದ ಸ್ವರೂಪ ಪಡೆದಿಲ್ಲ. ಖಂಡಕಾವ್ಯವಾಗಿ ಮಾದೇಶ್ವರ ತುಂಬ ಗಮನ ಸೆಳೆಯುವುತ್ತದೆ.

ಕಥೆಯಲ್ಲಿ ದುಷ್ಟನ ನಿವಾರಣೆಗೆ ಪವಾಡ ಅಗತ್ಯ ಎಂದು ಅನ್ನಿಸುತ್ತಾ?

ಕನ್ನಡದಲ್ಲಿ ಮಾತ್ರವಲ್ಲ, ದೇಶದ ಗಡಿರೇಖೆ ದಾಟಿ ನೋಡಿದರೂ ಪ್ರಪಂಚದ ಜನಪದ ಸಾಹಿತ್ಯದಲ್ಲೂ ಅದನ್ನು ನಾವು ಕಾಣಬಹುದು. ಧರ್ಮ– ಅಧರ್ಮ, ಸತ್ಯ– ಸುಳ್ಳು, ನ್ಯಾಯ– ಅನ್ಯಾಯ ಈ ಎರಡು ವೈರುಧ್ಯ ನೆಲೆಯನ್ನು ಇಟ್ಟುಕೊಂಡು ಆ ಎರಡು ನೆಲೆಗಳ ಸಂಘರ್ಷವನ್ನೇ ಸಾಹಿತ್ಯ ಮಾಡುತ್ತಾರೆ. ಇಂತಹ ಆಶಯದ ಇದೇ ಮೂಲ ದ್ರವ್ಯವನ್ನು ಇಟ್ಟುಕೊಂಡು ನಾಟಕ– ಸಿನಿಮಾ ಮಾಡುವುದು. ಇದು ಪ್ರಪಂಚದ ಎಲ್ಲ ಕಡೆ ಎಲ್ಲಾ ಸಂದರ್ಭದಲ್ಲಿ ನಡೆದುಕೊಂಡು ಬಂದಿದೆ. ಗ್ರೀಕ್‌ ಪ್ರಾಚೀನ ಕಾವ್ಯವನ್ನೇ ತೆಗೆದುಕೊಳ್ಳಿ, ನಮ್ಮ ಕೃಷ್ಣಪಾರಿಜಾತವನ್ನೇ ತೆಗೆದುಕೊಳ್ಳಿ, ಇಲ್ಲವೇ ಯಾವುದೇ ಪವಾಡಪುರುಷರ ಕತೆಯನ್ನೇ ತೆಗೆದುಕೊಂಡರೂ ಅವು ಇದೇ ನೆಲೆಯಲ್ಲಿ ಇರುತ್ತವೆ. ತಪ್ಪು– ಸರಿಗಳ ಸಂಘರ್ಷವೇ ಅದರ ಭೂಮಿಕೆಯಾಗುತ್ತದೆ. ಕೊನೆಗೂ ‘ಸರಿ’ ಎನ್ನುವುದೇ ಗೆಲ್ಲುತ್ತದೆ. ಅದೇ ನೀತಿಯನ್ನು ಕಥೆ ನಿರೂಪಿಸುತ್ತವೆ. ಇದು ಕೂಡ ಅಂತಹ ಕಾವ್ಯ, ಇದರಲ್ಲಿ ಪವಾಡ ಸಹಜವಾಗಿ ಬರುತ್ತದೆ.

ಟೀವಿ ವೀಕ್ಷಕರಾಗಿ ನಿಮ್ಮ ಅನುಭವ ಹೇಳಿ...

ಎಲ್ಲವೂ ಕಲೆಯೇ ಹಿರಿತೆರೆ– ಕಿರುತೆರೆ ಎನ್ನುವ ಭೇದ ಇಲ್ಲ. ಅಭಿನಯದ ವಿಷಯಕ್ಕೆ ಬಂದರೆ ಎರಡೂ ಒಂದೇ. ಅವುಗಳಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲ. ಸೃಜನಶೀಲವಾಗಿ ನೋಡುವಾಗ ಸಿನಿಮಾಗಿಂತ ಟೀವಿಗೆ ಹೆಚ್ಚಿನ ಸಾಧ್ಯತೆ ಇದೆ ಎಂದು ನನಗೆ ಅನ್ನಿಸಿದೆ. ಟೀವಿಯಲ್ಲಿ ಪ್ರಯೋಗಗಳಿಗೆ ಅವಕಾಶ ಹೆಚ್ಚಿದೆ. ಹೇಳುವುದನ್ನು ಸಾವಕಾಶವಾಗಿ ನಿಧಾನಕ್ಕೆ ಹೇಳಬಹುದು. ಅಂತಹ ಅವಕಾಶ ಸಿನಿಮಾದಲ್ಲಿ ಕಡಿಮೆ. ಇದೊಂದನ್ನು ಬಿಟ್ಟರೆ, ಹೆಚ್ಚಿನ ಭಿನ್ನತೆ ಇಲ್ಲ.

ನಿಮ್ಮನ್ನು ಖಾಸಗಿಯಾಗಿ ಪರಿಚಯ ಮಾಡಬಹುದಾ?

ಯಮುನಾ ಪ್ರಸಾದ್‌ ಪತ್ನಿ, ಉತ್ಸವ್‌ ಪ್ರಸಾದ್‌ ಮಗ, ರಿಯಾ ಅರ್ಚನಾ ಮಗಳು, ಒಂದು ಪುಟ್ಟಮನೆ, ಒಂದು ಪುಟ್ಟ ಸ್ಟುಡಿಯೊ ಮಾಡಿಕೊಂಡಿದ್ದೇನೆ. ಕವಿತೆ ಬರೆಯುತ್ತಿದ್ದೆ, ನಾಟಕ ಆಡುತ್ತಾ ಬೆಳೆಯುತ್ತಿದ್ದವನಿಗೆ ಕೆವಿ ಜಯರಾಂ ಸಿನಿಮಾಕ್ಕೆ ಕರೆತಂದರು. ಆ ರೀತಿಯಲ್ಲಿ ‘ಸುಧಾ’ ವಾರಪತ್ರಿಕೆ ಕೂಡ ನನ್ನ ಗುರು. ಆಗ ಅದರಲ್ಲಿ ಕವಿತೆಗಳು ಪ್ರಕಟವಾಗುತ್ತಿದ್ದವು. 1991 ಅಥವಾ 92ರಲ್ಲಿ ‘ಸುಧಾ’ದಲ್ಲಿ ನನ್ನದೂ ಒಂದು ಕವಿತೆ ಬಂದಿತ್ತು. ಅದು ನನ್ನನ್ನು ಸಿನಿಮಾ ಗೀತೆಯತ್ತ ಕರೆದುಕೊಂಡು ಬಂದಿದೆ.

ನನ್ನ ಮೊದಲ ಸಿನಿಮಾ ‘ಗಾಜಿನ ಮನೆ’ ಇದುವರೆಗೆ ಸುಮಾರು 3000 ಹಾಡುಗಳನ್ನು ಬರೆದಿದ್ದೇನೆ. ಐದು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದೇನೆ. ಐದಾರು ಸಿನಿಮಾಗಳಿಗೆ ಸಂಗೀತ ಸಂಯೋಜನೆ, 25ರಿಂದ 30 ಸಿನಿಮಾಗಳಿಗೆ ಸಂಭಾಷಣೆಯನ್ನು ರಚಿಸಿದ್ದೇನೆ ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT