ಭಾನುವಾರ, ಏಪ್ರಿಲ್ 11, 2021
25 °C

ತುರೆಹಳ್ಳಿ ಅರಣ್ಯದಲ್ಲಿ ವನ್ಯಜೀವಿಗಳಿಗಿಲ್ಲವೇ ರಕ್ಷಣೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ತುರೆಹಳ್ಳಿ ಕಾಡಿನಲ್ಲಿ ವನ್ಯಜೀವಿಗಳಿಗೆ ತೊಂದರೆಯಾಗುತ್ತಿದೆ ಎನ್ನುವುದು ನಿಜ. ಈಗಾಗಲೇ ಸಾಕಷ್ಟು ಪ್ರಾಣಿಗಳು ಜೀವ ಕಳೆದುಕೊಂಡಿವೆ. ಆದರೆ, ಇದು ಹೆಚ್ಚಾಗಿ ನಡೆಯುವುದು ಬೇಸಿಗೆಯ ಸಮಯದಲ್ಲಿ . ಮಳೆಗಾಲದಲ್ಲಿ ಇಂತಹ ಯಾವುದೇ ಘಟನೆಗಳು ಸಂಭವಿಸುವುದಿಲ್ಲ. ಬೇಸಿಗೆಯಲ್ಲಿ ನೀರಿನ ಸಮಸ್ಯೆಯೇ ಇದಕ್ಕೆ ಪ್ರಮುಖ ಕಾರಣ.ವನ್ಯ ಜೀವಿಗಳು ನೀರಿಗಾಗಿ ಅರಣ್ಯದ ಹೋರಗಡೆ ಬಂದರೆ ನಾಯಿ ಮತ್ತು ಅಪಘಾತದ ಮಧ್ಯೆ ಸಿಲುಕುವುದರಿಂದ  ಇಂಥ ಅನಾಹುತ ನಡೆಯುವುದು. ನೀರಿಗೆಂದು ಬಂದ  ಅಲ್ಲಿನ ಜಿಂಕೆಗಳ ಮೇಲೆ ನಾಯಿಗಳು ದಾಳಿ  ಮಾಡುತ್ತವೆ. ಕೆಲವು ನಾಯಿಗೆ ಕಾಡು ಪ್ರಾಣಿಗಳು ಆಹಾರವಾದರೆ ಇನ್ನು ಕೆಲವು ಗಂಭಿರ ಗಾಯಗಳಿಂದಾಗಿ ಪ್ರಾಣ ಕಳೆದುಕೊಳ್ಳುತ್ತವೆ. ಕಳೆದ ಮೂರು ತಿಂಗಳ ಹಿಂದೆ ಇಂಥ ಕೆಲ ಘಟನೆಗಳು ನಡೆದಿವೆ.

ನೈಸ್ ರಸ್ತೆ ಕಾಡಿನ ಮಧ್ಯೆ ಇರುವುದರಿಂದ ವಾಹನಗಳ ಒಡಾಟ ಹೆಚ್ಚು. ಕೆಲವು ವನ್ಯಜೀವಿಗಳು ವಾಹನಗಳ ಚಕ್ರಗಳಿಗೆ ಸಿಲುಕುವ ಅಪಾಯವೂ ಇರುವುದರಿಂದ ಪ್ರಾಣಿಗಳ ಸಾವಿನ ಅವಘಡಗಳು ನಡೆಯುತ್ತವೆ. ಕಾಡಿನ ಸುತ್ತಮುತ್ತ ಜನವಸತಿಯೂ ಇದೆ. ಕಾಡಿನ ಆವರಣದಲ್ಲಿ ತ್ಯಾಜ್ಯ ವಸ್ತುಗಳನ್ನು ಬಿಸಾಕುವುದು ಕೂಡ ಒಂದು ಸಮಸ್ಯೆ. ಕಸದಲ್ಲಿ ಆಹಾರ ಹುಡುಕಲು ನಾಯಿಗಳು ಬರುತ್ತವೆ. ಆಗ ನಾಯಿ ಮತ್ತು ವನ್ಯಜೀವಿಗಳ ನಡುವೆ ಒಂದು ಸಂಘರ್ಷ ನಡೆಯುವ ಸಾಧ್ಯತೆಯೂ ಇಲ್ಲದಿಲ್ಲ. ಇದರಿಂದಲೂ ವನ್ಯಜೀವಿಗಳ ಜೀವಕ್ಕೆ ಅಪಾಯವಾಗುವ ಸಂಭವ ಹೆಚ್ಚು. ಇದರಿಂದ ಕಾಡು ಪ್ರಾಣಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ

 ತುರೆಹಳ್ಳಿ ಅರಣ್ಯದಲ್ಲಿ   ಎಷ್ಟೇ ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಏಕೆಂದರೆ ಪ್ರಾಣಿಗಳು ತಮಗಿಷ್ಟಬಂದಂತೆ ಓಡಾಡಿಕೊಂಡಿರಲು ಸಮರ್ಪಕವಾದ ಸ್ಥಳ ಬೇಕಾಗುತ್ತದೆ. ಹೀಗಾಗಿ ಅಡ್ಡಲಾಗಿ ಯಾವುದೇ ಕಟ್ಟಡ ಅಥವಾ ಬೇಲಿ ಕಟ್ಟಲು ಸಾಧ್ಯವಿಲ್ಲ. ಪ್ರಾಣಿಗಳಿಗೆ ಓಡಾಡಿಕೊಂಡಿರಲು ಅವಕಾಶ ಮಾಡಿಕೊಡಬೇಕಾಗುತ್ತದೆ. ಆನೆಗಳು ಕೆಲವೊಂದು ಸಲ ಪ್ಯಾಚಸ್ ಮೀರಿ ಹೊರಕ್ಕೆ ಹೋಗುವುದರಿಂದ ಜಿಂಕೆಗಳೂ ಹೊರಕ್ಕೆ ಬಂದು ಬಿಡುತ್ತವೆ. ಆಗ ಇಂತಹ ಘಟನೆಗಳು ಸಂಭವಿಸುವುದಕ್ಕೆ ಅವಕಾಶವಾಗುತ್ತದೆ. ರಸ್ತೆಯನ್ನು ಮುಚ್ಚಲು ಬರುವುದಿಲ್ಲ. ಹಾಗಯೇ ಅರಣ್ಯದ ಸುತ್ತಮುತ್ತ ಯಾವುದೇ ತರಹದ ಬಂಧನಗಳನ್ನು ಹಾಕಲು ಸಾಧ್ಯವಾಗುವುದಿಲ್ಲ ಎಂದು ಬೆಂಗಳೂರು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ದರಾಮಪ್ಪ ಹೇಳುತ್ತಾರೆ.

–ಸಂಗೀತಾ.ಗ. ಗೊಂಧಳೆ

ಜಿಂಕೆಗಳ ಸಂತತಿಗೆ ಸಂಚಕಾರ

ಜೆ. ಪಿ. ನಗರದ ಬಳಿ ಕನಕಪುರ ರಸ್ತೆಯಲ್ಲಿರುವ ತುರೆಹಳ್ಳಿ ಅರಣ್ಯ ಪ್ರದೇಶದಲ್ಲಿರುವ ಜಿಂಕೆಗಳ ಸಂತತಿಗೆ ಬೀದಿನಾಯಿಗಳು ಮತ್ತು ರಸ್ತೆಯಲ್ಲಿ ಸಂಚರಿಸುವ ವಾಹನಗಳು ಕಂಟಕವಾಗಿ ಪರಿಣಮಿಸಿವೆ.  ಪ್ರತಿದಿನ ಒಂದಿಲ್ಲ ಒಂದು ಜಿಂಕೆ ಅಪಘಾತಕ್ಕೆ ಸಿಲುಕಿ ಇಲ್ಲವೇ ಬೀದಿ ನಾಯಿಗಳ ದಾಳಿಗೆ ಬಲಿಯಾಗುತ್ತಿದೆ. ಅರಣ್ಯ ಇಲಾಖೆ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಜಿಂಕೆಗಳ ಆಹುತಿ ನಿರಂತರವಾಗಿ ನಡೆಯುತ್ತಿದೆ.  

ದಟ್ಟವಾಗಿದ್ದ ತುರೆಹಳ್ಳಿ ಕಾಡು ಇಂದು ಜನವಸತಿ ಪ್ರದೇಶವಾಗಿ ಬದಲಾಗಿದೆ. ಜನವಸತಿ ಹೆಚ್ಚಿದಂತೆ ಇಲ್ಲಿರುವ ನೈಸ್‌ ರಸ್ತೆಯಲ್ಲಿ ವಾಹನ ಸಂಚಾರ ದಟ್ಟನೆ ಕೂಡ ಹೆಚ್ಚಾಗುತ್ತಿದೆ. ಬೇಸಿಗೆಯಲ್ಲಿ ನೀರು ಹುಡುಕಿ ಜನವಸತಿ ಪ್ರದೇಶಗಳಿಗೆ ಬರುವ ಜಿಂಕೆಗಳ ಹಿಂಡು ಕಾಡಿನ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗಲು ರಸ್ತೆ ದಾಟುವಾಗ ವೇಗವಾಗಿ ಚಲಿಸುವ ವಾಹನಗಳ ಚಕ್ರಗಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿವೆ. ಹೀಗೆ ಬೇಸಿಗೆಯಲ್ಲಿ ಆಹುತಿಯಾಗುತ್ತಿರುವ ಜಿಂಕೆಗಳ ಬಗ್ಗೆ ಯಾರೂ ಲೆಕ್ಕವಿಟ್ಟಿಲ್ಲ. ಮಳೆಗಾಲದಲ್ಲಿ ಅಪರೂಪಕ್ಕೊಮ್ಮೆ ಇಂತಹ ಘಟನೆ ನಡೆಯುತ್ತವೆ. 

ಕಾಡಿನ ಸುತ್ತಮುತ್ತಲಿನ ಜನವಸತಿ ಪ್ರದೇಶದ ತಾಜ್ಯಗಳನ್ನು ತುರೆಹಳ್ಳಿ ಕಾಡಿಗೆ ಸುರಿಯುವುದರಿಂದ ಬೀದಿನಾಯಿಗಳ ಹಿಂಡು ಅಲ್ಲಿಗೆ ನುಗ್ಗುತ್ತವೆ. ಅರಣ್ಯ ಭಾಗದಲ್ಲಿ ವಾಹನಗಳ ಓಡಾಟಕ್ಕೆ ಮಿತಿ ಹೇರಬೇಕು. ಇಲ್ಲಿ ಕಸ ಸುರಿಯುವವರ ಮೇಲೆ ಬಿಬಿಎಂಪಿ ಕಠಿಣ ಕ್ರಮ ಜರುಗಿಸ ಬೇಕು. ಕಾಡಿನ ಸುತ್ತ ಗೋಡೆ ಕಟ್ಟುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಇದೊಂದರಿಂದ ವನ್ಯಜೀವಿಗಳ ರಕ್ಷಣೆ ಅಸಾಧ್ಯ.

– ಕಾಡನೂರು ಬಿ.ಎಸ್‌. ರಾಮಶೇಷ, ಹುಲಿಮಂಗಲ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು