ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖನ: ಕತ್ತಲಲ್ಲಿ ಕ್ಯಾಮೆರಾ ಕಣ್ಣು ತೆರೆದಾಗ...

Published 8 ಅಕ್ಟೋಬರ್ 2023, 0:06 IST
Last Updated 8 ಅಕ್ಟೋಬರ್ 2023, 0:06 IST
ಅಕ್ಷರ ಗಾತ್ರ

ವಾರಾಂತ್ಯಕ್ಕೆ ಗೆಳೆಯರೆಲ್ಲರೂ ತೋಟದ ಮನೆಯಲ್ಲಿ ಸೇರಿದ್ದೆವು. ಸಂಜೆಯ ವೇಳೆಗೆ ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳಲು ಬೆಂಕಿ ಹಾಕಿ ಕೂತಿದ್ದೆವು. ಒಣಗಿದ ಸೌದೆಗಳು ಉರಿದು ಕೆಂಡವಾಗಿ ಸೊಳ್ಳೆಗಳನ್ನೂ ದೂರವಿಟ್ಟು, ನಮ್ಮನ್ನೂ ಬೆಚ್ಚಗಿಟ್ಟಿದ್ದವು. ಎಲ್ಲವೂ ಆಪ್ಯಾಯಮಾನವಾಗಿ ಇದೆ ಎನಿಸುವಷ್ಟರಲ್ಲಿ ಎಲ್ಲಿಲ್ಲದ ಮಳೆ. ಮಳೆ ಜೋರಾಗುವ ಮುನ್ನವೇ ಎಲ್ಲರೂ ಎದ್ದು ಮನೆ ಸೇರಿದೆವು. ಕೆಲವೇ ನಿಮಿಷಗಳಲ್ಲಿ ಮಳೆ ನಿಂತಿತಾದರೂ, ಮತ್ತೆ ಹೊರಹೋಗಲು ಯಾರಿಗೂ ಮನಸ್ಸಿರಲಿಲ್ಲ.

ಅಷ್ಟರಲ್ಲೇ ಕಿಟಕಿಯ ಬಳಿ ಏನೊ ಸದ್ದಾಯಿತು. ಎಲ್ಲರೂ ಅತ್ತ ನೋಡಲು, ಕಿಟಕಿ ಗಾಜನ್ನು ದಾಟಿ ಒಳಗೆ ಬರಲು ಇಲಿಯೊಂದು ಪರದಾಡುತ್ತಿರುವುದು ಕಾಣಿಸಿತು. ಗಾಜಿನ ಮೂಲಕ ಒಳಗೆ ಹಾರಿ ಬರಲು ಇಲಿ ಪದೇ ಪದೇ ಯತ್ನಿಸಿ, ವಿಫಲವಾಯಿತು. ಕಿಟಕಿಗೆ ಗಾಜು ಹಾಕದೇ ಹಲವು ತಿಂಗಳು ಹಾಗೇ ಬಿಡಲಾಗಿತ್ತು. ಬಹುಶಃ ಆ ಇಲಿ ಅಲ್ಲಿಂದಲೇ ಮನೆಯೊಳಗೆ ಓಡಾಡುತ್ತಿದ್ದಿರಬೇಕು. ಅವತ್ತೇ ಕಿಟಕಿಗೆ ಗಾಜು ಹಾಕಿದ್ದರಿಂದ, ಒಳಗೆ ಬರಲು ಅದಕ್ಕಿದ್ದ ದಾರಿ ಮುಚ್ಚಿಹೋಗಿತ್ತು.

ಅದನ್ನು ನೋಡಿದ ಮಧು, ‘ಮನೆಯೊಳಗೆ ಬರಲು ಆ ಇಲಿ ಏನು ಮಾಡಬಹುದು’ ಎಂದು ಕುತೂಹಲದಿಂದ ಪ್ರಶ್ನಿಸಿದ.

‘ಪ್ರಕೃತಿ ಅದಕ್ಕೊಂದು ದಾರಿ ಇಟ್ಟೇ ಇರುತ್ತದೆ’ ಎಂಬ ಕೃಷ್ಣಮೂರ್ತಿ ತತ್ತ್ವ ನಿರೀಕ್ಷೆ ಗರಿಗೆದರುವಂತೆ ಮಾಡಿತು.

‘‘ನಮಗೆ ನಮ್ಮ ಸಮಾಜದ ಹೊರಗಿನ ವಿಶ್ವಸಮಾಜದ ಪರಿಚಯಕ್ಕೆ ನರಭಕ್ಷಕನೇ ಬಂದು ಹೊತ್ತೊಯ್ಯಬೇಕೆ? ಇಲಿಗಳು ಬಿಲಗಳಿಂದ ಕಲ್ಲುಗಳನ್ನು ಎತ್ತಿಟ್ಟರೂ ಸಾಕಲ್ಲವೇ?’ ಎಂದು ತೇಜಸ್ವಿ ಹೇಳಿದ್ದಾರೆ. ಅಂದರೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲೇ ಹಲವು ವಿಸ್ಮಯಗಳಿವೆ. ಅದನ್ನು ನಾವು ನೋಡಬೇಕಷ್ಟೆ’’ ಎಂದು ಪರಿಸರದ ಕಥೆಯ ಪ್ರಸಂಗವೊಂದನ್ನು ಮುಂದಿಟ್ಟು, ಶಿವು ಚರ್ಚೆ ಮುಂದುವರೆಸಿದ. 

‘ಈಗ ಏನು? ತೇಜಸ್ವಿ ಹೇಳಿದಂತಹ ಹಲವು ವಿಸ್ಮಯಗಳನ್ನು ನೀವೂ ನೋಡಬೇಕಾ? ಹಾಗಿದ್ದರೆ ಬನ್ನಿ... ಈ ರಾತ್ರಿಯಲ್ಲೇ ಕಾಡು ಸುತ್ತಿ ಬರೋಣ. ಇಲ್ಲೇ ಹತ್ತಾರು ವಿಸ್ಮಯಗಳು ಕಾಣುತ್ತವೆ’ ಎಂದು ತಕ್ಷಣಕ್ಕೆ ಹೇಳಿದೆ. ಟಾರ್ಚ್‌ ಹಿಡಿದು, ಕ್ಯಾಮೆರಾ ಹೆಗಲಿಗೇರಿಸಿ ಹೊರಟೇಬಿಟ್ಟೆವು.

ತೋಟದಿಂದ ಒಂದೆರಡು ಮಾರು ದೂರ ಹೋಗುವಷ್ಟರಲ್ಲೇ ಮಂಜಣ್ಣ ಎದುರಾದ. ಕಾಡುಮೇಡು ಅಲೆದ ಅನುಭವಿ ಮಂಜಣ್ಣ. ನಮ್ಮ ಕಣ್ಣಿಗೆ ಕಾಣದಿದ್ದ ಹುಳಹುಪ್ಪಟೆ–ಹಾವು ಹಕ್ಕಿಗಳೆಲ್ಲವನ್ನೂ ಹುಡುಕಿ ತೋರಿಸುತ್ತಿದ್ದ ಮಂಜಣ್ಣನ ಸೂಕ್ಷ್ಮತೆ ಅಚ್ಚರಿ ಮೂಡಿಸುವಂತಹದ್ದು. ಈಗ ಕ್ಯಾಮೆರಾ ಹೊತ್ತು ನಾವು ಹೊರಟ ಉದ್ದೇಶ ತಿಳಿದ ಮೇಲೆ ಮಂಜಣ್ಣನೂ ನಮಗೆ ಜತೆಯಾದ. ಹೊಲಗದ್ದೆಗಳಿಗೆ ಅಂಟಿಕೊಂಡೇ ಕಾಡು ಇರುವುದರಿಂದ, ಆಗಾಗ್ಗೆ ಕಾಡುಪ್ರಾಣಿಗಳು ಇತ್ತ ಹಾಜರಿ ಹಾಕಿ ಹೋಗುವುದುಂಟು. ಈಗ ನಾವು ಹೊರಟ ಯಾತ್ರೆಯಲ್ಲಿ ಏನೆಲ್ಲಾ ಸಿಗಬಹುದು, ಏನು ಬಂದರೆ ಏನು ಮಾಡಬೇಕು ಎಂದೆಲ್ಲಾ ಮಂಜಣ್ಣ ವಿವರಿಸುತ್ತಾ ಹೋದ. ಮಧ್ಯೆ ತಕ್ಕಲು ಬಿದ್ದ ಹೊಲ, ಖರಾಬು ಜಮೀನು, ಸ್ಥಗಿತವಾದ ಕ್ವಾರಿಯು ಹೊಲಗಳ ಏಕತಾನತೆಯನ್ನು ಮುರಿಯುತ್ತಿತ್ತು.

ನತ್ತಿಂಗ
ನತ್ತಿಂಗ

ಮಂಜಣ್ಣ, ‘ಕಲ್ಲು ಗಿಡುಗ ನೋಡಿದ್ದೀರಾ?’ ಎಂದ. ಉಹೂಂ ಎಂದೆವು. ಹಾದಿಯ ಮಧ್ಯೆ ಇದ್ದ ಹಾಸುಬಂಡೆಯ ಮೇಲೆ ಮಂಜಣ್ಣ ತನ್ನ ಟಾರ್ಚ್‌ ಫೋಕಸ್‌ ಮಾಡಿದ. ಬಂಡೆಯ ಮೇಲೆ ಅದನ್ನೇ ಹೋಲುವಂತೆ ಮುದುಡಿ ಕೂತಿತ್ತು ಆ ಹಕ್ಕಿ. ಸ್ವಲ್ಪ ಹತ್ತಿರ ಹೋಗುತ್ತಲೇ ಅದು ನೈಟ್‌ಜಾರ್ (ನತ್ತಿಂಗ) ಎಂಬುದು ಗೊತ್ತಾಯಿತು. ಮಂಜಣ್ಣ ಅದನ್ನೇ ಕಲ್ಲುಗಿಡುಗ ಎಂದಿದ್ದ. ಊರಬದಿಯಲ್ಲಿ, ರಸ್ತೆಗಳಲ್ಲಿ ಬೀದಿ ದೀಪದಡಿ ಕಾಣುವ ಈ ಸಾಮಾನ್ಯ ಹಕ್ಕಿ ಅಲ್ಲಿ ಬರುವ ಹುಳು ಹುಪ್ಪಟೆಗಳನ್ನು ಹಿಡಿದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ರಾತ್ರಿ ಚಾಲನೆ ವೇಳೆ ವಾಹನಗಳ ಹೆಡ್‌ಲೈಟ್‌ ಬೆಳಕು ಬಿದ್ದೊಡನೆ ಸ್ತಬ್ಧವಾಗಿಬಿಡುವ ಈ ಹಕ್ಕಿಗಳನ್ನು, ಆ ರೀತಿ ನೋಡದೇ ಇರುವವರು ಬಹಳ ಕಡಿಮೆಯೇ. ಆದರೆ, ಅದೇ ಹಕ್ಕಿಯನ್ನು ಬಂಡೆಹಾಸಿನ ಮೇಲೆ ನೋಡುವುದರಲ್ಲಿದ್ದ ಕುತೂಹಲವೇ ಬೇರೆ. ಥಟ್ಟನೆ ನೋಡಿದರೆ, ಒಂದು ಕಲ್ಲು ಎಂದು ನಿರ್ಲಕ್ಷಿಸಿಬಿಡುವಷ್ಟೂ ಆ ಹಕ್ಕಿ ತನ್ನನ್ನು ಮರೆಮಾಡಿಕೊಂಡಿತ್ತು. ಹೊಲಗದ್ದೆಗಳ ಬಳಿ, ಪೊದೆಗಳ ಬಳಿ, ಹುಲ್ಲುಗಂಟಿನ ಬಳಿ ನೆಲದಲ್ಲಿಯೇ ಮೊಟ್ಟೆ ಇಟ್ಟು ಮರಿಮಾಡುವ ಈ ಹಕ್ಕಿ, ಗೂಬೆಗಿಂತಲೂ ಕಡುನಿಶಾಚರಿ. ದಿನದ ಬೆಳಗಿನಲ್ಲಿ ಕಾಲಿನ ಪಕ್ಕವೇ ಇದ್ದರೂ ಗೊತ್ತಾಗದಷ್ಟು ತನ್ನನ್ನು ತಾನು ಮರೆಮಾಡಿಕೊಳ್ಳುತ್ತದೆ. ಅಂತಹ ಒಂದು ಹಕ್ಕಿ ಬೋಳು ಬಂಡೆಹಾಸಿನ ಮೇಲೆ ನಮ್ಮಿಂದ ಕೆಲವೇ ಅಡಿಗಳಷ್ಟು ದೂರದಲ್ಲಿತ್ತು.

ಟಾರ್ಚ್‌ ಬಿಟ್ಟಿದ್ದರಿಂದ ಅತ್ತಿತ್ತ ಅಲ್ಲಾಡದೆ ನತ್ತಿಂಗ ಅಲ್ಲಿಯೇ ಬಂಡೆಗಂಟಿ ಕೂತಿತು. ಹಕ್ಕಿಯ ಫೋಟೊ ಹಿಡಿಯಲು ಬೇಕಾದ ಟೆಲಿಲೆನ್ಸ್‌ ಇಲ್ಲದಿದ್ದ ಕಾರಣ, ಇದ್ದ ಕಿಟ್‌ ಲೆನ್ಸ್‌ನಲ್ಲಿಯೇ ಅದನ್ನು ಸೆರೆಹಿಡಿಯಬೇಕಿತ್ತು. ಹಕ್ಕಿ ನೆಲಮಟ್ಟದಲ್ಲಿ ಇದ್ದುದ್ದರಿಂದ ಕ್ಯಾಮೆರಾ ಕಣ್ಣಿಗೆ ಹಿಡಿದು, ನಾನು ಮಕಾಡೆ ಮಲಗಿದೆ. ಲೆನ್ಸ್‌ನ ವ್ಯಾಪ್ತಿಗೆ ಹಕ್ಕಿ ಬರಲಿಲ್ಲ. ಹಾಗೇ ತೆವಳುತ್ತಾ ನಿಮಿಷಕ್ಕೊಂದು ಅಡಿಯಂತೆ ಹಕ್ಕಿಯತ್ತ ಸರಿದೆ. ಹತ್ತಾರು ನಿಮಿಷಗಳ ನಂತರ ಲೆನ್ಸ್‌ ವ್ಯಾಪ್ತಿಗೆ ಹಕ್ಕಿ ಬಿತ್ತು. ಕಂದು–ಕಪ್ಪು ರೆಕ್ಕೆಗಳ ಮಧ್ಯೆ ಹೆಚ್ಚು ಆಕರ್ಷಕವಾಗಿದ್ದದ್ದು ಅದರ ಕಣ್ಣುಗಳು. ಕೆಂಪನೆ ಗುಲಗಂಜಿಯಂತಿದ್ದ ಕಣ್ಣುಗುಡ್ಡೆಯನ್ನು ಅಲುಗಾಡಿಸದಯೇ ಹಕ್ಕಿ ಕುಳಿತಿತ್ತು. ಸಾಕಷ್ಟು ಫೋಟೊ ತೆಗೆದು, ಕ್ಯಾಮೆರಾ ಕೆಳಗಿಳಿಸಿದೆ. ಮಂಜಣ್ಣ ಟಾರ್ಚ್‌ ಆರಿಸಿದ. ಅಲ್ಲಿಯವರೆಗೆ ಕಲ್ಲಿನಂತೆ ಕೂತಿದ್ದ ನತ್ತಿಂಗ, ಪುರ‍್ರೆಂದು ಕತ್ತಲನ್ನು ಸೀಳಿಕೊಂಡು ಹಾರಿತು. ಮಂಜಣ್ಣ ಅಲ್ಲಿಂದ ನಮ್ಮ ತೋಟದತ್ತಲೇ ಹಾದಿ ತಿರುಗಿಸಿದ. ಹೊಲ–ಗದ್ದೆಗಳನ್ನು ದಾಟಿ ಹೋಗುವಾಗ ಇನ್ನೂ ಹತ್ತಾರು ನತ್ತಿಂಗಗಳು, ಕೆಂಪು ಕೊಕ್ಕಿನ ಟಿಟ್ಟಿಬಗಳು (ನಮ್ಮ ಕಡೆ ಇವನ್ನು ಕೀನಕ್ಕಿ ಎನ್ನುತ್ತಾರೆ) ಕಂಡವು. ನಮ್ಮ ಉಪಸ್ಥಿತಿಯಿಂದ ಗಾಬರಿಯಾದ ಕೀನಕ್ಕಿಗಳಂತೂ, ಕಿವಿ ಕಿತ್ತುಹೋಗುವಷ್ಟು ಜೋರಾಗಿ ಕೀರಲು ಆರಂಭಿಸಿದವು. ಹೀಗೆ ಕೀರುವುದಕ್ಕೇ ಇರಬೇಕು ಅವನ್ನು ಕೀನಕ್ಕಿ ಎನ್ನುವುದು.

ಹತ್ತಾರು ಹೆಜ್ಜೆ ಹಾಕುವಷ್ಟರಲ್ಲಿ ನಮ್ಮ ತೋಟದತ್ತಲೇ ಬಂದೆವು. ಹಾದಿ ಬಳಸಿ ಬರುವುದಕ್ಕಿಂತ, ಬೇಲಿ ನುಸುಳಿದರೆ ಹತ್ತಿರವಾಗುತ್ತದೆ ಎಂದು ಬೇಲಿ ನುಸುಳಿದೆವು. ನಮ್ಮ ಮುಂದಿದ್ದ ಮಂಜಣ್ಣ ಥಟ್ಟನೆ ನಿಂತ. ಸದ್ದು ಮಾಡದಂತೆ ಸನ್ನೆ ಮಾಡಿದ. ಏನು ಕಂಡಿತೋ ಏನೋ ಎಂದು ಎಲ್ಲರೂ ಹಾಗೇ ಸ್ತಬ್ಧರಾದೆವು. ಕೆಲದಿನಗಳ ಹಿಂದಷ್ಟೇ ನೆಟ್ಟಿದ್ದ ತೆಂಗಿನಗಿಡದತ್ತ ಮಂಜಣ್ಣ ಟಾರ್ಚ್‌ಬಿಟ್ಟ. ನಮ್ಮ ಕಣ್ಣಿಗೆ ಹುಡುಕಿದರೂ ಏನೂ ಕಾಣಲಿಲ್ಲ.

ಮಂಜಣ್ಣ, ‘ಫೋಟೊ ಇಡ್ಕಳಿ ಸಾ’ ಎಂದ.

ನಾನು, ‘ಏನೂ ಕಾಣುತ್ತಿಲ್ಲ ಮಂಜಣ್ಣ’ ಎಂದೆ. 

ಮನೆಮುಂದೆಯೇ ಹೆಜ್ಜೆ ಮೂಡಿಸಿದ್ದ ಚಿರತೆಮರಿ
ಮನೆಮುಂದೆಯೇ ಹೆಜ್ಜೆ ಮೂಡಿಸಿದ್ದ ಚಿರತೆಮರಿ

‘ನಾನು ಬ್ಯಾಟ್ರಿ ಬಿಡ್ತೀನಿ. ಅಲ್ಲೇ ನೋಡಿ’ ಎಂದ. ತೆಂಗಿನ ಗಿಡದ ಬುಡಕ್ಕೆ ಟಾರ್ಚ್‌ ಬಿಟ್ಟ. ಟಾರ್ಚ್‌ ಹಾಗೇ ಮೇಲೇರಿಸಿದ. ಅವನ ಟಾರ್ಚ್‌ ಎತ್ತ ಹೋಯಿತೋ ಅಲ್ಲೇ ಕಣ್ಣು ಹಾಯಿಸಿದೆವು. ತೆಂಗಿನ ಗಿಡಕ್ಕೆ ಸಪೋರ್ಟ್‌ ಆಗಿ ಇರಲೆಂದು ನಿಲ್ಲಿಸಿದ್ದ ನೀಲಗಿರಿ ಕಡ್ಡಿಯ ಮೇಲೆ ಟಾರ್ಚ್‌ ಹರಿಸಿದ, ಹಾಗೇ ಮೇಲಕ್ಕೆ ಹೋದ. ನಮ್ಮ ಕಣ್ಣೂ ಅದನ್ನೇ ಹಿಂಬಾಲಿಸುತ್ತಿದ್ದವು. ನಮ್ಮ ಕಣ್ಣಿನೆತ್ತರದಷ್ಟೇ ಇದ್ದ ಕಡ್ಡಿಯ ತುದಿ ಮುಟ್ಟಿದ. 

‘ಇದೆಲ್ಲಿಂದ ಬಂತು ಮಂಜಣ್ಣ. ಇಷ್ಟು ದಿನ ಕಣ್ಣಿಗೆ ಕಾಣದಿದ್ದದ್ದು, ಈಗ ತೋಟದೊಳಕ್ಕೇ ಬಂದು ಕೂತಿದೆ’ ನನ್ನ ಪ್ರಶ್ನೆ.

ಬಂಡೆಯ ಮೇಲೆ ಕಲ್ಲಿನಂತೆ ಕೂತಿದ್ದ ನತ್ತಿಂಗ್ ಟಾರ್ಚ್‌ ಬೆಳಕಿನಲ್ಲಿ ಕಂಡ ಬಗೆ 
ಬಂಡೆಯ ಮೇಲೆ ಕಲ್ಲಿನಂತೆ ಕೂತಿದ್ದ ನತ್ತಿಂಗ್ ಟಾರ್ಚ್‌ ಬೆಳಕಿನಲ್ಲಿ ಕಂಡ ಬಗೆ 

ಅರೆ. ಅಲ್ಲೆರಡು ಕಣ್ಣುಗಳು ನಮ್ಮನ್ನು ಪಿಳಿಪಿಳಿ ನೋಡುತ್ತಿವೆ. ಇಷ್ಟೇ ಅಗಲದ ಮುಖವನ್ನು ಬಹುಪಾಲು ಆ ಕಣ್ಣುಗಳೇ ತುಂಬಿಕೊಂಡಿದ್ದವು. ನೀಲಿಗಿರಿ ಕಡ್ಡಿಯನ್ನು ತಬ್ಬಿಹಿಡಿದಿದ್ದ ಅದು, ನಮ್ಮ ಇರುವಿಕೆಯಿಂದ ಗಾಬರಿಗೀಡಾಗಿತ್ತು. ಅದರ ಎದೆ ಪಟ–ಪಟ ಬಡಿದುಕೊಳ್ಳುತ್ತಿರುವುದು ಕಣ್ಣಿಗೇ ಕಾಣುತ್ತಿತ್ತು. ಮುದ್ದೆಯಾದಂತಿದ್ದ ಆ ಪ್ರಾಣಿಯನ್ನು ಹಿಡಿದು ಮನೆಗೊಯ್ಯಬೇಕೆನಿಸುತ್ತಿತ್ತು. ಅಷ್ಟು ಮುದ್ದಾಗಿತ್ತು ಆ ಕಾಡುಪಾಪ.

‘ಏ, ಇವೆಲ್ಲಾ ನೀಲಗಿರಿ ಮರದಲ್ಲಿ ಇರ್ತಾವೆ. ಇಲ್ಲೆಲ್ಲಾ ಸುಮಾರು ಇದಾವೆ. ಕಣ್ಣಿಗೆ ಕಾಣೋದಿಲ್ಲ ಅಷ್ಟೆ. ಇದು ಪಕ್ಕದ ನೀಲಗಿರಿ ತೋಟದಲ್ಲಿ ಇತ್ತು ಅನ್ಸತ್ತೆ. ಇವತ್ತು ಎಲ್ಲಾ ನೀಲಗಿರಿ ಕುಯ್ದವರೆ. ಅದಕ್ಕೇ ಇಲ್ಲಿ ಕಡ್ಡಿ ಹುಡುಕ್ಕೊಂಡು ಬಂದಿರ್ಬೇಕು’ ಎಂದ ಮಂಜಣ್ಣ. ಅದರ ಫೋಟೊವನ್ನೂ ಹಿಡಿದುಕೊಂಡೆವು.

ತೆಂಗಿನಮರದಲ್ಲಿ ನವಿಲು
ತೆಂಗಿನಮರದಲ್ಲಿ ನವಿಲು

ಮಂಜಣ್ಣ ನಮಗೂ, ಕಾಡುಪಾಪಕ್ಕೂ ವಿದಾಯ ಹೇಳಿ ಅವನ ಮನೆಕಡೆ ತಿರುಗಿದ. ಮನೆಯ ಹತ್ತಿರವೇ ಇವೆಲ್ಲಾ ಇದಾವಲ್ಲಾ ಎಂದು ಮಾತನಾಡಿಕೊಳ್ಳುತ್ತಾ, ಮನೆ ಕಡೆ ಹೆಜ್ಜೆಹಾಕಿದೆವು. ಮನೆ ಬಾಗಿಲಲ್ಲೇ ನಾಲ್ಕಾರು ಹೆಜ್ಜೆ ಗುರುತುಗಳು ಕಂಡವು. ಹೆಜ್ಜೆ ಗುರುತಿನಲ್ಲಿ ಕಂಡ ಪ್ರಾಣಿ ಮತ್ತೆ ಬಂದರೇನು ಎಂಬ ಭಯ. ನಾವು ಬರುವುದಕ್ಕೂ ಕೆಲಹೊತ್ತು ಮುಂಚೆಯಷ್ಟೇ ಚಿರತೆಮರಿಯೊಂದು ಮನೆ ಮುಂದಿನ ನಾಯಿಗೂಡಿನ ಬಳಿ ಬಂದುಹೋಗಿತ್ತು. ನಾಯಿಯು ಗೂಡೊಳಗೆ ಸುರಕ್ಷಿತವಾಗೇ ಇತ್ತು. ನಾವು ತಡಮಾಡದೇ ಮನೆಹೊಕ್ಕೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT