ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ರಿಕಾದ ಮಾತನಾಡುವ ಬೂದು ಬಣ್ಣದ ಗಿಳಿ

Last Updated 6 ಮಾರ್ಚ್ 2019, 13:33 IST
ಅಕ್ಷರ ಗಾತ್ರ

ಆಕರ್ಷಕ ದೇಹದ ಬಣ್ಣ, ಬುದ್ಧಿಶಕ್ತಿ, ಮಾತನಾಡುವ ಸಾಮರ್ಥ್ಯ ಹಾಗೂ ಚಿನ್ನಾಟವಾಡುವ ಸರಸ ಸ್ವಭಾವದಿಂದಾಗಿ ಗಿಳಿಯು ಮಾನವನಿಗೆ ಸದಾ ಮುದ್ದಿನ ಪಕ್ಷಿಯಾಗಿದೆ. ಈ ವಿಶಿಷ್ಟ ಸಾಮರ್ಥ್ಯವು ಗಿಳಿಗಳನ್ನು ಮಾನವನ ಅತಿ ಮುದ್ದಿನ ಮತ್ತು ಪ್ರಿಯವಾದ ಸ್ಥಾನ ನೀಡಿವೆ.ಕಾಗೆ, ರಾವೆನ್ ಮತ್ತು ಜೇ ಹಕ್ಕಿಗಳಂತೆ ಬುದ್ಧಿವಂತ ಪಕ್ಷಿ ಆಫ್ರಿಕಾದ ಬೂದು ಬಣ್ಣದ ಗಿಳಿ.

ಇದರ ವೈಜ್ಞಾನಿಕ ಹೆಸರು ಪಿಟ್ಟಾಕಸ್ ಎರಿಥಕಸ್ (Psittacus erithacus). ಇಂದಿನ ಪಕ್ಷಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಹೇಗಿರುತ್ತದೆ?
ಭಾರತದಲ್ಲಿ ಕಾಣಸಿಗುವ ಗಿಳಿಗಳು ಹಸಿರು ಬಣ್ಣದಲ್ಲಿರುತ್ತವೆ. ಆದರೆ ಆಫ್ರಿಕಾದಲ್ಲಿರುವ ಈ ಗಿಳಿ ಮಾತ್ರ ಬೂದು ಬಣ್ಣದಲ್ಲಿರುತ್ತದೆ. ಇದರಲ್ಲಿ ಈವರೆಗೆ ಎರಡು ತಳಿಗಳನ್ನು ಗುರುತಿಸಲಾಗಿದೆ. ಅವೆಂದರೆ ಕಾಂಗೊ ಆಫ್ರಿಕನ್ ಗ್ರೇ ಮತ್ತು ಟಿಮ್‌ನೆ ಆಫ್ರಿಕನ್ ಗ್ರೇ. ಇದರ ದೇಹವು ಬೂದು ಬಣ್ಣದ ಗರಿಗಳಿಂದ ಆವೃತವಾಗಿರುತ್ತದೆ. ಇದರ ರೆಕ್ಕೆಗಳೂ ಕಪ್ಪು ಮಿಶ್ರಿತ ಬೂದು ಬಣ್ಣದಲ್ಲಿ ಇರುತ್ತವೆ. ಬಾಲದ ಪುಕ್ಕಗಳು ಕೆಂಪು ಬಣ್ಣದಲ್ಲಿರುತ್ತವೆ. ಬಾಗಿದ ಕೊಕ್ಕು, ಹಳದಿ ಬಣ್ಣದ ಕಣ್ಣಾಲಿಗಳನ್ನು ಹೊಂದಿರುತ್ತದೆ.

ಎಲ್ಲೆಲ್ಲಿವೆ?
ಆಫ್ರಿಕಾ ದೇಶಗಳ ಅರಣ್ಯಗಳು, ಹುಲ್ಲುಗಾವಲು, ಕೃಷಿ ಭೂಮಿ ಪ್ರದೇಶಗಳಲ್ಲಿ ಇದರ ಸಂತತಿ ವಿಸ್ತರಿಸಿದೆ.

ವರ್ತನೆ ಮತ್ತು ಜೀವನಕ್ರಮ
ಸಾಮಾನ್ಯವಾಗಿ ಗಿಳಿಗಳು ಮಾನವ ಧ್ವನಿಯನ್ನು ಅನುಕರಿಸಬಲ್ಲವು. ಈ ಗಿಳಿ ಕೂಡಾ ಸಣ್ಣ ಪದ ಹಾಗೂ ಸರಳ ವಾಕ್ಯಗಳನ್ನು ನುಡಿಯಬಲ್ಲದು.ಇದು ಒಂಟಿಯಾಗಿ ಜೀವಿಸಲು ಇಷ್ಟಪಡುತ್ತದೆ. ಇತರೆ ಪಕ್ಷಿಗಳಿಗೆ ಹೋಲಿಸಿದರೆ ಇದರ ಜೀವಿತಾವಧಿ ಸುದೀರ್ಘ.ಗಿಳಿಗಳ ತಳಿಗಳಲ್ಲಿ ಅತಿ ಚಾಣಾಕ್ಷ ಪಕ್ಷಿ ಎಂದು ಇದನ್ನು ಪರಿಗಣಿಸಲಾಗಿದೆ.

ಮನುಷ್ಯರ ಮಾತುಗಳನ್ನು ಅರ್ಥಮಾಡಿಕೊಳ್ಳುವ, ಧ್ವನಿಯನ್ನು ಅನುಕರಿಸುವ ಸಾಮರ್ಥ್ಯವನ್ನು ಹೊಂದಿದೆ.ಕೆಲವು ಗಿಳಿಗಳು ವಸ್ತುಗಳನ್ನು ಗುರುತಿಸುವ, ವಿವರಿಸುವ ಹಾಗೂ ಎಣಿಸುವ ಸಾಮರ್ಥ್ಯವನ್ನೂ ಹೊಂದಿರುವುದು ವಿಶೇಷ. ಮುದ್ದಾದ ಸುಂದರವಾದ ಈ ಪಕ್ಷಿಗಳನ್ನು ಜನರು ಮನೆಗಳಲ್ಲಿ ಸಾಕಿಕೊಳ್ಳಲು ಹೆಚ್ಚು ಇಷ್ಟಪಡುತ್ತಾರೆ.

ಸಂತಾನೋತ್ಪತ್ತಿ
ಹೆಣ್ಣು ಗಿಳಿ ಒಮ್ಮೆಗೆ 2 ರಿಂದ 4 ಮೊಟ್ಟೆಗಳನ್ನು ಇಡುತ್ತದೆ. ಅವುಗಳಿಗೆ 12 ದಿನಗಳವರೆಗೆ ಕಾವು ಕೊಡುತ್ತದೆ. ಮರಿಗಳು 12 ರಿಂದ 14 ವಾರಗಳ ನಂತರ ಹಾರಾಡಲು ಶುರು ಮಾಡುತ್ತವೆ. ಮರಿಗಳು ವಯಸ್ಕ ಹಂತಕ್ಕೆ ಬರುವವರೆಗೆ ತಾಯಿಯ ಪೋಷಣೆಯಲ್ಲಿ ಬೆಳೆಯುತ್ತವೆ. ಮರಿಗಳು ಪ್ರೌಢಾವಸ್ಥೆ ತಲುಪಲು 4 ರಿಂದ 7 ವರ್ಷ ಬೇಕಾಗುತ್ತದೆ. ‌

ಗಿಳಿಗಳ ಮತ್ತು ಮಾನವನ ನಡುವಿನ ಸಂಬಂಧ ಸಂಕೀರ್ಣವಾದುದು. ಒಂದೆಡೆ ಸಾಕುಪಕ್ಷಿಗಳ ಮಾರಾಟ ದಂಧೆ ಮತ್ತು ಪ್ರವಾಸಿ ಆಕರ್ಷಣೆಯಾಗಿ ಗಿಳಿಯು ಮಾನವನಿಗೆ ಆರ್ಥಿಕವಾಗಿ ಲಾಭದಾಯಕವಾಗಿದ್ದರೆ, ಇನ್ನೊಂದೆಡೆ ಕೆಲ ತಳಿಯ ಗಿಳಿಗಳು ಕೃಷಿಕನಿಗೆ ಪೀಡೆಯಾಗಿವೆ. ಅತಿಯಾದ ಬೇಟೆ ಮತ್ತು ವಾಸಸ್ಥಾನಗಳ ನಾಶದಿಂದ ಈ ಪಕ್ಷಿಗಳ ಸಂಖ್ಯೆಯಲ್ಲಿ ಭಾರಿ ಇಳಿಮುಖ ಕಂಡುಬರುತ್ತಿದೆ.

ಆಹಾರ
ಇದು ಮಿಶ್ರಾಹಾರಿ ಪಕ್ಷಿಯಾಗಿದೆ. ವಿಭಿನ್ನ ಬಗೆಯ ಹಣ್ಣುಗಳು, ಕಾಳುಗಳು, ಕೀಟ, ಹುಳುಗಳನ್ನು ತಿನ್ನುತ್ತದೆ.

***

*ವಿಶಿಷ್ಟವಾದ ಬುದ್ಧಿವಂತಿಕೆಯ ಗುಣಗಳಿರುವಇದು ಗಿಳಿಗಳ ಪ್ರಪಂಚದಲ್ಲಿ ‘ಐನ್‌ಸ್ಟೀನ್’ ಎಂದು ಖ್ಯಾತಿ ಪಡೆದಿದೆ.
* ಒಂದು ಸಾವಿರಕ್ಕೂ ಹೆಚ್ಚಿನ ಪದಗಳನ್ನು ಮಾತನಾಡಬಲ್ಲ ಸಾಮರ್ಥ್ಯ ಹೊಂದಿದೆ.
* ಇದು ಗಿಳಿ ತಳಿಗಳಲ್ಲಿ ಅತಿ ಹೆಚ್ಚು ಜೀವಿತಾವಧಿ ಹೊಂದಿರುವ ಪಕ್ಷಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT