ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಳ ಕೊಕ್ಕಿನ ಜಲವಾಸಿ ಹಕ್ಕಿ ಆ್ಯವೊಸೆಟ್‌

Last Updated 20 ಅಕ್ಟೋಬರ್ 2019, 19:46 IST
ಅಕ್ಷರ ಗಾತ್ರ

ಜಲವಾಸಿ ಹಕ್ಕಿಗಳ ಜೀವನಶೈಲಿ ನೆಲವಾಸಿ ಹಕ್ಕಿಗಳ ಜೀವನಶೈಲಿಗಿಂತ ಭಿನ್ನವಾಗಿರುತ್ತದೆ. ದೇಹರಚನೆ, ಸಂವಹನ ಕ್ರಮಗಳಲ್ಲೂ ಹಲವು ವ್ಯತ್ಯಾಸಗಳು ಇರುತ್ತವೆ. ವಿಶ್ವದಾದ್ಯಂತ ಹಲವು ಜಲವಾಸಿ ಹಕ್ಕಿಗಳನ್ನು ಗುರುತಿಸಲಾಗಿದೆ. ಇಂದಿನ ಪಕ್ಷಿ ಪ್ರಪಂಚದಲ್ಲಿ ಅಮೆರಿಕ ಖಂಡಗಳಲ್ಲಿ ಮಾತ್ರ ಕಾಣಸಿಗುವ ಆ್ಯವೊಸೆಟ್‌ (Avocet) ಬಗ್ಗೆ ತಿಳಿಯೋಣ. ಇದರ ವೈಜ್ಞಾನಿಕ ಹೆಸರು ರೆಕ್ಯುವಿರೊಸ್ಟ್ರ ಅಮೆರಿಕನಾ (Recurvirostra americana). ಇದು ರೆಕ್ಯುವಿರೊಸ್ಟ್ರಿಡೇ (Recurvirostridae) ಕುಟುಂಬಕ್ಕೆ ಸೇರಿದ್ದು, ಜಲವಾಸಿ ಹಕ್ಕಿಗಳ ಚರದಿಫಾರ್ಮ್ಸ್‌ (Charadriiformes) ಗುಂಪಿನಲ್ಲಿ ವರ್ಗೀಕರಿಸಲಾಗಿದೆ.

ಗಾತ್ರ ಮತ್ತು ಜೀವಿತಾವಧಿ

ದೇಹದ ತೂಕ- 275ರಿಂದ 350 ಗ್ರಾಂ,ದೇಹದ ಉದ್ದ- 43 ರಿಂದ 47 ಸೆಂ.ಮೀ,ರೆಕ್ಕೆಗಳ ಅಗಲ-72 ಸೆಂ.ಮೀ, ಹಾರುವ ವೇಗ-ಗಂಟೆಗೆ40 ಕಿ.ಮೀ.ಜೀವಿತಾವಧಿ- 9ರಿಂದ 15 ವರ್ಷ.

ಹೇಗಿರುತ್ತದೆ?

ಕಂದು, ಕಪ್ಪು ಮತ್ತು ಬಿಳಿ ಬಣ್ಣದ ಪುಕ್ಕ ದೇಹವನ್ನು ಆವರಿಸಿರುತ್ತದೆ. ಎದೆ, ಉದರ ಮತ್ತು ಸೊಂಟದ ಭಾಗ ಬಿಳಿ ಬಣ್ಣದಲ್ಲಿದ್ದರೆ, ರೆಕ್ಕಗಳು ಕಪ್ಪು–ಬಿಳಿ ಬಣ್ಣದಲ್ಲಿರುತ್ತವೆ. ಕತ್ತು, ಕುತ್ತಿಗೆ ಮತ್ತು ತಲೆ ಕಂದು ಬಣ್ಣದಲ್ಲಿರುತ್ತವೆ. ಸೂಜಿಯಂತಹ ನೀಳವಾದ ಕೊಕ್ಕು ಕಪ್ಪು ಬಣ್ಣದಲ್ಲಿದ್ದು, ತುದಿಯಲ್ಲಿ ಬಾಗಿರುತ್ತದೆ. ಕೋಲುಗಳಂತಹ ಕಾಲುಗಳು ನೀಳವಾಗಿದ್ದು, ಬೂದು ಬಣ್ಣದಲ್ಲಿರುತ್ತವೆ. ಕಣ್ಣುಗಳು ಪುಟ್ಟದಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ಬಾಲ ಪುಟ್ಟದಾಗಿದ್ದು, ದಟ್ಟವಾದ ಗರಿಗಳಿಂದ ಆವೃತವಾಗಿರುತ್ತದೆ.

ವಾಸಸ್ಥಾನ

ಅಮೆರಿಕ ಸಂಯುಕ್ತ ಸಂಸ್ಥಾನಗಳು, ಕೆನಡಾ ಸೇರಿದಂತೆ ಮಧ್ಯ ಅಮೆರಿಕ ಮತ್ತು ದಕ್ಷಿಣ ಅಮೆರಿಕ ಖಂಡದ ಬಹುತೇಖ ದೇಶಗಳಲ್ಲಿ ಇದರ ಸಂತತಿ ವಿಸ್ತರಿಸಿದೆ.ಸಿಹಿನೀರು ಮತ್ತು ಉಪ್ಪುನೀರು ಇರುವಂತಹ ಎರಡೂ ಪ್ರದೇಶಗಳಲ್ಲಿ ಇದು ವಾಸಿಸುತ್ತದೆ. ಕೆರೆ, ಕೊಳ, ನದಿ ಪ್ರದೇಶಗಳು, ಕೆಸರಿನಿಂದ ಕೂಡಿದ ಪ್ರದೇಶಗಳು, ದ್ವೀಪ ಪ್ರದೇಶಗಳು ಇದರ ವಾಸಸ್ಥಾನ.

ಜೀವನಕ್ರಮ ಮತ್ತು ವರ್ತನೆ

ಇದು ವಲಸೇ ಹೋಗುವ ಪ್ರವೃತ್ತಿಯ ಹಕ್ಕಿ. ಸದಾ ಗುಂಪಿನಲ್ಲಿ ವಾಸಿಸಲು ಇಷ್ಟಪಟ್ಟರೂ ಪ್ರತಿ ಹಕ್ಕಿ ನಿರ್ದಿಷ್ಟ ಗಡಿ ಗುರುತಿಸಿಕೊಂಡಿರುತ್ತದೆ. ಒಂದು ಗುಂಪಿನಲ್ಲಿ ನೂರಕ್ಕೂ ಹೆಚ್ಚು ಹಕ್ಕಿಗಳು ಇರುತ್ತವೆ. ನೀರಿನಲ್ಲಿ ಈಜುವುದಕ್ಕಿಂತ ಹೆಚ್ಚಾಗಿ ಕಡಿಮೆ ಆಳವಿರುವ ಪ್ರದೇಶಗಳಲ್ಲಿ ತಮ್ಮ ನೀಳ ಕೊಕ್ಕಿನಿಂದ ಆಹಾರ ಹೆಕ್ಕುತ್ತಾ ಸುತ್ತುತ್ತಿರುತ್ತದೆ. ಸಂಗಾತಿಗೆ ಗಡಿಯೊಳಗೆ ಪ್ರವೇಶಿಸುವುದಕ್ಕೆ ಅವಕಾಶ ನೀಡುತ್ತದೆ. ಜೀವನದ ಬಹುತೇಕ ಅವಧಿಯನ್ನು ನೀರಿನಲ್ಲೇ ಕಳೆದರೂ ಆಗಾಗ್ಗೆ ನೆಲದ ಮೇಲೂ ಸಂಚರಿಸುತ್ತದೆ. ವಿಶಿಷ್ಟ ಧ್ವನಿಗಳ ಮೂಲಕ ಸಂವಹನ ನಡೆಸುತ್ತದೆ.

ಆಹಾರ

ಇದು ಸರ್ವಭಕ್ಷಕ ಹಕ್ಕಿ. ಜಲವಾಸಿ ಜೀವಿಗಳೇ ಇದರ ಪ್ರಮುಖ ಆಹಾರ. ವಿವಿಧ ಬಗೆಯ ಕೀಟಗಳು, ಏಡಿಗಳು, ಮೀನುಗಳನ್ನು ಬೇಟೆಯಾಡುತ್ತದೆ. ಕೆಲವು ಜಲವಾಸಿ ಸಸ್ಯಗಳ ಎಲೆಗಳು ಮತ್ತು ಬೀಜಗಳನ್ನೂ ಸೇವಿಸುತ್ತದೆ.

ಸಂತಾನೋತ್ಪತ್ತಿ

ಸಾಮಾನ್ಯವಾಗಿ ಈ ಹಕ್ಕಿಗಳು ಒಂದೇ ಸಂಗಾತಿಯೊಂದಿಗೆ ಕೂಡಿ ಬಾಳುತ್ತವೆ. ವಿವಿಧ ಬಗೆಯ ದೇಹದ ಭಂಗಿಗಳು ಪ್ರದರ್ಶಿಸುವುದರ ಮೂಲಕ ಮತ್ತು ವಿವಿಧ ಬಗೆಯ ಧ್ವನಿಗಳನ್ನು ಹೊರಡಿಸುವ ಮೂಲಕ ಇವು ಸಂವಹನ ನಡೆಸುತ್ತವೆ.

ಏಪ್ರಿಲ್‌ನಿಂದ ಜೂನ್‌ ವರೆಗಿನ ಅವಧಿ ಇದರ ಸಂತಾನೋತ್ಪತ್ತಿಗೆ ಪ್ರಶ್ತವಾಗಿರುತ್ತದೆ. ಕಡ್ಡಿಗಳು, ಎಲೆಗಳು, ಹುಲ್ಲು, ಪುಕ್ಕ ಬಳಸಿ ಸುಕ್ಷಿತ ಪ್ರದೇಶಗಳಲ್ಲಿ ನೆಲದ ಮೇಲೆ ಗೂಡು ನಿರ್ಮಿಸಿಕೊಂಡು ವಾಸಿಸುತ್ತದೆ. ಒಮ್ಮೆಗೆ 3ರಿಂದ 4 ಮೊಟ್ಟೆಗಳನ್ನು ಹೆಣ್ಣು ಹಕ್ಕಿ ಇಡುತ್ತದೆ. ಗಂಡು ಮತ್ತು ಹೆಣ್ಣು ಎರಡೂ ಹಕ್ಕಿಗಳು ಸಮಾನ ಕಾಳಜಿಯಿಂದ 22ರಿಂದ 24 ದಿನಗಳ ವರೆಗೆ ಮೊಟ್ಟೆಗಳಿಗೆ ಕಾವು ಕೊಡುತ್ತವೆ.

ಮೊಟ್ಟೆಯಿಂದ ಹೊರಬಂದ ಮರಿಗಳು ಕೆಲವೇ ಗಂಟೆಗಳಲ್ಲಿ ಓಡಾಡಲು ಆರಂಭಿಸುತ್ತವೆ. ಪೋಷಕ ಹಕ್ಕಿಗಳು ಎರಡೂ ಸೇರಿ, ಮರಿಗಳಿಗೆ ಆಹಾರ ಉಣಿಸುತ್ತವೆ. ಆಹಾರ ಹುಡುಕುವುದು ಮತ್ತು ಈಜುವುದನ್ನು ಕಲಿಸುತ್ತವೆ. 28ರಿಂದ 35 ದಿನಗಳ ನಂತರ ಹಕ್ಕಿಗಳು ಸ್ವಂತತ್ರವಾಗಿ ಜೀವಿಸಲು ಆರಂಭಿಸುತ್ತವೆ.

ಸ್ವಾರಸ್ಯಕರ ಸಂಗತಿಗಳು

* ಇವನ್ನು ಬ್ಲ್ಯೂ ಶ್ಯಾಂಕ್ಸ್ ಎಂದೂ ಕರೆಯುತ್ತಾರೆ.

* ಅಪಾಯ ಎದುರಾದಾಗ ವಿಶಿಷ್ಟ ಬಗೆಯ ಶಬ್ದಗಳನ್ನು ಹೊರಡಿಸುತ್ತಾ ವೈರಿ ಪ್ರಾಣಿಗಳನ್ನು ಹೆದರಿಸಲು ಪ್ರಯತ್ನಿಸುತ್ತದೆ.

* ಕೆಲವೊಮ್ಮೆ ಹೆಣ್ಣು ಹಕ್ಕಿಗಳು ಇತರ ಹಕ್ಕಿಗಳ ಮೊಟ್ಟೆಗಳಿಗೂ ಕಾವು ಕೊಡುತ್ತವೆ.

* ಒಂದೇ ಪ್ರದೇದಲ್ಲಿ ಹಲವು ಹಕ್ಕಿಗಳು ಗೂಡು ಕಟ್ಟಿಕೊಂಡು ವಾಸಿಸುವುದರಿಂದ ಒಂದು ಹಕ್ಕಿಯ ಮರಿಗಳು ಮತ್ತೊಂದು ಹಕ್ಕಿಯೊಂದಿಗೆ ಬೆರೆಯುತ್ತಾ ಬೆಳೆಯುತ್ತವೆ.

* ಇದರ ವಿಶಿಷ್ಟವಾಗಿ ರಚನೆಯಾಗಿದ್ದು, ನೀರಿನಲ್ಲಿ ಹುದುಗಿರುವ ಕೀಟಗಳನ್ನು ಪತ್ತೆ ಮಾಡುವುದಕ್ಕೆ ಸೆನ್ಸರ್‌ನಂತೆ ನೆರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT