ಶನಿವಾರ, ಆಗಸ್ಟ್ 15, 2020
21 °C

ಮನೆಯ ಬೆಂಬಲ ಇದ್ದರೆ ಬೇಕಾದ್ದು ಮಾಡಬಹುದು

ರಾಘವೇಂದ್ರ ಕೆ. Updated:

ಅಕ್ಷರ ಗಾತ್ರ : | |

Prajavani

ರಕ್ಷಾಗೂ– ಕಾವ್ಯಗೂ ಏನಾದರೂ ಸಾಮ್ಯತೆ ಇದೆಯಾ?

‌ಎರಡೂ ಬೇರೆಯ ವ್ಯಕ್ತಿತ್ವಗಳು ಹೋಲಿಕೆ ಒಂದಿಷ್ಟು ಬಂದರೂ ವ್ಯತ್ಯಾಸವೇ ಹೆಚ್ಚಿದೆ. ರಕ್ಷಾ ವಕೀಲೆ, ಮೃದು ಸ್ವಭಾವದ ಹುಡುಗಿ. ಅಷ್ಟೇ  ದಿಟ್ಟತನ ಆಕೆಗೆ ಇದೆ. ರಕ್ಷಾ ಕೂಡ ಸ್ವಲ್ಪ ಹಾಗೆಯೇ ಇದ್ದರೂ ಮುಗ್ಧತೆ ಇದೆ. ಕಾವ್ಯಾ ಹಾಗಲ್ಲ ನ್ಯಾಯ–ನೀತಿ ವಿಷಯ ಬಂದಾಗ ತುಂಬಾ ದೃಢವಾಗಿ ನ್ಯಾಯದ ಪರ ನಿಲ್ಲುತ್ತಾಳೆ. ಅನ್ಯಾಯದ ವಿರುದ್ಧ ಹೋರಾಡುತ್ತಾಳೆ. ತುಂಬಾ ವೃತ್ತಿಪರವಾಗಿ ಯೋಚಿಸುತ್ತಾಳೆ. ಕುಟುಂಬದ ವಿಷಯದಲ್ಲಿ ಮಾತ್ರ ಸಿಕ್ಕಾಪಟ್ಟೆ ಮೃದು. ಕುಟುಂಬಕ್ಕಾಗಿ ಎಂತಹ ತ್ಯಾಗವನ್ನು ಮಾಡುಲು ಆಕೆ ಸಿದ್ಧ. ವೃತ್ತಿ ವಿಷಯಕ್ಕೆ ಬಂದಾಗ ತುಂಬಾ ಖಡಕ್‌, ಹುಡುಗಿ ಅದು ಆಕೆಯ ಮತ್ತೊಂದು ಮುಖವನ್ನು ತೋರಿಸುತ್ತದೆ. 

ಅಭಿನಯದ ಹಾದಿ ಆರಂಭವಾಗಿದ್ದು ಹೇಗೆ?

ನಾನು ಮಾಡೆಲಿಂಗ್‌ ಮಾಡ್ತಾಯಿದ್ದೆ. ಆಗ ನಮ್ಮ ಡಿಸೈನರ್‌ ರಾಕೇಶ್‌ ಶಟ್ಟಿ ಆ್ಯಕ್ಟಿಂಗ್‌ ಮಾಡಬಹುದಲ್ಲ ಎಂದು ಒಮ್ಮೆ ಸಲಹೆಯನ್ನು ನೀಡಿದರು. ಹೌದಲ್ಲ. ಪ್ರಯತ್ನ ಮಾಡಬಹುದಲ್ಲ ಎಂದು ಯೋಚಿಸಿ ಬಣ್ಣಕ್ಕೆ ಮುಖ ನೀಡಿದೆ. ನನ್ನ ವೃತ್ತಿ ಆರಂಭ ಆಗಿದ್ದೇ ಸುವರ್ಣದ ‘ಪಲ್ಲವಿ ಅನು ಪಲ್ಲವಿ’ಯ ಮೂಲಕ. ಇದಾದ ಮೇಲೆ ಇದೇ ಟೀವಿಯಲ್ಲಿ ಸುಮಾರು ಐದಾರು ವರ್ಷ ಕೆಲಸ ಮಾಡಿದೆ. ಆಮೇಲೆ ತಮಿಳು ಟೀವಿ ಧಾರಾವಾಹಿಗೆ ಹೋದೆ. ಎರಡೂವರೆ ವರ್ಷದ ನಂತರ ಪುನಃ ಸ್ಟಾರ್‌ ಸುವರ್ಣಕ್ಕೆ ಮರುಪ್ರವೇಶ ಮಾಡುತ್ತಿದ್ದೇನೆ. ಇದೊಂದು ರೀತಿಯಲ್ಲಿ ಖುಷಿಯನ್ನು ಉಂಟು ಮಾಡಿದೆ.

ಎಂತಹ ಪಾತ್ರಗಳು ನಿಮಗೆ ಇಷ್ಟ? 

ಅಳುಮುಂಜಿಗಿಂತ ಸವಾಲಿನ ಪಾತ್ರ ನನಗೆ ಇಷ್ಟ. ಕಥೆ ಕೇವಲ ಕಿಚನ್‌ ಡ್ರಾಮಕ್ಕೆ ಸೀಮಿತ ಆಗಬಾರದು ಎನ್ನುವುದು ನನ್ನ ಬಯಕೆ.  ಕಾವ್ಯ ಪಾತ್ರ ಸಿಕ್ಕಾಪಟ್ಟೆ ಚಾಲೆಂಜಿಂಗ್‌ ಇದೆ ಅಂತ ನನಗೆ ಅನ್ನಿಸಿದೆ. ಈ ಪಾತ್ರವನ್ನು ಮೆಚ್ಚಿ ದೀರ್ಘಕಾಲದ ನಂತರ ಕನ್ನಡದಲ್ಲಿ ಅಭಿನಯಿಸುತ್ತಿದ್ದೇನೆ. ಇದುವರೆಗೂ ಅಡ್ವೋಕೆಟ್‌ ಪಾತ್ರವನ್ನು ನಾನು ಮಾಡಿಲ್ಲ. ಪಾತ್ರದ ಜೊತೆಗೆ ಹೊಸ ಹೊಸ ಸಂಗತಿಯನ್ನು ಕಲಿಯತ್ತೇವೆ ಅದಕ್ಕೆ ಇಲ್ಲಿ ತುಂಬ ಅವಕಾಶ ಇದೆ. 

ಇಲ್ಲಿನ ಕಥಾನಾಯಕ ತುಂಬಾ ಶ್ರೀಮಂತ ಅವನ ಜೀವನ ಶೈಲಿ ಭಿನ್ನ. ಕಲಾವಿದರ ಮನೆತನದವಳು ಕಾವ್ಯಾ. ಇವಳ ತಾಯಿ ಭರತನಾಟ್ಯ ಪ್ರವೀಣೆ. ಜೀವ ದೊಡ್ಡ ನಿರ್ಮಾಪಕ, ಆಗರ್ಭ ಶ್ರೀಮಂತ. ಕಾವ್ಯಾಗೂ– ಜೀವಗೂ ಆಗುವುದಿಲ್ಲ, ಇವರ ನಡುವೆ ಅಂತಸ್ತು– ಗುಣ ಎಲ್ಲದರಲ್ಲೂ ವೈರುಧ್ಯ. ಇಬ್ಬರ ನಡುವೆ ತುಂಬ ಸಂಘರ್ಷ ಇರುತ್ತೆ. ಆದರೂ ಅವರಿಬ್ಬರೂ ಹೇಗೆ ಒಂದಾಗುತ್ತಾರೆ ಎನ್ನುವುದೇ ಕಥೆಯ ಸ್ವಾರಸ್ಯ.

ಚಾಲೆಂಜಿಂಗ್‌ ಅನ್ನುವುದನ್ನು ಹೇಗೆ ಪರಿಗಣಿಸುತ್ತೀರಿ?

ಕಲಾವಿದರಿಗೆ ಒಂದು ದೊಡ್ಡ ಭಾಗ್ಯ ಎಂದರೆ ವಿವಿಧ ವೃತ್ತಿ, ಧರ್ಮ, ಸಾಮಾಜಿಕ ಸ್ಥಿತಿಗತಿಗಳನ್ನು ಪ್ರತಿನಿಧಿಸುತ್ತಾರೆ. ಇದು ಎಲ್ಲದೂ ಆಗಬೇಕು. ನನಗೂ ವೈದ್ಯೆ ಆಗಬೇಕು ಎನ್ನುವ ಕನಸಿತ್ತು ಓದಿಲ್ಲ, ಆದರೆ ಪಾತ್ರದಲ್ಲಿ ಅದಾಗುತ್ತೇನೆ. ಚಾಲೆಂಜಿಂಗ್‌ ಎಂದರೆ ಹೆಚ್ಚು ಪರ್ಫಾರ್ಮಿಂಗ್‌ ಆಗಬೇಕು. ಮೊದಲೆಲ್ಲಾ ಧಾರವಾಹಿಗಳು ಶೋಷಣೆಯ ಮುಖವನ್ನು ಮಾತ್ರ ಬಿಂಬಿಸುತ್ತಿದ್ದವು. ಈಗ ಆ ಹಂತವನ್ನು ಮೀರಿದೆ, ಶೋಷಣೆಯನ್ನು ಪ್ರಶ್ನಿಸುವ ಮನೋಭಾವ ಬೆಳೆದಿದೆ. ಶೋಷಣೆಯ ವಿರುದ್ಧ ಧ್ವನಿ ಎತ್ತುವ– ಅಭಿನಯಕ್ಕೆ ಹೆಚ್ಚು ಅವಕಾಶ ಇರಬೇಕು. ಇಲ್ಲಿನ ಕಾವ್ಯಾ ಕೂಡ ಸಂಕೀರ್ಣ ಪಾತ್ರ. ಇಲ್ಲಿ ಕುಟುಂಬ– ಕೋರ್ಟ್‌ ಹೀಗೆ ಭಿನ್ನ ನೆಲೆಯಲ್ಲಿ ಆಕೆ ಅನಾವರಣ ಆಗುತ್ತಾಳೆ.

ಮಾಡೆಲಿಂಗ್‌– ಅಭಿನಯದ ತಯಾರಿ ಹೇಗಿರಬೇಕು?

ಮಾಡೆಲಿಂಗ್‌ ನನ್ನ ಪ್ರಕಾರ ತುಂಬ ಸುಲಭ. ಮೂರು ತಿಂಗಳು ತರಬೇತಿ ಪಡೆದರೆ ಯರಾದರೂ ಮಾಡಬಹುದು. ಅಭಿನಯ ಹಾಗಲ್ಲ ಜೀವನ ಪರ್ಯಂತ ಕಲಿಕೆಯಿಂದ ಸಾಗುತ್ತದೆ. ಕಲಿಯಲು ಇದು ಹೇಳಿಕೊಡುವ ವಿದ್ಯೆಯೂ ಅಲ್ಲ, ನಿತ್ಯ ಕೆಲಸದಿಂದ ರೂಢಿಸಿಕೊಳ್ಳುವಂತಹದ್ದು. ಆರಂಭದಲ್ಲಿ ತುಂಬಾ ಜನ ನನಗೆ ಬೈದವರಿದ್ದಾರೆ. ಇಂತಹವರನ್ನು ಏತಕ್ಕೆ ಹಾಕಿಕೊಂಡಿದ್ದೀರಿ ಎಂದು ಹೀಗಳೆದವರೂ ಇದ್ದಾರೆ. ಇನ್ನೂ ಕೆಲವರು ಎಲ್ಲರೂ ಕಲಿತುಕೊಂಡು ಬಂದಿರುವುದಿಲ್ಲ. ಇಲ್ಲೇ ಕಲಿಯಬೇಕು ಎಂದು ಪ್ರೋತ್ಸಾಹಿಸಿದವರೂ ಇದ್ದಾರೆ. ಮೊದಲ ದಿನ ಚಿತ್ರೀಕರಣದ ಸಂದರ್ಭದಲ್ಲಿ ಇದೆಲ್ಲ ನನಗೆ ವರ್ಕೌಟ್‌ ಆಗಲ್ಲ ಮಾಡಿಲಿಂಗ್‌ ಮಾಡುವುದೇ ವಾಸಿ ಎಂದುಕೊಂಡಿದ್ದೆ. ಆದರೆ ಬಣ್ಣದ ಮೋಹ ನನ್ನನ್ನು ಬಿಡಲಿಲ್ಲ. ನನ್ನ ಕೈಯಲ್ಲಿ ಎಷ್ಟು ದಿನ ಸಾಧ್ಯವೋ ಅಷ್ಟು ದಿನ ನೋಡೋಣ ಎಂದು ಮುಂದುವರಿದೆ. ಅದು ಬಿಡುವು ಇಲ್ಲದಂತೆ ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ. 

ನಿಮ್ಮ ಜೀವನ ಹೇಗಿದೆ? ಸಮಯ ಹೇಗೆ ನೀಭಾಯಿಸುತ್ತಿದ್ದೀರಿ? 

ಈಗ ತಮಿಳಿನಲ್ಲಿಯೂ ಒಂದು ಧಾರಾವಾಹಿ ಮಾಡುತ್ತಿದ್ದರಿಂದ ಎರಡಕ್ಕೂ ಸಮಯ ನೀಡಬೇಕು. 15 ದಿನ ಚೆನ್ನೈಯಲ್ಲಿದ್ದರೆ 15 ದಿನ ಬೆಂಗಳೂರಿನಲ್ಲಿ ಇರುತ್ತೇನೆ. ಮೇ 7ಕ್ಕೆ  ಮದುವೆಯಾಗಿ ಒಂದು ವರ್ಷ ತುಂಬುತ್ತದೆ. ‍ಪತಿ ರಾಕೇಶ್‌ ತುಂಬ ಬೆಂಬಲಿಸುತ್ತಾರೆ. ಅಮ್ಮನ ಮನೆ, ಅತ್ತೆ ಮನೆಯನ್ನು ಹೇಗೆ ನಿರ್ವಹಿಸುತ್ತಿದ್ದೇನೆ ಎನ್ನುವುದೇ ಗೊತ್ತಾಗುತ್ತಿಲ್ಲ. ಈ ಧಾರಾವಾಹಿ ಸೋಮವಾರವಷ್ಟೆ ಪ್ರದರ್ಶನ ಆರಂಭ ಆಗುತ್ತಿದೆ. ಅದಕ್ಕಾಗಿ ಪ್ರಮೋಷನ್‌ ಕಾರ್ಯಕ್ರಮಗಳಿಗಾಗಿ ಸುತ್ತಾಡುತ್ತಿದ್ದೇನೆ, ಇವತ್ತು ರಾತ್ರಿ ಮನೆಗೆ ಹೋದೆ ಅಂದರೆ ಬೆಳಿಗ್ಗೆ ನಾನು ಹುಬ್ಬಳ್ಳಿಗೆ ಹೋಗುತ್ತೇನೆ ಎಂದರೆ ಅತ್ತೆ– ಮಾವ ನನಗೆ ಬೇಕಾಗುವ ವ್ಯವಸ್ಥೆ ಮಾಡುತ್ತಾರೆ. ಒಟ್ಟಾರೆ ನನ್ನ ಪಾಡಿಗೆ ನನ್ನನ್ನು ಬಿಟ್ಟಿದ್ದಾರೆ. ಈ ರೀತಿಯ ಬೆಂಬಲ ಸಿಕ್ಕರೆ ಬೇಕಾಗಿದ್ದನ್ನು ಸಾಧಿಸಬಹುದು ಎನ್ನುವುದು ನನ್ನ ಭಾವನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು